ಪೂಜಾರಿ ಆತ್ಮಚರಿತ್ರೆ ಬಿಡುಗಡೆಗೆ ಸಿದ್ಧ, ರಾಜ್ಯ ರಾಜಕಾರಣದಲ್ಲಿ ತಳಮಳ

Posted By:
Subscribe to Oneindia Kannada

ಮಂಗಳೂರು, ಜನವರಿ 5: ರಾಜ್ಯ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜಕೀಯ ಪಕ್ಷಗಳಲ್ಲಿ ಚಟುವಟಿಕೆ ಬಿರುಸುಗೊಂಡಿದೆ. ಒಂದೆಡೆ ಬಿಜೆಪಿ ಪರಿರ್ವತನಾ ಯಾತ್ರೆ ಆರಂಭಿಸಿದ್ದರೆ, ಇನ್ನೊಂದೆಡೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಸಾಧನಾ ಸಮಾವೇಶ ನಡೆಯುತ್ತಿದೆ. ಇವೆಲ್ಲದರ ಮಧ್ಯೆ ಕಾಂಗ್ರೆಸ್ ಪಾಳಯದಲ್ಲಿ ಈಗ ಭಾರೀ ತಳಮಳ ಆರಂಭವಾಗಿದೆ. ಇದಕ್ಕೆ ಕಾರಣ ಕಾಂಗ್ರೆಸ್ ಹಿರಿಯ ಮುಖಂಡ ಬಿ.ಜನಾರ್ಧನ ಪೂಜಾರಿ.

ನೇರ, ನಿಷ್ಠುರ ಮಾತುಗಳ ಸರಳ ಸಜ್ಜನಿಕೆಯ ರಾಜಕಾರಣಿ ಎಂದೇ ಗುರುತಿಸಿ ಕೊಂಡಿರುವ ಬಿ. ಜನಾರ್ಧನ ಪೂಜಾರಿ ಅವರ ಆತ್ಮಚರಿತ್ರೆ ಬಿಡುಗಡೆಗೆ ಸಿದ್ದವಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ರಾಜಕಾರಣದಲ್ಲಿ ಭಾರೀ ಬಿರುಗಾಳಿ ಏಳುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ.

ಇದೇ ಬರುವ ಜನವರಿ 26ರ ಗಣರಾಜ್ಯೋತ್ಸವ ದಿನದಂದು ಮಾಜಿ ಕೇಂದ್ರ ಸಚಿವ ಬಿ.ಜನಾರ್ಧನ ಪೂಜಾರಿ ಅವರ ಬಹುನಿರೀಕ್ಷಿತ ಆತ್ಮಚರಿತ್ರೆ ಬಿಡುಗಡೆಯಾಗಲಿದೆ.

Janardhana Poojari's Autobiography going to release on Jan 26

ಮಂಗಳೂರಿನ ಗೋಕರ್ಣನಾಥ ದೇವಾಲಯದಲ್ಲಿ ಪೂಜಾರಿಯವರ ಆತ್ಮಚರಿತ್ರೆ ಬಿಡುಗಡೆಗೊಳ್ಳಲಿದ್ದುಈ ನಿಟ್ಟಿನಲ್ಲಿ ಪೂರ್ವ ತಯಾರಿ ಆರಂಭಗೊಂಡಿದೆ. ಪೂಜಾರಿ ಅವರ ಆತ್ಮಚರಿತ್ರೆ 3 ಭಾಷೆಯಲ್ಲಿ ಪ್ರಕಟಗೊಳ್ಳಲಿದೆ. ಕನ್ನಡದಲ್ಲಿ ಪ್ರಕಟವಾಗುವ ಆತ್ಮಚರಿತ್ರೆ ಮೊದಲು ಬಿಡುಗಡೆಗೊಳ್ಳಲಿದ್ದು, ತದ ನಂತರ ಕೆಲ ದಿಗಳ ಬಳಿಕ ಹಿಂದಿ ಹಾಗು ಇಂಗ್ಲಿಷ್ ಭಾಷೆಯಲ್ಲಿ ಆತ್ಮಚರಿತ್ರೆ ಬಿಡುಗಡೆಗೊಳ್ಳಲಿದೆ.

ಹೇಳಿ ಕೇಳಿ ಜನಾರ್ಧನ ಪೂಜಾರಿ ನೇರ ನಿಷ್ಠುರ ನುಡಿಗಳ ರಾಜಕಾರಣಿ. ಈ ಹಿನ್ನೆಲೆಯಲ್ಲಿ ತಮ್ಮ ಆತ್ಮಚರಿತ್ರೆಯಲ್ಲಿ ಯಾರ ಯಾರ ಬಂಡವಾಳ ಬಯಲಾಗುವುದೋ ಎಂಬ ಆತಂಕ ಕಾಂಗ್ರೆಸ್ ಸೇರಿದಂತೆ ಇತರ ರಾಜಕೀಯ ಪಕ್ಷಗಳ ಮುಖಂಡರಿಗೆ ಆರಂಭವಾಗಿದೆ.

ಜನಾರ್ಧನ ಪೂಜಾರಿ 7 ವರ್ಷಗಳಕಾಲ ಕೇಂದ್ರದಲ್ಲಿ ಅರ್ಥಖಾತೆ ಸಚಿವರಾಗಿದ್ದವರು. ಸಾಲಮೇಳದ ಸರದಾರ ಎಂದೇ ಗುರುತಿಸಿಕೊಂಡವರು. 4 ಬಾರಿ ಸಂಸದರಾಗಿ, 2ಬಾರಿ ರಾಜ್ಯಸಭಾ ಸದಸ್ಯರಾಗಿ, 2 ಬಾರಿ ರಾಜ್ಯದ ಕೆಪಿಸಿಸಿ ಅಧ್ಯಕ್ಷರಾಗಿ, ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದವರು.

ಉಕ್ಕಿನ ಮಹಿಳೆ ಎಂದೇ ಗುರುತಿಸಲಾಗುವ ಇಂದಿರಾ ಗಾಂಧಿ ಕಾಲದಿಂದ ನರಸಿಂಹ ರಾವ್ ಅವರ ಕಾಲದವರೆಗೆ ರಾಷ್ಡ್ರ ರಾಜಕಾರಣದಲ್ಲಿ ಅತ್ಯಂತ ಪ್ರಭಾವಿ ರಾಜಕಾರಣಿಯಾಗಿ ಛಾಪನ್ನು ಮೂಡಿಸಿದವರು ಪೂಜಾರಿ. ಈ ಸುಧೀರ್ಘ ಕಾಲದ ಅನುಭವ ಹಾಗು ಕೆಲ ಅಪರೂಪದ ಘಟನಾವಳಿಗಳ ನೆನಪಿನ ಬುತ್ತಿಯನ್ನು ಪೂಜಾರಿ ತಮ್ಮ ಆತ್ಮಚರಿತ್ರೆಯಲ್ಲಿ ತೆರೆದಿಡಲಿದ್ದಾರೆ.

ತಮ್ಮಿಂದ ರಾಜಕೀಯ ಕ್ಷೇತ್ರದಲ್ಲಿ ಬೆಳೆದವರ ಸಂಗತಿ ಆತ್ಮಚರಿತ್ರೆಯಲ್ಲಿ ಜಾಗ ಪಡೆಯಲಿದ್ದು , ಪೂಜಾರಿ ಅವರಿಂದ ಲಾಭ ಪಡೆದು ನಂತರ ಅವರನ್ನೇ ತುಳಿಯಲು ಯತ್ನಿಸಿದವರ ಜಾತಕ ಈ ಆತ್ಮಚರಿತ್ರೆಯಲ್ಲಿ ಬಯಲಾಗಲಿದೆ ಎಂಬ ಮಾತು ಕೇಳಿಬರುತ್ತಿದೆ.

ಈ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿನ ಮುನಿಸು ಸೇರಿದಂತೆ ರಾಜ್ಯದ ಪ್ರಮುಖ ರಾಜಕಾರಣಿಗಳ ಬಂಡವಾಳ ಪೂಜಾರಿ ಅವರ ಆತ್ಮಚರಿತ್ರೆಯಿಂದ ತೆರೆದುಕೊಳ್ಳಲಿದೆ ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಪೂಜಾರಿ ಅವರ ಆತ್ಮಚರಿತ್ರೆ ಭಾರೀ ಕುತೂಹಲಕ್ಕೆ ಕಾರಣವಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Senior congressman B Janardhana Poojari's Autobiography going to release on January 26th at Kudroli Sri Gokarnanathrsheara temple, Mangaluru.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ