ಬೀದಿ ಬದಿ ವ್ಯಾಪಾರಿಗಳ ಬಾಳಲ್ಲಿ ಪಾಲಿಕೆ ಆಟ..!

By: ಶಂಶೀರ್ ಬುಡೋಳಿ
Subscribe to Oneindia Kannada

ಮಂಗಳೂರು, ಜನವರಿ 10 : ಮಂಗಳೂರು ಮಹಾನಗರ ಕೈಗೊಂಡಿರುವ ಅವೈಜ್ಞಾನಿಕ ನಿರ್ಧಾರವೊಂದು ಮಂಗಳೂರಿನ ಬೀದಿ ಬದಿ ವ್ಯಾಪಾರಿಗಳು ಕಣ್ಣೀರಿಡುವಂತೆ ಮಾಡಿದೆ.

ಪಾಲಿಕೆಯು ನಗರದ ಬೀದಿ - ಬದಿ ವ್ಯಾಪಾರಿಗಳಿಗೆಂದೇ ಪುರಭವನದ ಸಮೀಪದಲ್ಲಿ ಪ್ರತ್ಯೇಕ ಸ್ಥಳವನ್ನು ಗುರುತಿಸಿದೆ. ಆದರೆ ಇಲ್ಲಿಗೆ ವ್ಯಾಪಾರಿಗಳು ಬರುತ್ತಿಲ್ಲ. ಇದಕ್ಕೆ ಕಾರಣ ಈ ಸ್ಥಳದಲ್ಲಿನ ಗ್ರಾಹಕರ ಕೊರತೆ. ಹೀಗಾಗಿ, ಈ ಪ್ರತ್ಯೇಕ ವ್ಯಾಪಾರ ಸ್ಥಳವನ್ನು ಉದ್ಘಾಟಿಸಿ ತಿಂಗಳುಗಳೇ ಕಳೆದರೂ ಇಲ್ಲಿ ಯಾವುದೇ ವ್ಯಾಪಾರ ನಡೆಯುತ್ತಿಲ್ಲ.

Magalore Mahanagara Palike decision made roadside vendors miserable

ಬೀದಿ ಬದಿ ವ್ಯಾಪಾರಿಗಳ ಆರ್ಥಿಕತೆಯ ಮಹತ್ವವನ್ನು ಗುರುತಿಸಿದ್ದ ಸುಪ್ರೀಂಕೋರ್ಟ್ , 2011ರಲ್ಲಿ ವಸತಿ ಸಚಿವಾಲಯಕ್ಕೆ 'ಬೀದಿ ಬದಿ ವ್ಯಾಪಾರಿಗಳನ್ನು ಪೊಲೀಸರು ಮತ್ತು ಪೌರ ಅಧಿಕಾರಿಗಳ ದೌರ್ಜನ್ಯದಿಂದ ರಕ್ಷಿಸುವ ನಿಟ್ಟಿನಲ್ಲಿ ಪ್ರತ್ಯೇಕ ವ್ಯಾಪಾರ ವಲಯವನ್ನು ಗುರುತಿಸಿಕೊಡಬೇಕು' ಎಂದು‌ ಸೂಚಿಸಿತ್ತು. ತದನಂತರ ಸಂಸತ್ 2012ರಲ್ಲಿ ಬೀದಿ ವ್ಯಾಪಾರಿಗಳ ಮಸೂದೆಯನ್ನು ಜಾರಿಗೊಳಿಸಿತ್ತು.

ಈ ಕಾನೂನು ಪಟ್ಟಣ ವ್ಯಾಪಾರ ಸಮಿತಿಯಿಂದ ಪ್ರಮಾಣ ಪತ್ರ ಪಡೆದಿರುವ ಎಲ್ಲಾ ಬೀದಿ ಬದಿ ವ್ಯಾಪಾರಿಗಳಿಗೆ ಭದ್ರತೆ ಮತ್ತು ರಕ್ಷಣೆ ನೀಡುತ್ತದೆ. ಈ ಕುರಿತು ನಮ್ಮ ಜೊತೆ ಮಾತನಾಡಿದ ಮಹಾ ನಗರ ಪಾಲಿಕೆಯ ಆಯುಕ್ತ ಮಹಮ್ಮದ್ ನಝೀರ್ , ' ಸದ್ಯ ಪಾಲಿಕೆಯು ಸುಮಾರು 210 ಬೀದಿ ಬದಿ ವ್ಯಾಪಾರಿಗಳನ್ನು ಗುರುತಿಸಿದೆ. ಅವರ ನೋಂದಾವಣೆ ಬಳಿಕ ಗುರುತಿನ ಚೀಟಿ ನೀಡಿದೆ. ಪುರಭವನದಕ್ಕೆ ಕೇಂದ್ರ ಮಾರುಕಟ್ಟೆ ಸಮೀಪದಲ್ಲಿರುವುದರಿಂದ ಬೀದಿ ವ್ಯಾಪಾರಿಗಳಿಗೆ ಇಲ್ಲಿ ವ್ಯಾಪಾರ ಮಾಡುವುದಕ್ಕೆ ಯಾವುದೇ ತೊಂದರೆ ಇಲ್ಲ. ಅವರು ಇಲ್ಲಿ ವ್ಯಾಪಾರ ಆರಂಭಿಸಿರೆ, ಫುಟ್ ಪಾತ್ ಗಳನ್ನು ಆಕ್ರಮಿಸಿಕೊಂಡು ವ್ಯಾಪಾರ ನಡೆಸುವ ಬೀದಿ ಬದಿ ವ್ಯಾಪಾರಿಗಳ ಸಂಖ್ಯೆ ಇಳಿಕೆಯಾಗಿ, ಪಾದಚಾರಿಗಳಿಗೆ ಅನುಕೂಲವಾಗಲಿದೆ' ಎಂದಿದ್ದಾರೆ.

Magalore Mahanagara Palike decision made roadside vendors miserable

ಅತ್ತ ಪಾಲಿಕೆ ಆಯುಕ್ತರು, ಮೇಯರ್ ನಮ್ಮ ನಿರ್ಧಾರದ ಹಿಂದೆ ವ್ಯಾಪಾರಿಗಳ ಹಿತ ಇದೆ ಎಂದು ಹೇಳಿದರೆ ಇತ್ತ ವ್ಯಾಪಾರಿಗಳು ಇದೆಲ್ಲಾ ಸುಳ್ಳು. ನಮ್ಮ ಗೋಳು ನಮಗೆ ಗೊತ್ತು ಅಂತಿದ್ದಾರೆ. ವಾಸ್ತವವಾಗಿ ಬೀದಿ ಬದಿ ವ್ಯಾಪಾರಿಗಳಿಗೆಂದು ಗುರುತಿಸಲಾಗಿರುವ ಪ್ರತ್ಯೇಕ ಸ್ಥಳದಲ್ಲಿ ಮೂಲಭೂತ ಸೌಕರ್ಯಗಳಿಲ್ಲ. ಅದರಲ್ಲೂ ಶೌಚಾಲಯ, ಕುಡಿಯುವ ನೀರು, ಸಮರ್ಪಕ ಬೆಳಕಿನ ವ್ಯವಸ್ಥೆ ಇಲ್ಲವೇ ಇಲ್ಲ. ಜೊತೆಗೆ ಈ ಸ್ಥಳದ ಸುತ್ತ ಕಾಂಪೌಂಡು ಗೋಡೆ ಕಟ್ಟಲಾಗಿದೆ.

'ಇದನ್ನು ತೆಗೆಯುವಂತೆ ಮನಪಾ ಪ್ರತಿನಿಧಿಗಳಲ್ಲಿ ಮನವಿ ಮಾಡಿದ್ದರೂ ಇದುವರೆಗೆ ಏನೂ ಮಾಡಿಲ್ಲ. ಕೆಲವು ವ್ಯಾಪಾರಿಗಳು ಇಲ್ಲಿ ವ್ಯಾಪಾರಕ್ಕೆ ಕುಳಿತಿದ್ದರೂ ಗ್ರಾಹಕರನ್ನು ಸೆಳೆಯುವಲ್ಲಿ ವಿಫಲವಾಗಿದ್ದಾರೆ. ಅಗತ್ಯ ಸೌಲಭ್ಯಗಳನ್ನು ಪೂರೈಸಿದರೆ ಮನಪಾ ಕಾರ್ಯ ಯಶಸ್ವಿಯಾಗಬಹುದು' ಎಂದು ಸಿಐಟಿಯು ಮುಖಂಡ ವಸಂತ ಆಚಾರಿ ಹೇಳಿದ್ದಾರೆ.

Magalore Mahanagara Palike decision made roadside vendors miserable

ವ್ಯಾಪಾರಿಗಳ ಗೋಳು: ಮನಪಾವು ನಗರದ ಬೀದಿ - ಬದಿ ವ್ಯಾಪಾರಿಗಳಿಗೆಂದು ಪುರಭವನದ ಸಮೀಪ ಗುರುತಿಸಿರುವ ಪ್ರತ್ಯೇಕ ಸ್ಥಳ , ಬೀದಿ ವ್ಯಾಪಾರಿಗಳ ಗಾಯದ ಮೇಲೆ ಬರೆ ಎಳೆದಿದೆ ಎಂದು ಹೆಸರು ಹೇಳಲು ಇಚ್ಛಿಸದ ಬೀದಿ ವ್ಯಾಪಾರಿಯೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಮಂಗಳೂರಿನ 'ಬೀದಿ ವ್ಯಾಪಾರ ವಲಯ' ಎಂಬುದು ಖಾಸಗಿ ಅನಧಿಕೃತ ಸ್ಥಳವೆಂದು ಹೇಳಿರುವ ಇವರು ಕಾಂಗ್ರೆಸ್ ನೇತೃತ್ವದ ಮಂಗಳೂರು ನಗರ ಪಾಲಿಕೆ ಈ ವ್ಯಾಪಾರವನ್ನು ಅಪರಾಧ ಎಂಬಂತೆ ಕಾಣುತ್ತಿದೆ. ಬಡ ವ್ಯಾಪಾರಿಗಳನ್ನು 'ನಗರಾಭಿವೃದ್ಧಿ ' ಹೆಸರಲ್ಲಿ‌ ಒಕ್ಕಲೆಬ್ಬಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನೋಟು ರದ್ದತಿಯ ಪರಿಣಾಮವಾಗಿ ಮೊದಲೇ ಸಾಲ ಸೋಲ ಮಾಡಿ ತಂದ ಸಾಮಾನು ಇತ್ಯಾದಿ ವಸ್ತುಗಳು ಮಾರಾಟವಾಗದೇ ನಷ್ಟ ಅನುಭವಿಸುವ ಈ ಸಮಯದಲ್ಲಿ ಅವರನ್ನು ' ಬೀದಿ ಬದಿ ವ್ಯಾಪಾರ ವಲಯಕ್ಕೆ ' ಸ್ಥಳಾಂತರಿಸುವುದು ಎಷ್ಟು ಸರಿ ಅನ್ನುವುದು ಇಲ್ಲಿನ ವ್ಯಾಪಾರಿಗಳ ಪ್ರಶ್ನೆ.

Magalore Mahanagara Palike decision made roadside vendors miserable

ಗುರುತು ಚೀಟಿ ಹೊಂದಿದ ವ್ಯಾಪಾರಿಗಳನ್ನು ಮತ್ತು ಇನ್ನು ಗುರುತು ಚೀಟಿ ಪ್ರಕ್ರಿಯೆಯಲ್ಲಿ ಒಳಪಡುವ ವ್ಯಾಪಾರಿಗಳಿಗೆ ಒಂದು ವರುಷದ ಕಾಲಾವಕಾಶ ನೀಡಿ ಭೀಕರವಾಗಿ ತತ್ತರಿಸಿರುವ ದೇಶದ ಆರ್ಥಿಕ ಪರಿಸ್ಥಿತಿ ಸುಧಾರಿಸಿದ ನಂತರ ಸ್ಥಳಾಂತರ ಪ್ರಕ್ರಿಯೆ ನಡೆಸಿದರೆ ವ್ಯಾಪಾರಿಗಳು ಸ್ವಲ್ಪ ಮಟ್ಟಿಗೆ ಆರ್ಥಿಕತೆಯಲ್ಲಿ ಸುಧಾರಣೆ ಕಾಣಬಹುದು. ದ.ಕ.ಜಿಲ್ಲೆಯ ಕಾಂಗ್ರೆಸ್ ನಾಯಕರು ಸಹ ಈ ವಿಚಾರದಲ್ಲಿ ಆಟವಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Mangaluru Mahanagara Palike has provided a new market place near city's Purabhavana for road side vendors. But, this has given rise to a uncertainity.
Please Wait while comments are loading...