ಇಚ್ಛಾಶಕ್ತಿ ಪ್ರಚೋದಿಸಲು ಶಾಸ್ತ್ರಬದ್ಧ ಯೋಗಾಸನ, ಪ್ರಾಣಾಯಾಮ

By: ಐಸಾಕ್ ರಿಚರ್ಡ್, ಮಂಗಳೂರು
Subscribe to Oneindia Kannada

ಮಂಗಳೂರು, ಜೂನ್ 21 : ಎಲ್ಲಾ ಜೀವಿಗಳ ಗುರಿಯು ಒಂದೇ, ಅದು ಸುಖ ಪ್ರಾಪ್ತಿ. ಜೊತೆಗೆ ದುಃಖವನ್ನು ದೂರ ಮಾಡುವುದು ಕೂಡ. ಮುಂದೆ ಬರಬಹುದಾದ ದುಃಖವನ್ನು ಬಾರದಂತೆ ತಡೆಯುವ ಪ್ರಜ್ಞೆ, ಧೈರ್ಯ ಸ್ಥೈರ್ಯಗಳು ಎಲ್ಲರಲ್ಲೂ ಇರಬೇಕಾದದ್ದು ಅಗತ್ಯ.

ಮಾನವನಲ್ಲಿ ದೈವದತ್ತವಾಗಿ ಬಂದಂತಹ ಉನ್ನತವಾದ ಚೇತನಾ ಶಕ್ತಿಯು ದೇಹದ ಒಳಭಾಗದಲ್ಲಿದೆ. ಜ್ಞಾನ ಶಕ್ತಿ, ಇಚ್ಛಾಶಕ್ತಿ ಮತ್ತು ಕ್ರಿಯಾಶಕ್ತಿ. ಈ ಮೂರು ಶಕ್ತಿಗಳು ಒಳ್ಳೆಯ ರೀತಿಯಲ್ಲಿ ಕಾರ್ಯ ನಿರ್ವಹಿಸಬೇಕಾದರೆ, ಇಚ್ಛಾಶಕ್ತಿಯ ಪಾತ್ರ ಬಹಳ ಹಿರಿದು. ಈ ಇಚ್ಛಾಶಕ್ತಿಯನ್ನು ಸರಿಯಾಗಿ ಪ್ರಚೋದಿಸುವಂತಹ ಕೆಲಸ ನಡೆಯಬೇಕಾಗಿದೆ. ಶಾಸ್ತ್ರಬದ್ಧವಾದ ಯೋಗಾಸನ, ಪ್ರಾಣಾಯಾಮ, ಧ್ಯಾನದಿಂದ ಮಾತ್ರ ಇದು ಸಾಧ್ಯ. [ಯಾವ ರೋಗಗಳಿಗೆ ಯಾವ ಯೋಗಾಸನ ಉಪಯುಕ್ತ]

yoga

ಹಿಂದೆ ಸಾಮಾನ್ಯವಾಗಿ ಜನರು ಪರಸ್ಪರ ಭೇಟಿಯಾಗಿ ತಮ್ಮ ಮನೆಯ ಕುಶಲೋಪಚಾರ, ಕೃಷಿಯ ಬಗ್ಗೆ ಮಾತನಾಡುತ್ತಿದ್ದರು. ಈಗ ಕಾಯಿಲೆಯ ಬಗ್ಗೆ ಹೆಚ್ಚು ಮಾತನಾಡುವುದು ಕೇಳಿ ಬರುತ್ತಿದೆ. ಈಗ ಎಲ್ಲವೂ ವಿಷಮಯವಾಗಿದೆ. ಕುಡಿಯುವ ನೀರು, ತಿನ್ನುವ ಆಹಾರ, ಸೇವಿಸುವ ಗಾಳಿ ಎಲ್ಲಾ ಕಲುಷಿತವಾಗಿದೆ. ಉದ್ವೇಗ, ಒತ್ತಡ, ಖಿನ್ನತೆ, ಅನಾರೋಗ್ಯ ಹೆಚ್ಚುತ್ತಿದೆ. [ಯೋಗ ಬಲ್ಲವನಿಗೆ ರೋಗವಿಲ್ಲ : ಸಿದ್ದರಾಮಯ್ಯ]

ವೈದ್ಯರ ಬಳಿಗೆ ತಪಾಸಣೆಗೆ ಹೋದರೆ ಬಹುತೇಕ ವೈದ್ಯರು ವಾಕಿಂಗ್, ಯೋಗ, ವ್ಯಾಯಾಮ ಮಾಡುವಂತೆ ಸೂಚಿಸುತ್ತಾರೆ. ರೋಗ, ನೋವು, ಆಘಾತಗಳನ್ನೆಲ್ಲಾ ಯೋಗಾಭ್ಯಾಸವು ದೂರಕ್ಕೆ ತಳ್ಳಿ ಆರಾಮವಾಗಿ ಇರುವಂತೆ ನೋಡಿಕೊಳ್ಳುತ್ತದೆ. ['ಯೋಗ ಈಗ ಒಂದು ಅಂತಾರಾಷ್ಟ್ರೀಯ ಚಳವಳಿ']

ಯೋಗದ ಪ್ರಯೋಜನದ ಬಗ್ಗೆ ಪಾಶ್ಚಾತ್ಯರು ಸುಮಾರು 50 ವರ್ಷಗಳಿಂದೀಚೆಗೆ ಅರಿತುಕೊಂಡು ಅನುಸರಿಸುತ್ತಿದ್ದಾರೆ. ಆದರೆ, ನಮ್ಮ ದೇಶದ ಯೋಗ, ಆಯುರ್ವೇದ ಪರಂಪರೆಗಳಲ್ಲಿ ಇದನ್ನು ಸಾವಿರಾರು ವರ್ಷಗಳ ಹಿಂದೆಯೇ ಸುಸ್ಪಷ್ಟವಾಗಿ ಕಂಡುಕೊಂಡಿದೆ.

ಮಹರ್ಷಿ ಅರವಿಂದರು ನಮ್ಮೊಳಗೆ ಸುಪ್ತವಾಗಿರುವ ದಿವ್ಯತ್ವವನ್ನು ಅಭಿವ್ಯಕ್ತಗೊಳಿಸಿ, ಆತ್ಮ ಸಾಕ್ಷಾತ್ಕಾರದ ಕಡೆ ಮುನ್ನಡೆಯಲು ಇರುವ ವ್ಯವಸ್ಥಿತವಾದ ಮಾರ್ಗವೇ ಯೋಗ ಎಂದಿದ್ದಾರೆ. ಈ ರೀತಿಯಲ್ಲಿ ಯೋಗ ಮೃಗ ಮಾನವನನ್ನು ಹಂತ ಹಂತವಾಗಿ ಮಾನವ, ಮಹಾ ಮಾನವ ಮತ್ತು ದೇವಮಾನವನಾಗಿ ಪರಿವರ್ತಿಸುವ ಒಂದು ವೈಜ್ಞಾನಿಕ ಪ್ರಕ್ರಿಯೆಯಾಗಿದೆ.

ಪ್ರಾರಂಭದಲ್ಲಿ ದೇಹದ ಬಿಗಿತ ಮತ್ತು ಪಡೆಸುತನವನ್ನು ನಿವಾರಿಸಿ ಉಲ್ಲಾಸವನ್ನುಂಟುಮಾಡಲು ಶಿಥಿಲೀಕರಣ ವ್ಯಾಯಾಮ ಮಾಡುವುದರಿಂದ ಮುಂದೆ ಆಸನಗಳನ್ನು ಮಾಡಲು ಅನುಕೂಲವಾಗುವುದು. ಆಸನಗಳ ಅಭ್ಯಾಸದಿಂದ ದೇಹದಲ್ಲಿ ಶಕ್ತಿ ಸಂಚಯವಾಗಿ ಶಕ್ತಿಯು ಸೂಕ್ಷ್ಮತಾರವಾದ ಮಾನಸಿಕ ಶಕ್ತಿ, ಬುದ್ಧಿಶಕ್ತಿಯಾಗಿ ಮಾರ್ಪಾಟು ಹೊಂದುತ್ತದೆ.

ಆರೋಗ್ಯವಂತರು ಆರೋಗ್ಯ ಕಾಪಾಡುವುದಕ್ಕಾಗಿಯೂ ಮತ್ತು ಅನಾರೋಗ್ಯಕ್ಕೆ ಒಳಗಾದವರು ಆರೋಗ್ಯವನ್ನು ಮರಳಿ ಪಡೆಯುವುದಕ್ಕಾಗಿಯೂ ಯೋಗಾಸನಗಳನ್ನು ಅವರವರ ಸಾಮರ್ಥ್ಯಕ್ಕೆ ಅನುಸಾರವಾಗಿ ದಿನನಿತ್ಯವೂ ಅಭ್ಯಾಸ ಮಾಡುವುದು ಅತ್ಯವಶ್ಯ ಎಂಬುದನ್ನು ತಿಳಿಯಬೇಕು.

ಮಂಗಳೂರಿನಲ್ಲಿ ಅಬ್ಬರದ ಪ್ರಚಾರ : ಜಿಲ್ಲೆಯಲ್ಲಿ ವಿಶ್ವಯೋಗ ದಿನಾಚರಣೆ ಅಂಗವಾಗಿ ಅಬ್ಬರದ ಪ್ರಚಾರ ನಡೆದಿದೆ. ನಗರಗಳಲ್ಲಿ ನಾನಾ ಯೋಗ ಸಂಸ್ಥೆಗಳು, ಜಿಲ್ಲಾ ಆಯುಷ್ ಇಲಾಖೆ, ಜಿಲ್ಲಾಡಳಿತ ಸೇರಿದಂತೆ ನಾನಾ ಸಂಘಟನೆಗಳು ಕಾರ್ಯಕ್ರಮ ಆಯೋಜಿಸಿವೆ.

ಇಂದು ಯೋಗ ನಡಿಗೆ : ಪತಂಜಲಿ ಯೋಗ ಶಿಕ್ಷಣ ಸಮಿತಿ ಮಂಗಳೂರು ವಲಯದಿಂದ ವಿಶ್ವ ಯೋಗ ದಿನಾಚರಣೆ ಅಂಗವಾಗಿ ಯೋಗ ನಡಿಗೆ ಕಾರ್ಯಕ್ರಮ ಸಂಜೆ 5.30ಕ್ಕೆ ಎಬಿ ಶೆಟ್ಟಿ ಸರ್ಕಲ್ ನಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಎ. ಬಿ ಇಬ್ರಾಹಿಂ ಉದ್ಘಾಟಿಸಲಿದ್ದಾರೆ. ಈ ನಡಿಗೆ ಸ್ಟೇಟ್ ಬ್ಯಾಂಕ್, ಹಂಪನಕಟ್ಟೆ ಸಿಗ್ನಲ್, ಬಾವುಟಗುಡ್ಡೆ , ಜ್ಯೋತಿ, ಬಲ್ಮಠ ಮೂಲಕ ಮರಳಿ ಹಂಪನಕಟ್ಟೆ ಮೂಲಕ ಎ. ಬಿ ಶೆಟ್ಟಿ ಸರ್ಕಲ್‌ಗೆ ತೆರಳಲಿದೆ.

ಜಿಲ್ಲೆಯಲ್ಲಿ ಮುಂಗಾರು ಚುರುಕುಗೊಂಡಿದ್ದರಿಂದ ಕಳೆದ ಮೂರು ದಿನಗಳಿಂದ ಮಳೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ನೆಡೆಯುವ ಬಹುತೇಕ ಯೋಗ ಕಾರ್ಯಕ್ರಮಗಳನ್ನು ಸಭಾಂಗಣದೊಳಗೆ ನೆಡೆಯುತ್ತಿವೆ.

ಮಂಗಳೂರು ನಗರದಲ್ಲಿ ಎಲ್ಲೆಲ್ಲಿ ಯೋಗ
* ಪ್ರಕೃತಿ ಯೋಗ ಮತ್ತು ಮೆಡಿಟೇಶನ್ ಸೆಂಟರ್ . ಸ್ಥಳ: ಕದ್ರಿ ಕೈಬಟ್ಟಲ್ ನಲ್ಲಿ ಯೋಗ ಕುಟೀರ, ಸಮಯ ಸಂಜೆ 5.೦೦ ಕ್ಕೆ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Yoga is a ancient spiritual practices that originated in India. Health benefits Here are the health benefits of yoga.
Please Wait while comments are loading...