ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಜೆಪಿಗೆ ಕಗ್ಗಂಟಾದ ದಕ್ಷಿಣ ಕನ್ನಡ ಜಿಲ್ಲೆಯ ಕಮಲ ಕಲಿಗಳ ಆಯ್ಕೆ

|
Google Oneindia Kannada News

ಮಂಗಳೂರು, ಏಪ್ರಿಲ್ 10: ರಾಜ್ಯ ವಿಧಾನ ಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳು ಬಿರುಸಿನ ಚಟುವಟಿಕೆ ಆರಂಭಿಸಿವೆ. ರಾಜ್ಯದ ಎಲ್ಲಾ 224 ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆಗೆ ಗಂಭೀರ ಚಿಂತನ ಮಂಥನ ನಡೆಯುತ್ತಿದೆ.

ಬಿಜೆಪಿ ಕೇಂದ್ರ ಸಮಿತಿ ರವಿವಾರ ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸಲಿರುವ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಆದರೆ ಬಿಜೆಪಿಯ ಭದ್ರಕೋಟೆಯಂತಿದ್ದ ದಕ್ಷಿಣ ಕನ್ನಡ ಜಿಲ್ಲೆಯ ವಿಧಾನ ಸಭಾ ಕ್ಷೇತ್ರಗಳಲ್ಲಿ ಕಮಲ ಕಲಿಗಳ ಆಯ್ಕೆ ಕಂಗ್ಗಾಂಟಾಗಿಯೇ ಉಳಿದಿದೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಬಿಜೆಪಿ ಅಭ್ಯರ್ಥಿಗಳ ಮೊದಲ ಅಧಿಕೃತ ಪಟ್ಟಿ ಪ್ರಕಟ

ಬಿಜೆಪಿ ಬಿಡುಗಡೆ ಮಾಡಿದ ಮೊದಲ ಪಟ್ಟಿಯಲ್ಲಿ ಸುಳ್ಯದ ಹಾಲಿ ಶಾಸಕ ಅಂಗಾರ ಅವರು ಮಾತ್ರ ಸ್ಥಾನ ಪಡೆದಿದ್ದಾರೆ. ಆದರೆ ಜಿಲ್ಲೆಯ ಪ್ರಮುಖ ಕ್ಷೇತ್ರಗಳಾಗಿರುವ ಬೆಳ್ತಂಗಡಿ, ಪುತ್ತೂರು, ಬಂಟ್ವಾಳ, ಮುಲ್ಕಿ- ಮೂಡಬಿದ್ರೆ , ಮಂಗಳೂರು ದಕ್ಷಿಣ, ಮಂಗಳೂರು ಉತ್ತರ ಮತ್ತು ಮಂಗಳೂರು ವಿಧಾನ ಸಭಾ ಕ್ಷೇತ್ರಗಳಿಗೆ ಇನ್ನೂ ಕಮಲ ಹಿಡಿಯುವ ಅಭ್ಯರ್ಥಿಗಳ ಹೆಸರುಗಳು ರಹಸ್ಯವಾಗಿಯೇ ಉಳಿದಿವೆ.

ಬೆಳ್ತಂಗಡಿಯಲ್ಲಿ ರಂಜನ್/ಪೂಂಜಾ?

ಬೆಳ್ತಂಗಡಿಯಲ್ಲಿ ರಂಜನ್/ಪೂಂಜಾ?

ಜಿಲ್ಲೆಯ 8 ವಿಧಾನ ಸಭಾ ಕ್ಷೇತ್ರಗಳ ಪೈಕಿ ಸುಳ್ಯ ಒಂದನ್ನು ಹೊರತು ಪಡಿಸಿದರೆ ಉಳಿದ ಎಲ್ಲಾ ಕ್ಷೇತ್ರಗಳಲ್ಲಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ಉದ್ದವಿದೆ. ಟಿಕೆಟ್ ಆಕಾಂಕ್ಷಿಗಳ ನಡುವೆ ಭಾರೀ ಪೈಪೋಟಿಯೇ ಆರಂಭವಾಗಿದ್ದು ಎಲ್ಲರೂ ದೆಹಲಿ ಮತ್ತು ಬೆಂಗಳೂರಿನಲ್ಲೇ ಮೊಕ್ಕಾಂ ಹೂಡಿದ್ದಾರೆ ಎಂದು ಹೇಳಲಾಗಿದೆ.

ಒಂದು ಮಾಹಿತಿಯ ಪ್ರಕಾರ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದಿಂದ ಕಳೆದ ಭಾರಿ ಚುನಾವಣೆಯಲ್ಲಿ ಸ್ಪರ್ಧಿಸಿ ಕಾಂಗ್ರೆಸ್ ಅಭ್ಯರ್ಥಿ ವಸಂತ ಬಂಗೇರಾ ಎದುರು ಸೋತ ರಂಜನ್ ಗೌಡ ಟಿಕೆಟಿಗಾಗಿ ದೆಹಲಿಯಲ್ಲಿ ಪ್ರಯತ್ನ ಮುಂದುವರೆಸಿದ್ದಾರೆ. ಈ ನಡುವೆ ಬಿಜೆಪಿ ಯುವ ಮೋರ್ಚಾದ ನಾಯಕ ಹರೀಶ್ ಪೂಂಜಾ ಕಾರ್ಯಕರ್ತರ ಮೂಲಕ ಹೈಕಮಾಂಡ್ ಮೇಲೆ ಒತ್ತಡ ಹೇರಿ ಭಾರೀ ಲಾಬಿ ನಡೆಸಿದ್ದಾರೆ.

ಇವೆಲ್ಲದರ ನಡುವೆ ಮಾಜಿ ಶಾಸಕ ಪ್ರಭಾಕರ ಬಂಗೇರ ಮತ್ತು ಮಾಜಿ ಜಿಲ್ಲಾಧ್ಯಕ್ಷ ಪ್ರತಾಪ್ ಸಿಂಹ ನಾಯಕ್ ಕೂಡ ಟಿಕೆಟ್ ಮೇಲೆ ಕಣ್ಣಿಟ್ಟಿದ್ದಾರೆ.

ಮಂಗಳೂರು ಉತ್ತರದಲ್ಲಿ ಪಾಲೇಮಾರ್/ ಭರತ್ ಶೆಟ್ಟಿ?

ಮಂಗಳೂರು ಉತ್ತರದಲ್ಲಿ ಪಾಲೇಮಾರ್/ ಭರತ್ ಶೆಟ್ಟಿ?

ಅತ್ಯಂತ ಕುತೂಹಲ ಕೆರಳಿಸಿರುವ ಮಂಗಳೂರು ಉತ್ತರ, ದಕ್ಷಿಣ ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳ ಆಯ್ಕೆಗೆ ಒಮ್ಮತದ ತೀರ್ಮಾನಕ್ಕೆ ಬರಲಾಗದ ಕಾರಣ ಅದನ್ನು ಪೆಂಡಿಂಗ್ ಇಡಲಾಗಿದೆ.

ಮಂಗಳೂರು ಉತ್ತರ ಕ್ಷೇತ್ರದಲ್ಲಿ ಕಳೆದ ಬಾರಿ ಕಾಂಗ್ರೆಸ್ ನ ಮೊಯ್ದಿನ್ ಬಾವಾ ಎದುರು ಸೋತ ಮಾಜಿ ಸಚಿವ ಕೃಷ್ಣ ಜೆ ಪಾಲೇಮಾರ್ ಈ ಬಾರಿಯೂ ಟಿಕೆಟ್ ಅಕಾಂಕ್ಷಿಯಾಗಿದ್ದಾರೆ. ಈ ಬಾರಿ ಅವರಿಗೆ ಸ್ಪರ್ಧಿಸಲು ಟಿಕೆಟ್ ದೊರಕುವುದು ಖಚಿತ ಎಂದು ಹೇಳಲಾಗುತ್ತಿತ್ತು . ಆದರೆ ಬಿಜೆಪಿ ಯುವ ಮುಖಂಡ ಡಾ. ಭರತ್ ಶೆಟ್ಟಿ ಪಾಲೇಮಾರ್ ಅವರಿಗೆ ಭಾರೀ ಪೈಪೋಟಿ ಒಡ್ಡಿದ್ದಾರೆ. ಈ ನಡುವೆ ರಾಮಚಂದ್ರ ಬೈಕಂಪಾಡಿ ಸೇರಿದಂತೆ ಇನ್ನಿತರರು ಟಕೆಟ್ ಅಕಾಂಕ್ಷಿಗಳು ಸ್ಪರ್ಧೆಯಲ್ಲಿರುವುದರಿಂದ ಅಭ್ಯರ್ಥಿಯ ಆಯ್ಕೆ ಕಗ್ಗಂಟಾಗಿದೆ.

ದಕ್ಷಿಣಕ್ಕೆ ವೇದವ್ಯಾಸ್/ಬದ್ರಿನಾಥ್?

ದಕ್ಷಿಣಕ್ಕೆ ವೇದವ್ಯಾಸ್/ಬದ್ರಿನಾಥ್?

ಇನ್ನೂ ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ದಿನದಿಂದ ದಿನಕ್ಕೆ ಉದ್ದವಾಗುತ್ತಲೇ ಇದೆ. ಜಿಎಸ್ ಬಿ ಸಮುದಾಯವನ್ನು ಪ್ರತಿನಿಧಿಸುತ್ತಿರುವ ಬದ್ರಿನಾಥ್ ಕಾಮತ್, ಹಾಗೂ ವೇದವ್ಯಾಸ್ ಕಾಮತ್ ನಡುವೆ ಟಿಕೆಟಿಗಾಗಿ ಜಿದ್ದಾಜಿದ್ದಿಯ ಸ್ಪರ್ದೆ ಏರ್ಪಟ್ಟಿದ್ದೆ. ಈ ನಡುವೆ ಬಿಜೆಪಿಯ ಯುವ ಮುಖಂಡ ಕ್ಯಾಪ್ಟನ್ ಬ್ರಿಜೇಶ್ ಚೌಟ, ಮತ್ತಿತರರ ಹೆಸರುಗಳು ಪ್ರಮುಖವಾಗಿ ಕೇಳಿ ಬರುತ್ತಿರುವುದು ಬಿಜೆಪಿ ಹೈಕಮಾಂಡ್ ಗೆ ತಲೆನೋವಾಗಿ ಪರಿಣಮಿಸಿದೆ.

ಮಂಗಳೂರಿಗೆ ಸತೀಶ್ ಕುಂಪಲ/ ಸಂತೋಷ್ ಕುಮಾರ್ ರೈ/ ರಹೀಮ್ ಉಚ್ಚಿಲ್

ಮಂಗಳೂರಿಗೆ ಸತೀಶ್ ಕುಂಪಲ/ ಸಂತೋಷ್ ಕುಮಾರ್ ರೈ/ ರಹೀಮ್ ಉಚ್ಚಿಲ್

ಮಂಗಳೂರು ವಿಧಾನಸಭಾ ಕ್ಷೇತ್ರದ ಮೇಲೂ ಈ ಬಾರಿ ಬಿಜೆಪಿ ಕಣ್ಣಿಟಿದೆ. ಕಾಂಗ್ರೆಸ್ಸಿನ ಯು.ಟಿ ಖಾದರ್ ಕೈಯಲ್ಲಿರುವ ಈ ಕ್ಷೇತ್ರವನ್ನು ಕಸಿದುಕೊಳ್ಳಲು ಶತಾಯ ಗತಾಯ ಪ್ರಯತ್ನ ನಡೆಸಿದೆ. ಈ ಕ್ಷೇತ್ರದಲ್ಲಿ ಜೆಡಿಎಸ್ ಮಾಜಿ ಮೇಯರ್ ಆಶ್ರಫ್ ಅವರನ್ನು ಕಣಕ್ಕಿಳಿಸಿರುವ ಹಿನ್ನೆಲೆಯಲ್ಲಿ ಬಿಜೆಪಿ ಗೆಲ್ಲುವ ತಂತ್ರಗಾರಿಕೆ ಹೆಣೆಯಲಾರಂಭಿಸಿದೆ. ಅದರೆ ಈ ಕ್ಷೇತ್ರದಲ್ಲಿ ಗೆಲ್ಲುವ ಕುದುರೆಯ ಹುಡುಕಾಟದಲ್ಲಿ ಬಿಜೆಪಿಯ ನಾಯಕರಿದ್ದಾರೆ.

ಸದ್ಯ ಮೂವರು ಆಕಾಂಕ್ಷಿಗಳು ಟಿಕೆಟ್ ಗಾಗಿ ಪೈಪೋಟಿ ನಡೆಸುತ್ತಿದ್ದಾರೆ. ಈ ಪೈಕಿ ಸತೀಶ್ ಕುಂಪಲ, ಸಂತೋಷ್ ಕುಮಾರ್ ರೈ ಬೋಳಿಯಾರ್ ಅಥವಾ ರಹೀಮ್ ಉಚ್ಚಿಲ್ ಗೆ ಟಿಕೆಟ್ ಒಲಿಯಲಿದೆ.

ಪುತ್ತೂರಿನಲ್ಲಿ ಮಠಂದೂರು/ಅಶೋಕ್ ರೈ/ಅರುಣ್ ಪುತ್ತಿಲ

ಪುತ್ತೂರಿನಲ್ಲಿ ಮಠಂದೂರು/ಅಶೋಕ್ ರೈ/ಅರುಣ್ ಪುತ್ತಿಲ

ಇನ್ನು ಪುತ್ತೂರು ವಿಧಾನ ಸಭಾ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ಕೂಡ ಹನುಮಂತನ ಬಾಲದಂತೆ ಬೆಳೆಯುತ್ತಿದೆ. ಒಂದೆಡೆ ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು ಇನ್ನೊಂದೆಡೆ ಅಶೋಕ್ ರೈ ಭಾರೀ ಲಾಬಿ ನಡೆಸುತ್ತಿದ್ದಾರೆ. ಈ ನಡುವೆ ಸಂಘ ಪರಿವಾರದ ಮುಖಂಡ ಅರುಣ್ ಪುತ್ತಿಲ ಅವರಿಗೆ ಟಿಕೆಟ್ ನೀಡಬೇಕೆಂದು ಒತ್ತಾಯ ಹೇರಲಾಗುತ್ತಿದೆ.

ಪುತ್ತೂರು ಕ್ಷೇತ್ರದಿಂದ ಕಾಂಗ್ರೆಸ್ ನಿಂದ ಕಣಕ್ಕಿಳಿಯಲಿರುವ ಶಾಸಕಿ ಶಕುಂತಲಾ ಶೆಟ್ಟಿ ಅವರನ್ನು ಎದುರಿಸಲಿರುವ ಬಿಜೆಪಿಯ ಕಲಿ ಯಾರು ಎಂಬುದೇ ಇನ್ನು ನಿರ್ಧಾರವಾಗಿಲ್ಲ.

ಮೂಡಬಿದಿರೆಗೆ ಉಮಾನಾಥ್ ಕೋಟ್ಯಾನ್/ ಜಗದೀಶ್ ಅಧಿಕಾರಿ

ಮೂಡಬಿದಿರೆಗೆ ಉಮಾನಾಥ್ ಕೋಟ್ಯಾನ್/ ಜಗದೀಶ್ ಅಧಿಕಾರಿ

ಮುಲ್ಕಿ- ಮೂಡಬಿದಿರೆ ಕ್ಷೇತ್ರದಲ್ಲಿಯೂ ಪರಿಸ್ಥಿತಿ ಸರಿ ಇಲ್ಲ. ಇಲ್ಲಿ ಕೂಡ ಅಭ್ಯರ್ಥಿಗಳ ಆಯ್ಕೆ ಬಿಜೆಪಿಗೆ ಕಗ್ಗಂಟಾಗಿದೆ. ಕಾಂಗ್ರೆಸ್ ಈ ಕ್ಷೇತ್ರದಿಂದ ಶಾಸಕ ಅಭಯಚಂದ್ರ ಜೈನ್ ಅಥವಾ ಐವನ್ ಡಿಸೋಜಾ ಅವರನ್ನು ಕಣಕ್ಕಿಳಿಸಲಿದೆ ಎಂದು ಅಂದಾಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಉಮಾನಾಥ್ ಕೋಟ್ಯಾನ್ ಅಥವಾ ಜಗದೀಶ್ ಅಧಿಕಾರಿ ಅವರನ್ನು ಕಣಕ್ಕಿಳಿಸಲು ತೀರ್ಮಾನಿಸಿತ್ತು ಆದರೆ ಈ ನಡುವೆ ಇನ್ನೆರಡು ಹೆಸರುಗಳು ಆಕಾಂಕ್ಷಿಗಳ ಪಟ್ಟಿ ಸೇರಿರುವ ಕಾರಣ ಅಭ್ಯರ್ಥಿಯ ಆಯ್ಕೆ ಕಗ್ಗಂಟಾಗಿ ಉಳಿದಿದೆ.

ಬಂಟ್ವಾಳದಲ್ಲಿ ರಾಜೇಶ್ ನಾಯಕ್

ಬಂಟ್ವಾಳದಲ್ಲಿ ರಾಜೇಶ್ ನಾಯಕ್

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತ್ಯಂತ ಕುತೂಹಲ ಕೆರಳಿಸಿರುವ ಕ್ಷೇತ್ರ ಬಂಟ್ವಾಳ . ಈ ಕ್ಷೇತ್ರದಿಂದ ಕಣಕ್ಕಿಳಿಯಲಿರುವ ಸಚಿವ ರಮಾನಾಥ್ ರೈ ಅವರನ್ನು ಮಣಿಸಲೇಬೇಕೆಂಬ ಸಂಕಲ್ಪ ತೊಟ್ಟಿರುವ ಬಿಜೆಪಿ ಸಮರ್ಥ ಅಭ್ಯರ್ಥಿಯನ್ನು ಕಣಕ್ಕಿಳಿಸಲು ತೀರ್ಮಾನಿಸಿದೆ. ಈ ಹಿಂದೆ ಬಿಜೆಪಿ ಮುಖಂಡ ರಾಜೇಶ್ ನಾಯಕ್ ಉಳೆಪ್ಪಾಡಿ ಅವರನ್ನು ಕಣಕ್ಕಿಳಿಸಲಿದೆ ಎಂದು ಹೇಳಲಾಗುತ್ತಿತ್ತು. ಆದರೆ ಮೊದಲ ಪಟ್ಟಿಯಲ್ಲಿ ನಾಯಕ್ ಅವರ ಹೆಸರಿಲ್ಲದಿರುವುದರ ಹಿಂದೆ ಬಿಜೆಪಿ ವರಿಷ್ಠರ ತಂತ್ರಗಾರಿಕೆ ಇದೆ ಎಂದು ಹೇಳಲಾಗುತ್ತಿದೆ. ಚಿಂತನ ಮಂಥನ ಬಳಕ ರಮಾನಾಥ್ ರೈಗೆ ಟಕ್ಕರ್ ನೀಡುವ ಅಭ್ಯರ್ಥಿಯನ್ನು ಕಣಕ್ಕಿಳಿಸಲಿದೆ ಎಂದು ಹೇಳಲಾಗುತ್ತಿದೆ.

ಒಟ್ಟಾರೆಯಾಗಿ ಈ ಹಿಂದೆ ಕಾಂಗ್ರೆಸ್ಸಿನಲ್ಲಿದ್ದ ಟಿಕೆಟ್ ನ ಗೊಂದಲ ಈ ಬಾರಿ ಶಿಸ್ತಿನ ಪಕ್ಷವಾದ ಬಿಜೆಪಿಯಲ್ಲೂ ಆರಂಭವಾಗಿರುವುದು ಬಿಜೆಪಿ ಹೈಕಮಾಂಡಿಗೆ ತಲೆ ನೋವಾಗಿರುವುದು ಮಾತ್ರ ಸತ್ಯ. ಆದರೆ ಇದು ಬಿಜೆಪಿಯ ಚಾಣಾಕ್ಯನ ತಂತ್ರಗಾರಿಕೆ ಇರಬಹುದೇ? ಎಂಬ ಅನುಮಾನವನ್ನು ತಳ್ಳಿಹಾಕುವಂತಿಲ್ಲ.

English summary
BJP announced first list of candidates for upcoming state assembly election. Out of 8 constituency only Sullia candidate have been announced in DK district. It is said that BJP facing tough situation to announce candidates for other 7 constituency .
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X