ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೇರುನಟ ಡಿಂಡಿಮ ಚಿದಾನಂದ ಕಾಮತ್ ಹೃದಯಘಾತದಿಂದ ನಿಧನ

ಸಾಂಸ್ಕೃತಿಕ ಲೋಕದ ದಿಗ್ಗಜ, ಮೇರುನಟ ಡಿಂಡಿಮ ಚಿದಾನಂದ ಕಾಮತ್ ಕಾಸರಗೋಡು ಹೃದಯಘಾತದಿಂದ ನಿಧನ

|
Google Oneindia Kannada News

ಮಂಗಳೂರು, ಜುಲೈ 24: ಸಾಂಸ್ಕೃತಿಕ ಲೋಕದ ದಿಗ್ಗಜ, ಮೇರುನಟ ಡಿಂಡಿಮ ಚಿದಾನಂದ ಕಾಮತ್ ಕಾಸರಗೋಡು ಇಂದು ಬೆಳಿಗ್ಗೆ ಪುತ್ತೂರಿನಲ್ಲಿ ಹೃದಯಘಾತದಿಂದ ನಿಧನರಾಗಿದ್ದಾರೆ.

ಚಿದಾನಂದ ಕಾಮತ್ ಮೂಲತಃ ಕಾಸರಗೋಡಿನವರು. ಆದರೆ ಪ್ರಸಕ್ತ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನೆಲೆಸಿದ್ದರು. ಸರ್ಕಾರಿ ಉದ್ಯೋಗಿಯಾಗಿದ್ದುಕೊಂಡು ರಂಗಭೂಮಿ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಕ್ರಿಯರಾದ ಇವರು, ಪುತ್ತೂರಿನ ಜನರಿಗೆ ಚಿರಪರಿಚಿತರು. ಸದ್ಯ ಸರ್ಕಾರಿ ಸೇವೆಯಿಂದ ನಿವೃತ್ತರಾಗಿ ವಿಶ್ರಾಂತ ಜೀವನ ನಡೆಸುತ್ತಿದ್ದರು.

Cultural leader Chidanand Kamath Kasargod passes away

'ಬಾರಿಸು ಕನ್ನಡ ಡಿಂಡಿಮವ' ಎಂಬ ಮಕ್ಕಳ ತಂಡ ಕಟ್ಟಿಕೊಂಡು ಸಾಂಸ್ಕೃತಿಕ ಲೋಕವನ್ನು ತೆರೆದಿಟ್ಟವರು. ಬೊಳುವಾರು ಸಾಂಸ್ಕೃತಿಕ ಕಲಾಕೇಂದ್ರದ ಅಧ್ಯಕ್ಷರಾಗಿ, ಅನೇಕ ಕಲಾವಿದರನ್ನು ಕಲಾ ದೇವಿಯ ಮಡಿಲಿಗೆ ಅರ್ಪಿಸಿದ್ದಾರೆ. ಹಿರಿಯ ಸಾಧಕರನ್ನು, ಮಕ್ಕಳ ಪ್ರತಿಭೆಗಳನ್ನು ಕಲಾಕೇಂದ್ರದ ಮೂಲಕ ಗುರುತಿಸಿ ಗೌರವಿಸಿದ್ದಾರೆ. 'ಬಾರಿಸು ಕನ್ನಡ ಡಿಂಡಿಮವ' ಮೂಲಕ ಅವಕಾಶ ವಂಚಿತ ಮಕ್ಕಳಿಗೆ ವೇದಿಕೆ ನೀಡಿ, ಮುನ್ನೆಲೆಗೆ ತಂದಿದ್ದಾರೆ. ಪುತ್ತೂರಿನ ಗ್ರಾಮೀಣ ಭಾಗದಿಂದ ದಿಲ್ಲಿ ಮೆಟ್ರೋ ಪಾಲಿಟನ್ ಸಿಟಿವರೆಗೆ ಒಟ್ಟು 340ಕ್ಕೂ ಅಧಿಕ ಕಾರ್ಯಕ್ರಮ ನೀಡಿದ್ದಾರೆ.

ರಂಗಭೂಮಿ ನಂಟು

1970ರಲ್ಲಿ ಭಕ್ತ ಪ್ರಹ್ಲಾದ ನಾಟಕದಲ್ಲಿ ಬಣ್ಣ ಹಚ್ಚಿದ್ದು ಅವರ ತೆರೆ ಮೇಲಿನ ಮೊದಲ ಅನುಭವ. ಶಾಲಾ ದಿನಗಳಲ್ಲಿ ಹಚ್ಚಿದ ಬಣ್ಣ ಅವರ ಜತೆ ಇನ್ನೂ ಹಾಗೇ ಉಳಿದುಕೊಂಡಿದೆ. ಆಗಲೇ ನಾಟಕ, ಛದ್ಮವೇಷ, ಎನ್ ಸಿಸಿಯಲ್ಲಿ ತೊಡಗಿಸಿಕೊಂಡಿದ್ದರು. ಶಾಲಾ ವಾರ್ಷಿಕೋತ್ಸವದ ನಾಟಕ, ಛದ್ಮವೇಷ ಸ್ಪರ್ಧೆಯಲ್ಲಿ ಕಾಮತರಿಗೆ ಪ್ರಥಮ ಬಹುಮಾನ ಮೀಸಲಾಗಿತ್ತು.

ಕಾಸರಗೋಡಿನಲ್ಲಿ ಹುಟ್ಟಿಕೊಂಡ ಹವ್ಯಾಸಿ ನಾಟಕ ಸಂಸ್ಥೆ ಯುವನಿಕಾ ಕಾಸರಗೋಡು ಇದರ ಸ್ಥಾಪಕ ಸದಸ್ಯರು ಇವರು. ಕೆಮ್ತೂರು ದೊಡ್ಡಣ್ಣ ಶೆಟ್ಟಿ ಅವರ ತುಳುನಾಡು ಸಾಹಿತ್ಯ ಕಲಾ ಮಂಡಳಿಯಲ್ಲೂ ನಟನಾಗಿ ಗುರುತಿಸಿಕೊಂಡಿದ್ದರು. ಇದೇ ಸಂದರ್ಭ ದೇಶಾದ್ಯಂತ ನಾಟಕ ಪ್ರದರ್ಶನ ನೀಡಿದ್ದಾರೆ.

36 ವರ್ಷಗಳ ಹಿಂದೆ ಸಿನಿಮಾರಂಗ ಪ್ರವೇಶ ಮಾಡಿದರು. 1980ರಲ್ಲಿ ಖ್ಯಾತ ನಿರ್ದೇಶಕಿ ಪ್ರೇಮಾ ಕಾರಂತ್ ನಿರ್ದೇಶನದ ರಾಷ್ಟ್ರಪ್ರಶಸ್ತಿ ಪುರಸ್ಕೃತ ಕನ್ನಡ ಸಿನೆಮಾ ಫಣಿಯಮ್ಮದಲ್ಲಿ ಕಠೀ ಭಟ್ಟನಾಗಿ ಅಭಿನಯಿಸಿದ್ದಾರೆ.

1981ರಲ್ಲಿ ಬೆಂಗಳೂರಿನ ಖಾಸಗಿ ಸಂಸ್ಥೆಯಲ್ಲಿ ವೃತ್ತಿ ಜೀವನ ಆರಂಭಿಸಿದ ಕಾಮತರು, ಖ್ಯಾತ ನಾಟಕಕಾರ ದಿವಂಗತ ವಿಶು ಕುಮಾರ್ ಅವರ ತಂಡದಲ್ಲಿ ಸಾಯಂಕಾಲದ ಬಿಡುವಿನ ಅವಧಿಯಲ್ಲಿ ನಾಟಕಗಳಲ್ಲಿ ಪಾಲ್ಗೊಳ್ಳುತ್ತಿದ್ದರು.

1982ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. 1983ರಲ್ಲಿ ಕಾರ್ಮಿಕ ಇಲಾಖೆಯ ಕಚೇರಿಯಲ್ಲಿ ಸರ್ಕಾರಿ ನೌಕರರಾಗಿ ಸೇರಿದರು. ರಾಜ್ಯ ಸರ್ಕಾರಿ ನೌಕರರ ಸಂಘದ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಸರಕಾರಿ ನೌಕರರಿಂದಲೇ ನಾಟಕ ಪ್ರದರ್ಶನ ನೀಡಿದ್ದರು. ಕುಂದಾಪುರ, ಮಂಗಳೂರು ಕಚೇರಿಯಲ್ಲಿ ಸೇವೆ ಸಲ್ಲಿಸಿ, 2003ರಲ್ಲಿ ಪುತ್ತೂರು ಕಚೇರಿಗೆ ವರ್ಗಾವಣೆಯಾದರು. 2004ರಲ್ಲಿ ಸಾಂಸ್ಕೃತಿಕ ಕಲಾಕೇಂದ್ರ ಹುಟ್ಟುಹಾಕಿದ್ದರು.

500ಕ್ಕೂ ಅಧಿಕ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಶೃಂಗೇರಿ ರಮೇಶ್ ಬೇಗಾರ್ ಅವರ ವಿಡಿಯೋ ಚಿತ್ರ ಊರಿನ ಮಾರಿಯಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. 25 ವರ್ಷಗಳ ಹಿಂದೆ ಚಿತ್ರೀಕರಣಗೊಂಡ ಅಂತರಂಗದ ಮೃದಂಗ ಮತ್ತು ಮಡಿಲ ಮಂದಾರ ಕನ್ನಡ ಸಿನಿಮಾದಲ್ಲೂ ಅಭಿನಯಿಸಿದ್ದಾರೆ. ಆದರೆ ಚಿತ್ರ ಬಿಡುಗಡೆಯಾಗದ ಬಗ್ಗೆ ವಿಷಾದ ವ್ಯಕ್ತಪಡಿಸುತ್ತಿದ್ದರು.

ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರಗೊಂಡ ಪ್ರೀತಿ ಎಂಬ ಮಾಯೆ ಧಾರಾವಾಹಿಯಲ್ಲಿ ನಾಯಕಿಯ ತಂದೆಯಾಗಿ ಅಭಿನಯಿಸಿದ್ದಾರೆ. ಗುಗ್ಗು ನನ್ನ ಮಕ್ಳು, ಮಂಗಳೂರು ಹುಡ್ಗಿ ಹುಬ್ಬಳ್ಳಿ ಹುಡ್ಗ, ತುಳುವಿನ ಸುಂದರ್ ರೈ ಮಂದಾರರ 'ನಮ ತೆಲಿಪುಗ', ಬಾಬಣ್ಣ ಬೂಬಣ್ಣ, ಶಿವಧ್ವಜರವರ 'ಗೊತ್ತಾನಗ ಪೊರ್ತಾಂಡ್', ಕಿರುಚಿತ್ರಗಳಾದ 'ಸತ್ಯದ ಕಲ್ಕುಡ- ಕಲ್ಲುರ್ಟಿ', ಸಸ್ಪೆನ್ಸ್ ನಲ್ಲಿ ಅಭಿನಯಿಸಿದ್ದಾರೆ.

ಕೇಟರರ್ಸ್ ತುಳುಚಿತ್ರದಲ್ಲಿ ಇನ್ಸ್ ಪೆಕ್ಟರ್ ಆಗಿ ಕಾಣಿಸಿಕೊಂಡಿದ್ದಾರೆ. ಸಂದೀಪ್ ಪಣಿಯೂರು ಅವರ 'ಗುಡ್ಡೆದ ಭೂತ ತುಳು' ಚಿತ್ರದಲ್ಲೂ ಬಣ್ಣ ಹಚ್ಚಿದ್ದಾರೆ. ಮಂಗಳೂರು ಪರಿಸರದಲ್ಲಿ ಚಿತ್ರೀಕರಣಗೊಂಡ 'ಅಂತು' ಕೊಂಕಣಿ ಚಿತ್ರದಲ್ಲೂ ಅಭಿನಯಿಸಿದ್ದಾರೆ.

ಇಷ್ಟೇ ಅಲ್ಲ, ಕಾರ್ಯಕ್ರಮ ನಿರೂಪಕರಾಗಿ, ಸಾಂಸ್ಕೃತಿಕ ಸಂಘಟಕರಾಗಿಯೂ ಗುರುತಿಸಿಕೊಂಡಿದ್ದರು. ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ, ಸನ್ಮಾನಗಳಿಗೆ ಭಾಜನರಾಗಿದ್ದರು. ಪತ್ನಿ ಅನಿತಾ, ಮಗಳು ನೀತಾ, ಸಾಫ್ಟ್ ವೇರ್ ಇಂಜಿನಿಯರ್ ಆಗಿರುವ ಮಗ ಕಿರಣ್ ರಾಜ್, ಸೊಸೆ ಕಾವ್ಯಾ, ಮೊಮ್ಮಗಳು ಆರ್ಣವಿಯವರನ್ನು ಮೃತರು ಅಗಲಿದ್ದಾರೆ.

English summary
Cultural leader Dindima Chidanand Kamath Kasargod passes away. He was an active theater and cultural field artist who had won the hearts of Dakshina Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X