ಮಂಗಳೂರು ನಗರದ ರಸ್ತೆ ಮೇಲೆ ಸಿಸಿಟಿವಿ ಕಣ್ಗಾವಲು

By: ಐಸಾಕ್ ರಿಚರ್ಡ್, ಮಂಗಳೂರು
Subscribe to Oneindia Kannada

ಮಂಗಳೂರು, ಮಾರ್ಚ್ 26 : ಮಂಗಳೂರು ನಗರದ ರಸ್ತೆಗಳ ಮೇಲೆ ಸಿಸಿಟಿವಿ ಕಣ್ಗಾವಲಿದೆ. ಸಂಚಾರಿ ನಿಯಮ ಉಲ್ಲಂಘನೆ ಮಾಡಿದರೆ ದಂಡ ಪಾವತಿ ಮಾಡಬೇಕಾಗುತ್ತದೆ. ಇದುವರೆಗೆ ಒಟ್ಟು 2.83 ಲಕ್ಷ ರೂ. ದಂಡವನ್ನು ಸಂಗ್ರಹಣೆ ಮಾಡಲಾಗಿದೆ.

ಸಂಚಾರದ ಸಮಯದಲ್ಲಿ ಪೊಲೀಸರ ಕಣ್ಣುತಪ್ಪಿಸಿ ಮನೆ ತಲುಪಿ ಸಂತೋಷ ಪಡುವಂತೆಯೂ ಇಲ್ಲ. ಏಕೆಂದರೆ ನಗರದಾದ್ಯಂತ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಅದರ ದೃಶ್ಯಾವಳಿಗಳನ್ನು ಆಧರಿಸಿಯೇ ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ. [ಮಂಗಳೂರು ನಗರಕ್ಕೆ ಸಿಸಿಟಿವಿ ಕಣ್ಗಾವಲಿಲ್ಲ]

mangaluru

2015ರ ಜೂನ್ 23 ರಂದು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಅಂದಿನಿಂದ ಫೆಬ್ರವರಿ ಅಂತ್ಯದವರೆಗೆ ಸಂಚಾರ ನಿಯಮ ಉಲ್ಲಂಘಿಸಿದವರ ವಿರುದ್ಧ 3,150 ಪ್ರಕರಣಗಳನ್ನು ದಾಖಲಿಸಿ 2.83 ಲಕ್ಷ ದಂಡವನ್ನು ಸಂಗ್ರಹಿಸಲಾಗಿದೆ. [ಬೆಂಗಳೂರನ್ನು ಕಾಯಲಿವೆ 3,500 ಸಿಸಿ ಕ್ಯಾಮರಾಗಳು]

ಹೆಲ್ಮೆಟ್ ರಹಿತ ಪ್ರಯಾಣ, ದೋಷ ಪೂರಿತ ನಂಬರ್ ಪ್ಲೇಟ್, ಟಿಂಟ್ ಗ್ಲಾಸ್‌ಗಳನ್ನು ತೆಗೆಯದೆ ಇರುವುದು, ಸೀಟ್ ಬೆಲ್ಟ್ ಹಾಕದೆ ಪ್ರಯಾಣ, ವಾಹನ ಚಲಾಯಿಸುವಾಗ ಮೊಬೈಲ್ ಬಳಕೆ, ಬೈಕ್‌ನಲ್ಲಿ ಮೂವರ ಪ್ರಯಾಣ, ಸಮವಸ್ತ್ರ ಧರಿಸದೆ ವಾಹನ ಸಂಚಾರ ಮಾಡುವುದು ಸೇರಿದಂತೆ ವಿವಿಧ ಸಂಚಾರ ನಿಯಮಗಳನ್ನು ಉಲ್ಲಂಘನೆ ಮಾಡುತ್ತಿರುವವರ ವಿರುದ್ಧ ದಂಡ ವಿಧಿಸಲಾಗುತ್ತಿದೆ. [ಸ್ವಚ್ಛ ನಗರಗಳ ಪಟ್ಟಿಯಲ್ಲಿ ಮಂಗಳೂರಿಗೆ 3ನೇ ಸ್ಥಾನ]

ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ 2015ರ ಅಂತ್ಯಕ್ಕೆ ಒಟ್ಟು 2010 ಪ್ರಕರಣಗಳನ್ನು ದಾಖಲಿಸಿ 2.01 ಲಕ್ಷ ದಂಡ ಸಂಗ್ರಹಿಸಲಾಗಿದೆ. ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಆಧರಿಸಿ ದಂಡ ವಿಧಿಸುವ ಪ್ರಕ್ರಿಯೆ ಹೊಸ ವರ್ಷದಿಂದ ಚುರುಕುಗೊಂಡಿದ್ದು, ಜನವರಿ ಮತ್ತು ಫೆಬ್ರವರಿಯಲ್ಲಿ 1,140 ಪ್ರಕರಣಗಳನ್ನು ದಾಖಲಿಸಿ 82 ಸಾವಿರ ದಂಡ ವಿಧಿಸಲಾಗಿದೆ.

ಮನೆಗೆ ನೋಟಿಸ್ : 'ಸಂಚಾರ ನಿಯಮ ಉಲ್ಲಂಘಿಸಿದ ತಕ್ಷಣ ವಾಹನದ ಮಾಲೀಕರ ವಿಳಾಸಕ್ಕೆ ನೋಟಿಸ್ ಕಳುಹಿಸಲಾಗುತ್ತಿದೆ. 15 ದಿನಗಳೊಳಗೆ ದಂಡವನ್ನು ಪಾವತಿಸಲು ಸೂಚಿಸಲಾಗುತ್ತಿದೆ. ನೋಟಿಸ್ ಬಂದ ತಕ್ಷಣ ವಾಹನ ಮಾಲೀಕರು ಠಾಣೆಗೆ ಬಂದು ದಂಡ ಕಟ್ಟಿ ಹೋಗುತ್ತಿದ್ದಾರೆ' ಎಂದು ನಗರ ಪೊಲೀಸ್ ಅಪರಾಧ ಮತ್ತು ಸಂಚಾರ ವಿಭಾಗದ ಉಪ ಆಯುಕ್ತ ಡಾ. ಸಂಜೀವ್ ಎಂ . ಪಾಟೀಲ್ ಹೇಳಿದ್ದಾರೆ.

'ರಸ್ತೆಯಲ್ಲಿ ಸಂಚಾರ ನಿಯಮ ಪಾಲಿಸಿಲ್ಲ ಎಂದು ಪೊಲೀಸರು ಹೇಳಿದಾಗ ವಾಹನ ಚಾಲಕರು ಏನೋ ಒಂದು ಸಬೂಬು ಹೇಳಿ ತಪ್ಪಿಸಿಕೊಳ್ಳಲು ಯತ್ನಿಸುತ್ತಾರೆ. ಈಗ ದೃಶ್ಯಾವಳಿಗಳನ್ನು ನೋಡಿ ಅವರೆಲ್ಲಾ ಸುಮ್ಮನೆ ದಂಡ ಕಟ್ಟಿ ಹೋಗುತ್ತಿದ್ದಾರೆ'

'ನೋಟಿಸ್ ಬಂದ ನಂತರ ಕೆಲವು ಜನರು ಠಾಣೆಗೆ ಬಂದು ದಂಡ ಪಾವತಿಸುತ್ತಿಲ್ಲ. ಅಂತಹವರಿಗೆ ಕೋರ್ಟ್‌ನಿಂದ ಸಮನ್ಸ್ ಬರಲಿದೆ. ಅದಕ್ಕೂ ಉತ್ತರ ನೀಡದಿದ್ದರೆ ಬಂಧನದ ವಾರೆಂಟ್ ಬರಲಿದೆ. ಆಗ ಜೈಲೇ ಗತಿಯಾಗಲಿದೆ. ಆದ್ದರಿಂದ ಸಂಚಾರ ನಿಯಮ ಪಾಲಿಸಿದ ಪ್ರಕರಣ ದಾಖಲಾದ ತಕ್ಷಣ ಠಾಣೆಗೆ ಬಂದು ದಂಡ ಪಾವತಿ ಮಾಡಿ' ಎನ್ನುತ್ತಾರೆ ಸಂಚಾರ ವಿಭಾಗದ ಎಸ್ಪಿ ಉದಯ್ ಎಂ. ನಾಯಕ್ .

ದಂಡವನ್ನು ಆನ್‌ಲೈನ್ ಮೂಲಕ ಸ್ವೀಕರಿಸುವ ಯೋಚನೆ ಇದೆ. ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಕಳುಹಿಸಲಾಗುತ್ತದೆ. ಆನ್‌ಲೈನ್‌ನಲ್ಲೇ ದಂಡ ಸ್ವೀಕರಿಸುವ ವ್ಯವಸ್ಥೆ ಶೀಘ್ರದಲ್ಲೇ ಜಾರಿಗೆ ಬರಲಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Mangaluru city roads came under camera surveillance. IF any person violating traffic rules, he can get noticed. From June 2015 to February 2016 police collected 2 lakh fine.
Please Wait while comments are loading...