'ಹಳ್ಳಿ ಮನೆ ರೊಟ್ಟಿಸ್' ರುಚಿ ಹಿಂದಿದೆ ಯಶಸ್ಸಿನ ಕಥೆ!

By: ಐಸಾಕ್ ರಿಚರ್ಡ್, ಮಂಗಳೂರು
Subscribe to Oneindia Kannada

ಮಂಗಳೂರು, ಜನವರಿ 29 : ಬದುಕು ಎಷ್ಟೇ ಕಠಿಣವಾದರೂ ಅದನ್ನು ಅರ್ಥಪೂರ್ಣವಾಗಿಸುವ ಕಲೆ ತಿಳಿದಿರಬೇಕು. ಮಂಗಳೂರಿನ 'ಹಳ್ಳಿಮನೆ ರೊಟ್ಟಿಸ್' ಮೊಬೈಲ್ ಕ್ಯಾಂಟೀನ್‌ನ ರೊಟ್ಟಿಯ ರುಚಿ ಸವಿದವರು, ಕ್ಯಾಂಟೀನ್ ಸ್ಥಾಪನೆಯಾದ ಹಿಂದಿನ ಕಥೆಯನ್ನು ತಿಳಿಯಲೇಬೇಕು.

ಮಂಗಳೂರು ನಗರದ ಮಣ್ಣಗುಡ್ಡೆ ಬೀದಿ ಬದಿಯಲ್ಲಿ ತಲೆಯೆತ್ತಿರುವ 'ಹಳ್ಳಿ ಮನೆ ರೊಟ್ಟಿಸ್' ಎಲ್ಲರ ಬಾಯಲ್ಲೂ ನೀರೂರಿಸುತ್ತಿದೆ. ಸಂಜೆಯಾಗುತ್ತಿದ್ದಂತೆ ಬೈಕು, ಕಾರುಗಳಲ್ಲಿ ಬರುವ ಗ್ರಾಹಕರು ಬಿಸಿ-ಬಿಸಿ ರೊಟ್ಟಿಗಾಗಿ ತಾಸುಗಟ್ಟಲೆ ಕಾಯುತ್ತಾರೆ.[ಚಾಮರಾಜನಗರದ ಕಾಡಂಚಿನಲ್ಲೊಂದು ರೊಟ್ಟಿ ಹಬ್ಬ!]

ಕರಾವಳಿಯ ಜನರು ಬಯಲು ಸೀಮೆ ಭಾಗದ ರೊಟ್ಟಿಗಾಗಿ ತಾಸುಗಟ್ಟಲೆ ಕಾಯುತ್ತಾರೆ ಎಂದರೆ ರೊಟ್ಟಿಗೆ ಅದೆಷ್ಟು ಬೇಡಿಕೆ ಇದೆ ಎಂಬುದನ್ನು ನೀವೇ ತಿಳಿಯಬಹುದು. ಬಿಸಿ-ಬಿಸಿ ರೊಟ್ಟಿ ಜೊತೆ ವಾಹ್ ಎನ್ನಿಸುವಂತಹ ಚಟ್ನಿಯನ್ನು ನೀಡುವ ಈ ಮೊಬೈಲ್ ಕ್ಯಾಂಟೀನ್‌ನ ಒಡತಿ ಶಿಲ್ಪಾ. [ಹುಬ್ಬಳ್ಳಿ ಖಡಕ್ ಜ್ವಾಳದ ರೊಟ್ಟಿ ವಿದೇಶದಲ್ಲೂ ಸಿಕ್ತಾವ್ರೀ!]

ಚೆನ್ನಾಗಿ ಅಡುಗೆ ಮಾಡುತ್ತಿದ್ದ ಶಿಲ್ಪಾ ಅವರು ಅದನ್ನೇ ಬಂಡವಾಳ ಮಾಡಿಕೊಂಡರು. ಉದ್ಯಮ ಆರಂಭಿಸಲು ಅಗತ್ಯವಾದ ಹಣಕ್ಕಾಗಿ ಮಗನ ವಿದ್ಯಾಭ್ಯಾಸಕ್ಕಾಗಿ ಬ್ಯಾಂಕಿನಲ್ಲಿಟ್ಟಿದ್ದ 1 ಲಕ್ಷ ರೂ. ಹಣವನ್ನು ತೆಗೆದರು. ಈಗ 'ಹಳ್ಳಿಮನೆ ರೊಟ್ಟಿಸ್‌ನಲ್ಲಿ ಸಂಜೆ 5 ರಿಂದ ರಾತ್ರಿ 10 ಗಂಟೆಯವರೆಗೆ ಬಿಡುವಿಲ್ಲದ ವ್ಯಾಪಾರ ನಡೆಯುತ್ತದೆ. ದಿನಕ್ಕೆ ಏನಿಲ್ಲವೆಂದರೂ 300 ರಿಂದ 500ರಷ್ಟು ರೊಟ್ಟಿ ತಟ್ಟುತ್ತಾರೆ ಶಿಲ್ಪಾ. 'ಹಳ್ಳಿಮನೆ ರೊಟ್ಟಿಸ್' ಯಶಸ್ಸಿನ ಹಿಂದಿನ ಕಥೆ ಚಿತ್ರಗಳಲ್ಲಿ ನೋಡಿ....

ಶಿಲ್ಪಾ ಹಾಸನ ಜಿಲ್ಲೆಯವರು

ಶಿಲ್ಪಾ ಹಾಸನ ಜಿಲ್ಲೆಯವರು

ಮೂಲತಃ ಶಿಲ್ಪಾ ಹಾಸನ ಜಿಲ್ಲೆಯವರು. ಕಷ್ಟವೆಂದರೆ ಏನೆಂದು ತಿಳಿಯದಂತೆ ತಂದೆ-ತಾಯಿ ಅವರನ್ನು ಸಾಕಿದ್ದರು. 2005ರಲ್ಲಿ ವಿವಾಹವಾದ ಬಳಿಕ ಅವರು ಮಂಗಳೂರಿಗೆ ಬಂದರು. ಪತಿ ನಗರದಲ್ಲಿ ಟ್ರಾನ್ಸ್‌ಪೋರ್ಟ್ ವ್ಯವಹಾರ ನಡೆಸುತ್ತಿದ್ದರು. ಎಲ್ಲವೂ ಚೆನ್ನಾಗಿ ನಡೆಯುತ್ತಿದೆ ಎನ್ನುವ ಹೊತ್ತಿಗೆ, ಶಿಲ್ಪಾ ಅವರ ಬದುಕಿನ ದಿಕ್ಕು ಬದಲಾಯಿತು, ಬದುಕಿನಲ್ಲಿ ದೊಡ್ಡ ಆಘಾತ ಎದುರಾಯಿತು.

ಕಷ್ಟದಿಂದಾಗಿ ಕೈಯಲ್ಲಿದ್ದ ದುಡ್ಡು ಕರಗಿತು

ಕಷ್ಟದಿಂದಾಗಿ ಕೈಯಲ್ಲಿದ್ದ ದುಡ್ಡು ಕರಗಿತು

ಶಿಲ್ಪಾ ಅವರ ಪತಿ ಬೆಂಗಳೂರಿನಿಂದ ತನಗೆ ಯಾವುದೋ ದುಡ್ಡು ಬರುವುದಿದೆ ಅದನ್ನು ತರುತ್ತೇನೆ ಎಂದು ಹೇಳಿ ಹೋದವರು ಮರಳಲಿಲ್ಲ. ಪತಿಗಾಗಿ ಕಾದು-ಕಾದು ಶಿಲ್ಪಾ ಸುಸ್ತಾದರು, ಕೈಯಲ್ಲಿದ್ದ ಹಣವೂ ಕರಗಿತು. ಶಿಲ್ಪಾಳ ತಂದೆ-ತಾಯಿಯೂ ಮಗಳ ಜೊತೆ ಬಂದು ನೆಲೆಸಿದರು. ಕೆಲಸಕ್ಕೆ ಸೇರಿದರೂ ಮನೆ ನಿರ್ವಹಣೆ ಕಷ್ಟವಾಯಿತು. ಆಗಲೇ ಸ್ವಂತ ಉದ್ಯೋಗ ಮಾಡಬೇಕು ಎಂಬ ಆಲೋಚನೆ ಶಿಲ್ಪಾ ಅವರಲ್ಲಿ ಮೊಳಕೆಯೊಡೆಯಿತು.

ರುಚಿಯಾಗಿ ಅಡುಗೆ ಮಾಡುತ್ತಿದ್ದರು

ರುಚಿಯಾಗಿ ಅಡುಗೆ ಮಾಡುತ್ತಿದ್ದರು

ಶಿಲ್ಪಾ ಅವರು ರುಚಿಯಾಗಿ ಅಡುಗೆ ಮಾಡುತ್ತಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡ ಅವರು, ಬೀದಿ ಬದಿಯ ಮೊಬೈಲ್ ಕ್ಯಾಂಟೀನ್ ತೆರೆಯಲು ನಿರ್ಧರಿಸಿದರು. ಹಣಕ್ಕಾಗಿ ಬ್ಯಾಂಕಿನಿಂದ ಬ್ಯಾಂಕಿಗೆ ಅಲೆದಾಡಿದರು. ಆದರೆ, ಶ್ಯೂರಿಟಿ ನೀಡಲು ಏನೂ ಇಲ್ಲ ಎಂದಾಗ ಸಾಲ ಸಿಗಲಿಲ್ಲ. ಮಗನ ವಿದ್ಯಾಭ್ಯಾಸಕ್ಕಾಗಿ ಬ್ಯಾಂಕಿನಲ್ಲಿಟ್ಟಿದ್ದ 1 ಲಕ್ಷ ಹಣವನ್ನು ಬಂಡವಾಳ ಮಾಡಿಕೊಂಡು ಬೊಲೆರೋ ವಾಹನ ಖರೀದಿಸಿ ಕ್ಯಾಂಟೀನ್ ಆರಂಭಿಸಿದರು.

ಆರಂಭವಾಯಿತು ಮೊಬೈಲ್ ಕ್ಯಾಂಟೀನ್

ಆರಂಭವಾಯಿತು ಮೊಬೈಲ್ ಕ್ಯಾಂಟೀನ್

ಹಲವಾರು ಕಷ್ಟ ನಷ್ಟಗಳ ನಡುವೆ ಶಿಲ್ಪಾ ಅವರ ಮೊಬೈಲ್ ಕ್ಯಾಂಟೀನ್ ಆರಂಭವಾಯಿತು. ಈಗ ಕ್ಯಾಂಟೀನ್‌ನಲ್ಲಿ ಜೋಳ, ಅಕ್ಕಿ, ರಾಗಿ ರೊಟ್ಟಿ, ತಟ್ಟೆ ಇಡ್ಲಿ, ಬಿಸಿಬೇಳೆ ಬಾತ್, ಟೊಮೆಟೊ ರೈಸ್, ವಾರಕ್ಕೆರಡು ಬಾರಿ ರಾಗಿ ಮುದ್ದೆ ಸಿಗುತ್ತದೆ. ರೊಟ್ಟಿ ಜೊತೆಗೆ ಶಿಲ್ಪಾ ಅವರು ತಯಾರಿಸುವ ಖಡಕ್ ಚಟ್ನಿ, ಹುರಿಗಡಲೆ ಚಟ್ನಿಗೆ ಭಾರೀ ಬೇಡಿಕೆ ಇದೆ. ಕ್ಯಾಂಟೀನ್‌ನಲ್ಲಿನ ಸೊಪ್ಪಿನಸಾರು, ಚಿಕನ್ ಸಾರು ಸಹ ಜನರನ್ನು ಆಕರ್ಷಿಸುತ್ತದೆ. ಕೆಲವು ಹೊಟೇಲ್‍ನವರೂ ಶಿಲ್ಪಾ ಅವರ ಬಳಿ ಬಂದು ಚಟ್ನಿಯ ರುಚಿ ಹಿಂದಿನ ರಹಸ್ಯವನ್ನು ಕೇಳಿದ್ದಾರೆ. ಆದರೆ, ಇವರು ಮಾತ್ರ ಹೇಳಿಲ್ಲ.

ಶುಚಿ, ರುಚಿಗೆ ಆದ್ಯತೆ

ಶುಚಿ, ರುಚಿಗೆ ಆದ್ಯತೆ

ಹಳ್ಳಿಮನೆ ರೊಟ್ಟಿಸ್‌ನಲ್ಲಿ ಶುಚಿ-ರುಚಿಗೆ ಹೆಚ್ಚು ಆದ್ಯತೆ ನೀಡಲಾಗುತ್ತದೆ. ಅಕ್ಕಿ, ರಾಗಿ, ಜೋಳದ ಹಿಟ್ಟುಗಳಲ್ಲಿ ಯಾವುದೆ ಕಲಬೆರಕೆಯಿರುವುದಿಲ್ಲ. ಈಗ ಶಿಲ್ಪಾ ಅವರದ್ದು ಬ್ಯುಸಿ ಶೆಡ್ಯೂಲ್. ಬೆಳಗ್ಗೆ ಮಾರುಕಟ್ಟೆಯಿಂದ ತರಕಾರಿಗಳನ್ನು ತಂದು ಜೋಡಿಸಿ, ಹಗಲು ಆಹಾರ ತಯಾರಿಕೆಯಲ್ಲಿ ತೊಡಗುತ್ತಾರೆ. ಸಂಜೆ 5 ಗಂಟೆಯ ಬಳಿಕ ಮೊಬೈಲ್ ಕ್ಯಾಂಟೀನ್ ತೆರೆದುಕೊಳ್ಳುತ್ತದೆ. ಇಷ್ಟು ಮಾತ್ರವಲ್ಲದೆ ಹೊಟೇಲ್ ಅಥವಾ ಇನ್ಯಾವುದೋ ಸಮಾರಂಭಕ್ಕೆ ರೊಟ್ಟಿಗಾಗಿ ಆರ್ಡರ್ ಕೂಡಾ ಬರುತ್ತದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Halli Mane Rotties a popular mobile canteen in Mangaluru. Shilpa is the owner of Halli Mane Rotties, it operates only in the evenings from 5 pm to 10 pm.
Please Wait while comments are loading...