ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಲಾಠಿಗೂ ಕೆಟೀಗೂ ಕಲ್ಲಡ್ಕದಲ್ಲಿ ವಿಶಿಷ್ಟ ರುಚಿ ಉಂಟು..

By ಐಸಾಕ್ ರಿಚರ್ಡ್
|
Google Oneindia Kannada News

ಮಂಗಳೂರು, ಜುಲೈ 1: ಕೆಲದಿನಗಳಿಂದ ದಕ್ಷಿಣ ಕನ್ನಡ ಜಿಲ್ಲೆಯ ಕಲ್ಲಡ್ಕದ ಹೆಸರು ಪತ್ರಿಕೆಗಳಲ್ಲಿ ರಾರಾಜಿಸುತ್ತಿದೆ. ಅದಕ್ಕೆ ಕಾರಣ ಎರಡು ಕೋಮುಗಳ ಮಧ್ಯೆ ನಡೆಯುತ್ತಿರುವವ ಹೊಡೆದಾಟ- ಬಡಿದಾಟ. ವರ್ಷದ ಎಲ್ಲ ದಿನವೂ ಖಾಕಿ ಸರ್ಪಗಾವಲು ಇಲ್ಲಿರುತ್ತದೆ ಎಂಬುದು ಸಾಮಾನ್ಯವಾಗಿ ಕಲ್ಲಡ್ಕದ ಬಗ್ಗೆ ಇರುವ ಕಲ್ಪನೆ.

ಇದರಾಚೆಗೆ ನೋಡಿದಾಗ ಈ ಜಿಲ್ಲೆ ಪ್ರಪಂಚಕ್ಕೇ ತನ್ನದೇ ಆದ ಕೊಡುಗೆಗಳನ್ನು ಕೊಟ್ಟಿದೆ. ವಿಶ್ವಕ್ಕೆ ಮಸಾಲ್ ದೋಸೆ, ನೀರು ದೋಸೆ, ಕೋರಿ ರೊಟ್ಟಿ ಹೀಗೆ ಹಲವು ಖಾದ್ಯಗಳನ್ನು ಪರಿಚಯಿಸಿದೆ. ಅದರ ಮುಂದುವರಿದ ಭಾಗವೇ "ಕೆ.ಟಿ". ಹಾಗಂದ್ರೆ ಏನು ಅಂತೀರಾ? ಇದು ಒಂದು ಸ್ಪೆಷಲ್ ಟೀ.

ಕನ್ನಡ ನಾಡಿನಲ್ಲಿ ಬದಲಾಗುತ್ತಿರುವ ಟೇಸ್ಟ್ ಬಡ್ಸ್!ಕನ್ನಡ ನಾಡಿನಲ್ಲಿ ಬದಲಾಗುತ್ತಿರುವ ಟೇಸ್ಟ್ ಬಡ್ಸ್!

ಮಂಗಳೂರಿನಿಂದ ಬೆಂಗಳೂರಿಗೆ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 75ರ ನಡುವೆ ಬರುವ ಪುಟ್ಟ ಊರು ಕಲ್ಲಡ್ಕ. ಮಂಗಳೂರು ನಗರದಿಂದ ಕೇವಲ 30 ಕಿ.ಮೀ ದೂರದಲ್ಲಿದೆ. ಅಚ್ಚ ಹಸುರಿನಿಂದ ಕಂಗೊಳಿಸುವ ಎತ್ತರೆತ್ತರದ ಬೆಟ್ಟಗಳು, ಪ್ರಸಿದ್ಧ ದೇವಾಲಯಗಳು, ಸದಾ ವಾಹನಗಳಿಂದ ಗಿಜಿಗುಡುವ ರಾಷ್ಟ್ರೀಯ ಹೆದ್ದಾರಿ ಹೀಗೆ ಹತ್ತು ಹಲವು ವೈಶಿಷ್ಟತೆಗಳಿಂದ ಕೂಡಿದೆ.

ಮೂರೂ ಧರ್ಮದವರಿದ್ದಾರೆ

ಮೂರೂ ಧರ್ಮದವರಿದ್ದಾರೆ

ಇಲ್ಲಿ ಹಿಂದೂ, ಕ್ರೈಸ್ತ ಹಾಗೂ ಮುಸ್ಲಿಂ ಮೂರೂ ಧರ್ಮದವರು ವಾಸಿಸುತ್ತಿದ್ದಾರೆ. ಎಲ್ಲ ಸಮುದಾಯದವರು ಅನ್ಯೋನ್ಯತೆಯಿಂದ ಇದ್ದಾರೆ. ಕೆಲವು ಕಿಡಿಗೇಡಿಗಳು ಮಾಡುವ ಕೆಲಸದಿಂದ ಇಡೀ ಊರಿಗೆ ಕೆಟ್ಟ ಹೆಸರು ಬರುತ್ತಿದೆ. ತನ್ನ ಪ್ರಖರ ಮಾತುಗಳಿಂದ ಹೆಸರಾದ ಹಿಂದುತ್ವವಾದಿ ಆರ್‍ ಎಸ್‍ ಎಸ್ ನ ಪ್ರಮುಖ ಕಲ್ಲಡ್ಕ ಪ್ರಭಾಕರ್ ಭಟ್ ಇದೇ ಊರಿನವರು.

ಪೊಲೀಸ್ ಬಸ್ ಗೆ 26 ವರ್ಷಗಳ ಇತಿಹಾಸ

ಪೊಲೀಸ್ ಬಸ್ ಗೆ 26 ವರ್ಷಗಳ ಇತಿಹಾಸ

ಇಲ್ಲಿ ಆಗಾಗ ಗಲಾಟೆಗಳು ಆಗುತ್ತಿರುವುದರಿಂದ ಪೊಲೀಸರು ಇಲ್ಲಿಯೇ ಬೀಡು ಬಿಟ್ಟಿದ್ದಾರೆ. ಇಲ್ಲಿ ನಿಂತಿರುವ ಪೊಲೀಸ್ ಬಸ್ ಗೆ 26 ವರ್ಷಗಳ ಇತಿಹಾಸವಿದೆ. ಯಾಕೆಂದರೆ ಇಲ್ಲಿ ಯಾವ ಸಮಯದಲ್ಲಿ ಗಲಾಟೆ, ಅನಾಹುತಗಳು ಸಂಭವಿಸುತ್ತದೋ ಎಂಬ ಆತಂಕ ಇದ್ದೇ ಇರುತ್ತದೆ. ಗಲಾಟೆ ಸಮಯದಲ್ಲಿ ಪೊಲೀಸರ ನೀಡುವ ಲಾಠಿ ಏಟಿಗೆ ಇರುವಷ್ಟು ರುಚಿ ಇಲ್ಲಿನ ಕೆ.ಟಿಗೂ ಇದೆ ಎಂದು ಜನರು ಹೇಳುವ ಮಾತಿಗೆ ವಿಶಾಲವಾದ ಅರ್ಥವಿದೆ.

ಕಲ್ಲಡ್ಕ ಪ್ರಭಾಕರ್ ಭಟ್ ಏನಂತಾರೆ?

ಕಲ್ಲಡ್ಕ ಪ್ರಭಾಕರ್ ಭಟ್ ಏನಂತಾರೆ?

"ನಾವು ಮುಸ್ಲಿಮರ ಜತೆ ಒಳ್ಳೆಯ ಬಾಂಧವ್ಯ ಹೊಂದಿದ್ದೇವೆ. ನಮ್ಮ ಕಾಂಪ್ಲೆಕ್ಸ್ ಗೆ ವ್ಯಾಪಾರಕ್ಕಾಗಿ ಅವರು ಬರುತ್ತಾರೆ. ಕೆಲವರ ವೈಯಕ್ತಿಕ ಗಲಾಟೆಯಿಂದ ಕೋಮುಗಲಭೆ ಉಂಟಾಗುತ್ತಿದೆ. ಕಲ್ಲಡ್ಕದಲ್ಲಿ ಸಣ್ಣಪುಟ್ಟ ಗಲಾಟೆಯಾದರೂ ಅದಕ್ಕೆ ಪ್ರಭಾಕರ್ ಭಟ್ ಕಾರಣ ಅಂತಾರೆ" ಎಂದು ಒನ್ ಇಂಡಿಯಾ ಕನ್ನಡಕ್ಕೆ ಹೇಳಿದರು ಸ್ವತಃ ಕಲ್ಲಡ್ಕ ಪ್ರಭಾಕರ್ ಭಟ್.

 ಏನಿದು ಕೆ.ಟಿ

ಏನಿದು ಕೆ.ಟಿ

ಕೆ.ಟಿ ಅಂದ್ರೆ ಕಲ್ಲಡ್ಕ ಟಿ ಅಂತಲೇ ಫೇಮಸ್. ಇಲ್ಲಿನ ಲಕ್ಷ್ಮಿ ನಿವಾಸ ಎಂಬ ಒಂದು ಪುಟ್ಟ ಹೋಟೆಲ್ ನಲ್ಲಿ ಸಿಗುವ ಟೀ ಸಾಮಾನ್ಯವಾಗಿ ಹೋಟೆಲು ಅಥವಾ ಮನೆಯಲ್ಲಿ ನಾವು ಕುಡಿಯುವ ಟೀ ಅಲ್ಲ. 120 ಮಿ.ಲೀ ಗಾಜಿನ ಲೋಟದಲ್ಲಿ 100 ಮಿ.ಲೀ ಸಕ್ಕರೆ ಮಿಶ್ರಿತ ಹಾಲು ಹಾಗೂ 20 ಮಿ.ಲೀ ಬೇರೆಯಾಗಿ ಕಾಣುವ ಡಿಕಾಕ್ಷನ್ ಇರುವ ಶುಚಿ- ರುಚಿಯಾದ ಟೀ. ಇದಕ್ಕೆ 62 ವರ್ಷಗಳ ಇತಿಹಾಸವಿದೆ. ಇದೇ ರೀತಿಯ ರಿಮ್ ಜಿಮ್ ಕಾಫಿ ಸಹ ಸವಿಯಬಹುದು.

 ಮೂರು ತಲೆಮಾರು ಕಳೆದರೂ ಅದೇ ಟೇಸ್ಟ್

ಮೂರು ತಲೆಮಾರು ಕಳೆದರೂ ಅದೇ ಟೇಸ್ಟ್

ಇಲ್ಲಿನ ಸ್ಥಳೀಯರಾದ ಲಕ್ಷ್ಮೀ ನಾರಾಯಣ ಹೊಳ್ಳ 1956ರಲ್ಲಿ ಹೋಟೆಲ್ ಉದ್ಯಮ ಮೂಲಕ ಕೆ.ಟಿ ಚಹಾವನ್ನು ಮೊತ್ತ ಮೊದಲ ಬಾರಿ ಪರಿಚಯಿಸಿದರು. ಲಕ್ಷ್ಮೀ ನಾರಾಯಣ ಹೊಳ್ಳ ಹಾಗೂ ಮಗ ನರಸಿಂಹ ಹೊಳ್ಳ ಈ ಉದ್ಯಮ ಪ್ರಾರಂಭಿಸಿದರು. ತದನಂತರ ಶಿವರಾಮ ಹೊಳ್ಳ, ರಾಜೇಂದ್ರ ಹೊಳ್ಳ, ಶ್ರೀನಿವಾಸ್ ಹೊಳ್ಳ ಇಡೀ ಕುಟುಂಬ ಈ ಉದ್ಯಮದಲ್ಲಿದ್ದಾರೆ. ಪ್ರಸ್ತುತ ನರಸಿಂಹ ಹೊಳ್ಳರ ಮಗ ಶಿವರಾಮ ಹೊಳ್ಳ ಮುನ್ನಡೆಸುತ್ತಿದ್ದಾರೆ. ಈ ಹೋಟೆಲ್ ಮೂರು ತಲೆಮಾರು ಕಳೆದರೂ 62 ವರ್ಷದ ಹಿಂದಿನ ಕೆ.ಟಿ ರುಚಿಯೇ ಇಂದೂ ಇದೆ. ಹೋಟೆಲ್ ಪ್ರಾರಂಭದಲ್ಲಿ ರಾಮಚಂದ್ರ ಆಚಾರ್ ತದನಂತರ ಸುಬ್ರಾಯ ಪ್ರಭು, ವಿಠಲ ಎಂಬುವವರು ಚಹಾ ಮಾಡುತ್ತಿದ್ದರು. ಈಗ ವಿಶ್ವನಾಥ ಎಂಬ ಹೆಸರಿನ ಇಬ್ಬರು ಚಹಾ ತಯಾರಿಸುತ್ತಿದ್ದಾರೆ.

ಪ್ರಕಾಶ್ ರೈ, ಅಂಬರೀಷ್ ರಿಂದ ಭೇಷ್ ಅನಿಸಿಕೊಂಡಿದ್ದಾರೆ

ಪ್ರಕಾಶ್ ರೈ, ಅಂಬರೀಷ್ ರಿಂದ ಭೇಷ್ ಅನಿಸಿಕೊಂಡಿದ್ದಾರೆ

ಈ ರಸ್ತೆಯಾಗಿ ತೆರಳುವ ಬಹುತೇಕ ಪ್ರಯಾಣಿಕರು ಇಲ್ಲಿನ ಟೀ ಸವಿಯದೇ ಮುಂದೆ ತೆರಳುವುದಿಲ್ಲ. ಈ ಕೆ.ಟಿಯನ್ನು ನಟ ಪ್ರಕಾಶ್ ರೈ, ಅಂಬರೀಷ್, ಜೂಹಿ ಚಾವ್ಲಾ, ಕುಮಾರಸ್ವಾಮಿ ಹೀಗೆ ಹಲವು ಸೆಲೆಬ್ರೆಟಿಗಳು, ರಾಜಕೀಯ ನಾಯಕರು ಸವಿದಿದ್ದಾರೆ.

 ವಾರವಿಡೀ ಫುಲ್ ರಷ್

ವಾರವಿಡೀ ಫುಲ್ ರಷ್

ಕೆ.ಟಿ ಸವಿಯಲೆಂದೇ ದೂರದೂರಿಂದ ಇಲ್ಲಿಗೆ ಬರುತ್ತಾರೆ. ಇದರಿಂದಾಗಿ ಬೆಳಗ್ಗೆ ಹಾಗೂ ಸಂಜೆ ಟ್ರಾಫಿಕ್ ಜಾಮ್ ಆಗುವುದಿದೆ. ಅಷ್ಟರ ಮಟ್ಟಿಗೆ ಈ ಹೊಟೇಲ್ ಗ್ರಾಹಕರಿಂದ ಗಿಜಿಗುಡುತ್ತದೆ. ವಾರಾಂತ್ಯದಲ್ಲಿ ನಿಂತುಕೊಂಡೇ ಟೀ ಸವಿಯಬೇಕಾಗುತ್ತದೆ. ಕೆ.ಟಿಗೆ ಒಳ್ಳೆ ಕಾಂಬಿನೇಷನ್ ಅಂದ್ರೆ ಇಲ್ಲಿನ ಗೋಳಿಬಜೆ ಅಥವಾ ಮಸಾಲ್ ದೋಸೆ. ಜೊತೆಗೆ ತುಪ್ಪ ದೋಸೆ, ಟೊಮೆಟೊ ಆಮ್ಲೆಟ್, ಬಿಸ್ಕೆಟ್ ರೊಟ್ಟಿ ಹೀಗೆ ಕರಾವಳಿಯ ತರಹೇವಾರಿ ಖಾದ್ಯಗಳಿವೆ. ಇದರ ಬೆಲೆ ಕೇವಲ 15. ಜೊತೆಗೆ ವಾರದ 6 ದಿನವೂ ಬೆಳಗ್ಗೆ 5.30ರಿಂದ ರಾತ್ರಿ 8ರವರೆಗೂ ತೆರೆದಿರುತ್ತದೆ. ಬುಧವಾರ ಮಧ್ಯಾಹ್ನದ ನಂತರ ಈ ಹೊಟೇಲ್ ಬಂದ್ ಆಗಿರುತ್ತದೆ.

 ಎನ್‍ಡಿಟಿವಿಯಲ್ಲಿ ಪ್ರಸಾರ

ಎನ್‍ಡಿಟಿವಿಯಲ್ಲಿ ಪ್ರಸಾರ

ಕೆ.ಟಿ ತಯಾರಿಸಲು ಈ ಹಿಂದೆ ದೇವಗಿರಿ ಚಹಾ ಹುಡಿ ಬಳಸುತ್ತಿದ್ದ ಮಾಲೀಕರು ಈಗ ಸಕಲೇಶಪುರದ ಕಾಡಮನೆ ಎಸ್ಟೇಟ್ ನಲ್ಲಿ ತಯಾರಾಗುವ ಪ್ಯಾರೀಸ್ ಬ್ರ್ಯಾಂಡ್ ನ "ಕೆ-ಚಾಯ್" ಹುಡಿ ಬಳಸುತ್ತಾರೆ. ರಾಷ್ಟ್ರೀಯ ವಾಹಿನಿ ಎನ್‍ಡಿಟಿವಿ ಗುಡ್ ಟೈಮ್ಸ್ ನ "ಹೈವೇ ಆನ್ ಮೈ ಪ್ಲೇಟ್" ಎಂಬ ಹೆಸರಿನ ಕಾರ್ಯಕ್ರಮದಲ್ಲಿ ಇದರ ವಿಶಿಷ್ಟತೆ ಪ್ರಸಾರವಾಗಿದೆ. ಜೊತೆಗೆ ಗೂಗಲ್ ನಲ್ಲಿ ಕಲ್ಲಡ್ಕ ಟೀ ಅಂತ ಕೊಟ್ಟರೆ ಸಾಕು ಇದರ ಹತ್ತಾರು ಬರಹಗಳು ಕಾಣಸಿಗುತ್ತಿವೆ.

English summary
Hotel Laxmi Nivas at Kalladka (30 KM from Bengaluru) is the favorite pit stop of motorists on NH 75. Whatever may be the time of the day, a stop at the hotel is a must to sip that aromatic, visually tempting K Tea (Kalladka Tea).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X