‘ತೂಗು ಸೇತುವೆಗಳ‌ ಸರದಾರ'ನಿಗೆ ಒಲಿದ ಪದ್ಮಶ್ರೀ

By: ಶಂಶೀರ್ ಬುಡೋಳಿ
Subscribe to Oneindia Kannada

ಮಂಗಳೂರು, ಜನವರಿ 25 :ಇವರು ವೃತ್ತಿಯಲ್ಲಿ ಇಂಜಿನಿಯರ್. ಸಿಕ್ಕಾಪಟ್ಟೆ ಹಣ ಮಾಡಿ ಜೀವನ ಸಾಗಿಸಬಹುದಿತ್ತು. ಆದರೆ ಇವರು ಹಾಗೇ ಮಾಡಲಿಲ್ಲ. ಎಲ್ಲರಿಗಿಂತ ಭಿನ್ನ ದಾರಿ ತುಳಿದರು. ಪರಿಣಾಮ ಇವರ ಸಾಮಾಜಿಕ ಪ್ರಜ್ಞೆಗೆ ಇವತ್ತು 'ಪದ್ಮಶ್ರೀ' ಪ್ರಶಸ್ತಿ ಒಲಿದು ಬಂದಿದೆ.

ಹೌದು, ' ತೂಗು ಸೇತುವೆಗಳ ಸರದಾರ' ರೆಂದೇ ಖ್ಯಾತರಾಗಿರುವ ಸುಳ್ಯದ ಗಿರೀಶ್ ಭಾರದ್ವಾಜ್ ಅವರನ್ನು 2017ನೇ ಸಾಲಿನ ದೇಶದ ಪರಮೋಚ್ಚ ಪ್ರಶಸ್ತಿಗಳಲ್ಲಿ ಒಂದಾಗಿರುವ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

 Girish Bharadwaj, The man of ‘Suspension Bridges’ got Padmashri award

ಸುಳ್ಯ ತಾಲೂಕಿನ ಅರಂಬೂರು ಸಮೀಪದ ಇಡ್ಯಡ್ಕ ಭಾರದ್ವಾಜಾಶ್ರಮ ನಿವಾಸಿಯಾಗಿರುವ ಬಲೆಕ್ಕಳ ಗಿರೀಶ್ ಭಾರದ್ವಾಜ್ ವೃತ್ತಿಯಲ್ಲಿ ಮೆಕ್ಯಾನಿಕಲ್ ಎಂಜಿನಿಯರ್. 1975ರಲ್ಲಿ ಎಂಜಿನಿಯರಿಂಗ್ ಪದವಿ ಪಡೆದ ಬಳಿಕ ಸುಳ್ಯದಲ್ಲಿ ಆಯಶಿಲ್ಪ ಎಂಬ ಎಂಜಿನಿಯರಿಂಗ್ ವರ್ಕ್ ಶಾಪ್ ತೆರೆದು ಕಾರ್ಯನಿರ್ವಹಿಸುತ್ತಿದ್ದರು. ನಂತರ ಹಂತ - ಹಂತವಾಗಿ ಸಾಧನೆ ಮಾಡಿ ಕ್ರಮೇಣ ತೂಗು ಸೇತುವೆಗಳನ್ನು ನಿರ್ಮಿಸುವ ಮೂಲಕ ಪ್ರಸಿದ್ಧಿ ಗಳಿಸಿದರು. [ನಟ ನಾನಾ ಪಾಟೇಕರ್, ಜಸ್ಟಿಸ್ ಕೆ.ಟಿ.ಶಂಕರನ್‌ಗೆ 'ಧರ್ಮಶ್ರೀ' ಪ್ರಶಸ್ತಿ]

1989ರಲ್ಲಿ ಸುಳ್ಯದ ಅರಂಬೂರು ಸಮೀಪದಲ್ಲಿ ಪಯಸ್ವಿನಿ ನದಿಗೆ ಅಡ್ಡಲಾಗಿ ಊರವರ ಸಹಕಾರದಿಂದ ಮೊದಲ ತೂಗು ಸೇತುವೆ ನಿರ್ಮಿಸಿದರು. ಮುಂದೆ ತೂಗು ಸೇತುವೆ ನಿರ್ಮಾಣವನ್ನೇ ತನ್ನ ಪ್ರಧಾನ ವೃತ್ತಿಯನ್ನಾಗಿಸಿ ದೇಶಾದ್ಯಂತ 127 ಯೋಜನೆಗಳನ್ನು ಕಾರ್ಯಗತಗೊಳಿಸಿ ಎರಡು ಊರುಗಳನ್ನು ಬೆಸೆಯುವ ಕೆಲಸ ಮಾಡಿ ತೂಗು ಸೇತುವೆಗಳ ಸರದಾರ ಎಂದೇ ಖ್ಯಾತಿ ಪಡೆದರು.

ಪ್ರಸ್ತುತ 128ನೇ ಯೋಜನೆಯನ್ನು ಉತ್ತರಕನ್ನಡದಲ್ಲಿ ನಿರ್ಮಿಸುತ್ತಿದ್ದು, ಪ್ರಶಸ್ತಿ ಬಂದ ಸಂತಸದಲ್ಲೂ ಯೋಜನೆಯಲ್ಲಿ ಕಾರ್ಯಮಗ್ನರಾಗಿದ್ದರು. 67ರ ವಯಸ್ಸು ಒಂದಿನಿತೂ ಅವರ ಉತ್ಸಾಹಕ್ಕೆ ಅಡ್ಡಿಯಾಗಿಲ್ಲ. ಇವರ ಸಾಧನೆಗೆ ಈಗಾಗಲೇ ಜೆಟ್ ಸ್ಟ್ಯಾಂಡಿಂಗ್ ಕನ್‌ಸ್ಟ್ರಕ್ಟರ್ ಅವಾರ್ಡ್, ಸಿಎನ್‌ಎನ್- ಐಬಿಎನ್, ಎನ್‌ಡಿಟಿವಿ, ಕನ್ನಡ ಪ್ರಭ ಸುವರ್ಣ ಚಾನೆಲ್‌ನ ಅಸಮಾನ್ಯ ಕನ್ನಡಿಗ ಪ್ರಶಸ್ತಿ ಸೇರಿದಂತೆ ಹತ್ತಾರು ಪ್ರಶಸ್ತಿಗಳು ಸಂದಿವೆ. [ಸುಕ್ರಿ ಬೊಮ್ಮಗೌಡ ಸೇರಿದಂತೆ 89 ಸಾಧಕರಿಗೆ ಪದ್ಮ ಪ್ರಶಸ್ತಿ]

ಸಂಪರ್ಕ ಇಲ್ಲದ ಊರಿನಲ್ಲಿ ಎರಡು ಊರುಗಳನ್ನು ಒಂದಾಗಿಸಿದ ಭಾರದ್ವಾಜ್ ದೇಶ ವಿದೇಶಗಳಲ್ಲಿ ಪ್ರಸಿದ್ಧಿ ಪಡೆದಿದ್ದಾರೆ. ಆರಂಭದಲ್ಲಿ ಸಣ್ಣ ಪ್ರಯತ್ನದಲ್ಲಿ ಅರಂಬೂರಿನಲ್ಲಿ ತೂಗು ಸೇತುವೆ ನಿರ್ಮಿಸಿ ಮೊದಲ ಪ್ರಯತ್ನದಲ್ಲೇ ಯಶಸ್ವಿಯಾಗಿದ್ದ ಅವರು ಅಲ್ಲಿಂದ ಹಿಂತಿರುಗಿ ನೋಡಿಲ್ಲ. ಆಂಧ್ರಪ್ರದೇಶ ಹಾಗೂ ಒಡಿಶಾದಲ್ಲಿ ತಲಾ ಮೂರು, ಕೇರಳದಲ್ಲಿ 30 ಹಾಗೂ ಕರ್ನಾಟಕದಲ್ಲಿ 91 ತೂಗು ಸೇತುವೆಗಳನ್ನು ಇಲ್ಲಿವರೆಗೆ ನಿರ್ಮಿಸಿ ಖ್ಯಾತಿ ಗಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The man of ‘Suspension Bridges’ Girish Bharadwaj got Padmashri award.
Please Wait while comments are loading...