5 ದಶಕದಿಂದ ದೋಣಿ ನಡೆಸುತ್ತಿರುವ ಮಂಗಳೂರಿನ 70ರ ನಾವಿಕ

By: ಐಸಾಕ್ ರಿಚರ್ಡ್, ಮಂಗಳೂರು
Subscribe to Oneindia Kannada

ಮಂಗಳೂರು, ಮೇ 20: ಒಂದರೆಡಲ್ಲ ಬರೋಬ್ಬರಿ 53 ವರ್ಷಗಳಿಂದ ಈ ಅಂಬಿಗನ ದೋಣಿ ನಿರಂತರವಾಗಿ ಸಾಗುತ್ತಲೇ ಇದೆ. ಅವರು ನಾಜೂಕಿನಿಂದ ಹಾಕುವ ಹುಟ್ಟು ಸಾವಿರಾರು ಜನರನ್ನು ದಡಕ್ಕೆ ಸೇರಿಸಿದೆ. 70 ವಸಂತಗಳು ಕಳೆದರೂ ಈ ವೃದ್ಧರ ಉತ್ಸಾಹ ಕುಂದಿಲ್ಲ.

ಇಳಿ ಹರೆಯದಲ್ಲೂ ಇವರ ಕಾಯಕ ನಿತ್ಯ- ನಿರಂತರ. ಇವರು ಮಂಗಳೂರು ಹೊರವಲಯದ ಪಾವೂರು ಗ್ರಾಮದ ಇನೋಳಿಯ ನಾಟರಗೋಲಿ ನಿವಾಸಿ ನಾರಾಯಣ ಸಪಲ್ಯ. ತಂದೆ ಓಮಯ್ಯ ಸಫಲ್ಯ ಸುಮಾರು 20 ವರ್ಷಗಳ ಕಾಲ ದೋಣಿ ನಡೆಸಿ, ಅಸೌಖ್ಯದ ಕಾರಣ ಈ ಕೆಲಸದಿಂದ ದೂರ ಸರಿದಾಗ ಮಗ ನಾರಾಯಣ ಸಫಲ್ಯ ಈ ಕಾಯಕವನ್ನು ಮುಂದುವರಿಸಿದರು.

An ideal boatman in Mangaluru

ಆಗ ನಾರಾಯಣ ಸಫಲ್ಯರ ವಯಸ್ಸು 17 ವರ್ಷ. ಅಂದಿನಿಂದ ಇಂದಿನವರೆಗೆ ನದಿಯ ದಡದಿಂದ ದಡಕ್ಕೆ ಜನರನ್ನು ಸಾಗಿಸುವುದರಲ್ಲಿ ಅವರು ನಿರತರಾಗಿದ್ದಾರೆ. ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ಸಂಜೆಯ ಚಾ ಎಲ್ಲವೂ ದೋಣಿಯಲ್ಲೇ!

ನೇತ್ರಾವತಿಯ ಫರಂಗಿಪೇಟೆಯಿಂದ ಇನೋಳಿ ಕಡೆಗೆ ತಮ್ಮ ದೋಣಿ ಮೂಲಕ ಪ್ರಯಾಣಿಕರನ್ನು ಸಾಗಿಸುವ ಮೂಲಕ ಅಲ್ಪಸ್ವಲ್ಪ ಸಂಪಾದನೆ ಮಾಡುತ್ತಿರುವ ಅವರು ಮಳೆ, ಚಳಿ, ಗಾಳಿ, ಬಿಸಿಲು ಎನ್ನದೇ ತನ್ನ ದೋಣಿಯಲ್ಲಿ ಪ್ರಯಾಣಿಕರನ್ನು ತುಂಬಿಸಿ ನಗುಮೊಗದಿಂದ ಕೆಲಸ ಮಾಡುತ್ತಿದ್ದಾರೆ.[ಮಂಗಳೂರು: ಫಲ್ಗುಣಿಗೆ ಶುದ್ಧೀಕರಣ ಭಾಗ್ಯ]

An ideal boatman in Mangaluru

ವರ್ಷಗಳ ಹಿಂದೆ ಇನೋಳಿ ಮೂಲಭೂತ ಸೌಕರ್ಯ ವಂಚಿತ ಹಳ್ಳಿಯಾಗಿತ್ತು. ಈ ಭಾಗದ ಬಹುತೇಕ ಜನರು ಕೃಷಿಯ ಮೇಲೆಯೇ ಅವಲಂಬಿತರಾಗಿದ್ದರು. ಇಲ್ಲಿನ ಜನ ಶಾಲೆ, ಕಾಲೇಜು, ಅಂಗಡಿ, ಚಿಕಿತ್ಸೆ ಸೇರಿದಂತೆ ಮೂಲಭೂತ ಸೌಲಭ್ಯಕ್ಕಾಗಿ ಪಕ್ಕದ ಫರಂಗಿಪೇಟೆಯನ್ನೇ ಆಶ್ರಯಿಸಬೇಕು. ಆಗ ಅಲ್ಲಿನ ಜನರಿಗೆ ನದಿ ದಾಟಲು ಯಾವುದೇ ಸಾಧನವಿರಲಿಲ್ಲ. ಆಗ ನಾರಾಯಣ ಸಫಲ್ಯರ ತಂದೆ ಓಮಯ್ಯ ಸಪಲ್ಯ ಚಿಕ್ಕದೊಂದು ದೋಣಿಯನ್ನು ನದಿಗೆ ಇಳಿಸಿಯೇ ಬಿಟ್ಟರು.

An ideal boatman in Mangaluru

'1974ರಲ್ಲಿ ಬಂದ ಪ್ರವಾಹ ಇಲ್ಲಿಯ ಜನರ ಬದುಕನ್ನೇ ಬರಿದುಗೊಳಿಸಿತ್ತು. ಅಂದು ಅದೆಷ್ಟೋ ಮನೆ, ಜಾನುವಾರುಗಳು ನೀರಿನಲ್ಲಿ ಕೊಚ್ಚಿಹೋಗಿದ್ದವು. ಇನೋಳಿಯಿಂದ ಮಂಗಳೂರಿಗೆ ಇದೀಗ ಬಸ್ ಬಂದಿದೆ. ಹಾಗಿದ್ದರೂ ನನ್ನ ದೋಣಿಯಲ್ಲಿ ಜನ ಬರುವುದು ನಿಲ್ಲಿಸಿಲ್ಲ. ಸಂಖ್ಯೆ ಕಡಿಮೆಯಾಗಿದೆ. ನನಗಂತೂ ಈ ಕಾಯಕದಲ್ಲಿ ಖುಷಿ ಇದೆ. ಸಾಧ್ಯವಾದಷ್ಟು ಕಾಲ ನನ್ನ ಸೇವೆ ಪ್ರಯಾಣಿಕರಿಗೆ ಇರುತ್ತೆ' ಅಂತಾರೆ ನಾರಾಯಣ ಸಪಲ್ಯ.

ಮಳೆಗಾಲದಲ್ಲಿ ಬೀಸುವ ಗಾಳಿಗೆ ದೋಣಿ ನಡೆಸುವುದು ನಿಜಕ್ಕೂ ಸವಾಲು. ಆದರೆ, ಪ್ರಯಾಣಿಕರಿಗಾಗಿ ಈ ಸಾಹಸವನ್ನೂ ಸಂತೋಷದಿಂದಲೇ ನಿರ್ವಹಿಸುತ್ತಾರೆ ನಾರಾಯಣ ಸಫಲ್ಯ. ಆದರೆ, ಅವರನ್ನು ದಡ ಸೇರಿಸುವುದರಲ್ಲಿ ಅರ್ಧ ಜೀವವೇ ಹೋದ ಹಾಗೆ ಆಗುತ್ತದೆ ಎಂದು ತಮ್ಮ ಅನುಭವವನ್ನು ಬಿಚ್ಚಿಡುತ್ತಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Narayana Sapalya, a boatman in Mangaluru, is driving his boat from more than 5 decades. And has become an ideal peron to all.
Please Wait while comments are loading...