ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಪಾರ್ಟ್‌ಮೆಂಟ್ ನಿವಾಸಿಗಳಿಗೆ 1 ಗಂಟೆ ಮಾತ್ರ ನೀರು

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಮೇ 09 : ಮಂಗಳೂರು ನಗರದಲ್ಲಿ ಮಳೆ ಬರುವ ಸೂಚನೆ ಕಾಣಿಸುತ್ತಿಲ್ಲ. ಬೆಳ್ತಂಗಡಿ, ಧರ್ಮಸ್ಥಳಕ್ಕಾದರೂ ಮಳೆ ಬಂದರೆ ಸಾಕು ಎನ್ನುವಷ್ಟರ ಮಟ್ಟಿಗೆ ನೀರಿನ ದಾಹ ಜಾಸ್ತಿಯಾಗಿದೆ. ಕಾಲೋನಿಯ ಮನೆಗಳಿಗೆ ಸೀಮಿತವಾಗಿದ್ದ ಕುಡಿಯುವ ನೀರಿನ ಬಿಸಿ ಈಗ ವಸತಿ ಸಮುಚ್ಛಯಗಳಿಗೂ ತಟ್ಟಿದೆ.

ನಗರದ ಹಲವು ಅಪಾರ್ಟ್‌ಮೆಂಟ್‌ಗಳಲ್ಲಿ ಸಮಯ ನಿಗದಿಪಡಿಸಿ ದಿನದಲ್ಲಿ 1 ಗಂಟೆ ಮಾತ್ರ ನೀರು ಬಿಡಲಾಗುತ್ತಿದೆ. ಅಷ್ಟು ಹೊತ್ತಿನಲ್ಲಿ ಸಾಧ್ಯವಾದಷ್ಟು ನೀರನ್ನು ಶೇಖರಿಸಿಕೊಳ್ಳಬೇಕು. ಅಪಾರ್ಟ್‌ಮೆಂಟ್‌ಗಳಲ್ಲಿ ನೀರು ಸಂಗ್ರಹಿಸಿಡಲು ಸಾಧ್ಯವಾಗದೆ ಜನರು ಪರದಾಡುವಂತಾಗಿದೆ. [ಮಂಗಳೂರಿನ ಹಾಸ್ಟೆಲ್ ತೊರೆದ ಸಾವಿರಾರು ವಿದ್ಯಾರ್ಥಿಗಳು]

apartment

ಭಾನುವಾರ ನಗರದ ಹಲವು ವಸತಿ ಸಮುಚ್ಛಯಗಳಲ್ಲಿ ನೀರಿಲ್ಲದೆ ಜನರು ತೊಂದರೆ ಅನುಭವಿಸಿದ್ದಾರೆ. ಖಾಸಗಿ ಟ್ಯಾಂಕರ್, ಮನಪಾ ಟ್ಯಾಂಕರ್‌ಗೆ ಕರೆ ಮಾಡಿದರೂ ಪ್ರತಿಕ್ರಿಯೆ ನೀಡುವವರು ಇಲ್ಲ. ಅವರಾದರೂ ನೀರನ್ನು ಎಲ್ಲಿಂದ ತರಬೇಕು?.[ನೀರಿನ ಅಭಾವ, ನೇತ್ರಾವತಿ ನದಿಗೆ ಕಾವಲು!]

ದೆರೆಬೈಲ್, ಲೇಡಿಹಿಲ್, ಕದ್ರಿ ಹ್ಯಾಟ್ ಹಿಲ್ ಸೇರಿದಂತೆ ನಗರದ ಕೆಲವು ಅಪಾರ್ಟ್‌ಮೆಂಟ್‌ಗಳಿಗೆ ಮಹಾನಗರ ಪಾಲಿಕೆ ನೀರು ಸರಬರಾಜು ಮಾಡದೆ ತಿಂಗಳುಗಳು ಕಳೆದಿವೆ. ಕೆಲವು ದಿನದಿಂದ ಸಮಯ ನಿಗದಿ ಪಡಿಸಿ ನೀರು ಬಿಡಲಾಗುತ್ತಿದೆ. ನೀರು ಬಿಡುವ ವೇಳೆ ಎಲ್ಲಿದ್ದರೂ ನಿವಾಸಿಗಳು ವಾಪಸ್ ಬರಬೇಕು ಎನ್ನುವ ಸ್ಥಿತಿ ನಿರ್ಮಾಣವಾಗಿದೆ ಎನ್ನುತ್ತಾರೆ ಅಪಾರ್ಟ್‌ಮೆಂಟ್ ಉಸ್ತುವಾರಿ ನೋಡಿಕೊಳ್ಳುತ್ತಿರುವ ಸುಧಾಕರ್ ಮಣ್ಣಗುಡ್ಡ. [ಬತ್ತಿದ ನೇತ್ರಾವತಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೀರಿನ ಕೊರತೆ]

ಹೋಟೆಲ್, ರೆಸ್ಟೋರೆಂಟ್‌ಗೆ ದೌಡು : ವೀಕೆಂಡ್ ಸಮಯದಲ್ಲಿ ಹೋಟೆಲ್, ಐಸ್ ಕ್ರೀಮ್ ಪಾರ್ಲರ್, ರೆಸ್ಟೋರೆಂಟ್‌ಗಳಲ್ಲಿ ಹೆಚ್ಚಿನ ಜನರು ಇರುತ್ತಾರೆ. ಆದರೆ, ಮೇ 8ರ ಭಾನುವಾರ ಈ ಸಂಖ್ಯೆ ಮತ್ತಷ್ಟು ಹೆಚ್ಚಾಗಿತ್ತು. ನಗರದ ನಿವಾಸಿಗಳು ನೀರಿನ ಸಮಸ್ಯೆಯಿಂದ ಸ್ವಲ್ಪ ಮಟ್ಟಿಗೆ ಸುಧಾರಿಸಿಕೊಳ್ಳಲು ಸಂಜೆ ಹೊತ್ತು ಹೋಟೆಲ್, ರೆಸ್ಟೋರೆಂಟ್‌ಗೆ ಊಟಕ್ಕೆ ದೌಡಾಯಿಸುತ್ತಿದ್ದಾರೆ. [ಹೆಸರು ಅಶೋಕ ಪ್ಯಾರಡೈಸ್, ಕುಡಿಯಲು ಮಾತ್ರ ನೀರಿಲ್ಲ!]

ರಜೆಯಿಂದ ಬಚಾವ್ : ಶಾಲೆಗೆ ರಜೆ ಇರುವುದರಿಂದ ಕೆಲವು ಅಪಾರ್ಟ್‌ಮೆಂಟ್‌ಗಳಲ್ಲಿ ಒಬ್ಬರು ಮಾತ್ರವಿದ್ದು, ಉಳಿದವರನ್ನು ಊರಿಗೆ ಕಳುಹಿಸಿ ಕೊಡಲಾಗಿದೆ. ಇನ್ನೂ ನೀರಿನ ಸಮಸ್ಯೆ ಎದುರಾದರೆ ರಜೆ ಹಾಕಿ ಊರಿಗೆ ಹೋಗಬೇಕಾಗುತ್ತದೆ ಎನ್ನುತ್ತಾರೆ ನಿವಾಸಿಗಳು.

ಅಧಿಕಾರಿಗಳಿಗೆ ರಜೆ ಇಲ್ಲ : ಮಳೆ ಬಂದು ನಗರದಲ್ಲಿ ನೀರಿನ ಸಮಸ್ಯೆ ಪರಿಹಾರವಾಗುವವರೆಗೆ ಯಾವ ಅಧಿಕಾರಿಗಳು ಭಾನುವಾರ ಸೇರಿದಂತೆ ಯಾವುದೇ ರಜೆ ತೆಗೆದುಕೊಳ್ಳಬಾರದು ಎಂದು ಮಹಾನಗರ ಪಾಲಿಕೆ ಸೂಚನೆ ನೀಡಿದೆ. ಇದರಿಂದ ಅಧಿಕಾರಿಗಳು ಭಾನುವಾರವೂ ಕೆಲಸ ಮಾಡಬೇಕಾಗಿದೆ.

English summary
Mangaluru apartment residents facing huge water shortage. Mangalore Mahanagara Palike supplying water for apartment for only 1 hour.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X