ದಕ್ಷಿಣ ಕನ್ನಡ ಕಾಂಗ್ರೆಸ್ ಅಭ್ಯರ್ಥಿಗಳ ಸಂಕ್ಷಿಪ್ತ ಪರಿಚಯ

Subscribe to Oneindia Kannada

ಮಂಗಳೂರು, ಏಪ್ರಿಲ್ 17: ಕರ್ನಾಟಕದ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ 218 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಇದರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ 8 ಕ್ಷೇತ್ರಗಳಿಗೂ ಹುರಿಯಾಳುಗಳು ಅಂತಿಮವಾಗಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ 7 ಹಾಲಿ ಶಾಸಕರು ಮತ್ತು ಕಳೆದ ಬಾರಿ ಸುಳ್ಯ ಕ್ಷೇತ್ರದಲ್ಲಿ ಸೋತಿದ್ದ ಡಾ. ರಘು ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ಈ ಮೂಲಕ ಎಲ್ಲಾ ಹಳೆ ಮುಖಗಳಿಗೇ ಕಾಂಗ್ರೆಸ್ ಮಣೆ ಹಾಕಿದೆ.

ಬಿಜೆಪಿಗೆ ಮಂಗಳೂರಿನ 3 ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ ಕಗ್ಗಂಟು

ಮುಲ್ಕಿ-ಮೂಡಬಿದಿರೆ ಕ್ಷೇತ್ರದಲ್ಲಿ ಹೊಸ ಮುಖ ಮಿಥುನ್ ರೈಗೆ ಟಿಕೆಟ್ ನೀಡಲಾಗುತ್ತದೆ ಎನ್ನಲಾಗಿತ್ತು. ಆದರೆ ಅವರ ಬದಲು ಹಾಲಿ ಶಾಸಕ ಅಭಯಚಂದ್ರ ಜೈನ್ ಅವರಿಗೇ ಕಾಂಗ್ರೆಸ್ ಟಿಕೆಟ್ ನೀಡಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್ ಶಾಸಕರ ಸಂಕ್ಷಿಪ್ತ ಪರಿಚಯ ಇಲ್ಲಿದೆ.

ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್

ಬೆಳ್ತಂಗಡಿ - ವಸಂತ ಬಂಗೇರ

ಬೆಳ್ತಂಗಡಿ - ವಸಂತ ಬಂಗೇರ

ಕರ್ನಾಟಕದ ಅತ್ಯಂತ ಹಿರಿಯ ರಾಜಕಾರಣಗಳಲ್ಲಿ ವಸಂತ ಬಂಗೇರ ಕೂಡ ಒಬ್ಬರು. ವಿಶೇಷವೆಂದರೆ 1983 ಮತ್ತು 1985ರಲ್ಲಿ ವಸಂತ ಬಂಗೇರರು ಚುನಾವಣೆ ಗೆದ್ದಾಗ ಅವರು ಬಿಜೆಪಿಯಲ್ಲಿದ್ದರು. ಅದರಲ್ಲೂ 1985ರಲ್ಲಿ ಕರ್ನಾಟಕದಲ್ಲಿ ಬಿಜೆಪಿಯನ್ನು ಪ್ರತಿನಿಧಿಸುತ್ತಿದ್ದ ಇಬ್ಬರೇ ಇಬ್ಬರು ಶಾಸಕರಲ್ಲಿ ಒಬ್ಬರು ವಸಂತ ಬಂಗೇರ; ಇನ್ನೊಬ್ಬರು ಕರ್ನಾಟಕ ಬಿಜೆಪಿ ಹಾಲಿ ಅಧ್ಯಕ್ಷ ಬಿಎಸ್ ಯಡಿಯೂರಪ್ಪ.

ಕಾಲ ನಂತರ ಬಂಗೇರರು ಬಿಜೆಪಿ ತೊರೆದು 1989ರಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿ ಕೇವಲ 1 ಸಾವಿರ ಮತಗಳಿಂದ ಸೋತಿದ್ದರು. ಮುಂದೆ ಜನತಾ ದಳಕ್ಕೆ ಹೋದರು. ಅಲ್ಲೂ ಒಮ್ಮೆ ತಮ್ಮ ಪ್ರಭಾಕರ ಬಂಗೇರರ ವಿರುದ್ಧ 1994ರಲ್ಲಿ ಗೆದ್ದರು. ಕೊನೆಗೆ ಎರಡು ಬಾರಿ ತಮ್ಮನ ವಿರುದ್ಧ 1999 ಮತ್ತು 2004ರಲ್ಲಿ ಸೋತು 2008ರ ಚುನಾವಣೆಗೂ ಮೊದಲು ಕಾಂಗ್ರೆಸ್ಗೆ ಬಂದು ತಮ್ಮನ ವಿರುದ್ಧವೇ ಜಯ ಸಾಧಿಸಿದ್ದರು. ಇದೀಗ ಎರಡು ಬಾರಿ ಕಾಂಗ್ರೆಸ್ ನಿಂದ ಗೆದ್ದಿದ್ದಾರೆ.

ಬೆಳ್ತಂಗಡಿ ಕ್ಷೇತ್ರದ ಮೇಲೆ ವಸಂತ ಬಂಗೇರರ ಹಿಡಿತ ಬಲವಾಗಿದ್ದು ಮೂರೂ ಬೇರೆ ಬೇರೆ ಪಕ್ಷಗಳಿಂದ ಅವರು 5 ಬಾರಿ ವಿಧಾನಸಭೆ ಪ್ರವೇಶಿಸಿದ್ದೇ ಇದಕ್ಕೆ ಸಾಕ್ಷಿ.

2008ರಲ್ಲಿ ಮತ್ತು 2013ರಲ್ಲಿ ವಸಂತ ಬಂಗೇರರು 16 ಸಾವಿರ ಮತಗಳ ಅಂತರದಿಂದ ಗೆದ್ದಿದ್ದು ಅವರ ವರ್ಚಸ್ಸು ಕುಂದಿಲ್ಲ ಎಂಬುದಕ್ಕೆ ಪುರಾವೆಯಾಗಿದೆ. 2013ರಲ್ಲಿ ಬಂಗೇರರು 74,530 ಮತಗಳನ್ನು ಪಡೆದಿದ್ದರೆ ಪ್ರತಿ ಸ್ಪರ್ಧಿ ರಂಜನ್ ಗೌಡ 58,789 ಮತಗಳನ್ನು ಪಡೆದಿದ್ದರು.

ಬಂಟ್ವಾಳ - ರಮಾನಾಥ ರೈ

ಬಂಟ್ವಾಳ - ರಮಾನಾಥ ರೈ

1985ರಲ್ಲಿ ಬಂಟ್ವಾಳ ಕ್ಷೇತ್ರಕ್ಕೆ ಲಗ್ಗೆ ಇಟ್ಟಿದ್ದೇ ಇಟ್ಟಿದ್ದು ಅಲ್ಲಿಂದ ತಮ್ಮ ಗೆಲುವಿನ ನಾಗಾಲೋಟವನ್ನೇ ನಡೆಸಿದವರು ರಮಾನಾಥ ರೈ. 1985, 89, 94, 99 .. ಹೀಗೆ ನಾಲ್ಕು ಚುನಾವಣೆ ಗೆದ್ದರು ರಮಾನಾಥ ರೈ. ಈ ಅವಧಿಯಲ್ಲಿ ಸಚಿವರಾಗಿ ಹಲವು ಹುದ್ದೆಗಳನ್ನೂ ನಿಭಾಯಿಸಿದರು. 2004ರಲ್ಲಿ ಮಾತ್ರ 6 ಸಾವಿರ ಮತಗಳಿಂದ ಬಿಜೆಪಿಯ ಬಿ. ನಾಗರಾಜ ಶೆಟ್ಟಿ ವಿರುದ್ಧ ಸೋಲು ಕಂಡರು.

ಮತ್ತೆ 2008ರಲ್ಲಿ ಗೆಲುವಿನ ಹಳಿಗೆ ಮರಳಿದ ರಮಾನಾಥ ರೈ 1 ಸಾವಿರ ಮತಗಳ ಻ಅಂತರದಲ್ಲಿ ನಾಗರಾಜ ಶೆಟ್ಟಿಗೆ ಸೋಲುಣಿಸಿದರು. 2013ರಲ್ಲಿ ತಮ್ಮ ಗೆಲುವಿನ ಻ಅಂತರವನ್ನು ಬರೋಬ್ಬರಿ 18 ಸಾವಿರಗಳಿಗೆ ಹೆಚ್ಚಿಸಿಕೊಂಡು ಆರನೇ ಬಾರಿ ವಿಧಾನಸಭೆಯ ಮೆಟ್ಟಿಲು ಹತ್ತಿ ಸದ್ಯ ಸಚಿವರಾಗಿದ್ದಾರೆ.

2013ರಲ್ಲಿ ರೈ 81,665 ಮತಗಳನ್ನು ಪಡೆದಿದ್ದರು. ಅವರ ಪ್ರತಿಸ್ಪರ್ಧಿ ಬಿಜೆಪಿಯ ರಾಜೇಶ್ ನಾಯ್ಕ್ ಉಳಿಪಾಡಿ 63,815 ಮತಗಳನ್ನು ಪಡೆದಿದ್ದರು.

ಸುಳ್ಯ – ಡಾ. ರಘು

ಸುಳ್ಯ – ಡಾ. ರಘು

ಸುಳ್ಯ ಕ್ಷೇತ್ರದಲ್ಲಿ ಮತ್ತೆ ಕಾಂಗ್ರೆಸ್ ಡಾ. ಬಿ. ರಘು ಅವರಿಗೆ ಟಿಕೆಟ್ ನೀಡಿದೆ. ಕಳೆದ ಮೂರು ಚುನಾವಣೆಯಲ್ಲಿ ಸೋತರೂ ಅವರಿಗೆ ಕಾಂಗ್ರೆಸ್ ಮತ್ತೆ ಟಿಕೆಟ್ ನೀಡಿದೆ.

ವೃತ್ತಿಯಲ್ಲಿ ವೈದ್ಯರಾಗಿರುವ ರಘು 2004ರಲ್ಲಿ 17 ಸಾವಿರ ಮತಗಳಿಂದ ಬಿಜೆಪಿಯ ಎಸ್. ಅಂಗಾರ ವಿರುದ್ಧ ಸೋತಿದ್ದರು. 2008ರಲ್ಲಿ 5 ಸಾವಿರ ಮತಗಳಿಂದ ಅವರು ಮತ್ತೆ ಸೋಲಬೇಕಾಯಿತು. ಅದರಲ್ಲೂ 2013ರಲ್ಲಿ ಕೇವಲ ಒಂದೂವರೆ ಸಾವಿರ ಮತಗಳಲ್ಲಿ ಅವರು ಅಂಗಾರ ವಿರುದ್ಧ ಸೋತಿದ್ದಾರೆ.

ಕಳೆದ ಮೂರು ಚುನಾವಣೆಗಳಲ್ಲಿ ಅವರ ಸೋಲಿನ ಅಂತರ ಕಡಿಮಯಾಗುತ್ತಿರುವುದರಿಂದ ಅವರಿಗೆ ಈ ಬಾರಿ ಕಾಂಗ್ರೆಸ್ ಮತ್ತೆ ಟಿಕೆಟ್ ನೀಡಿದೆ.

ಕಳೆದ 5 ಚುನಾವಣೆಗಳಲ್ಲಿ ಸುಳ್ಯದಲ್ಲಿ ಕಾಂಗ್ರೆಸ್ ಸೋತಿದ್ದು, ಪಕ್ಷವನ್ನು ಗೆಲುವಿನ ದಡಕ್ಕೆ ಎಳೆದು ತರುವ ಜವಾಬ್ದಾರಿ ಡಾ. ಬಿ. ರಘು ಮೇಲಿದೆ.

ಮೂಡುಬಿದಿರೆ - ಕೆ. ಅಭಯಚಂದ್ರ ಜೈನ್

ಮೂಡುಬಿದಿರೆ - ಕೆ. ಅಭಯಚಂದ್ರ ಜೈನ್

ಜೈನ ಸಮುದಾಯವನ್ನು ರಾಜ್ಯದಲ್ಲಿ ಪ್ರತಿನಿಧಿಸುತ್ತಿರುವ ಏಕೈಕ ಶಾಸಕ ಮೂಡಬಿದಿರೆಯ ಅಭಯಚಂದ್ರ ಜೈನ್.

1999ರಿಂದ ಇಲ್ಲಿಯವರೆಗೆ 4 ಚುನಾವಣೆಗಳಲ್ಲಿ ಅಭಯಚಂದ್ರ ಜೈನ್ ಮೂಡುಬಿದಿರೆಯಲ್ಲಿ ಗೆಲುವಿನ ನಗೆ ಬೀರಿದ್ದಾರೆ. 1999, 2004, 2008, 2013ರಲ್ಲಿ ಸತತ ನಾಲ್ಕು ಬಾರಿ ಗೆದ್ದಿದ್ದಾರೆ. 2013ರಲ್ಲಿ ಜೈನ್ 53,180 ಮತಗಳನ್ನು ಪಡೆದಿದ್ದರು. ಈ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಉಮಾನಾಥ್ ಕೋಟ್ಯಾನ್ 48,630 ಮತಗಳನ್ನು ಪಡೆದಿದ್ದರು. ಸಿದ್ದರಾಮಯ್ಯ ಸರಕಾರದಲ್ಲಿ ಜೈನ್ ಸಚಿವರಾಗಿಯೂ ನೇಮಕವಾಗಿದ್ದರು. ಆದರೆ ಅವರನ್ನು ಮುಂದೆ ಸಂಪುಟದಿಂದ ಕೈ ಬಿಡಲಾಯಿತು.

ಈ ಚುನಾವಣೆಯಲ್ಲಿ ಯುವಕರಿಗೆ ಟಿಕೆಟ್ ನೀಡುವುದಾದರೆ ತಾನು ಸ್ಪರ್ಧಿಸುತ್ತಿಲ್ಲ ಎಂದು ಅಭಯಚಂದ್ರ ಜೈನ್ ಹೇಳಿದ್ದರಿಂದ ದಕ್ಷಿಣ ಕನ್ನಡ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈಗೆ ಟಿಕೆಟ್ ನೀಡಲಾಗುತ್ತದೆ ಎನ್ನಲಾಗಿತ್ತು. ಆದರೆ ಮತ್ತೆ ಅಭಯಚಂದ್ರ ಜೈನ್ ಗೆ ಟಿಕೆಟ್ ನೀಡಲಾಗಿದೆ.

ಪುತ್ತೂರು - ಶಕುಂತಳಾ ಶೆಟ್ಟಿ

ಪುತ್ತೂರು - ಶಕುಂತಳಾ ಶೆಟ್ಟಿ

ಪುತ್ತೂರಿನಲ್ಲಿ ಹಾಲಿ ಶಾಸಕಿ ಶಕುಂತಳಾ ಶೆಟ್ಟಿಯವರಿಗೆ ಮತ್ತೆ ಕಾಂಗ್ರೆಸ್ ಟಿಕೆಟ್ ನೀಡಿದೆ. ಬಿಜೆಪಿ ಹಿಡಿತದಲ್ಲಿದ್ದ ಪುತ್ತೂರಿನಲ್ಲಿ 2013ರಲ್ಲಿ ಗೆಲುವು ಸಾಧಿಸುವ ಮೂಲಕ ಶಕುಂತಲಾ ಶೆಟ್ಟಿ ಕಾಂಗ್ರೆಸ್ ತೆಕ್ಕೆಗೆ ಎಳೆದು ತಂದಿದ್ದರು.

2004ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಶಕುಂತಳಾ ಶೆಟ್ಟಿ ಪುತ್ತೂರಿನಲ್ಲಿ ಗೆಲುವು ಸಾಧಿಸಿದ್ದರು. 2008ರಲ್ಲಿ ಶೆಟ್ಟಿಗೆ ಟಿಕೆಟ್ ಕೈತಪ್ಪಿತು. ಅವರ ಜಾಗದಲ್ಲಿ ಮಲ್ಲಿಕಾ ಪ್ರಸಾದ್ ಭಂಡಾರಿ 2008ರಲ್ಲಿ ಗೆಲುವು ಸಾಧಿಸಿದರು. ಈ ವೇಳೆ ಅವರು ಪಕ್ಷೇತರರಾಗಿ ಸ್ಪರ್ಧಿಸಿ ಸುಮಾರು 25 ಸಾವಿರ ಮತಗಳನ್ನು ಪಡೆದಿದ್ದರು.

2013ರಲ್ಲಿ ಮತ್ತೊಮ್ಮೆ ಬಿಜೆಪಿ ಟಿಕೆಟ್ ಕೈ ತಪ್ಪಿದ್ದರಿಂದ ಬಂಡೆದ್ದ ಶಕುಂತಳಾ ಶೆಟ್ಟಿ ಕಾಂಗ್ರೆಸ್ ಗೆ ಬಂದು 2013ರಲ್ಲಿ ಅಖಾಡಕ್ಕಿಳಿದರು. ಪರಿಣಾಮ 66,345 ಮತಗಳನ್ನು ಪಡೆದು 4,289 ಮತಗಳಿಂದ ಬಿಜೆಪಿ ಅಭ್ಯರ್ಥಿ ಸಂಜೀವ ಮಠಂದೂರಿಗೆ ಸೋಲುಣಿಸಿ ಟಿಕೆಟ್ ಕೈತಪ್ಪಿದ ಸೇಡು ತೀರಿಸಿಕೊಂಡಿದ್ದರು..

ಸದ್ಯ ಪುತ್ತೂರಿನಲ್ಲಿ ಶಕುಂತಳಾ ಶೆಟ್ಟಿ ಜನಪ್ರಿಯತೆ ಹೊಂದಿದ್ದು ಈ ಬಾರಿಯೂ ಗೆಲುವು ಸಾಧಿಸಿದರೆ ಅದೇನು ಅಚ್ಚರಿಯಲ್ಲ.

ಮಂಗಳೂರು - ಯು.ಟಿ. ಖಾದರ್

ಮಂಗಳೂರು - ಯು.ಟಿ. ಖಾದರ್

ಕಾಂಗ್ರೆಸ್ ಪಾಲಿನ ಭದ್ರಕೋಟೆ ಉಳ್ಳಾಲದಲ್ಲಿ ಹಾಲಿ ಸಚಿವ ಯು.ಟಿ. ಖಾದರ್ ಅವರಿಗೆ ಟಿಕೆಟ್ ನೀಡಲಾಗಿದೆ. ಈ ಕ್ಷೇತ್ರದ ಮೇಲೆ ಮುಸ್ಲಿಂ ಸಮುದಾಯಕ್ಕೆ ಸೇರಿದ ಶಾಸಕ ಯು.ಟಿ. ಖಾದರ್ ಕುಟುಂಬ ಸಾಕಷ್ಟು ಒಡನಾಟ ಇಟ್ಟುಕೊಂಡಿದೆ. ಇಲ್ಲಿ ಖಾದರ್ ತಂದೆ ಯು.ಟಿ ಫರೀದ್ 1972, 1978, 1999ಮತ್ತು 2004ರಲ್ಲಿ ಗೆಲುವು ಸಾಧಿಸಿದ್ದರು. ಮಧ್ಯ ಮಧ್ಯ ಗೆದ್ದಿದ್ದು ಕಾಂಗ್ರೆಸ್ಸೇ ಆದರೂ ಫರೀದ್ ಗೆ ಟಿಕೆಟ್ ನೀಡಿರಲಿಲ್ಲ.

2004ರಲ್ಲಿ ಗೆದ್ದ ನಂತರ ಫರೀದ್ 2007ರಲ್ಲಿ ನಿಧನರಾದರು. ಆಗ ಅವರ ಜಾಗದಲ್ಲಿ ಮಗ ಯು.ಟಿ. ಖಾದರ್ ರನ್ನು ಕಾಂಗ್ರೆಸ್ ಕಣಕ್ಕಿಳಿಸಿತು. 2007ರಲ್ಲಿ ಇಲ್ಲಿ ಗೆದ್ದ ಖಾದರ್ 2008 ಮತ್ತು 2013ರಲ್ಲೂ ಗೆಲುವು ಸಾಧಿಸಿದರು. ಈ ಮೂಲಕ ಕಳೆದ 6 ಚುನಾವಣೆಗಳಲ್ಲಿ ಆರನ್ನೂ ಖಾದರ್ ಕುಟುಂಬ ಗೆದ್ದಿದೆ.

ಸದ್ಯ ಕಾಂಗ್ರೆಸ್ ಸರಕಾರದಲ್ಲಿ ಪ್ರಭಾವಿ ಸಚಿವರಾಗಿರುವ ಖಾದರ್ 2007ರಲ್ಲಿ ಗೆದ್ದಾಗ ಇದ್ದ 6 ಸಾವಿರ ಮತಗಳ ಻ಅಂತರವನ್ನು 2013ರ ಹೊತ್ತಿಗೆ ಬರೋಬ್ಬರಿ 30 ಸಾವಿರಕ್ಕೆ ಹೆಚ್ಚಿಸಿಕೊಂಡಿದ್ದಾರೆ. 2013ರಲ್ಲಿ ಅವರು 69,450 ಮತಗಳನ್ನು ಪಡೆದಿದ್ದರು. ಅವರ ಪ್ರತಿಸ್ಪರ್ಧಿ ಚಂದ್ರಹಾಸ್ ಉಳ್ಳಾಲ್ 40,339 ಮತಗಳನ್ನು ಪಡೆದಿದ್ದರು.

ಮಂಗಳೂರು ನಗರ ಉತ್ತರ-ಮೊಯ್ದೀನ್ ಬಾವಾ

ಮಂಗಳೂರು ನಗರ ಉತ್ತರ-ಮೊಯ್ದೀನ್ ಬಾವಾ

ಈ ಹಿಂದಿನ ಸುರತ್ಕಲ್ ಕ್ಷೇತ್ರವೇ ಇಂದಿನ ಮಂಗಳೂರು ನಗರ ಉತ್ತರ ಕ್ಷೇತ್ರ. ಇಲ್ಲಿ ಮುಸ್ಲಿಂ ಸಮುದಾಯಕ್ಕೆ ಸೇರಿದ ಹಾಲಿ ಶಾಸಕ ಮೊಯ್ದೀನ್ ಬಾವಾಗೆ ಕಾಂಗ್ರೆಸ್ ಟಿಕೆಟ್ ನೀಡಿದೆ.

2008ರಲ್ಲಿ ಕ್ಷೇತ್ರ ವಿಂಗಡನೆ ಆಗಿ ಮಂಗಳೂರು ನಗರ ಉತ್ತರ ಕ್ಷೇತ್ರವಾದ ಬಳಿಕ ನಡೆದ ಮೊದಲ ಚುನಾವಣೆಯಲ್ಲಿ ಬಿಜೆಪಿಯ ಜೆ ಕೃಷ್ಣ ಪಾಲೆಮಾರ್ ವಿರುದ್ಧ ಮೊಯ್ದೀನ್ ಬಾವಾ ಸೋಲೊಪ್ಪಿಕೊಳ್ಳಬೇಕಾಯಿತು.

2013ರ ಚುನಾವಣೆಯಲ್ಲಿ ಸೇಡು ತೀರಿಸಿಕೊಳ್ಳುವಲ್ಲಿ ಮೊಯ್ದೀನ್ ಬಾವಾ ಯಶಸ್ವಿಯಾಗಿದ್ದರು. 2008ರಲ್ಲಿ 15 ಸಾವಿರ ಮತಗಳಿಂದ ಸೋತಿದ್ದ ಬಾವಾ, ಸತತ ಎರಡು ಬಾರಿ ಗೆದ್ದಿದ್ದ ಕೃಷ್ಣ ಜೆ ಪಾಲೆಮಾರ್ ರನ್ನು 2013ರಲ್ಲಿ ಸುಮಾರು 5 ಸಾವಿರ ಮತಗಳ ಅಂತರದಿಂದ ಸೋಲಿಸಿದರು. 2013ರಲ್ಲಿ ಬಾವಾ ಪಡೆದ ಮತಗಳ ಸಂಖ್ಯೆ 69,897 ಮತ್ತು ಈ ಚುನಾವಣೆಯಲ್ಲಿ ಕೃಷ್ಣ ಪಾಲೆಮಾರ್ 64,524 ಮತಗಳನ್ನು ಪಡೆದಿದ್ದರು.

ಮಂಗಳೂರು ನಗರ ದಕ್ಷಿಣ – ಜೆ.ಆರ್.ಲೋಬೋ

ಮಂಗಳೂರು ನಗರ ದಕ್ಷಿಣ – ಜೆ.ಆರ್.ಲೋಬೋ

ಮಂಗಳೂರು ನಗರ ಉತ್ತರ ಮತ್ತು ಮಂಗಳೂರಿನಂತೆ ಮಂಗಳೂರು ನಗರ ದಕ್ಷಿಣ ಕ್ಷೇತ್ರದಲ್ಲೂ ಬಿಜೆಪಿ ಅಲ್ಪಸಂಖ್ಯಾತ ಸಮುದಾಯವರಿಗೆ ಟಿಕೆಟ್ ನೀಡಿದೆ. ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದ ಜೆ.ಆರ್.ಲೋಬೋ ಅವರಿಗೆ ಇಲ್ಲಿ ಟಿಕೆಟ್ ನೀಡಲಾಗಿದೆ.

ಮಾಜಿ ಕೆಎಎಸ್ ಅಧಿಕಾರಿಯಾಗಿರುವ ಜೆ.ಆರ್. ಲೋಬೊ 1999 ರಿಂದ 2003ರವರೆಗೆ ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತರೂ ಆಗಿದ್ದರು. ಜೆ.ಆರ್ ಲೋಬೋ ಸರಕಾರಿ ಸೇವೆಗೆ ಸ್ವಯಂ ನಿವೃತ್ತಿ ಘೋಷಿಸಿ 2013ರಲ್ಲಿ ಮಂಗಳೂರು ನಗರ ದಕ್ಷಿಣ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದರು. ಅವರ ಻ಅದೃಷ್ಟವೂ ಖುಲಾಯಿಸಿತು.

ಸ್ಪರ್ಧಿಸಿದ ಮೊದಲ ಚುನಾವಣೆಯಲ್ಲೇ 67,829 ಮತಗಳನ್ನು ಪಡೆದು 12 ಸಾವಿರ ಮತಗಳ ಅಂತರದಿಂದ ನಾಲ್ಕು ಬಾರಿಯ ಶಾಸಕ ಯೋಗೀಶ್ ಭಟ್ ರನ್ನು ನೆಲಕಚ್ಚಿಸಿದರು ಜೆ.ಆರ್.ಲೋಬೋ. ಸದ್ಯ ಇಲ್ಲಿ ಜೆ.ಆರ್ ಲೋಬೋ ಮತ್ತೆ ಗೆದ್ದರೆ ಆಶ್ಚರ್ಯವೇನಿಲ್ಲ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka Congress announced 1st list of candidates for Karnataka assembly elections 2018. In Dakshina Kannada district candidates announced for all 8 assembly constituency. Here are the candidates brief profiles of the district.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ