ಡೆಡ್ಲಿ ಗೇಮ್ 'ಬ್ಲೂವೇಲ್' ಬಗ್ಗೆ ಜಾಗೃತಿ ಮೂಡಿಸುತ್ತಿರುವ ವಿಕಾಸ್ ಕಾಲೇಜು

Posted By:
Subscribe to Oneindia Kannada

ಮಂಗಳೂರು, ಸೆಪ್ಟೆಂಬರ್ 13: ಸರಣಿ ಮಕ್ಕಳ ಬಲಿ ಪಡೆಯುತ್ತಿರುವ ಅಪಾಯಕಾರಿ ಆನ್‌ಲೈನ್‌ ವಿಡಿಯೋ ಗೇಮ್‌ 'ಬ್ಲೂ ವೇಲ್‌ ಚಾಲೆಂಜ್‌' ಬಗ್ಗೆ ಮಂಗಳೂರಿನ ಕಾಲೇಜೊಂದು ಕಿರುಪುಸ್ತಕದ ಮೂಲಕ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದೆ.

ಮಂಗಳವಾರ ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಕಾಸ್ ಕಾಲೇಜು ಸ್ಥಾಪಕಾಧ್ಯಕ್ಷ ಕೃಷ್ಣ ಜೆ. ಪಾಲೆಮಾರ್, "ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ 150ಕ್ಕೂ ಅಧಿಕ ಕಾಲೇಜುಗಳಲ್ಲಿ ಮಾಹಿತಿ ಮತ್ತು ತಿಳಿವಳಿಕೆ ನೀಡಿ, ಕಿರು ಪುಸ್ತಕಗಳನ್ನು ಹಂಚುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಜಾಗೃತಿ ಕಾರ್ಯಕ್ರಮಕ್ಕಾಗಿ ವಿಕಾಸ್ ಕಾಲೇಜಿನ ಉಪನ್ಯಾಸಕರು ಅವಿಭಜಿತ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ, ಕಾರ್ಯಾಗಾರ ನಡೆಸಲಿದ್ದಾರೆ," ಎಂದು ತಿಳಿಸಿದ್ದಾರೆ.

Awareness on ‘Blue Whale’ challenge game by Vikas College Mangaluru

ಈ ಬಗ್ಗೆ ಅನುಮತಿ ಮತ್ತು ಜಾಗೃತಿಗಾಗಿ ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ನಿವೇದನಾ ಪತ್ರ ಸಲ್ಲಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

"ಪೋಷಕರು ತಮ್ಮ ಮಕ್ಕಳಿಗೆ ಸಮರ್ಪಕ ಮಾರ್ಗದರ್ಶನ, ಪ್ರೀತಿ, ವಾತ್ಸಲ್ಯ ನೀಡುವ ಜವಾಬ್ದಾರಿಯನ್ನು ಸೂಕ್ತವಾಗಿ ನಿರ್ವಹಿಸಬೇಕು. ಮಕ್ಕಳ ಬಗ್ಗೆ ಪೋಷಕರು ಗಮನಿಸಿ, ನಿಗಾ ಇಟ್ಟಲ್ಲಿ ಬ್ಲೂವೇಲ್‌ನಂತಹ ಮಾರಣಾಂತಿಕ ಆಟಗಳಿಂದ ಮಕ್ಕಳನ್ನು ರಕ್ಷಿಸಲು ಸಾಧ್ಯ. ಆಧುನಿಕ ಯುಗದಲ್ಲಿ ಪೋಷಕರು ತಮ್ಮ ಕೆಲಸದಲ್ಲಿ ಕಾರ್ಯನಿರತರಾಗಿ, ಮಕ್ಕಳ ಬಗ್ಗೆ ಗಮನ ನೀಡುತ್ತಿಲ್ಲ. ಎಳೆಯ ವಯಸ್ಸಿನಲ್ಲೇ ಮಕ್ಕಳಿಗೆ ಮೊಬೈಲ್ ನೀಡಲಾಗುತ್ತಿದೆ. ಈ ಸ್ಥಿತಿ ಬದಲಾಗಬೇಕು," ಎಂದು ಅಭಿಪ್ರಾಯಪಟ್ಟರು.

"ಕೆಲ ಮಕ್ಕಳು ತಮ್ಮ ಪೋಷಕರ ಮತ್ತು ಹೆತ್ತವರ ತಿಳಿವಳಿಕೆ ಹಾಗೂ ಪ್ರಯತ್ನದಿಂದ ಸಾವಿನಿಂದ ಪಾರಾಗಿದ್ದಾರೆ. ಅವಿಭಜಿತ ಜಿಲ್ಲೆಯ ಮಕ್ಕಳು ಈ ಆಟಕ್ಕೆ ಬಲಿಯಾಗುವುದನ್ನು ತಪ್ಪಿಸಲು ವಿಕಾಸ್ ಕಾಲೇಜು ವತಿಯಿಂದ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಬಗ್ಗೆ ಮಕ್ಕಳ ಜತೆ, ಶಿಕ್ಷಕರು, ಪೋಷಕರಲ್ಲೂ ಜಾಗೃತಿ ಮೂಡಬೇಕು," ಎಂದವರು ಹೇಳಿದರು.

ಹೆತ್ತವರು ತಮ್ಮ ಮಕ್ಕಳ ಬಗ್ಗೆ ಕಾಳಜಿ ವಹಿಸಬೇಕು. ಹದಿಹರೆಯದ ಮಕ್ಕಳಿಗಾಗಿ ಸಮಯ ಮೀಸಲಿಡಬೇಕು. ಮಕ್ಕಳಿಗೆ 18 ವರ್ಷ ತುಂಬುವವರೆಗೆ ಸ್ಕೂಟರ್, ಬೈಕ್, ಮೊಬೈಲ್ ಫೋನ್ ನೀಡಬಾರದು. ಮೊಬೈಲ್‌ನಿಂದ ಹೆಚ್ಚಿನ ಅನಾಹುತಗಳು ಉಂಟಾಗುತ್ತಿದ್ದು, ಮಕ್ಕಳಿಗೆ 18 ವರ್ಷಗಳ ತುಂಬಿದ ಬಳಿಕವೇ ಮೊಬೈಲ್ ಉಪಯೋಗಕ್ಕೆ ಅವಕಾಶ ಎಂಬ ಕಾನೂನನ್ನು ಸರ್ಕಾರ ರೂಪಿಸಬೇಕಾದ ಅಗತ್ಯವಿದೆ ಎಂದು ಪಾಲೆಮಾರ್ ಹೇಳಿದರು.

ಇತ್ತೀಚೆಗೆ ಬ್ಲೂವೇಲ್ ಜತೆಗೆ ಸರಹಾ ಎಂಬ ಆಟವೂ ಹದಿಹರೆಯದ ಮಕ್ಕಳ ಮೇಲೆ ಮಾನಸಿಕ ಪರಿಣಾಮ ಬೀರುತ್ತಿದೆ. ಈ ಆ್ಯಪ್ ಡೌನ್‌ಲೋಡ್ ಮಾಡಿಕೊಂಡ ಮಕ್ಕಳ ಖಾಸಗಿ ವಿಚಾರ, ವಿಡಿಯೋಗಳನ್ನು ಬಹಿರಂಗಪಡಿಸುವುದಾಗಿ ಬೆದರಿಕೆಗಳು ಬರುತ್ತಿವೆ. ಈ ಹಿನ್ನೆಲೆಯಲ್ಲಿ ಮಕ್ಕಳು ಯಾವುದೇ ಕಾರಣಕ್ಕೂ ಈ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಬಾರದು ಎಂದು ವಿಕಾಸ್ ಕಾಲೇಜು ಸಲಹೆಗಾರ ಡಾ. ಅನಂತ್ ಪ್ರಭು ಜಿ. ಎಚ್ಚರಿಕೆ ನೀಡಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Awareness on ‘Blue Whale’ challenge game by Vikas College Mangaluru. Chairman of Vikas institutions Krishna J Palemar informed on Tuesday, September 12 that Vikas Education Trust will conduct awareness workshop on the 'Blue Whale' deadly challenge game in all colleges of Dakshina Kannada and Udupi.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ