ಮುಗುಚಿ ಬಿದ್ದ ಬೋಟ್‌ : ಮಗು ನೀರು ಪಾಲು,6 ಜನರ ರಕ್ಷಣೆ

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಅಕ್ಟೋಬರ್, 06: ಮಂಗಳೂರಿನ ಪಣಂಬೂರ್ ಬೀಚ್ ನಲ್ಲಿ ಸ್ಪೀಡ್ ಬೋಟ್‌ವೊಂದು ಮಗುಚಿ ಬಿದ್ದ ಪರಿಣಾಮ ಮಗುವೊಂದು ನೀರುಪಾಲಾಗಿರುವ ಘಟನೆ ಬುಧವಾರ ಸಂಜೆ ನಡೆದಿದೆ.

ನಾಟೇಕಲ್ ನಿವಾಸಿ ಸನಾಯಿಲ್ ಮತ್ತು ಫಾತಿಮಾ ದಂಪತಿಯ ಪುತ್ರ ಮುಹಮ್ಮದ್ ಶಹದನ್ (2) ನೀರುಪಾಲಾಗಿರುವ ಮಗು. ಶಹದನ್ ಸೇರಿದಂತೆ ಕುಟುಂಬದ 7 ಮಂದಿ ಪಣಂಬೂರು ಬೀಚ್‌ಗೆ ತೆರಳಿದ್ದರು. ಸ್ಪೀಡ್ ಬೋಟ್‌ನಲ್ಲೂ ಸುತ್ತಾಟಕ್ಕೆ ತೆರಳಿದ್ದರು. ಸ್ಪೀಡ್ ಬೋಟ್ ಸ್ವಲ್ಪ೦ ದೂರ ಸಾಗುತ್ತಿದ್ದಂತೆಯೇ ಬೋಟ್‌ನಲ್ಲಿ ತಾಂತ್ರಿಕ ದೋಷ ಉಂಟಾಗಿ ನೀರಿನ ತೆರೆಗೆ ಸಿಲುಕಿ ಬೋಟ್ ಮಗುಚಿ ಬಿದ್ದಿದೆ.

Panambur Beach

ಆ ಕೂಡಲೇ ಮಗು ನೀರಿನ ಸೆಳೆತಕ್ಕೆ ಸಿಲುಕಿದ್ದು, ಉಳಿದವರು ಲೈಫ್ ಜಾಕೆಟ್ ಧರಿಸಿದ್ದರಿಂದ ಈಜುವ ಪ್ರಯತ್ನ ನಡೆಸಿದ್ದರು. ಕೂಡಲೇ ಲೈಫ್ ಗಾರ್ಡ್ ಸಿಬ್ಬಂದಿ 6 ಜನರನ್ನು ರಕ್ಷಿಸಿದ್ದಾರೆ.

ತಾಂತ್ರಿಕ ದೋಷದಿಂದ ಬೋಟ್ ಮಗುಚಿ ಬಿದ್ದ ಸಂದರ್ಭದಲ್ಲಿ ಮಗು ನಾಪತ್ತೆಯಾಗಲು ಲೈಫ್ ಗಾರ್ಡ್‌ನವರು ನಿರ್ಲಕ್ಷವೇ ಕಾರಣ ಎಂದು ಕುಟುಂಬದ ಸದಸ್ಯರು ಆರೋಪಿಸಿದ್ದಾರೆ.

Beach

ಸ್ಪೀಡ್ ಬೋಟ್ ಕೇವಲ ಕೆಲವೇ ಮೀಟರ್ ದೂರ ಹೋಗಿದ್ದು, ಲೈಫ್ ಗಾರ್ಡ್‌ನವರು ತಕ್ಷಣ ಕಾರ್ಯಪ್ರವೃತ್ತರಾಗಿದ್ದರೆ ಮಗುವನ್ನು ರಕ್ಷಿಸಬಹುದಿತ್ತು. ಆದರೆ, ಅವರು ವಿಳಂಬ ಮಾಡಿದ್ದರಿಂದ ಮಗು ನೀರುಪಾಲಾಗಿದೆ ಎಂದು ಕುಟುಂಬದ ಸದಸ್ಯ ಹನೀಫ್ ಎಂಬವರು ಆರೋಪ ಮಾಡಿದ್ದಾರೆ.

ಬೀಚ್ ರಕ್ಷಣಾ ದಳ, ಮುಳುಗು ತಜ್ಞರು ಸಮುದ್ರದಲ್ಲಿ ಮಗುವಿನ ಪತ್ತೆಗೆ ಹುಡುಕಾಟ ನಡೆಸಿದರೂ ಮಗು ಪತ್ತೆಯಾಗಿಲ್ಲ. ಪಣಂಬೂರು ಎಸಿಪಿ ಮತ್ತು ಪೊಲೀಸ್ ಸಿಬ್ಬಂದಿ ಸ್ಥಳಕ್ಕಾಗಮಿಸಿ ತನಿಖೆ ನಡೆಸಿದ್ದಾರೆ. ಈ ಬಗ್ಗೆ ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
The boat accident that took place on Wednesday night of October 5 at Panambur is one of the rarest in the area though the place is known as a death trap for many who came for swimming here. Boat mishap has not taken place in the recent place.
Please Wait while comments are loading...