ಗೌರಿ ಲಂಕೇಶ್ ಹತ್ಯೆ ಖಂಡಿಸಿ ರಾಜ್ಯದಾದ್ಯಂತ ಸೆಪ್ಟೆಂಬರ್ 12ರಂದು ಪ್ರತಿಭಟನೆ

Posted By:
Subscribe to Oneindia Kannada

ಮಂಗಳೂರು, ಸೆಪ್ಟೆಂಬರ್ 8: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆಯನ್ನು ಖಂಡಿಸಿ ರಾಜ್ಯದಾದ್ಯಂತ ಹಲವು ಸಂಘಟನೆಗಳು ಹೋರಾಟ ನಡೆಸುತ್ತಿವೆ. ಈ ಹೋರಾಟಕ್ಕೆ ಇನ್ನಷ್ಟು ಬಲ ನೀಡುವ ನಿಟ್ಟಿನಲ್ಲಿ ದಲಿತ- ದಮನಿತ ಸ್ವಾಭಿಮಾನ ಹೋರಾಟ ಸಮಿತಿ ಕೂಡಾ ರಾಜ್ಯದಾದ್ಯಂತ ಸೆ. 12ರಂದು ಪ್ರತಿಭಟನೆ ನಡೆಸುವುದಾಗಿ ಘೋಷಿಸಿದೆ.

ಗೌರಿ ಲಂಕೇಶ್ ಅವರನ್ನು ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿರುವುದನ್ನು ಖಂಡಿಸಿರುವ ದಲಿತ-ದಮನಿತ ಸ್ವಾಭಿಮಾನ ಹೋರಾಟ ಸಮಿತಿ, ಹತ್ಯೆಗೈದ ದುಷ್ಕರ್ಮಿಗಳನ್ನು ಶೀಘ್ರ ಪತ್ತೆ ಹಚ್ಚುವಂತೆ ಸರಕಾರಕ್ಕೆ ಅಗ್ರಹಿಸಿದೆ.

Dalit Swabhimani Horata Samithi to hold protest against the assassination of Journo Gauri Lankesh

ಮಂಗಳೂರಿನಲ್ಲಿ ಈ ಬಗ್ಗೆ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಪಿಯುಸಿಎಲ್ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಪಿ.ಬಿ. ಡೇಸಾ ಪ್ರಗತಿಪರ, "ನೂತನ ಕ್ರಾಂತಿಗೆ ನಾಂದಿ ಹಾಡಿದವರು ಗೌರಿ ಲಂಕೇಶ್. ಅವರ ಕೊಲೆ ಪ್ರಕರಣದಲ್ಲಿ ಸಂಘ ಪರಿವಾರದವರು ತಮ್ಮ ಕೈವಾಡವಿಲ್ಲವೆಂದು ನಾಟಕವಾಡುತ್ತಿದ್ದಾರೆ," ಎಂದು ಆರೋಪಿಸಿದರು.

"ಆದರೆ, ಯಾರ ಕೈವಾಡವಿದೆಯೆಂದು ಇಡೀ ದೇಶಕ್ಕೆ ತಿಳಿದಿದೆ. ಕೊಲೆ ನಡೆದು ಎರಡು ದಿನಗಳಾದರೂ, ಆರೋಪಿಗಳ ಪತ್ತೆಯಾಗಿಲ್ಲ. ರಾಜ್ಯದಲ್ಲಿ ತುರ್ತು ಪರಿಸ್ಥಿತಿಗಿಂತ‌ ಕೆಟ್ಟದಾದ ಅಘೋಷಿತ ತುರ್ತು ಪರಿಸ್ಥಿತಿಯಲ್ಲಿದ್ದೇವೆ. ಡಾ. ಪ್ರಭಾಕರ್ ಭಟ್ ಕಲ್ಲಡ್ಕ, ವಿ.ಎಚ್.ಪಿ ಮುಖಂಡ ಜಗದೀಶ್ ಶೇಣವರನ್ನು ಯಾವಾಗಲೋ ಬಂಧಿಸಬೇಕಿತ್ತು. ಆದರೆ ರಾಜಕೀಯ ನಾಯಕರು ಬಾಯಲ್ಲಿ ಹೇಳುವುದು ಮಾತ್ರ. ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಪೊಲೀಸ್ ಇಲಾಖೆ ಕೇಸರೀಕರಣವಾಗಿದೆ. ಆದರೆ ನಾವು ಗೌರಿ ಲಂಕೇಶ್ ಗೋಸ್ಕರ ಸಾಯಲು ತಯಾರಿದ್ದೇವೆ. ನಮಗೆ ಕಾಂಗ್ರೆಸ್, ಬಿಜೆಪಿಯಂತೆ ಎರಡು ನಾಲಗೆಯಿಲ್ಲ," ಎಂದು ಸರಕಾರದ ವಿರುದ್ಧ ಹರಿಹಾಯ್ದರು.

ಈ ಸಂದರ್ಭದಲ್ಲಿ ಮಾತನಾಡಿದ ದಲಿತ-ದಮನಿತ ಸ್ವಾಭಿಮಾನ ಹೋರಾಟ ಸಮಿತಿ ಮುಖಂಡ ರಘುವೀರ್ ಸೂಟರ್ ಪೇಟೆ, "ಪ್ರಗತಿಪರ ಚಳುವಳಿಯಲ್ಲಿ ತೊಡಗಿಸಿಕೊಂಡು, ಸೈದ್ಧಾಂತಿಕ ತಳಹದಿಯ ಮೇಲೆ ತನ್ನ ಬರಹ ಮತ್ತು ಸಾಹಿತ್ಯದ ಮೂಲಕ ಚಳುವಳಿಯನ್ನು ಕಟ್ಟಿದವರು ಗೌರಿ ಲಂಕೇಶ್. ಆದರೆ, ಅವರ ಸೈದ್ಧಾಂತಿಕ ವಿಚಾರಧಾರೆಗಳ ಬಗ್ಗೆ ಸಹಿಸದ ಶಕ್ತಿಗಳು ಸೈದ್ಧಾಂತಿಕ ಸಂಘರ್ಷಕ್ಕೆ ಮುಂದಾಗದೆ ಪೈಶಾಚಿಕವಾಗಿ ಹತ್ಯೆ ಮಾಡಿರುವುದು ತಮ್ಮ ಫ್ಯಾಸಿಸ್ಟ್ ಕ್ರೌರ್ಯವನ್ನು ಎತ್ತಿ ತೋರಿಸಿದೆ," ಎಂದು ಆರೋಪಿಸಿದರು.

"ಒಂದು ಗೌರಿ ಲಂಕೇಶ್ ಹತ್ಯೆಯಾದರೂ, ಅವರು ಪ್ರತಿಪಾದಿಸಿದ ಸಿದ್ಧಾಂತ, ವಿಚಾರಧಾರೆಗಳು ಯಾವತ್ತೂ ಸಾಯುವುದಿಲ್ಲ. ಸರಕಾರ ಈ ಹತ್ಯೆಯ ದುಷ್ಕರ್ಮಿಗಳನ್ನು ಪತ್ತೆ ಹಚ್ಚಲು ತನಿಖೆಯನ್ನು ಇನ್ನಷ್ಟು ತೀವ್ರಗೊಳಿಸಿ ವಿಶೇಷ ಪ್ರಯತ್ನ ನಡೆಸಬೇಕೆಂದು ಹೋರಾಟ ಸಮಿತಿ ಒತ್ತಾಯಿಸುತ್ತದೆ," ಎಂದು ಹೇಳಿದರು.

ಒಂದೆಡೆ ಗೌರಿ ಲಂಕೇಶ್ ಹತ್ಯೆಯಾದರೆ, ಮತ್ತೊಂದೆಡೆ ಉಡುಪಿ ಚಲೋ ನಡೆಸಿದ ದಲಿತ-ದಮನಿತ ಸ್ವಾಭಿಮಾನ ಹೋರಾಟ ಸಮಿತಿಯ ರಾಜ್ಯ ಸಂಚಾಲಕ ಭಾಸ್ಕರ್ ಪ್ರಸಾದ್ ರಿಗೂ ದುಷ್ಕರ್ಮಿಗಳು ಜೀವ ಬೆದರಿಕೆ ಒಡ್ಡಿದ್ದಾರೆ. ಪ್ರಗತಿಪರ ಚಳುವಳಿಯಲ್ಲಿ ತೊಡಗುವ ನಾಯಕರು ದಾಳಿಗೆ ಗುರಿಯಾಗುತ್ತಿರುವುದು ಆತಂಕಕಾರಿ ಬೆಳವಣಿಯಾಗಿದ್ದು, ಸಾಮಾಜಿಕ ಕಾರ್ಯಕರ್ತರಿಗೆ ಸೂಕ್ತ ಭದ್ರತೆ ಒದಗಿಸಬೇಕೆಂದು ದಲಿತ ದಮನಿತ ಸ್ವಾಭಿಮಾನ ಹೋರಾಟ ಸಮಿತಿ ಇದೇ ಸಂದರ್ಭದಲ್ಲಿ ಒತ್ತಾಯಿಸಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Many organizations across the state are fighting for the justice in assassination of senior journalist Gauri Lankesh. To give more strength to this struggle, Dalit Damanitara Swabhimani Horata Samithi will hold protests on September 12.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ