ಎಎಪಿ ಸೇರಿದ ಬಿಜೆಪಿಯ ಮಾಜಿ ಶಾಸಕ ಬಾಕಿಲ ಹುಕ್ರಪ್ಪ

Posted By:
Subscribe to Oneindia Kannada

ಮಂಗಳೂರು, ಜುಲೈ 09 : ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಮಾಜಿ ಶಾಸಕ, ದಲಿತ ವರ್ಗದ ನಾಯಕ ಬಾಕಿಲ ಹುಕ್ರಪ್ಪರವರು ತಮ್ಮ ಅನುಯಾಯಿಗಳು ಹಾಗೂ ಇತರ ಸಮಾನ ಮನಸ್ಕರೊಡಗೂಡಿ ಶನಿವಾರ, ಜುಲೈ 9ರಂದು ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಗೊಂಡರು.

ಮಂಗಳೂರಿನ ವೆಲೆನ್ಸಿಯಾ ಬಳಿಯ ಫಾತಿಮಾ ರಿಟ್ರೀಟ್ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ, ಆಮ್ ಆದ್ಮಿ ಪಕ್ಷದ ರಾಜ್ಯ ಸಂಚಾಲಕರಾದ ಪೃಥ್ವಿ ರೆಡ್ಡಿಯವರು, ಪಕ್ಷದ ಮುಖಂಡರಾದ ಬಾಬು ಮ್ಯಾಥ್ಯು, ರಾಜ್ಯ ಸಹ ಸಂಚಾಲಕಿ ಹಾಗೂ ದಕ್ಷಿಣ ಕನ್ನಡ, ಉಡುಪಿ ಜಿಲ್ಲಾ ಉಸ್ತುವಾರಿಯಾದ ಶಾಂತಲಾ ದಾಮ್ಲೆ ಹಾಗೂ ನೂರಾರು ಕಾರ್ಯಕರ್ತರ ಸಮ್ಮುಖದಲ್ಲಿ ಬಾಕಿಲ ಹುಕ್ರಪ್ಪನವರನ್ನು ಪಕ್ಷಕ್ಕೆ ಬರಮಾಡಿಕೊಂಡರು. [ಎಸಿಬಿ ರದ್ದುಪಡಿಸಲು ಎಎಪಿಯಿಂದ ಕೇಶಮುಂಡನ, ಮುಷ್ಕರ]

Bakila Hukrappa joins Aam Admi Party in Mangaluru

ರಾಜ್ಯ ಸಂಚಾಲಕರಾದ ಪೃಥ್ವಿ ರೆಡ್ಡಿಯವರು, ಅರವಿಂದ್ ಕೇಜ್ರೀವಾಲರ ನೇತೃತ್ವದಲ್ಲಿ ದೆಹಲಿಯ ಆಪ್ ಸರ್ಕಾರವು ಮೊಹಲ್ಲಾ ಕ್ಲಿನಿಕ್, ಆಡ್ -ಈವನ್ ಮುಂತಾದ ಹಲವಾರು ಜನಪರ ಕಾರ್ಯಕ್ರಮಗಳನ್ನು ಕಾರ್ಯರೂಪಕ್ಕೆ ತಂದಿದ್ದು ಇತರ ರಾಜ್ಯಗಳಲ್ಲೂ, ವಿದೇಶಗಳಲ್ಲೂ ಮಾದರಿ ಕಾರ್ಯಕ್ರಮಗಳಾಗಿ ಮನ್ನಣೆ ಗಳಿಸಿದೆ. ಮುಂದಿನ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಆಮ್ ಆದ್ಮಿ ಪಕ್ಷ ಸಜ್ಜಾಗಿದ್ದು, ಮುಂದಿನ 2 ವರ್ಷಗಳಲ್ಲಿ ಪಕ್ಷವು ತನ್ನ ಪೂರ್ಣ ಬಲದೊಂದಿಗೆ ಚುನಾವಣೆ ಸ್ಪರ್ಧಿಸಲಿದೆ ಎಂದು ತಿಳಿಸಿದರು.

198-84ರಲ್ಲಿ ಕೇವಲ 18 ತಿಂಗಳು ಸುಳ್ಯವನ್ನು ಪ್ರತಿನಿಧಿಸಿದ್ದ ಬಾಕಿಲ ಹುಕ್ರಪ್ಪರವರು, ದೆಹಲಿಯಲ್ಲಿ ಆಪ್ ಸರ್ಕಾರ ಜನಪರ ಕಾರ್ಯಕ್ರಮಗಳನ್ನು ಕಾರ್ಯರೂಪಕ್ಕೆ ತರುತ್ತಿದ್ದು, ಪಕ್ಷದ ಸಿದ್ಧಾಂತವನ್ನು ಒಪ್ಪಿಕೊಂಡು ಆಮ್ ಆದ್ಮಿ ಪಕ್ಷ ಸೇರುತ್ತಿರುವುದಾಗಿ ನುಡಿದರು. [ಅರ್ಧ ಶತಕದಿಂದ ಕಾಡಿನಲ್ಲೇ ನೆಲೆಸಿರುವ ಕೆಂಚಪ್ಪನ ರೋಚಕ ಕಥೆ!]

Bakila Hukrappa joins Aam Admi Party in Mangaluru

ಶಾಂತಲಾ ದಾಮ್ಲೆಯವರು ಪಕ್ಷಕ್ಕೆ ಸೇರ್ಪಡೆಗೊಂಡ ಬಾಕಿಲ ಹುಕ್ರಪ್ಪರವರ ಪರಿಚಯ ಮಾಡಿಸಿದರು. ನೂರಾರು ಕಾರ್ಯಕರ್ತರು ಈ ಸಮಾರಂಭದಲ್ಲಿ ಹಾಜರಿದ್ದು, ಮುಂದಿನ ದಿನಗಳಲ್ಲಿ ಪಕ್ಷದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಮುಂದಿನ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸುವ ಅಭಿಪ್ರಾಯ ವ್ಯಕ್ತಪಡಿಸಿದರು.

ಬಾಕಿಲ ಹುಕ್ರಪ್ಪನವರ ಬಗ್ಗೆ : ಹನ್ನರಡನೇ ಕ್ಲಾಸ್ ಪಾಸ್ ಮಾಡಿರುವ ಬಾಕಿಲ ಹುಕ್ರಪ್ಪನವರು 1983ರಲ್ಲಿ ಭಾರತೀಯ ಜನತಾ ಪಕ್ಷದಿಂದ ವಿಧಾನಸಭೆಗೆ ಆಯ್ಕೆಯಾಗಿದ್ದಾಗ ಅಡಿಕೆ ತೋಟದಲ್ಲಿ ಕೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದರು. 1985ರಲ್ಲಿ ಸೋತು, ಜಿಲ್ಲಾ ಪಂಚಾಯತ್ ಚುನಾವಣೆಯಲ್ಲೂ ಸೋತ ನಂತರ ರಬ್ಬರ್ ಪ್ಲಾಂಟೇಷನ್ ನಲ್ಲಿ ದಿನಗೂಲಿ ನೌಕರರಾಗಿ ದುಡಿದಿದ್ದರು. [ಕಾಡಿನಲ್ಲಿನ ಲಟಾರಿ ಕಾರೇ ಸುಳ್ಯದ ಸಾಹುಕಾರನ 'ಅರಮನೆ']

Bakila Hukrappa joins Aam Admi Party in Mangaluru

ಅತ್ಯಂತ ಸರಳ ವ್ಯಕ್ತಿತ್ವದ ಬಾಕಿಲ ಹುಕ್ರಪ್ಪನವರು 21 ವರ್ಷಗಳ ಕಾಲ ರಾಜಕೀಯದಲ್ಲಿ ದುಡಿದ ನಂತರ 2016ರಲ್ಲಿ ಸಣ್ಣ ಮನೆ ಕಟ್ಟಿಸಿದ್ದಾರೆ. 2008ರಲ್ಲಿ ಅವರು ಆಸ್ತಿ ಘೋಷಣೆ ಮಾಡಿದಾಗ ಅವರ ಬಳಿ ಇದ್ದಿದ್ದು 2.53 ಎಕರೆ ಜಮೀನು, ಬ್ಯಾಂಕಿನ ಉಳಿತಾಯ ಖಾತೆಯಲ್ಲಿ 250 ರು. ಮತ್ತು ಪತ್ನಿ ಚನಿಯಾರು ಕಿವಿಯಲ್ಲಿ 4 ಸಾವಿರ ರು. ಮೌಲ್ಯದ ಕಿವಿಯೋಲೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Bakila Hukrappa, former MLA of Sullia in Dakshina Kannada from BJP, has joined Aam Admi Party in Mangaluru on 9th July. He got elected to Karnataka assembly in 1983 from BJP. A simple agriculturist worked as a daily wager in rubber plantation.
Please Wait while comments are loading...