ಮಂಗಳೂರು: ಉಗಾಂಡದಲ್ಲಿ ಸಂಕಷ್ಟಕ್ಕೆ ಸಿಲುಕಿದ ಬೆಳ್ತಂಗಡಿ ಯುವಕ

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಫೆಬ್ರವರಿ 5:ಅಬ್ದುಲ್ ರಶೀದ್, ಮುಹಮ್ಮದ್ ಶಾಫಿ ದಂಪತಿಯ ಒಬ್ಬನೇ ಮಗ. ಸಾವಿರಾರು ಕನಸುಗಳನ್ನಿಟ್ಟುಕೊಂಡು ದೂರದ ಉಗಾಂಡಕ್ಕೆ ಹೋಗಿದ್ದರು. ಆದರೆ ಕನಸಿನ ಬೆನ್ನೇರಿ ಹೊರಟ ಕರಾವಳಿಯ ಈ ಯುವಕ ಇದೀಗ ಸಂಕಷ್ಟದಲ್ಲಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕು ಪಣಕಜೆಯಲ್ಲಿ ಮುಹಮ್ಮದ್ ಶಾಫಿ ವಾಸವಾಗಿದ್ದಾರೆ. ಇವರ ನಾಲ್ಕು ಮಕ್ಕಳಲ್ಲಿ ಮೊದಲ ಪುತ್ರನೇ ಅಬ್ದುಲ್ ರಶೀದ್.‌ 33 ವರ್ಷದ ರಶೀದ್ ಸುಮಾರು ಏಳು ವರ್ಷಗಳ ಹಿಂದೆ ಉದ್ಯೋಗದ ನಿಮಿತ್ತ ಆಫ್ರಿಕಾದ ಉಗಾಂಡಕ್ಕೆ ತೆರಳಿದ್ದರು.

Mangaluru: Belthangady boy in trouble at Uganda

ಉಗಾಂಡಾದ ಕಂಪಾಲದಲ್ಲಿರುವ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ರಶೀದ್ ಕಳೆದ ವರ್ಷ ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದರು. ಈ ವೇಳೆ ಅಪರಿಚಿತರು ರಶೀದ್ ರನ್ನು ತಡೆದು ಹಣ ಹಾಗೂ ಕಂಪೆನಿಯ ಕೆಲ ದಾಖಲೆಗಳನ್ನು ದರೋಡೆ ಮಾಡಿದ್ದರು. ಈ ಕುರಿತು ರಶೀದ್, ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. [ಬಂಟ್ವಾಳ: ನಿಧಿ ಆಸೆಗೆ ಮನೆ ಮಂದಿಯನ್ನು ಕಟ್ಟಿ ಹಾಕಿದ್ದ ಆರೋಪಿಗಳ ಬಂಧನ]

ವಿಚಿತ್ರವೆಂದರೆ ರಶೀದ್ ಕೆಲಸ ಮಾಡುತ್ತಿದ್ದ ಕಂಪೆನಿ ವ್ಯವಸ್ಥಾಪಕ ನಿರ್ದೇಶಕ ಈ ಸಂದರ್ಭದಲ್ಲಿ ಸಹಾಯ ಮಾಡುವ ಬದಲು ರಶೀದ್‌ ಬೆನ್ನಿಗೆ ಚೂರಿ ಹಾಕಿದ. ಕಂಪನಿಯ ದಾಖಲೆಗಳನ್ನು ಕಳ್ಳತನ ಮಾಡಿದ್ದಾನೆ. ಜೊತೆಗೆ 5 ಲಕ್ಷ ಕಳ್ಳತನವಾಗಿದೆಯೆಂದು ಪ್ರಕರಣ ದಾಖಲಿಸಿ ರಶೀದ್ ರನ್ನೇ ಜೈಲಿಗೆ ಕಳುಹಿಸಿದ. ಕೊನೆಗೂ ಸ್ನೇಹಿತರ ಸಹಾಯದಿಂದ ರಶೀದ್ ಡಿಸೆಂಬರ್‌ನಲ್ಲಿ ಜಾಮೀನು ಮೂಲಕ ಬಿಡುಗಡೆಗೊಂಡಿದ್ದಾರೆ.

ಏಳು ವರ್ಷಗಳಿಂದ ಉಗಾಂಡದಲ್ಲಿರುವ ರಶೀದ್ ಸೋಮಾಲಿಯಾದ ಯುವತಿಯನ್ನೇ ಮದುವೆಯಾಗಿದ್ದರು. ರಶೀದ್ ಗೆ ಎರಡು ಹೆಣ್ಮಕ್ಕಳು ಹಾಗೂ ಒಂದು ಗಂಡು ಮಗು ಇದೆ. ರಶೀದ್ ಜೈಲಿಗೆ ಹೋದಾಗಿನಿಂದ ಸ್ಥಳೀಯರು ಇವರ ಕುಟುಂಬಕ್ಕೆ ಸಹಾಯ ಮಾಡಿದ್ದರು. ಹೀಗಾಗಿ ಪತ್ನಿ, ಮಕ್ಕಳು ಜೀವನ ನಿರ್ವಹಣೆ ಮಾಡಿದ್ದರು.

ಜಾಮೀನು ಸಿಕ್ಕಿದರೂ ಉಗಾಂಡದಲ್ಲೇ ಬಾಕಿ

ಅಂತೂ ಇಂತೂ ರಶೀದ್ ಗೆ ಜಾಮೀನು ಸಿಕ್ಕಿದೆ. ಆದರೆ ಕೆಲಸ ಮಾಡುವುದಕ್ಕೆ ಹಾಗೂ ಊರಿಗೆ ಬರುವುದಕ್ಕೆ ಆಗುತ್ತಿಲ್ಲ ಎಂದು ನೋವಿನಿಂದ ಹೇಳುತ್ತಾರೆ ರಶೀದ್ ತಂದೆ ಶಾಫಿ. ಯಾಕೆ ಎಂದು ನಾವು ಕೇಳಿದರೆ, 'ನನ್ನ ಮಗನ ಪಾಸ್ ಪೋರ್ಟ್‌ನ್ನು ಕಂಪೆನಿ ಎಂ.ಡಿ ಇಟ್ಟುಕೊಂಡಿದ್ದಾರೆ. ಪಾಸ್ ಪೋರ್ಟ್ ಕೊಡಿ ಅಂದರೆ ಲಕ್ಷ, ಲಕ್ಷ ಹಣ ಕೇಳುತ್ತಿದ್ದಾರೆ. ರಶೀದ್ ವಿರುದ್ದದ ಪ್ರಕರಣ ಮುಗಿಸಲು ಕಂಪೆನಿ ಎಂ.ಡಿ 15 ಲಕ್ಷ ರೂ ಬೇಡಿಕೆ ಇಟ್ಟಿದ್ದಾರಂತೆ. ಇಷ್ಟೇ ಅಲ್ಲ, ರಶೀದ್ ರ ಬೆಳ್ತಂಗಡಿ ಮನೆಗೆ ಕರೆ ಮಾಡಿ ಹಣ ಹೊಂದಿಸಿಕೊಡುವಂತೆ ಬೆದರಿಕೆಯನ್ನು ಒಡ್ಡಿದ್ದರು. ಹಣ ನೀಡದಿದ್ದರೆ ರಶೀದ್ ರನ್ನು ಶಾಶ್ವತವಾಗಿ ಜೈಲಿನಲ್ಲಿರಿಸುವುದಾಗಿಯೂ ಬೆದರಿಕೆ ಹಾಕುತ್ತಿದ್ದಾರಂತೆ.

ಭಾರತ್ ಬೀಡಿ ಕಂಪೆನಿಯಲ್ಲಿ ಕೆಲಸ ಮಾಡಿ ನಿವೃತ್ತರಾಗಿರುವ ರಶೀದ್ ತಂದೆ ಶಾಫಿಯವರಿಗೆ ಏನೂ ಮಾಡಬೇಕೆಂದು ತೋಚುತ್ತಿಲ್ಲ. ಸ್ಥಳೀಯ ಶಾಸಕ ವಸಂತ್ ಬಂಗೇರ ಸುಮಾರು 60 ಸಾವಿರದಷ್ಟು ಹಣಕಾಸಿನ ಸಹಾಯ ಮಾಡಿದ್ದಾರಂತೆ. ಅಲ್ಲದೇ ಸಚಿವರಾದ ಯು.ಟಿ.ಖಾದರ್, ರಮಾನಾಥ್ ರೈ ಸೇರಿದಂತೆ ಹಲವಾರು ಗಣ್ಯರನ್ನ ಭೇಟಿ ಮಾಡಿ ಸಹಾಯ ಕೇಳಿದ್ದಾರೆ.
ಈ ಪ್ರಕರಣದ ಕುರಿತು ಭಾರತ ಸರಕಾರದ ವಿದೇಶಾಂಗ ಕಚೇರಿಗೂ ಮಾಹಿತಿ ನೀಡಲಾಗಿದೆ. [ಏರ್ ಟೆಲ್ ಗೆ 50 ಸಾವಿರ ದಂಡ, ಮಂಗಳೂರು ಗ್ರಾಹಕರ ಖುಲ್ ಜಾ ಸಿಮ್ ಸಿಮ್]

ವಿದೇಶಾಂಗ ಕಚೇರಿಯವರು ಉಗಾಂಡಾದ ಹೈಕಮಿಷನರ್ ರನ್ನು ಸಂಪರ್ಕಿಸಿದ್ದಾರೆ. ಈ ವೇಳೆ ಉಗಾಂಡಾ ರಾಯಭಾರಿ ಅಲ್ಲಿನ ಸರಕಾರ ರಶೀದ್ ಅವರನ್ನು ಅಪರಾಧಿ ಎಂದು ಪರಿಗಣಿಸಿದೆ. ಈ ಪ್ರಕರಣ ಕೋರ್ಟ್ ನಲ್ಲಿದೆ ಎಂದು ವಿದೇಶಾಂಗ ಕಚೇರಿಗೆ ಮಾಹಿತಿ ನೀಡಿದ್ದಾರೆ.

ಅಲ್ಲದೇ ಉಗಾಂಡಾದಲ್ಲಿರುವ ಕರ್ನಾಟಕ ಸಂಘದ ಪದಾಧಿಕಾರಿಗಳು ಸಹ ಕಂಪೆನಿಯ ಮುಖ್ಯಸ್ಥರೊಂದಿಗೆ ಮಾತನಾಡಿ ಸಮಸ್ಯೆ ಪರಿಹರಿಸಲು ಪ್ರಯತ್ನಿಸಿದ್ದಾರೆ. ಆದರೆ ಅವರ ಬಳಿಯೂ ಕಂಪೆನಿ ಎಂ.ಡಿ 15 ಲಕ್ಷ ಬೇಡಿಕೆ ಇಟ್ಟಿದ್ದಾನೆ ಎನ್ನಲಾಗಿದೆ.

ದೂರವಾಣಿಯಲ್ಲಿ ಮಾಧ್ಯಮದವರೊಡನೆ ಮಾತನಾಡಿದ ಉಗಾಂಡದಲ್ಲಿರುವ ರಶೀದ್, ' ಹಿಂದಿನ ಕಂಪನಿಯಲ್ಲಿ ದುಡಿಯಲು ನಾನು ರೆಡಿ. ಇಲ್ಲದಿದ್ದರೆ ಬೇರೆ ಕಂಪನಿಯಲ್ಲಿ ಕೆಲಸ ಸಿಕ್ಕಿದರೂ ಸಾಕು. ಇಲ್ಲೇ ದುಡಿದು ಸಮಸ್ಯೆಗೆ ಪರಿಹಾರ ಕಂಡುಕೊಳ್ಳುತ್ತೇನೆ. ಆದರೆ ಕಂಪೆನಿಯು ತನ್ನ ಪಾಸ್‌ಪೋರ್ಟ್‌ನ್ನು ನೀಡದೇ ಇರುವುದರಿಂದ ಏನೂ ಮಾಡಲಾಗದ ಪರಿಸ್ಥಿತಿಯಲ್ಲಿದ್ದೇನೆ,": ಎಂದಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A resident of Belthangady taluk Panakaje Mohammad Shafi’s son in difficult situation, who is living in Uganda, Africa continent.
Please Wait while comments are loading...