ರಾಜ್ಯ ಗೃಹ ಸಚಿವರ ಮನ ಗೆದ್ದ ಪುತ್ತೂರು ಶಾಲಾ ಗೃಹ ಸಚಿವ..!

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಜನವರಿ 13 : ತನ್ನ ಶಾಲಾ ಶಿಕ್ಷಕರ ವರ್ಗಾವಣೆ ತಡೆ ಹಿಡಿಯುವಂತೆ ಪುತ್ತೂರು ನಗರದ ಹಾರಾಡಿ ಶಾಲೆಯ ಗೃಹ ಸಚಿವ ದಿವಿತ್ ರೈ ರಾಜ್ಯ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಮೊಬೈಲ್‌ ಸಂದೇಶ ಕಳುಹಿಸಿ ಶಿಕ್ಷಕರ ವರ್ಗಾವಣೆ ಹಿಂದಕ್ಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದ.

ಈ ವಿಚಾರ ಕೆಲ ವಾರಗಳ ಹಿಂದೆ ರಾಜ್ಯದಾದ್ಯಂತ ಸುದ್ದಿಯಾಗಿತ್ತು. ಇದರಿಂದ ಖುದ್ದು ಗೃಹ ಸಚಿವ ಪರಮೇಶ್ವರ ಅವರೇ ಹಾರಾಡಿ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿ ದಿವಿತ್ ರೈ ಯ ಮುಂದಿನ ಶಿಕ್ಷಣದ ಸಂಪೂರ್ಣ ವೆಚ್ಚವನ್ನು ತಾನು ಭರಿಸುವುದಾಗಿ ಘೋಷಿಸಿದ್ದಾರೆ.[ಗೃಹ ಸಚಿವರಿಗೆ ಪುತ್ತೂರಿನ ವಿದ್ಯಾರ್ಥಿ ಎಸ್ಎಂಎಸ್ ಕಳಿಸಿದ್ದೇಕೆ?]

Home Minister Parameshwar to Meet Educational Expenses of Puttur Divit Rai

ಶಾಲೆಯಲ್ಲಿ ಗುರುವಾರ ಸಂಜೆ ನಡೆದ ಹೇಮಂತ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಈ ಘೋಷಣೆ ಮಾಡಿದರು. ಈ ವೇಳೆ ಮಾತನಾಡಿದ ಅವರು, ಎಲ್ಲಾ ವ್ಯವಸ್ಥೆಯಲ್ಲೂ ವರ್ಗಾವಣೆ ಎಂಬುದು ಇರುತ್ತದೆ. ಇಲಾಖೆಯಲ್ಲಿನ ಈ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲು ಆಗುವುದಿಲ್ಲ. ಆದರೂ ಇಲ್ಲಿನ ವಿದ್ಯಾರ್ಥಿ ದಿವಿತ್ ರೈ ಬೇಡಿಕೆಯಂತೆ ಶಿಕ್ಷಕರ ವರ್ಗಾವಣೆಯನ್ನು ರದ್ದುಗೊಳಿಸುವಂತೆ ಗೃಹ ಸಚಿವನಾಗಿ ಶಿಕ್ಷಣ ಸಚಿವರಿಗೆ ಆದೇಶ ನೀಡಿ ದಿವಿತ್ ರೈಗೆ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇನೆ ಎಂದರು.

ದಿವಿತ್ ರೈಗೆ ಪದವಿಯವರೆಗೆ ಶಿಕ್ಷಣ ನೀಡುವ ಜವಾಬ್ದಾರಿ ನನ್ನದು. ಅಲ್ಲದೇ, ಹಾರಾಡಿ ಶಾಲೆಯ ಅಭಿವೃದ್ಧಿಗಾಗಿ ತನ್ನ ವಿಧಾನ ಪರಿಷತ್ ಸದಸ್ಯ ಅನುದಾನದಲ್ಲಿ 10 ಲಕ್ಷ ರೂ. ನೀಡುತ್ತೇನೆ ಎಂದು ಹೇಳಿದ್ದಾರೆ.[ಪುತ್ತೂರು : ಶಾಲಾ ಶಿಕ್ಷಕರ ವರ್ಗಾವಣೆ, ಸಚಿವರ ಭರವಸೆ ಹುಸಿ]

Home Minister Parameshwar to Meet Educational Expenses of Puttur Divit Rai

ತಾನೂ ಒಬ್ಬ ಸರಕಾರಿ ಶಾಲೆಯಲ್ಲಿ ಕಲಿತವನಾಗಿದ್ದು, ಸರಕಾರಿ ಶಾಲೆಗಳಿಗೆ ಹೋಗುವವರು ಬಡವರ, ಕಾರ್ಮಿಕರ, ರೈತರ ಮಕ್ಕಳು, ಖಾಸಗಿ ಶಾಲೆಗಳಿಗೆ ಫೀಸು ನೀಡಿ ಕಲಿಯಲು ಶಕ್ತಿ ಇಲ್ಲದವರು ಎಂಬುವುದು ಗೊತ್ತಿದೆ.

ಸರಕಾರಿ ಶಾಲೆಗಳು ಚೆನ್ನಾಗಿ ನಡೆಯಬೇಕಾದರೆ ಎಲ್ಲರ ಸಹಕಾರ ಬೇಕು. ಶಿಕ್ಷಕರು ಪ್ರಾಮಾಣಿಕವಾಗಿ ಕೆಲಸ ಮಾಡುವ ಮೂಲಕ ಮಕ್ಕಳ ಪ್ರತಿಭೆಯನ್ನು ಹೊರತರಬೇಕಾಗುತ್ತದೆ ಎಂದರು. ಸರಕಾರಿ ಶಾಲೆಗಳ ಬಗ್ಗೆ ತಿರಸ್ಕಾರದ ಮಾತುಗಳು ಕೇಳಿ ಬರುತ್ತಿದೆ ಎಂದರು.

ಗುಣಮಟ್ಟದ ಶಿಕ್ಷಣ ಸಿಗುತ್ತಿಲ್ಲ ಎಂದು ಮಾತನಾಡುವವರಿದ್ದಾರೆ. ಆದರೆ, ಸರಕಾರಿ ಶಾಲೆಗಳು ಗುಣಮಟ್ಟದ ಶಿಕ್ಷಣವನ್ನು ಕಾಪಾಡಿಕೊಂಡು ಬಂದಿವೆ. ಮಕ್ಕಳ ಮನೋಸ್ಥಿತಿ ಬೆಳೆಸುವ ಕೆಲಸ ಆಗುತ್ತಿದೆ ಎನ್ನುವುದಕ್ಕೆ ಹಾರಾಡಿ ಶಾಲೆಯೇ ಒಂದು ಉದಾಹರಣೆ ಎಂದ ಅವರು ಕೇಂದ್ರ ಸರಕಾರ ಕಡ್ಡಾಯ ಶಿಕ್ಷಣ ಜಾರಿಗೊಳಿಸಿದ್ದು,

ಮಕ್ಕಳ ಭವಿಷ್ಯ ಉಜ್ವಲವಾಗಬೇಕಾದರೆ ನಾವು ಒಂದು ಹೊತ್ತಿನ ಊಟ ಬಿಟ್ಟು ಶಿಕ್ಷಣ ಕೊಡಿಸುವ ಕೆಲಸ ಮಾಡಬೇಕು ಎಂದು ಹೇಳಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
State home minister, Dr G Parameshwar, announced that he would be meeting the educational expenses of Haradi school student Divit Rai till degree, as he is impressed by the boy’s effort to retain the school teachers.
Please Wait while comments are loading...