ಕೈ ತುಂಬ ಬರುತ್ತಿದ್ದ ಸಂಬಳ ಬಿಟ್ಟು ಕಾಡಿನಲ್ಲೇ ನೆಲೆ ನಿಂತ ಶಿವಕುಮಾರ್

By: ಕಿರಣ್ ಸಿರ್ಸೀಕರ್
Subscribe to Oneindia Kannada

ಮಂಗಳೂರು, ಅಕ್ಟೋಬರ್ 26: ಕೈ ತುಂಬ ಸಂಬಳ, ಪ್ರತಿಷ್ಠಿತ ಕಂಪನಿಯ ಉದ್ಯೋಗ, ಕ್ರೆಡಿಟ್ ಕಾರ್ಡ್, ಕಾರು ಮತ್ತೊಂದು...ಹೀಗೆ ಸ್ವರ್ಗಕ್ಕೆ ಕಿಚ್ಚಿಡುವಂಥ ಐಷಾರಾಮಿ ಬದುಕು ನಡೆಸಲು ಇರುವ ವಾತಾವರಣವನ್ನು ಯಾರು ಬೇಡವೆಂದಾರು? ಹೌದು, ಬೇಡ ಅಂದುಕೊಳ್ಳುವವರೂ ಇದ್ದಾರೆ.

ಪ್ರತಿಷ್ಠಿತ ಸಾಫ್ಟ್ ವೇರ್ ಕಂಪನಿಯಲ್ಲಿ ಮೌಸ್ ಹಿಡಿದು ಪ್ರೋಗ್ರಾಂಗಳನ್ನು ಬರೆದ ಕೈಗಳು ಈಗ ಗದ್ದೆ- ತೋಟಗಳಲ್ಲಿ ದುಡಿಯುತ್ತಿದೆ. ಬೆಂಗಳೂರಿನ ಮೋಹವನ್ನು ಬಿಟ್ಟು ಪ್ರಕೃತಿಯ ಮಡಿಲಲ್ಲಿ ಕೃಷಿ ಮಾಡುತ್ತಾ ಜೀವನ ನಡೆಸುತ್ತಿರುವ ಯುವಕನೊಬ್ಬನ ಜೀವನಗಾಥೆ ಇದು.

ಚಿಂತಾಮಣಿ ಹಸಿರನ್ನು ಕಾಪಾಡುತ್ತಿರುವ ಹಿರಿಯ.. ನಿಜಕ್ಕೂ ಕೋಟಿಗೊಬ್ಬ!

ಆತ ಸಾಫ್ಟ್ ವೇರ್ ಕಂಪನಿಯ ಉದ್ಯೋಗಿ ಶಿವಕುಮಾರ್. ಮೂಲತಃ ತುಮಕೂರಿನ ಬೈರಸಂದ್ರ ನಿವಾಸಿ. ರಾಜಧಾನಿ ಬೆಂಗಳೂರಿನ ಪ್ರತಿಷ್ಠಿತ ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ. ಮಜಬೂತಾದ ಸಂಬಳ, ಜೊತೆಗೆ ದೇಶದ ನಾನಾ‌ ಭಾಗಗಳಿಗೆ ಸುತ್ತುವ‌ ಅವಕಾಶ. ಅಷ್ಟೇ‌ ಅಲ್ಲ, ಬೆಂಗಳೂರಿನಲ್ಲಿ 20 ವರ್ಷಗಳ ಕಾಲ ಮೌಸ್ ಹಿಡಿದು ಅಂತರ್ಜಾಲದಲ್ಲಿ ಜಾಲಾಡಿದ ಅನುಭವವೂ ಇತ್ತು.

'ಸುಖೀ ಜೀವನ'ಕ್ಕೆ ಬೇಕಾದ ಎಲ್ಲ್ ಸವಲತ್ತು- ಸೌಕರ್ಯಗಳಿದ್ದರೂ ಶಿವಕುಮಾರ್ ಇವತ್ತು ಬೆಂಗಳೂರಿನಲ್ಲಿಲ್ಲ. ಟೈ ಹಾಕಿಕೊಂಡು ಏಸಿ ಕಾರಿನಲ್ಲಿ ಆಫೀಸ್ ಗೆ ಹೋಗುವ ಧಾವಂತದಲ್ಲಿ ಶಿವಕುಮಾರ್ ಇಲ್ಲ. ಕೈ ತುಂಬಾ ಬರುವ ಸಂಬಳವನ್ನು ಎಣಿಸುವ ಗೋಜಿನಲ್ಲೂ ಇಲ್ಲ.

ಮಳೆಕಾಡಿನ ರಕ್ಷಣೆಗೆ ಮುಂದಾದ ಮಡಿಕೇರಿಯ ನರಿಕೊಡವ ರೈಡರ್ಸ್!

ಇಂದು ದಟ್ಟ ಕಾನನದ ನಡುವಿನ ಕುಗ್ರಾಮದಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದಾರೆ ಶಿವಕುಮಾರ್. ಬೆಂಗಳೂರಿನಲ್ಲಿ ಬಿಂದಾಸ್ ಆಗಿ ಜೀವನ ಮಾಡಬಹುದಾಗಿದ್ದರೂ ನೆಮ್ಮದಿಯನ್ನು ಅರಸುತ್ತಾ ಬಂದ ಶಿವಕುಮಾರ್ ತಲುಪಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮಲವಂತಿಗೆ ಗ್ರಾಮದ ದಿಡುಪೆ ಎಂಬ ಪುಟ್ಟ ಹಳ್ಳಿಗೆ.

ದಟ್ಟಾರಣ್ಯದಲ್ಲಿ ಒಂಟಿ ಮನೆ

ದಟ್ಟಾರಣ್ಯದಲ್ಲಿ ಒಂಟಿ ಮನೆ

ಪೃಕೃತಿ ಸೌಂದರ್ಯದ ಅದ್ಭುತ ಗಣಿಯಾದ ದಿಡುಪೆಯ ಸೌಂದರ್ಯಕ್ಕೆ ಮನಸೋತ ಶಿವಕುಮಾರ್ ದಟ್ಟಾರಾಣ್ಯದ ನಡುವಿನ ಕಡಮಗುಂಡಿ ಎಂಬಲ್ಲಿ‌ ಏಕಾಂಗಿ ಜೀವನ ಮಾಡುತ್ತಿದ್ದಾರೆ. ತನ್ನ ನೆಚ್ಚಿನ ನಾಯಿಯೊಂದಿಗೆ ಕಾಡಿನ ಒಂಟಿ ಮನೆಯಲ್ಲಿ ಜೀವನ ಮಾಡುತ್ತಿರುವ ಶಿವಕುಮಾರ್ ಅಡಿಕೆ, ಕೋಕೋ ಬೆಳೆಯುತ್ತಿದ್ದಾರೆ.

ರೈತರ ಪಾಲಿನ ಮಿತ್ರ

ರೈತರ ಪಾಲಿನ ಮಿತ್ರ

ತೋಟದಲ್ಲಿ ಮೈ ಬಗ್ಗಿಸಿ ಕೆಲಸ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ, ಗ್ರಾಮಸ್ಥರ ಪಾಲಿಗೆ ಶಿವಕುಮಾರ್ ನೆಚ್ಚಿನ ಮಿತ್ರನಾಗಿದ್ದಾರೆ. ರೈತರಿಗೆ ತನ್ನ ಅನುಭವ ಜ್ಞಾನವನ್ನು ಬಳಸಿ ಮಾಹಿತಿಯ ನೀಡುತ್ತಿದ್ದಾರೆ.

ಖುಷಿಗೇನೂ ಕೊರತೆಯಿಲ್ಲ

ಖುಷಿಗೇನೂ ಕೊರತೆಯಿಲ್ಲ

ಅಲ್ಲಲ್ಲಿ ಕಾಣಸಿಗುವ ಜಲಪಾತಗಳನ್ನು ನೋಡಲು ಬರುವ ಪ್ರವಾಸಿಗರು ಬಿಸಾಡಿಹೋಗುವ ಮದ್ಯದ ಬಾಟಲ್, ಪ್ಲಾಸ್ಟಿಕ್ ಕವರ್ ಗಳನ್ನು ಸ್ವತಃ ಶಿವಕುಮಾರ್ ಆಯ್ದು ಪರಿಸರದ ರಕ್ಷಣೆ ಮಾಡುತ್ತಿದ್ದಾರೆ. ಎಲ್ಲವೂ ಇರುವ ಬೆಂಗಳೂರೆಂಬ ಮಾಯಾಲೋಕದಿಂದ ಹೊರಬಂದರೂ ಶಿವಕುಮಾರ್ ಖುಷಿಯಿಂದ ಜೀವಿಸುತ್ತಿದ್ದಾರೆ.

ಕಾಡಿನ ಮಧ್ಯೆಯೇ ಇರಲು ನಿರ್ಧಾರ

ಕಾಡಿನ ಮಧ್ಯೆಯೇ ಇರಲು ನಿರ್ಧಾರ

ಶಿವಕುಮಾರ್ ಅವರಿಗೆ ತಾಯಿ, ಅಕ್ಕ, ತಂಗಿ ಇದ್ದಾರೆ. ಅಕ್ಕ ಪ್ರೊಫೆಸರ್, ತಂಗಿ ಶಿಕ್ಷಣ ಸಂಸ್ಥೆಯನ್ನು ನಡೆಸುತ್ತಿದ್ದಾರೆ. ಅದ್ಭುತ ಪ್ರಕೃತಿಯ ನಡುವೆ ಮನೆ ಮಾಡಿದ ಶಿವಕುಮಾರ್ ಜೀವನ ಪರ್ಯಂತ ಕಾಡಿನ ನಡುವೆಯೇ ಇರಲು ನಿರ್ಧರಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Shivakumar basically from Tumakuru and worked in Bengaluru software company now settled in a small village at Beltangadi taluk, Dakshina Kannada district.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ