ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವೀರಪ್ಪ ಮೊಯ್ಲಿ ಸಂಬಂಧಿ ಮಂಗಳೂರಿನ ನೂತನ ಮೇಯರ್

|
Google Oneindia Kannada News

ಮಂಗಳೂರು, ಮಾರ್ಚ್ 8: ಮಂಗಳೂರು ಮಹಾನಗರ ಪಾಲಿಕೆಯ ನೂತನ ಮೇಯರ್ ಆಗಿ ವೀರಪ್ಪ ಮೊಯ್ಲಿ ಸಂಬಂಧಿ ಭಾಸ್ಕರ್ ಮೊಯ್ಲಿ ಆಯ್ಕೆಯಾಗಿದ್ದಾರೆ. ಉಪಮೇಯರ್ ಆಗಿ ಮಹಮ್ಮದ್ ಕುಂಜತ್ತಬೈಲ್ ಅವರನ್ನು ಆಯ್ಕೆ ಮಾಡಲಾಗಿದೆ.

ಮಂಗಳೂರು ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ಇಂದು ಮೇಯರ್ ಹಾಗೂ ಉಪಮೇಯರ್ ಚುನಾವಣಾ ಪ್ರಕ್ರಿಯೆ ನಡೆಯಿತು . ಪ್ರಾದೇಶಿಕ ಆಯುಕ್ತರಾದ ಶಿವಯೋಗಿ ಕಳಸದ್ ಅವರ ನೇತೃತ್ವದಲ್ಲಿ ನಡೆದ ಚುನಾವಣೆಯಲ್ಲಿ ಮೇಯರ್ ಆಗಿ ಭಾಸ್ಕರ್ ಮೊಯ್ಲಿ ಹಾಗು ಉಪಮೇಯರ್ ಆಗಿ ಮಹಮ್ಮದ್ ಕುಂಜತ್ತಬೈಲ್ ಅವರನ್ನು ಆಯ್ಕೆ ಮಾಡಲಾಯಿತು.

ಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್ ನ ಭಾಸ್ಕರ್ ಮೊಯ್ಲಿ ಅವರಿಗೆ 37 ಮತಗಳು ದೊರೆತರೆ ಬಿಜೆಪಿಯ ಸುರೇಂದ್ರ ಅವರಿಗೆ 19 ಮತಗಳು ದೊರೆತವು. ಉಪಮೇಯರ್ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಮಹಮ್ಮದ್ ಕುಂಜತ್ತಬೈಲ್ ಅವರು 37 ಮತಗಳನ್ನು ಪಡೆದರೆ ಬಿಜೆಪಿಯ ಮೀರಾ ಕರ್ಕೇರಾ 19 ಮತ ಪಡೆದರು.

Bhaskar Moily elected as a new mayor of Mangaluru

ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್‌ ಆಡಳಿತದ ಪ್ರಸ್ತುತ ಸಾಲಿನ 5ನೇ ಹಾಗೂ ಕೊನೆಯ ಅವಧಿ ಇದಾಗಿದೆ. ಈ ಹಿನ್ನೆಲೆಯಲ್ಲಿ ಮೇಯರ್ ಪಟ್ಟಕ್ಕಾಗಿ ಕಾಂಗ್ರೆಸ್‌ ನಲ್ಲಿ ಲಾಬಿ ಜೋರಾಗಿತ್ತು.

ಮಂಗಳೂರು ಮಹಾನಗರಪಾಲಿಕೆಯ 60 ಸ್ಥಾನಗಳ ಪೈಕಿ 35 ಸ್ಥಾನ ಕಾಂಗ್ರೆಸ್ ಕೈಯಲ್ಲಿದೆ. ಉಳಿದಂತೆ ಬಿಜೆಪಿ 20, ಜೆಡಿಎಸ್ 2, ಎಸ್.ಡಿ.ಪಿ.ಐ 1, ಸಿಪಿಐಎಂ 1 ಹಾಗೂ ಓರ್ವ ಪಕ್ಷೇತರ ಸದಸ್ಯರಿದ್ದಾರೆ. ಇಂದು ಮುಂಜಾನೆ ನಡೆದ ಕಾಂಗ್ರೆಸ್ ಕಾರ್ಪೊರೇಟರ್ ಗಳ ಸಭೆಯಲ್ಲಿ ಪಕ್ಷದ ವರಿಷ್ಠರು ಕಾಂಗ್ರೆಸ್‌ ಅಭ್ಯರ್ಥಿಗಳಾಗಿ ಭಾಸ್ಕರ್ ಮೊಯ್ಲಿ ಹಾಗು ಮಹಮ್ಮದ್ ಕುಂಜತ್ತಬೈಲ್ ಅವರನ್ನು ಘೋಷಿಸಿದ್ದರು.

ಈ ಬಾರಿ ಮೇಯರ್ ಸ್ಥಾನಕ್ಕೆ ಸಾಮಾನ್ಯ ವರ್ಗದವರಿಗೆ ಮೀಸಲಾಗಿರುವುದರಿಂದ ಮುಸ್ಲಿಂ ಕಾರ್ಪೋರೇಟರ್ ಗೆ ಮೇಯರ್ ಸ್ಥಾನ ನೀಡಬೇಕೆಂದು ಒತ್ತಡ ಹೆಚ್ಚಾಗಿತ್ತು. ಕಳೆದ ಬಾರಿ ಮೇಯರ್ ಆಯ್ಕೆಯಾದಾಗ ಮುಸ್ಲಿಂ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಿಲ್ಲದೆ ಇರುವುದರಿಂದ ಈ ಬಾರಿ ಮುಸ್ಲಿಂ ಸದಸ್ಯರಿಗೆ ಸಿಗುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗಿತ್ತು. ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿರುವ ಹಿನ್ನಲೆಯಲ್ಲಿಯೂ ಮುಸ್ಲಿಂ ಅಭ್ಯರ್ಥಿಯೇ ಅಂತಿಮ ಅವಧಿಗೆ ಮೇಯರ್ ಆಗಬೇಕೆಂಬ ಕೂಗು ಕೂಡ ಬಲವಾಗಿತ್ತು.

Bhaskar Moily elected as a new mayor of Mangaluru

ಮನಪಾ ಸದಸ್ಯ, ಮಿಲಾಗ್ರಿಸ್ ವಾರ್ಡ್‌ನ ಅಬ್ದುಲ್ ರವೂಫ್ ಮತ್ತು ಕುಂಜತ್ತಬೈಲ್‌ ವಾರ್ಡ್‌ನ ಮುಹಮ್ಮದ್ ಮೇಯರ್ ಸ್ಥಾನದ ಆಕಾಂಕ್ಷಿಗಳಾಗಿದ್ದರು. ಆದರೆ ಅನಿರೀಕ್ಷಿತ ಬೆಳವಣಿಗೆಯಲ್ಲಿ ಭಾಸ್ಕರ್ ಮೊಯ್ಲಿ ಮೇಯರ್ ಸ್ಥಾನಕ್ಕೆ ಹಾಗೂ ಉಪಮೇಯರ್ ಸ್ಥಾನಕ್ಕೆ ಮಹಮ್ಮದ್ ಕುಂಜತ್ತಬೈಲ್ ಹೆಸರನ್ನು ಅಂತಿಮಗೊಳಿಸಲಾಯಿತು.

ನೂತನ ಮೇಯರ್ ಆಗಿ ಆಯ್ಕೆಯಾಗಿರುವ ಕಾಂಗ್ರೆಸ್ ನ ಸದಸ್ಯ ಭಾಸ್ಕರ ಮೊಯ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ವೀರಪ್ಪ ಮೊಯ್ಲಿಯವರ ಸಂಬಂಧಿಯಾಗಿದ್ದು ಈ ಹಿಂದೆ ಕೂಡ ಮೇಯರ್ ಸ್ಥಾನಕ್ಕೆ ಆಕಾಂಕ್ಷಿಯಾಗಿದ್ದರು. ಕೊನೆಯ ಅವಧಿಯಲ್ಲಾದರೂ ಮೇಯರ್ ಸ್ಥಾನ ತಮಗೆ ದೊರಕಲೇಬೇಕೆಂದು ಭಾರೀ ಪ್ರಯತ್ನ ಪಟ್ಟಿದ್ದರು. ವೀರಪ್ಪ ಮೊಯ್ಲಿಯವರ ಪ್ರಭಾವದಿಂದ ಭಾಸ್ಕರ ಮೊಯ್ಲಿಯವರು ಮೇಯರ್ ಪಟ್ಟ ಗಿಟ್ಟಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ.

English summary
The election to choose a new Mangaluru Mayor and Deputy Mayor conducted today. Bhaskar Moily of congress elected as new mayor of Mangaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X