ಮಂಗಳೂರಿನ ಬಾಬು ಪಿಲಾರ್ ಕೆಲಸಕ್ಕೆ ನಮ್ಮ ಸಲಾಂ

By: ಐಸಾಕ್ ರಿಚರ್ಡ್, ಮಂಗಳೂರು
Subscribe to Oneindia Kannada

ಮಂಗಳೂರು, ಏಪ್ರಿಲ್ 02 : ತೊಕ್ಕೊಟ್ಟಿನ ಚೆಂಬುಗುಡ್ಡೆ ಹಿಂದೂ ರುದ್ರ ಮತ್ತು ಆಸುಪಾಸಿನ ಸ್ಮಶಾನಗಳಲ್ಲಿ ಯಾವುದೇ ಶವಸಂಸ್ಕಾರ ನಡೆದರೂ ಅಲ್ಲಿ ಈ ವ್ಯಕ್ತಿ ಹಾಜರ್. ತನ್ನವರಲ್ಲದ, ತನಗೆ ಸಂಬಂಧವೇ ಇಲ್ಲದ ಜನರು ಇಹಲೋಕ ತ್ಯಜಿಸಿದಾಗ ಸ್ಮಶಾನದಲ್ಲಿ ಅಂತ್ಯ ಸಂಸ್ಕಾರದ ವಿಧಿ ವಿಧಾನಗಳನ್ನು ಚಾಚೂ ತಪ್ಪದೆ ನೆರವೇರಿಸಿ ಕೊಟ್ಟು ಮನೋತೃಪ್ತರಾಗುವ ಈ ಸರಳ ವ್ಯಕ್ತಿಯೇ ಬಾಬುಪಿಲಾರು.

ತೊಕ್ಕೊಟ್ಟು ಪಿಲಾರಿನವರಾದ ಬಾಬು ಅವರು ಸೌಮ್ಯ, ಸರಳ ವ್ಯಕ್ತಿತ್ವದವರು. ಜೀವನೋಪಾಯಕ್ಕಾಗಿ ಮೊದಲು ಅವರು ಚಿತ್ರಗಾರಿಕೆ ಬರೆಯುವ ಕಸುಬನ್ನಾಗಿ ನೆಚ್ಚಿಕೊಂಡವರು. ದಶಮಾನದ ಹಿಂದೆ ಬ್ಯಾನರ್‌ಗಳನ್ನು ಬರೆಯುವ ವೃತ್ತಿಯಲ್ಲಿ ನುರಿತ ಕಲಾವಿದರಾದ ಇವರು, ನಂತರದ ದಿನಗಳಲ್ಲಿ ಡಿಜಿಟಲ್ ಫ್ಲೆಕ್ಸ್‌ ಕಾರಣದಿಂದಾಗಿ ಸ್ವಲ್ಪ ಕಾಲ ಹಿನ್ನಡೆ ಅನುಭವಿಸಿದರು. [ಮೋದಿ ಅಭಿಮಾನಿಗಳು ಮೆಚ್ಚಿದ ಬೆಳಗಾವಿಯ ರೈತ]

babu pilal

ಸಿಪಿಐಎಂ ಪಕ್ಷದಲ್ಲಿ ತೊಡಗಿಸಿಕೊಂಡಂತಹ ಇವರು ಪಕ್ಷ ಸಂಘಟನೆಯಲ್ಲಿ ಹಲವು ಹುದ್ದೆಗಳನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ತನ್ನ ವೃತ್ತಿಯ ಜೊತೆಗೆ ಬಡ ವಿದ್ಯಾರ್ಥಿಗಳಿಗೆ ವಿವಿಧ ರೀತಿಯ ವಿದ್ಯಾರ್ಥಿವೇತನ ದೊರಕಲು ಅರ್ಜಿಗಳನ್ನು ಯಾವುದೇ ಫಲಾಪೇಕ್ಷೆ ಇಲ್ಲದೆ ಭರ್ತಿ ಮಾಡಿ ಕೊಡುತ್ತಾರೆ. [ಸಚಿವ ಕಿಮ್ಮನೆ ಕಾರು ಚಾಲಕನ ಮಾನವೀಯತೆಗೆ ಸಲಾಂ]

ಚಿತ್ರಗಾರಿಕೆ ವೃತ್ತಿ ನಡೆಸುವ ಮಧ್ಯದಲ್ಲಿ ಪರಿಸರದಲ್ಲಿ ಎಲ್ಲಿಯಾದರೂ ಮರಣ ಸಂಭವಿಸಿದ ವಿಷಯ ತಿಳಿದಾಕ್ಷಣ ಕೆಲಸ ಅಲ್ಲಿಗೇ ಬಿಟ್ಟು ಸೂತಕದ ಮನೆಗೆ ಹಾಜರಾಗುವ ಪೃವೃತ್ತಿಯನ್ನು ರೂಢಿಸಿಕೊಂಡಿದ್ದಾರೆ. ಅಪ್ರಾಪ್ತರ, ವೃದ್ಧರ, ಯುವಕರ ಸ್ವಾಭಾವಿಕ ಅಥವಾ ಅಕಾಲಿಕ ಮರಣವೇ ಆಗಲಿ ಮೃತರ ಸಂಬಂಧಿಗಳಿಗೆ ಸಾಂತ್ವನ ಹೇಳಿ ಸೂತಕದ ಮನೆಯಿಂದ ಸ್ಮಶಾನದವರೆಗೂ ನಡೆಯಬೇಕಾದ ವಿಧಿ ವಿಧಾನಗಳನ್ನು ಚಾಚೂ ತಪ್ಪದೆ ಹೇಳಿಕೊಟ್ಟು, ಕೊನೆಗೆ ಸ್ಮಶಾನದಲ್ಲಿ ಮೃತದೇಹ ಮಣ್ಣಾಗುವ ತನಕವೂ ಅಲ್ಲೇ ಇದ್ದು ಸೇವೆ ಸಲ್ಲಿಸುತ್ತಾರೆ. [ಕ್ಯಾನ್ಯರ್ ಗೆದ್ದ ದೀಪಿಕಾಳ ಬಾಳು ಬೆಳಗಲು ನಿಮ್ಮ ಸಹಾಯ ಹಸ್ತವಿರಲಿ]

mangaluru

ಸುಮಾರು 20 ವರ್ಷಗಳ ಹಿಂದೆ ಚೆಂಬುಗುಡ್ಡೆ ಹಿಂದೂ ರುಧ್ರಭೂಮಿಯು ದುರಸ್ಥಿಯಲ್ಲಿದ್ದ ಸಂಧರ್ಭದಲ್ಲಿ ಬಾಬು ಪಿಲಾರ್ ಅವರು ತಮಗೆ ತಿಳಿದವರ ಸಂಬಂಧಿ, ಸ್ನೇಹಿತರ ಮೃತ ದೇಹಗಳ ಅಂತ್ಯ ಸಂಸ್ಕಾರ ಮಾಡಲು ಕಟ್ಟಿಗೆ ಮುಂತಾದ ಸಲಕರಣೆಗಳನ್ನು ತಂದು ವ್ಯವಸ್ಥಿತವಾಗಿ ಅಂತ್ಯ ಸಂಸ್ಕಾರ ನೆರವೇರಿಸುತ್ತಿದ್ದರು. ಇಂದಿನವರೆಗೂ ಸುಮಾರು ಮೂರು ಸಾವಿರಕ್ಕಿಂತಲೂ ಹೆಚ್ಚು ಅಂತ್ಯ ಸಂಸ್ಕಾರಗಳನ್ನು ಬಾಬು ಅವರು ಯಾವುದೇ ಫಲಾಪೇಕ್ಷೆ ಇಲ್ಲದೆ ನಡೆಸಿದ್ದಾರೆ.

ಎಸ್‍ಎಸ್‍ಎಲ್‍ಸಿ ಓದಿರುವ ಬಾಬು ಅವರು, ಧರ್ಮಪತ್ನಿ ನಳಿನಾಕ್ಷಿ ಮತ್ತು ಮೂವರು ಪುತ್ರಿಯರ ಜೊತೆಗೆ ಸಂತೃಪ್ತ ಜೀವನ ನಡೆಸುತ್ತಿದ್ದಾರೆ. ಹಿರಿಯ ಪುತ್ರಿ ಪಲ್ಲವಿ ಇಂಜಿನಿಯರಿಂಗ್ ವ್ಯಾಸಂಗ ನಡೆಸುತ್ತಿದ್ದರೆ. ದ್ವಿತೀಯ ಪುತ್ರಿ ಬಿ.ಕಾಂ ಮತ್ತು ಕಿರಿಯವಲು ನಾಲ್ಕನೇ ತರಗತಿ ಓದುತ್ತಿದ್ದಾಳೆ .

ತಾನು ಆರ್ಥಿಕವಾಗಿ ಅಶಕ್ತನಾದರೂ ಜಾತಿ, ಮತ, ಪಕ್ಷ ಭೇಧ ಮರೆತು ಅನ್ಯರ ದು:ಖದಲ್ಲಿ ತೊಡಗಿಸಿ ಕೊಂಡು ಸಮಾಜಕ್ಕೆ ವಿಶಿಷ್ಟ ರೀತಿಯ ಸೇವೆ ನೀಡಿದ ಬಾಬುರವರನ್ನು ಸಹೃದಯವಂತಿಕೆಯುಳ್ಳವರು ಗುರುತಿಸಿ ಗೌರವಿಸುವ ಅಗತ್ಯವಿದೆ.

'ತಮ್ಮವರು ಮೃತಪಟ್ಟರೇ ಅಂತ್ಯಕ್ರಿಯೆಗೆ ಬರಲು ಸಮಯವಿಲ್ಲದಿರುವ ಇಂತಹ ಬಿಡುವಿಲ್ಲದ ಕಾಲದಲ್ಲಿ, ಯಾರೋ ಊರವರು ಸತ್ತರೆ ಮನಮಿಡಿದು ಚಿಕ್ಕಾಸನ್ನು ಅಪೇಕ್ಷಿಸದೆ ಓಡೋಡಿ ಬರುವ ಬಾಬು ಅವರ ಹೃದಯ ವೈಶ್ಯಾಲ್ಯತೆ ಎಲ್ಲರೂ ಮೆಚ್ಚತಕ್ಕದ್ದು' ಎನ್ನುತ್ತಾರೆ ಉಳ್ಳಾಲ ಪುರಸಭಾ ಮಾಜಿ ಸದಸ್ಯರಾದ ಗೋಪಾಲ ಅವರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Let's salute for CITU leader Babu Pilar work. Babu Pilar will help people for the work of final rites. Ullal, Mangaluru based Babu participated at more than 3000 final rites so far, without any expectation.
Please Wait while comments are loading...