ಧರ್ಮಸ್ಥಳ : ಲಕ್ಷ ದೀಪೋತ್ಸವ ನೋಡಲು ಬೇಕು ಸಾವಿರ ಕಣ್ಣು

Posted By:
Subscribe to Oneindia Kannada

ಮಂಗಳೂರು, ನವೆಂಬರ್ 18 : ದೇಶದ ಹೆಸರಾಂತ ಪುಣ್ಯಕ್ಷೇತ್ರವಾದ ಧರ್ಮಸ್ಥಳ ಮಂಜುನಾಥೇಶ್ವರ ದೇವಸ್ಥಾನದಲ್ಲಿ ಲಕ್ಷದೀಪೋತ್ಸವದ ಸಂಭ್ರಮ ಮನೆಮಾಡಿದೆ. ದೇಶದೆಲ್ಲೆಡೆಯಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಈ ಲಕ್ಷ ದೀಪಗಳ ಬೆಳಕನ್ನು ಕಂಗಳಲ್ಲಿ ತುಂಬಿಕೊಳ್ಳಲು ಆಗಮಿಸುತ್ತಾರೆ. ಕೇವಲ ಧಾರ್ಮಿಕ ವಿಧಿವಿಧಾನಗಳಲ್ಲದೆ, ಧ್ಯಾನಕ್ಕೆ ಹಾಗೂ ಜ್ಞಾನಕ್ಕೆ ಬೆಳಕಾಗುವಂತಹ ಹಲವಾರು ಕಾರ್ಯಕ್ರಮಗಳು ದೀಪೋತ್ಸವದ ಸಂದರ್ಭದಲ್ಲಿ ಭಕ್ತರ ಗಮನ ಸೆಳೆಯುವುದರ ಮೂಲಕ ವಿಶಿಷ್ಟ ರೀತಿಯ ಲಕ್ಷದೀಪೋತ್ಸವ ಎನ್ನುವ ಹೆಗ್ಗಳಿಕೆಗೂ ಇದು ಪಾತ್ರವಾಗಿದೆ.

ಗ್ಯಾಲರಿ: ಧರ್ಮಸ್ಥಳ ಲಕ್ಷ ದೀಪೋತ್ಸವ ಸಂಭ್ರಮ

ಪಶ್ಚಿಮಘಟ್ಟಗಳ ಚಾರ್ಮಾಡಿಯ ತಪ್ಪಲಿನಲ್ಲಿರುವಂತಹ ಧರ್ಮಸ್ಥಳ ಮಂಜುನಾಥೇಶ್ವರ ಕ್ಷೇತ್ರ ಭಕ್ತರ ಇಷ್ಟಾರ್ಥಗಳನ್ನು ಸಿದ್ಧಿಸುವಂತಹ ಕ್ಷೇತ್ರವಾಗಿ ಪ್ರಸಿದ್ಧಿ ಪಡೆದಿದೆ. ಅಣ್ಣಪ್ಪ ಸ್ವಾಮಿ ದೈವದೊಂದಿಗೆ ಈ ಕ್ಷೇತ್ರದಲ್ಲಿ ನೆಲೆಯಾಗಿರುವಂತಹ ಮಂಜುನಾಥ ಸ್ವಾಮಿ ಭಕ್ತರ ಅಭೀಷ್ಟಗಳನ್ನು ತಾರತಮ್ಯವಿಲ್ಲದೆ ನೆರವೇರಿಸುತ್ತಾನೆ ಎನ್ನುವ ಬಲವಾದ ನಂಬಿಕೆಯಿಂದಲೇ ಇಲ್ಲಿಗೆ ದೇಶ ಹಾಗೂ ವಿದೇಶಗಳಿಂದಲೂ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಶ್ರೀ ಕ್ಷೇತ್ರದ ದೇವಸ್ಥಾನವು ಹೆಗ್ಗಡೆ ಮನೆತನದ ಒಡೆತನದಲ್ಲಿದ್ದು , ಇದೀಗ ಈ ಕ್ಷೇತ್ರದ ಉಸ್ತುವಾರಿಯನ್ನು ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ವಹಿಸಿಕೊಂಡಿದ್ದು, ಮಂಜುನಾಥ ಸ್ವಾಮಿ ಮತ್ತು ಅಣ್ಣಪ್ಪ ದೈವದ ಹಾಗೂ ಭಕ್ತರ ನಡುವಿನ ಕೊಂಡಿಯಂತೆ ಇದ್ದಾರೆ.

ದೇವರಲ್ಲಿ ಹೇಳುವ ಪ್ರಾರ್ಥನೆಯನ್ನು ಇವರ ಮೂಲಕ ಸಲ್ಲಿಸಿದರೂ ಅದು ದೇವರಿಗೆ ಸಲ್ಲುತ್ತದೆ ಎನ್ನುವ ಅಚಲ ನಂಬಿಕೆ ಇಲ್ಲಿಗೆ ಬರುವ ಭಕ್ತರಲ್ಲಿದ್ದು, ಈ ಕಾರಣಕ್ಕಾಗಿಯೇ ಇವರನ್ನು ಭಕ್ತರು ಮಾತನಾಡುವ ಮಂಜುನಾಥ ಎಂದು ಕೂಡಾ ಸಂಭೋಧಿಸುತ್ತಾರೆ. ಈ ಕ್ಷೇತ್ರದಲ್ಲಿ ಲಕ್ಷದೀಪೋತ್ಸವದ ಸಂಭ್ರಮ ಮನೆಮಾಡಿದೆ. ಇಡೀ ಶ್ರೀ ಕ್ಷೇತ್ರ ಧರ್ಮಸ್ಥಳವೇ ಲಕ್ಷಾಂತರ ದೀಪಗಳ ಬೆಳಕಿನಿಂದ ಕಂಗೊಳಿಸುತ್ತದೆ. ಕ್ಷೇತ್ರದಲ್ಲಿ ವರ್ಷದಲ್ಲಿ ಪ್ರಮುಖವಾಗಿ ಮೂರು ಆಚರಣೆಗಳನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ. ದೀಪಾವಳಿಯ ಆಚರಣೆ, ವಿಷುಸಂಕ್ರಮಣದ ಆಚರಣೆ ಹಾಗೂ ಲಕ್ಷದೀಪೋತ್ಸವ ಇಲ್ಲಿನ ಪ್ರಮುಖ ಆಚರಣೆಯಂತಿದೆ. ಕ್ಷೇತ್ರದಲ್ಲಿ ತಲತಲಾಂತರ ದಿಂದ ಈ ಉತ್ಸವವನ್ನು ಅತ್ಯಂತ ಶ್ರದ್ಧೆ ಹಾಗೂ ಭಕ್ತಿಯಿಂದ ಜನರು ಆಚರಿಸಿಕೊಂಡು ಬರುತ್ತಿದ್ದರೆ.

ಬೆಳ್ಳಿ ಪಲ್ಲಕ್ಕಿಯಲ್ಲಿ ಮೆರವಣಿಗೆ

ಬೆಳ್ಳಿ ಪಲ್ಲಕ್ಕಿಯಲ್ಲಿ ಮೆರವಣಿಗೆ

ಲಕ್ಷದೀಪೋತ್ಸವ ಕಾರ್ಯಕ್ರಮದಲ್ಲಿ ಮಂಜುನಾಥ ಸ್ವಾಮಿಯ ಉತ್ಸವಮೂರ್ತಿಯ ದೇವಸ್ಥಾನದಿಂದ ಹೊರಗೆ ಬಂದು ಭಕ್ತರ ಬಳಿಗೆ ಬರುವ ಮೂಲಕ ಭಕ್ತರದೊಂದಿಗೆ ತಾವು ಎಂದಿಗೂ ಇರುವುದಾಗಿ ತೋರ್ಪಡಿಸುವಂತಹ ಆಚರಣೆ ಈ ದೀಪೋತ್ಸವದ ಸಂದರ್ಭದಲ್ಲಿ ನಡೆಯುತ್ತದೆ. ಬೆಳ್ಳಿಯ ಪಲ್ಲಕ್ಕಿಯಲ್ಲಿ ದೇವರ ಉತ್ಸವ ಮೂರ್ತಿಯನ್ನು ಇಡುವ ಮೂಲಕ ಅದನ್ನು ಕ್ಷೇತ್ರದ ಅಸುಪಾಸಿನ ಕೆಲವು ಸ್ಥಳಗಳಿಗೆ ಮೆರವಣಿಗೆಯ ಮೂಲಕ ಕೊಂಡೊಯ್ದು, ಅಲ್ಲಿನ ಕಟ್ಟೆಗಳಲ್ಲಿ ವಿಶೇಷವಾದ ಪೂಜೆ ಪುನಸ್ಕಾರಗಳನ್ನು ನಡೆಸುವುದು ಈ ಲಕ್ಷದೀಪದ ಇನ್ನೊಂದು ವಿಶೇಷತೆಯಾಗಿದೆ. ಅಲ್ಲದೆ ಕ್ಷೇತ್ರದಲ್ಲಿ ಲಕ್ಷದೀಪೋತ್ಸವದ ಪ್ರಯುಕ್ತ ಹೊಸಕಟ್ಟೆ, ಕೆರೆಕಟ್ಟೆ, ಲಲಿತೋದ್ಯಾನ ಉತ್ಸವ, ಕಂಚಿಮಾರು ಕಟ್ಟೆ ಉತ್ಸವ, ಗೌರಿಮಾರು ಕಟ್ಟೆ ಉತ್ಸವ,ಸಮವಸರಣ ಪೂಜೆ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳೂ ನಡೆಯುತ್ತದೆಯಲ್ಲದೆ , ದೇವಸ್ಥಾನದ ಒಳಗೆ ವಿಶೇಷ ನಾದಸ್ವಾರಗಳ ಮೂಲಕ ದೇವರ ಪ್ರದಕ್ಷಿಣೆಯೂ ನಡೆಯುತ್ತದೆ.

ಸ್ವಯಂ ಪ್ರೇರಿತ ಸೇವೆ

ಸ್ವಯಂ ಪ್ರೇರಿತ ಸೇವೆ

ಧರ್ಮಸ್ಥಳದಲ್ಲಿ ನಡೆಯುವಂತಹ ಈ ಲಕ್ಷದೀಪೋತ್ಸವದ ಸಂಭ್ರಮವನ್ನು ಕಣ್‌ತುಂಬಿಕೊಳ್ಳುವುದೇ ಒಂದು ಭಾಗ್ಯ ಎನ್ನುವ ಕಾರಣಕ್ಕಾಗಿಯೇ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತಾಧಿಗಳು ದೇಶದ ಹಲವೆಡೆಗಳಿಂದ ಇಲ್ಲಿಗೆ ಆಗಮಿಸುತ್ತಾರೆ. ಗರ್ಭಗುಡಿಯಲ್ಲೇ ವಿರಾಜಮಾನವಾಗಿ ಭಕ್ತರಿಗೆ ದರ್ಶನವನ್ನು ನೀಡುವಂತಹ ಮಂಜುನಾಥ ಸ್ವಾಮಿ ಸ್ವತಹ ಭಕ್ತರಿದ್ದಲ್ಲಿ ಬಂದಾಗ ಭಕ್ತರಲ್ಲಾಗುವ ಆ ಆನಂದಕ್ಕೆ ಪಾರವೇ ಇರುವುದಿಲ್ಲ. ಈ ಕಾರಣಕ್ಕಾಗಿಯೇ ಭಕ್ತಾಧಿಗಳು ಸ್ವಯಂಪ್ರೇರಿತರಾಗಿ ಹಲವು ರೀತಿಯ ಸೇವೆಗಳನ್ನು ನೀಡುವ ಮೂಲಕ ಮಂಜುನಾಥನ ಸನ್ನಿಧಿಯಲ್ಲಿ ಸ್ವಾಮೀಯ ಕೃಪೆಗಾಗಿ ಹಾತೊರೆಯುತ್ತಾರೆ.

ಧ್ಯಾನದ ಜೊತೆಗೆ ಜ್ಞಾನವನ್ನೂ ಬೆಳಗುವ ಪ್ರಯತ್ನ

ಧ್ಯಾನದ ಜೊತೆಗೆ ಜ್ಞಾನವನ್ನೂ ಬೆಳಗುವ ಪ್ರಯತ್ನ

ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವವೆಂದರೆ ಕೇವಲ ಧಾರ್ಮಿಕ ಕಾರ್ಯಕ್ರಮಗಳು ಮಾತ್ರವಲ್ಲ ಎನ್ನುವುದನ್ನು ಕಳೆದ ಹಲವು ದಶಕಗಳಿಂದ ತೋರಿಸಿಕೊಂಡು ಬರುತ್ತಿರುವ ಈ ಕ್ಷೇತ್ರ ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ನಾಡಿನ ಸಂಸ್ಕೃತಿ, ಸಂಸ್ಕಾರ, ಸಾಹಿತ್ಯ, ವಿಜ್ಞಾನ ಸೇರಿದಂತೆ ಹಲವು ಹಲವು ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಧ್ಯಾನದ ಜೊತೆಗೆ ಜ್ಞಾನವನ್ನೂ ಬೆಳಗುವ ಪ್ರಯತ್ನವನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಿದೆ.ಕಾರಣಕ್ಕಾಗಿಯೇ ದೀಪೋತ್ಸವದ ಸಂದರ್ಭದಲ್ಲಿ ಒಂದೆಡೆ ಮಂಜುನಾಥ ಸ್ವಾಮಿಗೆ ಧಾರ್ಮಿಕ ವಿಧಿವಿಧಾನಗಳು ನಡೆದರೆ , ಇನ್ನೊಂದೆಡೆ ಲಕ್ಷದೀಪೋತ್ಸವಕ್ಕೆ ಬಂದಂತಹ ಭಕ್ತಾಧಿಗಳಿಗೆ ಮನೋರಂಜನೆಯ ಜೊತೆಗೆ ಹಲವು ವಿಚಾರಗಳ ಕುರಿತ ಮಾಹಿತಿಯನ್ನು ನೀಡುವಂತಹ ಕಾರ್ಯ ನಡೆದುಕೊಂಡು ಬಂದಿದೆ.

ಸಂಗೀತ ಹಾಗೂ ಜಾನಪದ ನೃತ್ಯಗಳ ಮೇಳ

ಸಂಗೀತ ಹಾಗೂ ಜಾನಪದ ನೃತ್ಯಗಳ ಮೇಳ

ಸರ್ವಧರ್ಮ ಸಮ್ಮೇಳನ, ಸಾಹಿತ್ಯ ಸಮ್ಮೇಳನ, ಸಂಗೀತ ಹಾಗೂ ಜಾನಪದ ನೃತ್ಯಗಳು, ರೈತನಿಗೆ ಸಹಕಾರಿಯಾಗಲೆಂದೇ ಇರುವ ವಸ್ತುಪ್ರದರ್ಶನಗಳು, ಜನಸಾಮಾನ್ಯನಿಂದ ದೂರವೇ ಉಳಿದಿರುವಂತಹ ಸರಕಾರಿ ಕಾರ್ಯಕ್ರಮಗಳ ಅನುಷ್ಟಾನ ಹಾಗೂ ಅವುಗಳ ಸವಲತ್ತುಗಳನ್ನು ಪರಿಚಯ ಮಾಡಿಸುವ ವಸ್ತುಪ್ರದರ್ಶನ ಮೇಳವೂ ಲಕ್ಷದೀಪೋತ್ಸವದ ಇನ್ನೊಂದು ಪ್ರಮುಖ ಆಕರ್ಷಣೆಯೂ ಆಗಿದೆ.

ಕ್ಷೇತ್ರಕ್ಕೆ ಬರುವ ಭಕ್ತಾಧಿಗಳ ಮೂಲ ಮಂತ್ರ ಮಂಜುನಾಥ ಸ್ವಾಮಿಯ ದರ್ಶನವೊಂದೇ ಆಗಿದ್ದರೂ, ಕೆಲವು ಭಕ್ತರು ಇವುಗಳ ಜೊತೆಗೆ ಇನ್ನೂ ಹಲವು ಅಭಿರುಚಿಗಳ ಪೂರೈಕೆಗಾಗಿಯೂ ಲಕ್ಷದೀಪೋತ್ಸವದ ಸಂದರ್ಭದಲ್ಲಿ ಈ ಕ್ಷೇತ್ರಕ್ಕೆ ಆಗಮಿಸುತ್ತಾರೆ. ಲಕ್ಷದೀಪೋತ್ಸವೆಂದು ಹೆಸರಿದ್ದರೂ, ಕ್ಷೇತ್ರದಲ್ಲಿ ಕೋಟ್ಯಾಂತರ ದೀಪಗಳು ಬೆಳಗುವಂತೆ ವಿವಿಧ ರೀತಿಯ ವಿದ್ಯುತ್ ಅಲಂಕಾರಗಳು ಇಲ್ಲಿಗೆ ಬರುವವರನ್ನು ಆಕರ್ಷಿಸುತ್ತಿದೆ.

ಎಲ್ಲವೂ ಮಂಜುನಾಥ ಸ್ವಾಮಿಯ ಕೃಪೆ

ಎಲ್ಲವೂ ಮಂಜುನಾಥ ಸ್ವಾಮಿಯ ಕೃಪೆ

ಕೇವಲ ಇಲ್ಲಿನ ವಿದ್ಯುತ್ ಅಲಂಕಾರಗಳನ್ನು ನೋಡಲೆಂದೇ ಇಲ್ಲಿಗೆ ಸಾವಿರಾರು ಸಂಖ್ಯೆಯಲ್ಲಿ ಜನ ಬರುತ್ತಿದ್ದು, ಇದೇ ಕಾರಣಕ್ಕಾಗಿಯೇ ಕ್ಷೇತ್ರದಲ್ಲಿ ವರ್ಷದಿಂದ ವರ್ಷಕ್ಕೆ ಹಲವು ವಿಶಿಷ್ಟತೆಗಳ ವಿದ್ಯುತ್ ಅಲಂಕಾರವನ್ನೂ ಮಾಡಿಕೊಂಡು ಬರಲಾಗುತ್ತಿದೆ.


ಒಟ್ಟಿನಲ್ಲಿ ಧರ್ಮಸ್ಥಳ ಕ್ಷೇತ್ರದಲ್ಲಿ ಧಾರ್ಮಿಕ ಆಚರಣೆಯ ಜೊತೆಗೆ ಇತರ ಧರ್ಮಗಳ ಜನರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುವಂತಹ ಪ್ರಯತ್ನಗಳ ಜೊತೆಗೆ ವಿಶಿಷ್ಟವಾದ ಅಭಿರುಚಿಯಿರುವಂತಹ ಭಕ್ತರನ್ನು ಸಾಹಿತ್ಯ ಸಮ್ಮೇಳನಗಳ ಮೂಲಕ ಎಲ್ಲರನ್ನೂ ಒಗ್ಗೂಡಿಸುವಂತಹ ಕಾರ್ಯವೂ ನಡೆಯುತ್ತಿದ್ದು, ಈ ಎಲ್ಲಾ ಕಾರ್ಯಕ್ರಮಗಳಿಗೆ ಕ್ಷೇತ್ರದ ಸ್ವಾಮಿ ಮಂಜುನಾಥನ ಕೃಪೆಯೂ ಇದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Laksha Deepotsava will be held at sri shetra Dharmasthala for five days and everyday various cultural programmes held in Dharmasthala.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ