ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಗುರುವಾರ ಭಾರೀ ಮಳೆ

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಮೇ 13 : ಪಶ್ಚಿಮ ಕರಾವಳಿಯ ವಿವಿಧೆಡೆ ಗುರುವಾರ ಉತ್ತಮ ಮಳೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಹೆಚ್ಚಿನೆಡೆ ಉತ್ತಮ ಮಳೆಯಾಗಿರುವುದರಿಂದ ವಾತಾವರಣ ತಂಪಾಗಿದೆ. ಇನ್ನೆರಡು ದಿನ ಉತ್ತಮ ಮಳೆಯಾದರೆ ನೀರಿನ ಸಮಸ್ಯೆ ಕಡಿಮೆಯಾಗುವ ಸಂಭವ ಇದೆ.

ಮಂಗಳೂರು ನಗರದಲ್ಲಿ ಗುರುವಾರ ರಾತ್ರಿ ಒಂದು ಗಂಟೆ ಸಮಯ ಗಾಳಿ ಸಹಿತ ಭಾರೀ ಮಳೆ ಸುರಿದಿದೆ. ಕೆಲವೆಡೆ ಚರಂಡಿ ಸಮಸ್ಯೆಯಿಂದ ನೀರು ರಸ್ತೆಯಲ್ಲಿಯೇ ಹರಿದು ವಾಹನ ಸಂಚಾರಕ್ಕೆ ತೊಡಕಾಯಿತು. ಬೇಸಿಗೆಯಿಂದ ಬಸವಳಿದಿದ್ದ ಜನತೆಗೆ ಮಳೆ ತಂಪೆರೆದಿದೆ.

Dakshina Kannada receives good rain on Thursday

ಮಂಗಳೂರು, ಪುತ್ತೂರು, ಸುಬ್ರಹ್ಮಣ್ಯದಲ್ಲಿ ಸಂಜೆ ವೇಳೆ ಗುಡುಗು, ಮಿಂಚು, ಗಾಳಿ ಸಹಿತ ಉತ್ತಮ ಮಳೆಯಾಗಿದೆ. ಸುಳ್ಯ ಮದ್ದಡ್ಕ, ವಿಟ್ಲ, ಪುಂಜಾಲಕಟ್ಟೆ, ಬಂಟ್ವಾಳ, ಉಳ್ಳಾಲ, ಗುತ್ತಿಗಾರು, ಮೂಲ್ಕಿ, ಮೂಡಬಿದಿರೆ, ಪರಿಸರದಲ್ಲಿಯೂ ಗುಡುಗು ಸಹಿತ ಅರ್ಧ ಗಂಟೆ ಉತ್ತಮ ಮಳೆ ಸುರಿದಿದೆ. [ವರುಣ ಈ ಬಾರಿ ಬೇಗನೆ ಬರುತ್ತಿದ್ದಾನೆ, ಸ್ವಾಗತ ಕೋರಿರಿ]
Dakshina Kannada receives good rain on Thursday

ಪಂಜದಲ್ಲಿ ಗುಡುಗು ಸಹಿತ ಭರ್ಜರಿ ವರ್ಷಧಾರೆಯಾಗಿದೆ. ಬೆಳ್ತಂಗಡಿ, ಉಜಿರೆ, ಧರ್ಮಸ್ಥಳ ಪರಿಸರದಲ್ಲಿಯೂ ಮಳೆಯಾಗಿರುವ ವರದಿ ಬಂದಿದೆ. ಉಜಿರೆಯ ಭಾರತ್ ಐರನ್ ವರ್ಕ್ ಮುಂಭಾಗದ ಚರಂಡಿ ಮುಚ್ಚಿದ್ದರಿಂದ ರಸ್ತೆ ತುಂಬೆಲ್ಲ ನೀರು ಹರಿದು ಸಾರ್ವಜನಿಕರಿಗೆ ತೊಂದರೆಯಾಯಿತು. ಮುಂಜಾಡೆ, ಆಳದಂಗಡಿಯಲ್ಲಿಯೂ ಭಾರೀ ಮಳೆಯಾಗಿದೆ.

ಪಯಸ್ವಿನಿಯಲ್ಲಿ ನೀರು ಹೆಚ್ಚಳ
ಸುಳ್ಯದಲ್ಲಿ ಕಳೆದೆರಡು ದಿನಗಳಿಂದ ಮಳೆಯಾದ ಹಿನ್ನೆಲೆಯಲ್ಲಿ ಪಯಸ್ವಿನಿ ನದಿಯಲ್ಲಿ ನೀರಿನ ಮಟ್ಟ ಮೂರು ಅಡಿಯಷ್ಟು ಹೆಚ್ಚಿದೆ. ನೇತ್ರಾವತಿ ನದಿಯಲ್ಲಿ ನೀರಿನ ಮಟ್ಟ ಶೂನ್ಯಕ್ಕೆ ಇಳಿದಿದೆ. ಆದರೆ ಈ ಪ್ರದೇಶದಲ್ಲಿ ಉತ್ತಮ ಮಳೆಯಾಗಿರುವುದರಿಂದ ನೀರು ಹರಿಯುವ ಆಶಾಭಾವ ಮೂಡಿಸಿದೆ. [ಅಪಾರ್ಟ್ ಮೆಂಟ್ ನಿವಾಸಿಗಳಿಗೆ 1 ಗಂಟೆ ಮಾತ್ರ ನೀರು]

Dakshina Kannada receives good rain on Thursday

ವಿದ್ಯುತ್ ಕಡಿತ

ಗಾಳಿ ಮಳೆಯೊಂದಿಗೆ ಗುಡುಗಿನ ಆರ್ಭಟವು ಇದ್ದುದರಿಂದ ಬೆಳ್ತಂಗಡಿ, ಮೂಡಬಿದಿರೆ, ಮೂಲ್ಕಿ, ಪಡುಬಿದ್ರಿ, ಪರಿಸರದಲ್ಲಿ ಸ್ವಲ್ಪ ಸಮಯ ವಿದ್ಯುತ್ ಸರಬರಾಜು ಕಡಿತಗೊಂಡಿತು.

Dakshina Kannada receives good rain on Thursday

ಬೆಳ್ತಂಗಡಿಯಲ್ಲಿ ಸಿಡಿಲು ಸಹಿತ ಮಳೆ

ಬೆಳ್ತಂಗಡಿ ತಾಲೂಕಿನ ಬಹುತೇಕ ಕಡೆ ಸಿಡಿಲು ಸಹಿತ ಉತ್ತಮ ಮಳೆಯಾಗಿದೆ. ನಡ ಗ್ರಾಮದ ಕೇಳ್ತಾಜೆ, ಮುಂಡಾಜೆ, ಸಮೀಪದ ಸೀಟ್‌ನಲ್ಲಿ ಮರಗಳು ಧರೆಗುರುಳಿ ಸಂಚಾರದಲ್ಲಿ ವ್ಯತ್ಯಯವಾಗಿದೆ. ಉಜಿರೆ, ನಿಡಿಗಲ್, ಮೊದಲಾದೆಡೆ ಚರಂಡಿ ಅವ್ಯವಸ್ಥೆಯಿಂದಾಗಿ ಸೇತುವೆ, ರಸ್ತೆ ಮೇಲೆ ನೀರು ನಿಂತು ಹೆದ್ದಾರಿಯಲ್ಲಿ ಸಂಚಾರಕ್ಕೆ ಅಡ್ಡಿಯಾಗಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Dakshina Kannada has received good rain on Thursday. Mangaluru, Puttur, Subramanya, vitla, Bantwal, Ulla, Mulki and many places it has rained with thunder and lightening. The rain is expected to continue for few more days.
Please Wait while comments are loading...