ಆಗ್ನೇಸ್ ಕಾಲೇಜು ವಿದ್ಯಾರ್ಥಿನಿಯರಿಂದ ಭತ್ತದ ನಾಟಿ

By: ಐಸಾಕ್ ರಿಚರ್ಡ್, ಮಂಗಳೂರು
Subscribe to Oneindia Kannada

ಮಂಗಳೂರು, ಜುಲೈ 22 : ರೈತರೇ ಕೃಷಿಯಿಂದ ವಿಮುಖರಾಗುತ್ತಿರುವ ಸಮಯದಲ್ಲಿ, ಮಂಗಳೂರಿನ ಆಗ್ನೆಸ್ ಕಾಲೇಜಿನ ಬಿಕಾಂ ವಿದ್ಯಾರ್ಥಿನಿಯರು ಸೋಮೇಶ್ವರದ ರಕ್ತೇಶ್ವರಿ ದೇವಸ್ಥಾನದ ಬಳಿಯ ಗದ್ದೆಯಲ್ಲಿ ಭತ್ತದ ನಾಟಿ ಮಾಡುವುದರ ಮೂಲಕ ವೀಕೆಂಡನ್ನು ಅರ್ಥಪೂರ್ಣವಾಗಿ ಕಳೆದರು.

ದಕ್ಷಿಣ ಭಾರತದಲ್ಲಿಯೇ ಬೆಂಗಳೂರು ಕೃಷಿ ವಿವಿ ಅತ್ಯುತ್ತಮ

ಮಂಗಳೂರು ಆಗ್ನೆಸ್ ಕಾಲೇಜಿನ ವತಿಯಿಂದ 'ಸಮುದಾಯದತ್ತ ಆಗ್ನೆಸ್ ಕಾಲೇಜು' ಎಂಬ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಸೇವೆ, ಜ್ಞಾನ ಮತ್ತು ಮಾಹಿತಿ ಎಂಬ ಮೂರು ವಿಷಯಗಳನ್ನು ಕೇಂದ್ರೀಕರಿಸಿ ಈ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದ್ದು, ಕಾಲೇಜಿನ ಬಿಕಾಂ ಅಂತಿಮ ವರುಷದ 600 ವಿದ್ಯಾರ್ಥಿನಿಯರು ಈ ಯೋಜನೆಯಲ್ಲಿ ತಮ್ಮನ್ನು ಸ್ವಯಂಸೇವಕರಾಗಿ ತೊಡಗಿಸಿಕೊಂಡಿದ್ದಾರೆ.

ಮೊಬೈಲ್ ಆಪ್‌ ಮೂಲಕ ಬೆಳೆ ಕಟಾವು ಪ್ರಯೋಗ: ರೋಹಿಣಿ ಸಿಂಧೂರಿ

ಎಷ್ಟೋ ವಿದ್ಯಾರ್ಥಿನಿಯರಿಗೆ ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸುವ ಆಸೆ ಇದ್ದರೂ ಅವಕಾಶಗಳು ದೊರೆಯುತ್ತಿಲ್ಲ. ಆ ನಿಟ್ಟಿನಲ್ಲಿ ಸಮುದಾಯದತ್ತ ಆಗ್ನೆಸ್ ಕಾಲೇಜು ಅಭಿಯಾನಕ್ಕಾಗಿ ಈ ಬಾರಿ ಸೋಮೇಶ್ವರ ಜಿಲ್ಲಾ ಪಂಚಾಯತ್ ಕ್ಷೇತ್ರವನ್ನು ಆಯ್ದುಕೊಳ್ಳಲಾಗಿದೆ.

ಒಂದು ವಾರದಿಂದ ಕ್ಷೇತ್ರದ ವಿವಿಧ ಗ್ರಾಮಗಳಿಗೆ ಕಾಲೇಜಿನ ವಿದ್ಯಾರ್ಥಿಗಳು ತೆರಳಿ ಕೃಷಿ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಸ್ವಚ್ಚತಾ ಅಭಿಯಾನ, ಇಂಗು ಗುಂಡಿ ನಿರ್ಮಾಣ, ನಿಸರ್ಗದತ್ತ ಆಹಾರ, ನಾಯಕತ್ವದ ಶಿಬಿರ, ಗ್ರಾಮಸಭೆಗಳಲ್ಲಿ ಪಾಲ್ಗೊಳ್ಳುವಿಕೆಯ ಮಹತ್ವದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯಗಳನ್ನು ನಡೆಸುತ್ತಿದ್ದಾರೆ.

ರವಿಶಂಕರ್ ಭತ್ತದ ಗದ್ದೆಯಲ್ಲಿ ಕೃಷಿ

ರವಿಶಂಕರ್ ಭತ್ತದ ಗದ್ದೆಯಲ್ಲಿ ಕೃಷಿ

ವಾರದ ಕೊನೆಯ ದಿನ ಶನಿವಾರದಂದು 600 ವಿದ್ಯಾರ್ಥಿನಿಯರ ತಂಡವನ್ನು ತಲಾ 150 ಮಂದಿಯ ನಾಲ್ಕು ತಂಡಗಳನ್ನಾಗಿ ವಿಂಗಡಿಸಿ ನಾಲ್ಕು ಗ್ರಾಮಗಳಿಗೆ ಸೇವೆ ಸಲ್ಲಿಸೋದಕ್ಕೆ ಕಳುಹಿಸಿ ಕೊಡಲಾಗುತ್ತಿದೆ. ವಿದ್ಯಾರ್ಥಿನಿಯರ ಒಂದು ತಂಡವು ಸೋಮೇಶ್ವರ ಗ್ರಾಮದ ರಕ್ತೇಶ್ವರಿ ದೇವಸ್ಥಾನದ ಬಳಿಯಲ್ಲಿರುವ ತಾ.ಪಂ ಸದಸ್ಯ ರವಿಶಂಕರ್ ಅವರ ಗದ್ದೆಯಲ್ಲಿ ಭತ್ತದ ನಾಟಿ ನಡೆಸಿತು.

ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದ ಲಲನೆಯರು

ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದ ಲಲನೆಯರು

ಬೆಳಿಗ್ಗೆಯೇ ಬಣ್ಣದ ಉಡುಗೆಯನ್ನು ತೊಟ್ಟು ಬಂದಿದ್ದ ವಿದ್ಯಾರ್ಥಿನಿಯರು ಬಹಳ ಉತ್ಸಾಹದಿಂದಲೇ ಗದ್ದೆಗಿಳಿದು ಕೆಸರಿನಲ್ಲಿ ಭತ್ತದ ಪೈರುಗಳನ್ನು ನೆಟ್ಟು ಸಂಭ್ರಮಿಸಿದರು. ಜಿ.ಪಂ ಸದಸ್ಯೆ ಧನಲಕ್ಷ್ಮೀ ಗಟ್ಟಿ ಮತ್ತು ಕೃಷಿಕರಾದ ರವಿಶಂಕರ್ ಅವರು ಭತ್ತದ ನಾಟಿ ಮಾಡುವುದರ ಬಗ್ಗೆ ಮಾಹಿತಿ ಮತ್ತು ಮಾರ್ಗದರ್ಶನ ನೀಡಿದರು. ವಿದ್ಯಾರ್ಥಿನಿಯರು ಗದ್ದೆಯಲ್ಲಿ ಪೈರನ್ನು ಹಿಡಿದು ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು. ಆಷಾಢ ತಿಂಗಳ ಮಧ್ಯಾಹ್ನದ ಉರಿ ಬಿಸಿಲಿನಲ್ಲೂ ಕೃಷಿ ಕಾಯಕ ಮಾಡಿ ಬಳಲಿದ ವಿದ್ಯಾರ್ಥಿನಿಯರಿಗೆ ತೋಟದ ತೆಂಗಿನ ಮರಗಳಿಂದ ಕಿತ್ತ ಸೀಯಾಳಗಳನ್ನು ನೀಡಿ ಉಪಚರಿಸಿದರು.

ರೈತರ ಶ್ರಮ ಏನೆಂದು ನಿಜವಾಗಿಯೂ ಅರ್ಥವಾಗಿದೆ

ರೈತರ ಶ್ರಮ ಏನೆಂದು ನಿಜವಾಗಿಯೂ ಅರ್ಥವಾಗಿದೆ

ಮೊದಲ ಬಾರಿ ಗದ್ದೆಗಿಳಿದು ಭತ್ತದ ನಾಟಿಯಲ್ಲಿ ತನ್ನನ್ನು ತೊಡಗಿಸಿದ್ದೇನೆ. ಇಲ್ಲಿಗೆ ಬಂದು ಪಿಕ್‍ನಿಕ್‍ಗೆ ಬಂದಷ್ಟೇ ಸಂತೋಷ ದೊರೆತಿದ್ದು, ಅವಕಾಶ ಕಲ್ಪಿಸಿಕೊಟ್ಟ ಕಾಲೇಜು ಆಡಳಿತ ಮಂಡಳಿಗೆ ಕೃತಜ್ಞತೆಗಳು. ಒಂದು ದಿವಸ ಮಧ್ಯಾಹ್ನದ ಉರಿ ಬಿಸಿಲಿಗೆ ಭತ್ತದ ನಾಟಿ ಮಾಡಿ ದಣಿದರೇನಾಯಿತು, ತಿಂಗಳು ಗಟ್ಟಲೆ ಗದ್ದೆಯಲ್ಲಿ ಉಳುಮೆ ಮಾಡಿ ಭತ್ತ ಬೆಳೆದು ನಮಗೆ ವರುಷವಿಡೀ ಅನ್ನ ನೀಡುವ ರೈತರ ಶ್ರಮವೇನೆಂದು ನಿಜವಾಗಿಯೂ ನಾವಿಂದು ಅರ್ಥೈಸಿದ್ದೇವೆ. (ಅನುಷಾ ಕೆ., ವಿದ್ಯಾರ್ಥಿನಿ)

ಕಾಲೇಜಿನ ಪ್ರಯತ್ನ ನಿಜಕ್ಕೂ ಸಾರ್ಥಕ

ಕಾಲೇಜಿನ ಪ್ರಯತ್ನ ನಿಜಕ್ಕೂ ಸಾರ್ಥಕ

ಫಾಸ್ಟ್ ಫುಡ್, ಪಿಜ್ಜಾ, ಬರ್ಗರ್ ತಿನ್ನುವ ನಗರ ಪ್ರದೇಶದ ಮಕ್ಕಳಿಗೆ ತಾವು ಉಣ್ಣುವ ಅನ್ನವು ಹೇಗೆ ಉತ್ಪತ್ತಿಯಾಗುತ್ತದೆಂಬುದರ ಬಗ್ಗೆ ಮಾಹಿತಿ ಇರುವುದಿಲ್ಲ. ಕೃಷಿ, ಶ್ರಮದಾನ, ಜನಸೇವೆಯ ಬಗ್ಗೆ ವಿದ್ಯಾರ್ಥಿನಿಯರಿಗೆ ಎಳೆಯ ಪ್ರಾಯದಲ್ಲೇ ಈ ರೀತಿ ಪ್ರಾಯೋಗಿಕ ಜ್ಞಾನ ನೀಡುತ್ತಿರುವ ಆಗ್ನೇಸ್ ಕಾಲೇಜು ಆಡಳಿತದ ಪ್ರಯತ್ನ ಶ್ಲಾಘನೀಯ. (ಧನಲಕ್ಷ್ಮೀ ಗಟ್ಟಿ ಜಿ.ಪಂ ಸದಸ್ಯೆ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
To make use of the weeks days the Agnes college students spent their time by planning paddy in the ground near someshwara temple. The plantion was done by Final year B.com students of Agnes colllege Mangaluru.
Please Wait while comments are loading...