ಮಂಗಳೂರು ವಿ.ವಿ ವಿದ್ಯಾರ್ಥಿನಿಯರ ಶೌಚಾಲಯದಲ್ಲಿ ಹಿಡನ್ ಕ್ಯಾಮೆರಾ!

By: ಮಂಗಳುರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಸೆಪ್ಟೆಂಬರ್ 1: ಕೊಣಾಜೆಯಲ್ಲಿರುವ ಮಂಗಳ ಗಂಗೋತ್ರಿ ಮಂಗಳೂರು ವಿಶ್ವ ವಿದ್ಯಾನಿಲಯ ಕಾಲೇಜಿನಲ್ಲಿ ವಿದ್ಯಾರ್ಥಿನಿಯರು ಬಳಸುವ ಶೌಚಾಲಯದಲ್ಲಿ ಮೊಬೈಲ್ ಕ್ಯಾಮೆರಾವನ್ನು ಇಟ್ಟು, ಶೂಟಿಂಗ್ ಮಾಡಿರುವ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ.

ವಿಕೃತ ಮನಸ್ಸಿನವರು ಚಿತ್ರೀಕರಿಸಿರುವ ಈ ದೃಶ್ಯಗಳನ್ನು ಮೊಬೈಲ್ ಮೂಲಕ ಹರಿದು ಬಿಟ್ಟಿದ್ದಾರೆ. ವಿ.ವಿ. ಕ್ಯಾಂಪಸ್‌ನಲ್ಲಿ ನಡೆದಿರುವ ಈ ಘಟನೆ ಕೆಲ ದಿನಗಳ ಹಿಂದೆಯೇ ಬೆಳಕಿಗೆ ಬಂದಿದ್ದರೂ ಆಡಳಿತ ಮಂಡಳಿಯು ಪ್ರಕರಣವನ್ನು ಗುಪ್ತವಾಗಿ ಇಟ್ಟಿತ್ತು, ಬುಧವಾರ ನಡೆದ ಸಿಂಡಿಕೇಟ್ ಸಭೆಯಲ್ಲಿ ವಿಷಯ ಪ್ರಸ್ತಾಪ ಆಗಿದ್ದರಿಂದ ಪ್ರಕರಣ ಬೆಳಕಿಗೆ ಬರುವಂತಾಗಿದೆ.[ಸೆ.2ರಂದು ದಕ್ಷಿಣ ಕನ್ನಡದಲ್ಲಿ ಸ್ವಯಂ ಪ್ರೇರಿತ ಬಂದ್]

ಮೊಬೈಲ್ ಫೋನ್ ಕ್ಯಾಮೆರಾ: ಮಹಿಳಾ ಶೌಚಾಲಯದಲ್ಲಿ ಸಿಮ್ ಕಾರ್ಡ್ ಇಲ್ಲದ ಮೊಬೈಲ್ ಫೋನ್ ಕ್ಯಾಮೆರಾವನ್ನು ಇರಿಸಿ, ವಿಡಿಯೋ ಕ್ಲಿಪ್ಪಿಂಗ್ ಮಾಡಲಾಗಿದೆ. ಆ ನಂತರ ವಿಡಿಯೋವನ್ನು ವೈಫೈ ತಂತ್ರಜ್ಞಾನ ಬಳಸಿ, ಬೇರೆಡೆ ಕಳಿಸಿರುವ ಗುಮಾನಿಯಿದೆ. ಜು.24ರಂದು ಬೆಳಿಗ್ಗೆ 8 ಗಂಟೆಗೆ ಯಾರೂ ಇಲ್ಲದ ವೇಳೆ ಶೌಚಾಲಯದಲ್ಲಿ ಕ್ಯಾಮೆರಾ ಫಿಕ್ಸ್ ಮಾಡಲಾಗಿದೆ.

Hiden camera in Mangaluru V.V. Ladies toilet

ಮೊಬೈಲ್‌ನಲ್ಲಿ ಈ ಸಮಯದಿಂದ ವಿಡಿಯೋ ರೆಕಾರ್ಡ್ ಆಗಿರುವ ದಾಖಲೆಯಿದ್ದು, ಆ.7 ಮತ್ತು ಆ. 11 ರಂದು ವಿಡಿಯೋ ಕ್ಲಿಪ್ಪಿಂಗ್ ರವಾನೆಯಾಗಿರುವ ದಾಖಲೆ ಕೂಡಾ ಲಭಿಸಿದೆ. ಈ ಹಿಂದೆಯೂ ಈ ರೀತಿ ಮೊಬೈಲ್‌ನಲ್ಲಿ ಶೂಟಿಂಗ್ ಆಗಿರುವ ಸಾಧ್ಯತೆಯಿದ್ದು, ಕೆಲ ಕಾಲದಿಂದ ವಿಕೃತಮನಸ್ಕರು ನಿರಂತರ ವಿಡಿಯೋ ಚಿತ್ರೀಕರಣ ನಡೆಸಿದ್ದಾರೆ ಎಂದು ಶಂಕಿಸಲಾಗಿದೆ.[ಬಾವಿ ನೀರೇನೋ ಆರಿತು, ಆದರೆ ಯಾಕೆ ಹಾಗಾಯಿತು?]

ಪವರ್ ಬ್ಯಾಂಕ್ ಇತ್ತು: ಮರದ ಹಲಗೆಯನ್ನು ರಂಧ್ರ ಮಾಡಿ, ಮೊಬೈಲ್ ಕ್ಯಾಮೆರಾ ಫಿಕ್ಸ್ ಮಾಡಿರುವುದು ಶೌಚಾಲಯಕ್ಕೆ ತೆರಳಿದ್ದ ವಿದ್ಯಾರ್ಥಿನಿಯೊಬ್ಬಳಿಂದ ಬೆಳಕಿಗೆ ಬಂದಿತ್ತು. ಆಕೆ ಮೇಲಕ್ಕೆ ಹತ್ತಿ ಪರಿಶೀಲಿಸಿದಾಗ ಮೊಬೈಲ್ ಕ್ಯಾಮೆರಾ ಪತ್ತೆಯಾಗಿದೆ. ಮೊಬೈಲ್ ಜೊತೆ ಹೆಚ್ಚುವರಿ ಬ್ಯಾಟರಿ ಬಾಳಿಕೆಗಾಗಿ ಪವರ್ ಬ್ಯಾಂಕ್ ಕೂಡಾ ಇರಿಸಲಾಗಿತ್ತು.

ಈ ಬಗ್ಗೆ ವಿದ್ಯಾರ್ಥಿನಿಯು ವಿಭಾಗದ ಮುಖ್ಯಸ್ಥರಿಗೆ ದೂರು ನೀಡಿದ್ದಾಳೆ. ಬುಧವಾರ ನಡೆದ ಸಿಂಡಿಕೇಟ್ ಸಭೆಯಲ್ಲಿ ಈ ವಿಷಯ ಪ್ರಸ್ತಾಪವಾಗಿದ್ದು, ಪ್ರಕರಣದ ತನಿಖೆಯ ಉಸ್ತುವಾರಿಯನ್ನು ಕುಲಪತಿ ಭೈರಪ್ಪ ಅವರು ಕುಲಸಚಿವ ಕೆ.ಎಂ.ಲೋಕೇಶ್ ಅವರಿಗೆ ನೀಡಿದ್ದಾರೆ. ಮೊಬೈಲ್ ಮತ್ತು ದೂರನ್ನು ಕುಲಸಚಿವರಿಗೆ ನೀಡಿದ್ದಾಗಿ ವಿಭಾಗದ ಮುಖ್ಯಸ್ಥರು ಪ್ರತಿಕ್ರಿಯೆ ನೀಡಿದ್ದಾರೆ.[ಕೋಟಿಯ ಆಸೆಗೆ ಲಕ್ಷ ಕಳೆದುಕೊಂಡ ಉಪ್ಪಿನಂಗಡಿ ವ್ಯಾಪಾರಿ]

ವಿದ್ಯಾರ್ಥಿಗಳದ್ದೇ ಕೃತ್ಯ?: ಮಂಗಳೂರು ವಿ. ವಿ. ಯಲ್ಲಿ ನಡೆದಿರುವ ಈ ಕೃತ್ಯ ನಾಗರಿಕ ಸಮಾಜವನ್ನೇ ತಲೆತಗ್ಗಿಸುವಂತೆ ಮಾಡಿದೆ. ಇಂಥ ಪ್ರಕರಣ ನಡೆಯುತ್ತಿರುವುದು ಇದೇ ಮೊದಲು. ಈ ಸಂಸ್ಥೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದು, ಇಂತಹ ಪ್ರಕರಣದಿಂದ ವಿದ್ಯಾರ್ಥಿನಿಯರು ಶಿಕ್ಷಣ ಸಂಸ್ಥೆಯೊಳಗೆ ಎಷ್ಟು ಸೇಫ್ ಎಂದು ನಾಗರಿಕರು ಪ್ರಶ್ನಿಸುವಂತಾಗಿದೆ.

ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು ಪ್ರಕರಣ ಮುಚ್ಚಿಹಾಕಲು ಮುಂದಾಗಿದ್ದಾರೆ ಎಂಬ ಆರೋಪ ಕೂಡಾ ನಾಗರಿಕ ವಲಯದಲ್ಲಿ ಕೇಳಿಬರುತ್ತಿದೆ. ಕಾಲೇಜು ವಿದ್ಯಾರ್ಥಿಗಳೇ ಇಂಥ ಪ್ರಕರಣದಲ್ಲಿ ಭಾಗಿಯಾಗಿರುವ ಶಂಕೆಯಿದ್ದು, ಮೊಬೈಲ್‌ನಿಂದ ರವಾನೆಯಾಗಿರುವ ವಿಡಿಯೋ ಎಲ್ಲಿ, ಈ ಮೊಬೈಲ್ ಯಾರಿಗೆ ಸೇರಿದೆ ಎನ್ನುವುದನ್ನು ತನಿಖೆಗೊಳಪಡಿಸಿದರೆ ಆರೋಪಿಗಳು ಸಿಕ್ಕಿಬೀಳುತ್ತಾರೆ. ಈ ಹಗರಣವನ್ನು ಕುಲಪತಿಗಳು ಗಂಭೀರವಾಗಿ ತೆಗೆದುಕೊಳ್ಳಬೇಕಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Hiden camera found in Mangaluru university ladies toilet. Suspecting that, videos captured in camera circulated. Complaint has given to departmental head.
Please Wait while comments are loading...