ಎಂಆರ್ ಪಿಎಲ್ ವಿಸ್ತರಣೆಗೆ ತೀವ್ರ ವಿರೋಧ

Posted By:
Subscribe to Oneindia Kannada

ಮಂಗಳೂರು, ಜನವರಿ 17 : ಎಂಆರ್‌ಪಿಎಲ್ ಕಂಪೆನಿಯ ಇಂಗದ ಭೂ ದಾಹಕ್ಕೆ ಮತ್ತೊಮ್ಮೆ ಕರಾವಳಿಯ ಕೃಷಿ ಭೂಮಿ ಬಲಿಯಾಗುತ್ತಿದೆ. ಕಂಪೆನಿ ತನ್ನ ನಾಲ್ಕನೇ ಹಂತದ ವಿಸ್ತರಣೆಗೆ ಪೆರ್ಮುದೆ, ಕುತ್ತೆತ್ತೂರು, ತೆಂಕ ಎಕ್ಕಾರು ಮುಂತಾದ ಗ್ರಾಮಗಳಲ್ಲಿ 1011.7719 ಎಕರೆ ಭೂಮಿಯ ಬಲಾತ್ಕಾರದ ಸ್ವಾಧೀನಕ್ಕೆ ಮುಂದಾಗಿದೆ.

ಭೂ ಸ್ವಾಧೀನದ ಮಾಹಿತಿ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಎಂಆರ್‌ಪಿಎಲ್ ಹೊರಡಿಸಿದ ಅಧಿಸೂಚನೆಗೆ 13 ತಿಂಗಳ ಮುನ್ನವೇ ಅಂದರೆ 2015 ರಿಂದಲೇ ಸರ್ಕಾರಕ್ಕೆ ಮನವಿ ಸಲ್ಲಿಸಿ, ಯಾವುದೇ ಸಾರ್ವಜನಿಕರ ವೇದಿಕೆಯಲ್ಲಿ ಅಭಿಪ್ರಾಯ ಮಂಡನೆಗೆ, ಚರ್ಚೆಗೆ ಮುಕ್ತ ಅವಕಾಶ ನೀಡಬೇಕೆಂದು ಕೋರಿತ್ತು.

ಆದರೆ, ಎಂಆರ್‌ಪಿಎಲ್ ಸರ್ಕಾರ ಮತ್ತು ಕೆಐಎಡಿಯನ್ನು ಬಳಸಿ, ಕೃಷಿಕರನ್ನು ಬಲವಂತವಾಗಿ ಒಕ್ಕಲೆಬ್ಬಿಸಿ ಅವರ ಭೂಮಿಯನ್ನು ಕಬಳಿಸಿದೆ. ಇನ್ನು ವಿರೋಧ ಮಾಡಿದ ಭೂ ಮಾಲೀಕರ ವಿರುದ್ಧ ನ್ಯಾಯಾಲಯದಲ್ಲಿ ಕೇವಿಯಟ್ ಹಾಕಿದ್ದಾರೆ.

Land acquisition of MRPL give rise to opposition from farmers

2013 ರಲ್ಲಿ ಯುಪಿಎ ಸರ್ಕಾರ ಜಾರಿ ಮಾಡಿದ ಎಲ್‌ಎಆರ್‌ಆರ್ ಕಾಯ್ದೆ ಪ್ರಕಾರ ಶೇ. 70ರಷ್ಟು ಭೂ ಮಾಲೀಕರ ಅನುಮತಿ ಪಡೆದು ಭೂಸ್ವಾಧೀನ ಪ್ರಕ್ರಿಯೆ ಮುಂದುವರಿಸಬೇಕು. ಇದಕ್ಕೂ ಮೊದಲು ಸಾಮಾಜಿಕ ಪರಿಣಾಮದ ಮೌಲ್ಯಮಾಪನ ಮಾಡಬೇಕು. ಸಾರ್ವಜನಿಕರ ಅಭಿಪ್ರಾಯ ಆಲಿಸಬೇಕು. ಆದರೆ, ಇವೆಲ್ಲಾ ಕಾನೂನುಗಳನ್ನು ಗಾಳಿಗೆ ತೂರಿರುವ ರಾಜ್ಯ ಸರ್ಕಾರ ಯುಪಿಎ ಸರ್ಕಾರದ ಕಾಯ್ದೆಯನ್ನೇ ಉಲ್ಲಂಘಿಸಿ 1066ರ ಕಾಯ್ದೆ ಪ್ರಕಾರ ಬಲವಂತದ ಭೂ ಸ್ವಾಧೀನಕ್ಕೆ ಹೊರಟಿದೆ ಎಂದು ಕೃಷಿ ಭೂಮಿ ಸಂರಕ್ಷಣಾ ಸಮಿತಿ ಅಧ್ಯಕ್ಷ ಮಧುಕರ್ ಅಮೀನ್ ಆಕ್ಷೇಪಿಸಿದ್ದಾರೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಮಂಗಳೂರು ವಿಶೇಷ ಆರ್ಥಿಕ ವಲಯದಲ್ಲಿ ಅಗತ್ಯಕ್ಕಿಂತ ಹೆಚ್ಚು ಸ್ವಾಧೀನಪಡಿಸಿಕೊಂಡ ಜಮೀನಿನಲ್ಲಿ 2025 ಎಕರೆ ಭೂಮಿಯನ್ನು ಮತ್ತೆ ರೈತರಿಗೆ ನೀಡುವಲ್ಲಿ ಕೃಷಿ ಭೂಮಿ ಸಂರಕ್ಷಣಾ ಸಮಿತಿ ಯಶಸ್ವಿಯಾಗಿದೆ.

ಇನ್ನು ಎಂಆರ್‌ಪಿಎಲ್ ಮೂರನೇ ಹಂತದ ಯೋಜನೆಗೆ ಕೇವಲ 251 ಎಕರೆ ಭೂಮಿಯನ್ನಷ್ಟೇ ಬಳಕೆ ಮಾಡಿತ್ತು. ಇನ್ನುಳಿದ 350 ಎಕರೆಯನ್ನೇ ನಾಲ್ಕನೆ ಹಂತದ ಯೋಜನೆ ಬಳಸಬಹುದಲ್ಲವೇ ಎಂಬುದು ಕೃಷಿಕರ ಪ್ರಶ್ನೆ. ಸರಕಾರ ಹಾಗೂ ಎಂಆರ್‌ಪಿಎಲ್ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಪಾರದರ್ಶಕತೆಯನ್ನು ಕಾಪಾಡದೆ, ಬಲವಂತವಾಗಿ ಕೃಷಿಕರನ್ನು ಒಕ್ಕಲೆಬ್ಬಿಸುತ್ತಿದ್ದಾರೆ.

ಇನ್ನು ಕಾಯ್ದೆ ಪ್ರಕಾರ ಎರಡು, ಮೂರು ಬೆಳೆಯುವ ತೆಗೆಯುವ ಜಮೀನನ್ನು ಕೈಗಾರಿಕೆಗೆ ಬಳಸುವ ಹಾಗಿಲ್ಲ. ಆದರೆ, ಇಲ್ಲಿನ ಜಮೀನು ವರ್ಷಕ್ಕೆ ಮೂರು ಬೆಳೆ ಬೆಳೆಯುವಂಥದ್ದು, ಇಲ್ಲಿ ಯಾವುದೇ ರೈತ ಕೃಷಿಮಾಡಲಾಗದೆ ಆತ್ಮಹತ್ಯೆ ಮಾಡಿಕೊಂಡಿಲ್ಲ. ಆಂಥದ್ದರಲ್ಲಿ ಕೃಷಿ ಭೂಮಿಯನ್ನು ಅನ್ಯಾಯವಾಗಿ ರೈತರಿಂದ ಕಸಿಯುತ್ತಿರುವುದು ರೈತರ ಮಾತ್ರವಲ್ಲ ದೇಶದ ದುರಂತ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
The land grabbing greed by MRPL company has been extended towards some more villeges of Mangaluru. Now, company is trying to grab 1011.7719 acres of land which led the opposition of the farmers.
Please Wait while comments are loading...