’ಪಲ್ಲವಿ’ ದನಿ ಕಂಡರಿಸಿದ ಕನ್ನಡದ ಭಾವಲೋಕ

Posted By:
Subscribe to Oneindia Kannada

ವರದಿ: ಕಾವೇರಿ ಭಾರದ್ವಾಜ್,

ಚಿತ್ರಗಳು: ಜಯಲಕ್ಷ್ಮಿ ಭಟ್

ಆ ಮಧುರ ಧ್ವನಿ ಕನ್ನಡವೇ ಸತ್ಯ ಎಂದು ಸಾರಿತು. ಕನ್ನಡದ ನಿತ್ಯೋತ್ಸವದ ಸೊಬಗನ್ನು ಹಿಡಿದಿಟ್ಟಿತು. ಬೆಳಕನ್ನು ಕರುಣಾಳು ಎಂದು ಹೊಗಳಿ ಆಹ್ವಾನಿಸಿತು. ಅಮ್ಮನೊಂದಿಗಿನ ಬಾಂಧವ್ಯ ಬಂಧವನ್ನು ಚಿತ್ರಿಸಿತು. 'ನೀ ಸಿಗದೇ ಬಾಳೊಂದು ಬಾಳೇ, ಕೃಷ್ಣಾ' ಎಂದು ಪ್ರಶ್ನಿಸಿತು. ಯಾವ ಮೋಹನ ಮುರಲಿ ಕರೆಯಿತೊ ದೂರತೀರಕೆ ನಿನ್ನನು' ಎಂದು ಸಂವಾದಿಸಿತು. ಆರದಿರಲಿ ಬೆಳಕು ಎಂದು ಆಶಿಸಿತು. ಎದೆ ತುಂಬಿ ಹಾಡಿದರೆ ಮನವಿಟ್ಟು ಕೇಳುವ ಕನ್ನಡದ ಮನಸ್ಸುಗಳನ್ನು ಪ್ರಶಂಸಿಸಿತು.

ಗ್ಯಾಲರಿ: ಧರ್ಮಸ್ಥಳ ಲಕ್ಷ ದೀಪೋತ್ಸವ ಸಂಭ್ರಮ

ಆ ಧ್ವನಿ ಖ್ಯಾತ ಗಾಯಕಿ ಎಂ.ಡಿ.ಪಲ್ಲವಿ ಅವರದು. ಲಕ್ಷದೀಪೋತ್ಸವ ಪ್ರಯುಕ್ತ ಎರಡನೇ ದಿನ ಬುಧವಾರ ರಾತ್ರಿ ಧರ್ಮಸ್ಥಳದ ಅಮೃತವರ್ಷಿಣಿ ಸಭಾಂಗಣದಲ್ಲಿ ಅವರ ಸ್ವರದಲ್ಲಿ ಕೇಳಿಬಂದ ಕನ್ನಡದ ಖ್ಯಾತನಾಮ ಕವಿಗಳ ಸಾಲುಗಳು ಜನಮನ ಸೂರೆಗೊಂಡವು. ಕನ್ನಡದ ಭಾವಗೀತೆಗಳ ಸಾಹಿತ್ಯಕ ಶಕ್ತಿಯನ್ನು ಪರಿಚಯಿಸುವಲ್ಲಿ ಯಶಸ್ವಿಯಾದವು.

 Dharmasthala Laksha Deepotsava 2017, MD Pallavi enthralls audience with melody songs

ಅಷ್ಟೇ ಅಲ್ಲ, ಅಲ್ಲಿ ನಾದ-ನಿನಾದದ ನೆರವಿನೊಂದಿಗಿನ ಭಾವದ ಅಲೆಗಳಿದ್ದವು. ಮಾಧುರ್ಯಕ್ಕೆ ಹೊಸ ವ್ಯಾಖ್ಯಾನ ನೀಡುವಂಥ ಧ್ವನಿಯ ತರಂಗಳಿದ್ದವು. ಕನ್ನಡದ ಭಾಷಿಕ ಸೊಗಡಿನ ಸಾಲುಗಳು ನೂತನ ಅರ್ಥಗಳನ್ನು ಹೊಮ್ಮಿಸುತ್ತಿದ್ದವು. ನಾದಮಾಧುರ್ಯದ ಈ ಕ್ಷಣಗಳು ಧರ್ಮಸ್ಥಳದ ಲಕ್ಷದೀಪೋತ್ಸವಕ್ಕೆ ಹೊಸ ಮೆರಗು ನೀಡಿದವು.

'ಶ್ರೀಕ್ಷೇತ್ರದ ಪ್ರಗತಿಪರತೆಗೆ ಪ್ರಧಾನಿ ಭೇಟಿಯಿಂದ ರಾಷ್ಟ್ರೀಯ ಮನ್ನಣೆ'

ಪಲ್ಲವಿ ಅವರ ಕಂಠಸಿರಿಯಲ್ಲಿ ನಾಡಿನ ಹೆಸರಾಂತ ಕವಿಗಳ ಭಾವಗೀತೆಗಳು ಪ್ರಭಾವ ಮೂಡಿಸಿದವು. ಕಾವ್ಯದ ಸಾಲುಗಳು ಮಧುರವಾಗಿ ಅನಾವರಣಗೊಂಡವು. ಜನಜನಿತ ಗೀತೆಗಳನ್ನು ಪಲ್ಲವಿ ಅವರು ತಮ್ಮ ವಿಶಿಷ್ಟ ಸಂಗೀತ ಪ್ರಜ್ಞೆಯೊಂದಿಗೆ ವಿನೂತನವಾಗಿ ಪ್ರಸ್ತುತಪಡಿಸಿದರು. ಮೂಲಗೀತೆಗಳಿಗೆ ಭಂಗವಾಗದಂತೆ ಹೊಸದೊಂದು ದನಿಸ್ಪರ್ಶ ನೀಡಿ ರಾಗಾಲಾಪದ ಚಾರ್ತುಯದೊಂದಿಗೆ ಸೊಗಸಾಗಿ ಪ್ರಸ್ತುತಪಡಿಸಿದರು. ಅವರ ರಾಗತಾನಯಾನ ವಿಭಿನ್ನವಾಗಿತ್ತು. ಭಾವಮಾಧುರ್ಯ ಕೇಳುಗರನ್ನು ಭಾವುಕವಾಗಿ ಹಿಡಿದಿಟ್ಟಿತು.

ಇಂದಿನಿಂದ ಐದು ದಿನ ಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷ ದೀಪೋತ್ಸವದ ಸಂಭ್ರಮ

ಗಣೇಶ ಸ್ತುತಿಯೊಂದಿಗೆ ಆರಂಭವಾದ ಸುಗಮ ಸಂಗೀತ ಕಾರ್ಯಕ್ರಮದಲ್ಲಿ ಕನ್ನಡದ ಖ್ಯಾತ ಕವಿತೆಗಳ ಸಾಲುಗಳು ಮಧುರವಾಗಿ ಪ್ರಸ್ತುತಪಡಿಸಲ್ಪಟ್ಟವು. ಹಳೆಯ ಸಾಲು, ಹಳೆಯ ರಾಗ ಮಾಧುರ್ಯವು ಪಲ್ಲವಿ ಅವರ ಸಿರಿಕಂಠದ ಬೆಂಬಲದ ಕಾರಣಕ್ಕಾಗಿಯೇ ಹೊಸದೊಂದು ರೂಪದಲ್ಲಿ ಅಭಿವ್ಯಕ್ತಿಸಲ್ಪಟ್ಟಿತು. ಮನದುಂಬಿ ಹಾಡಿದ ಅವರ ಧ್ವನಿಯ ಸೊಗಡು ಹಳೆಯ ಗೀತೆಗಳ ಬೇರುಗಳಿಗೆ ಹೊಸ ಅಭಿವ್ಯಕ್ತಿಯ ಆಭರಣ ತೊಡಿಸುವಲ್ಲಿ ಯಶಸ್ವಿಯಾಯಿತು.

ಕುವೆಂಪು, ಕೆ.ಎಸ್.ನಿಸಾರ್ ಅಹಮದ್, ಬಿ.ಎಂ.ಶ್ರೀಕಂಠಯ್ಯ, ಬಿ.ಲಕ್ಷ್ಮಣರಾವ್, ಜಿ.ಎಸ್.ಶಿವರುದ್ರಪ್ಪ, ಲಕ್ಷ್ಮೀನಾರಾಯಣ ಭಟ್, ಗೋಪಾಲಕೃಷ್ಣ ಅಡಿಗ, ಕೆ.ಎಸ್.ನರಸಿಂಹಸ್ವಾಮಿ ಅವರ ಕವಿತೆಯ ಸದಾಶಯಗಳು 'ಪಲ್ಲವಿ' ರಾಗಶ್ರೇಷ್ಠತೆಯೊಂದಿಗೆ ಆಪ್ತವಾಗಿ ತಲುಪಿದವು. ಅವರ ಧ್ವನಿ ಕವಿ ಕುವೆಂಪು ಅವರ 'ಕನ್ನಡವೇ ಸತ ಕನ್ನಡವೇ ನಿತ್ಯ' ಸಾಲುಗಳೊಂದಿಗೆ ಭಾಷೆಯ ಶಕ್ತಿಯನ್ನು ಪರಿಚಯಿಸಿತು.

ನಿಸಾರ್ ಅಹ್ಮದ್‌ರ 'ನಿತ್ಯೋತ್ಸವ' ಗೀತೆಯೊಂದಿಗೆ ಗುರುತಿಸಿಕೊಂಡು ಜೋಗದ ಸಿರಿ ಬೆಳಕನ್ನು ಕಾಣಿಸಿತು. ಬಿ. ಎಂ ಶ್ರೀಕಂಠಯ್ಯನವರ 'ಕರುಣಾಳು ಬಾ ಬೆಳಕೆ' ಸಾಲುಗಳು ತಾತ್ವಿಕತೆಯನ್ನು ಪ್ರಚುರಪಡಿಸಿದವು. ಲಕ್ಷ್ಮಣ್ ರಾವ್‌ರ 'ಅಮ್ಮಾ ನಿನ್ನ ಎದೆಯಾಳದಲ್ಲಿ ಗಾಳಕ್ಕೆ ಸಿಕ್ಕ ಮೀನು' ಮೂಲಕ ಮಾತೃತ್ವದ ಭಾವ ರಿಂಗಣಿಸಿತು. ಜಿ. ಎಸ್. ಶಿವರುದ್ರಪ್ಪ ರಚನೆಯ 'ಕಾಣದ ಕಡಲಿಗೆ ಹಂಬಲಿಸಿದೆ ಮನ' ಹಾಡು ಭಾವೋನ್ಮಾದ ದಾಟಿಸಿತು. ಲಕ್ಷ್ಮೀನಾರಾಯಣ ಭಟ್ ರಚನೆಯ 'ನೀ ಸಿಗದೆ ಬಾಳೊಂದು ಬಾಳೇ ಕೃಷ್ಣಾ' ತನ್ಮಯಗೊಳಿಸಿತು. ಗೋಪಾಲಕೃಷ್ಣ ಅಡಿಗರ 'ಯಾವ ಮೋಹನ ಮುರಳಿ ಕರೆಯಿತೊ' ಜೀವನದ ಮಜಲುಗಳನ್ನು ತಿಳಿಸಿತು.

ರಾಜೀವ್ ಅಗಲಿ ಅವರು ಇದೇ ಕಾರ್ಯಕ್ರಮದಲ್ಲಿ ಪ್ರಸ್ತುತಪಡಿಸಿದ ಸಂತ ಶಿಶುನಾಳ ಷರೀಫ ಅವರ 'ಕೋಡಗನ ಕೋಳಿ ನುಂಗಿತ್ತ' ಹಾಡು ಜನರನ್ನು ರಂಜಿಸಿತು. ಅವರ ಸ್ವರದಲ್ಲಿ ಕೇಳಿಬಂದ 'ಕಾಣದ ಕಡಲಿಗೆ ಹಂಬಲಿಸಿದೆ ಮನ' ಗೀತೆ ಮೆಚ್ಚುಗೆಗೆ ಪಾತ್ರವಾಯಿತು

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Dharmasthala : Laksha Deepotsava 2017 : Ace Singer MD Pallavi enthralls audience with melody songs penned by many Kannada poets. Event held at Amithavarshini Hall, Dharmasthala.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ