ಗಲಭೆ ಪೀಡಿತ ಬಂಟ್ವಾಳಕ್ಕೆ ಡಿಜಿಪಿ ದತ್ತಾ, ಕೆಂಪಯ್ಯ ಭೇಟಿ

Posted By:
Subscribe to Oneindia Kannada

ಮಂಗಳೂರು, ಜುಲೈ 12: ಗಲಭೆ ಪೀಡಿತ ಬಂಟ್ವಾಳಕ್ಕೆ ನಾಳೆ (ಗುರುವಾರ) ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಆರ್.ಕೆ. ದತ್ತಾ ಭೇಟಿ ನೀಡಲಿದ್ದಾರೆ. ಹಾಗೂ ಗೃಹ ಸಚಿವರ ಸಲಹೆಗಾರ ಕೆಂಪಯ್ಯ ಸಹ ದತ್ತಾ ಅವರ ಜತೆ ಬಂಟ್ವಾಳಕ್ಕೆ ಹೋಗುವ ಸಾದ್ಯತೆಗಳಿವೆ.

ಬಂಟ್ವಾಳ ನಗರ ಠಾಣೆಗೆ ಆಗಮಿಸಿ ಬಂಟ್ವಾಳ ತಾಲೂಕಿನ ಪ್ರಸ್ತುತ ಕಾನೂನು ಸುವ್ಯವಸ್ಥೆ ಹಾಗೂ ಪರಿಸ್ಥಿತಿ ಬಗ್ಗೆ ಇಲ್ಲಿನ ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚಿಸಿ ಅವಲೋಕನ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.

CRPC section 144 at Bantwal Taluk continues till July 21 midnight

ನಿಷೇಧಾಜ್ಞೆ ಮುಂದುವರಿಕೆ

ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯನ್ನು ಹೊರತುಪಡಿಸಿ ಬಂಟ್ವಾಳ, ಸುಳ್ಯ, ಪುತ್ತೂರು ಮತ್ತು ಬೆಳ್ತಂಗಡಿ ತಾಲೂಕುಗಳಲ್ಲಿ ಸಿಆರ್'ಪಿಸಿ ಸೆಕ್ಷನ್ 144 ಅಡಿಯಲ್ಲಿ ಜಾರಿಯಲ್ಲಿರುವ ನಿಷೇಧಾಜ್ಞೆಯನ್ನು ಜುಲೈ 21ರ ಮಧ್ಯರಾತ್ರಿ 12 ಗಂಟೆಯವರೆಗೆ ವಿಸ್ತರಿಸಲಾಗಿದೆ. ನಿಷೇಧಾಜ್ಞೆ ವಿಸ್ತರಿಸಿ ಜಿಲ್ಲಾಧಿಕಾರಿ ಡಾ. ಕೆ.ಜಿ.ಜಗದೀಶ್ ಆದೇಶ ಹೊರಡಿಸಿದ್ದಾರೆ.

ಸಾರ್ವಜನಿಕವಾಗಿ ಕೋಮು ಸೌಹಾರ್ದಕ್ಕೆ ದಕ್ಕೆ ಬರುವಂತಹ ಯಾವುದೇ ಕೂಗನ್ನು ಉಚ್ಛರಿಸುವುದು ಅಥವಾ ಹಾಡು ಹಾಡುವುದು, ಚೇಷ್ಠೆ ಮಾಡುವುದು, ಸಂಜ್ಞೆಗಳನ್ನು ಉಪಯೋಗಿಸುವುದು ಮತ್ತು ಚಿತ್ರಗಳ ಮೂಲಕ ಪ್ರದರ್ಶನ ಮಾಡುವುದು, ಪತ್ರಿಕೆಗಳ ಪ್ರಕಟಣೆ ಕೊಡುವುದು ಅಥವಾ ಇತರ ಯಾವುದೇ ವಸ್ತುಗಳ ಪ್ರದರ್ಶನ, ಭಿತ್ತಿಪತ್ರಗಳನ್ನು ಅಂಟಿಸುವುದು, ಸಭ್ಯತನ, ಸದಾಚಾರ, ಸಾರ್ವಜನಿಕ ಭದ್ರತೆ ಶಿಥಿಲಗೊಳ್ಳುವಂತಹ ಯಾವುದೇ ರೀತಿಯ ಅಪರಾಧ ಎಸಗುವ ಮತ್ತು ಪ್ರೇರೇಪಿಸುವ ಕ್ರಮವನ್ನು ನಿಷೇಧಿಸಲಾಗಿದೆ ಎಂದು ಈ ಸೂಚನೆಯಲ್ಲಿ ತಿಳಿಸಲಾಗಿದೆ.

ಯಾವುದೇ ಆಯುಧ, ಕುಡುಗೋಲು, ಖಡ್ಗ, ಭರ್ಚಿ, ಗದೆ, ಕೋಲು, ಚೂರಿ, ದೊಣ್ಣೆ, ಲಾಠಿ ಅಥವಾ ದೈಹಿಕ ದಂಡನೆಗೆ ಕಾರಣವಾಗುವ ಅಥವಾ ಪೂರಕವಾಗುವ ಇನ್ಯಾವುದೇ ವಸ್ತುಗಳನ್ನು ಹೊಂದುವುದನ್ನೂ ನಿಷೇಧಿಸಿದೆ. ಯಾವುದೇ ರೀತಿಯ ಸಾರ್ವಜನಿಕ ಮೆರವಣಿಗೆ, ಸಾರ್ವಜನಿಕ ಸಭೆ ಸಮಾರಂಭಗಳನ್ನು ನಡೆಸಬಾರದು. ಯಾವುದೇ ಕ್ಷಾರಕ ಅಥವಾ ಸ್ಫೋಟಕ ವಸ್ತುಗಳನ್ನು ಹೊಂದುವುದನ್ನು ನಿಷೇಧಿಸಿದೆ. ಕಲ್ಲುಗಳನ್ನು ಒಟ್ಟುಗೂಡಿಸುವುದು, ಆಯುಧಗಳನ್ನು ಉಪಯೋಗಿಸುವುದನ್ನು ನಿಷೇಧಿಸಲಾಗಿದೆ.

ಈ ಅವಧಿಯಲ್ಲಿ ಸಾರ್ವಜನಿಕರು ಐದು ಅಥವಾ ಅದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕ ರಸ್ತೆ, ಬೀದಿ, ಓಣಿ, ಕೇರಿಗಳಲ್ಲಿ, ಸಾರ್ವಜನಿಕ ಸ್ಥಳ, ಸಾರ್ವಜನಿಕ ಕಟ್ಟಡ ಮತ್ತು ಸರಕಾರಿ ಕಚೇರಿ ಸುತ್ತಮುತ್ತ ಗುಂಪು ಸೇರುವುದು ಅಥವಾ ಗುಂಪು ಕೂಡುವುದನ್ನು ನಿಷೇಧಿಸಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
CRPC section 144 to extend till July 21 midnight at Bantwal, Kalladka, Suliya, Belthangady and Puttur, except the city commissionerate limts . The extension order is imposed by the Mangaluru DC Dr. K G Jagadish.
Please Wait while comments are loading...