ತಾಯಿ ಸಾಯುವಾಗಲೂ ಎಕ್ಸ್ ಪರ್ಟ್ ಕಾಲೇಜಿಗೆ ನಿಯಮದ್ದೇ ಚಿಂತೆ!

Posted By:
Subscribe to Oneindia Kannada

ಮಂಗಳೂರು, ಜುಲೈ 24: ಕೊನೆಯುಸಿರೆಳೆಯುತ್ತಿದ್ದ ತಾಯಿಗೆ ಇಬ್ಬರು ಮಕ್ಕಳ ಮುಖ ನೋಡುವ ಆಸೆ ಕೊನೆಗೂ ಈಡೇರಲಿಲ್ಲ; ಸಾಯುವ ಮುನ್ನ ತಾಯಿಯ ಜೀವಂತ ಮುಖ ನೋಡುವುದೂ ಮಕ್ಕಳಿಗೆ ಅಸಾಧ್ಯವಾಯಿತು. ಇದಕ್ಕೆ ಕಾರಣ ಆಗಿರುವುದು ಮಂಗಳೂರಿನ ಪ್ರತಿಷ್ಠಿತ ಎಕ್ಸ್ ಪರ್ಟ್ ಕಾಲೇಜ್ ನ ಹಾಸ್ಟೆಲ್‌ನ ಕಠಿಣ ನಿಯಮ!

ಆಗಿದ್ದಿಷ್ಟೆ; ಮಂಗಳೂರು ಎಕ್ಸ್ ‌‌‌ಪರ್ಟ್ ಕಾಲೇಜಿನಲ್ಲಿ ಬೆಂಗಳೂರಿನ ಕೃಷ್ಣಂರಾಜು ಅವರ ಇಬ್ಬರು ಅವಳಿ ಮಕ್ಕಳು ಪಿಯುಸಿ ಕಲಿಯುತ್ತಿದ್ದಾರೆ. ಅವರು ಕಾಲೇಕಿನ ವಳಚ್ಚಿಲ್ ಹಾಸ್ಟೆಲ್‌ನಲ್ಲಿ ವಾಸ್ತವ್ಯಕ್ಕಿದ್ದಾರೆ.

ಇತ್ತೀಚೆಗೆ ಕೃಷ್ಣಂ ರಾಜು ಅವರ ಪತ್ನಿ ಭಾರತಿ ಅವರ ಆರೋಗ್ಯ ಜಾಂಡಿಸ್‌ನಿಂದ ವಿಷಮಿಸಿತ್ತು. ಆಸ್ಪತ್ರೆಯಲ್ಲಿ ತುರ್ತು ನಿಗಾ ಘಟಕದಲ್ಲಿದ್ದರು. ಈ ಕುರಿತು ಶುಕ್ರವಾರ ಮಧ್ಯಾಹ್ನ ಕೃಷ್ಣಂ ರಾಜು ಅವರು ಹಾಸ್ಟೆಲ್‌ನಲ್ಲಿ ಪೋಷಕರ ತುರ್ತು ಸಂಪರ್ಕ ಸಂಖ್ಯೆಗೆ ದೂರವಾಣಿ ಕರೆ ಮಾಡಿ ಮಕ್ಕಳನ್ನು ಕಳುಹಿಸುವಂತೆ ವಿನಂತಿಸಿದ್ದರು.

A saddened story of a mother who died without seeing her children due to Expert college rules

ಈ ಬಗ್ಗೆ ಹಾಸ್ಟೆಲಿನ ಮೇಲ್ವಿಚಾರಕರು ನಂಬದಿದ್ದಾಗ ಭಾರತಿ ಅವರು ಗಂಭೀರ ಸ್ಥಿತಿಯಲ್ಲಿರುವ ಕುರಿತು ವೈದ್ಯರು ನೀಡಿದ ಪತ್ರವನ್ನೂ ಕೂಡಾ ಮೇಲ್ ಮಾಡಿದ್ದರು. ಆದರೆ ಮಕ್ಕಳನ್ನು ಕರೆದುಕೊಂಡು ಹೋಗುವ ಪರಿಚಿತರ ಫೋಟೊ ಇರುವ ಗುರುತು ಪತ್ರ ಮೇಲ್ ಮಾಡುವಂತೆ ಹಾಸ್ಟೆಲ್ ಮುಖ್ಯಸ್ಥರು ಸೂಚಿಸಿದ್ದರು.

ಗುರುತು ಚೀಟಿ ಇದ್ದ ಪರಿಚಿತರು ಮಂಗಳೂರಲ್ಲಿ ತಕ್ಷಣಕ್ಕೆ ಲಭ್ಯವಾಗಿಲ್ಲ. ಆಸ್ಪತ್ರೆಯಲ್ಲಿ ಪತ್ನಿ ಶುಶ್ರೂಷೆಯಲ್ಲಿ ನಿರತರಾಗಿದ್ದ ತಂದೆಗೆ ರಾತ್ರಿವರೆಗೂ ಪರಿಚಯಸ್ಥರ ಐಡಿ ನೀಡಲು ಅಸಾಧ್ಯವಾಯಿತು. ಹೀಗಾಗಿ ಮಕ್ಕಳು ಹಾಸ್ಟೆಲ್‌ನಲ್ಲಿಯೇ ಉಳಿದರು.

ಬೆಳಗ್ಗೆ ಪರಿಚಿತರು ಹಾಸ್ಟೆಲ್‌ಗೆ ಹೋಗಿ ಇಬ್ಬರನ್ನು ಕರೆದುಕೊಂಡು ಬಂದು ಕಾರಿನಲ್ಲಿ ಬೆಂಗಳೂರಿಗೆ ಕಳುಹಿಸಿಕೊಟ್ಟರು. ಆದರೆ ಬೆಳಗಿನ ಜಾವ ಮಕ್ಕಳ ತಾಯಿ ಮೃತಪಟ್ಟಿದ್ದರು. ಸಾಯುವ ಮುನ್ನ ಮಕ್ಕಳನ್ನು ನೋಡಬೇಕು ಎಂಬ ತಾಯಿಯ ಆಸೆ ಈಡೇರಲೇ ಇಲ್ಲ.

ಮಕ್ಕಳನ್ನು ನಿರೀಕ್ಷಿಸಿದ ಕಣ್ಣುಗಳು ಮತ್ತೆ ತೆರೆಯಲು ಆಗದಂತೆ ಮುಚ್ಚಿ ಹೋಯಿತು. ಮಕ್ಕಳು ಮಧ್ಯಾಹ್ನ 3 ಗಂಟೆಗೆ ಬೆಂಗಳೂರಿನ ಮನೆಗೆ ಮುಟ್ಟಿದಾಗ ತಾಯಿಯ ಅಂತ್ಯಕ್ರಿಯೆಗೆ ಸಿದ್ಧತೆ ನಡೆದಿತ್ತು.

ಈ ಕುರಿತು ವೇದೆಯಿಂದ ಮಾತನಾಡುವ ತಂದೆ ಕೃಷ್ಣಂ ರಾಜು, "ಶಿಕ್ಷಣ ಸಂಸ್ಥೆಯವರು ನಮ್ಮ ಮಕ್ಕಳ ಸಂಪೂರ್ಣ ಹೊಣೆಯನ್ನು ಹೊರುತ್ತಾರೆ. ಹೀಗಾಗಿ ಅವರು ಎಚ್ಚರಿಕೆ ವಹಿಸುವುದರಲ್ಲಿ ತಪ್ಪೇನಿಲ್ಲ. ಆದರೆ ಇಂಥ ತುರ್ತು ಸಂದರ್ಭದಲ್ಲಿ ಮಕ್ಕಳನ್ನು ಕಳುಹಿಸಬೇಕು. ಇನ್ನು ಮುಂದೆ ಯಾರಿಗೂ ಈ ಸಂಕಷ್ಟ ಆಗಬಾರದು. ಈ ಕುರಿತು ಕಾಲೇಜಿನವರಿಗೆ ಮನವರಿಕೆ ಮಾಡುತ್ತೇನೆ. ನನ್ನ ಮಕ್ಕಳು ಅಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ," ಎಂದಷ್ಟೇ ಹೇಳಿ ಸುಮ್ಮನಾದರು.


ಸಮಿತಿ ರಚನೆ: ನರೇಂದ್ರ ನಾಯಕ್ (ಎಕ್ಸ್ ಪರ್ಟ್ ಸಂಸ್ಥಾಪಕ)

ತುರ್ತು ಅಗತ್ಯದ ಸಂದರ್ಭ ಮಕ್ಕಳನ್ನು ಕಳುಹಿಸಿಕೊಡಲು ನಿಯಮಗಳಿಗೆ ಮಾರ್ಪಾಡು ಮಾಡುವ ಕುರಿತು ತೀರ್ಮಾನಿಸಲು ಸಮಿತಿ ರಚಿಸಲಾಗುವುದು ಎಂದು ಎಕ್ಸ್‌ ಪರ್ಟ್ ಶಿಕ್ಷಣ ಸಂಸ್ಥೆ ಸಂಸ್ಥಾಪಕ ನರೇಂದ್ರ ನಾಯಕ್ 'ಒನ್ಇಂಡಿಯಾ ಕನ್ನಡ'ಕ್ಕೆ ಪ್ರತಿಕ್ರಿಯಿಸಿದ್ದಾರೆ.

"ಕಾಲೇಜ್, ಹಾಸ್ಟೆಲ್ ನಿಯಮಗಳು ವಿದ್ಯಾರ್ಥಿಗಳ, ಹೆತ್ತವರ ಕ್ಷೇಮಕ್ಕಾಗಿಯೇ ರೂಪಿಸಲಾಗಿದೆ. ಏನಾದರೂ ಹೆಚ್ಚು ಕಡಿಮೆ ಆದರೆ ನಮ್ಮ ವಿರುದ್ಧ ಹೇಳಲು ವಿರೋಧಿಗಳು ಕಾಯುತ್ತಿರುತ್ತಾರೆ," ಎಂದು ಹಾಸ್ಟೆಲಿನ ಅನಗತ್ಯ ಕಠಿನ ನಿಯಮವನ್ನು ಅವರು ಸಮರ್ಥಿಸಿಕೊಂಡಿದ್ದಾರೆ.

"ಹಲವು ಬಾರಿ ಅಜ್ಜಿಗೆ ಹುಷಾರಿಲ್ಲ, ತಾಯಿಗೆ ಹುಶಾರಿಲ್ಲ ಎಂದು ಹೆತ್ತವರೇ ಸುಳ್ಳು ಹೇಳಿ ಮನೆಗೆ ಕರೆದುಕೊಂಡು ಹೋದ ಪ್ರಕರಣಗಳು ನಮ್ಮ ಮುಂದಿದೆ. 'ಇದು ತೋಳ ಬಂತು ತೋಳ ಗಾದೆಯಂತಾಗಿದೆ'. ಗಂಭೀರ ಪ್ರಕರಣಗಳು ಯಾವುದು ಎಂದು ಗೊತ್ತಾಗುವುದಿಲ್ಲ," ಎಂದು ಹೇಳಿ ಅವರು ಜವಾಬ್ದಾರಿಯಿಂದ ನುಣುಚಿಕೊಂಡಿದ್ದಾರೆ.

"ಈ ಪ್ರಕರಣದ ಕುರಿತು ನೇರವಾಗಿ ನನ್ನ ಗಮನಕ್ಕೆ ಬಂದಿರಲಿಲ್ಲ. ತುರ್ತು ಅಗತ್ಯ ಸಂದರ್ಭದಲ್ಲಿ ಮಕ್ಕಳನ್ನು ಕಳುಹಿಸಿ ಕೊಡಬೇಕು. ಇದೇ ರೀತಿ ಮಕ್ಕಳ ರಕ್ಷಣೆಯೂ ನಮ್ಮ ಹೊಣೆ. ಈ ಕುರಿತು ಸಮಿತಿ ರಚಿಸಿ ಇನ್ನು ಮುಂದೆ ಈ ರೀತಿ ಆಗದಿರಲು ಕ್ರಮ ಕೈಗೊಳ್ಳುತ್ತೇವೆ," ಎಂದು ನರೇಂದ್ರ ನಾಯಕ್ ರಾಜಕಾರಣಿಗಳ ದಾಟಿಯಲ್ಲಿ ಸ್ಪಷ್ಟನೆ ನೀಡಿದ್ದಾರೆ.

ಹಾಗಂಥ ಇದು ಎಕ್ಸ್ ಪರ್ಟ್ ಕಾಲೇಜೊಂದರ ಕಥೆಯಲ್ಲ. ಮಂಗಳೂರು ಹಾಗೂ ದಕ್ಷಿಣ ಕನ್ನಡದ ಹಲವು ಕಾಲೇಜುಗಳು ಶಿಸ್ತಿನ ಹೆಸರಿನಲ್ಲಿ ವಿಪರೀತಕ್ಕೆ ಹೋಗಿ ಹಾಸ್ಟೆಲ್ ಗಳನ್ನು ಬಂಧೀಖಾನೆಗಳಾಗಿ ಮಾರ್ಪಡಿಸಿಟ್ಟಿವೆ. ಪರಿಣಾಮ ಇಂಥಹ ಘಟನೆಗಳು ನಡೆಯುತ್ತವೆ.

ಕೊನೆಯ ಬಾರಿ ಮಕ್ಕಳನ್ನು ನೋಡಲು ಆ ತಾಯಿ ಎಷ್ಟು ಹಾತೊರೆಯುತ್ತಿದ್ದರೋ ಏನೋ. ಸಾಯುವ ಮೊದಲು ಅಮ್ಮನ ಕಣ್ಣು ನೋಡಲಾಗದ ಸಂಕಟವೂ ಮಕ್ಕಳನ್ನು ಕಾಡದಿರದು.

Mangaluru : Mayer Kavitha Sanil Raids Massage Parlor | Oneindia Kannada

ಕರಾವಳಿಯ ಕಾಲೇಜುಗಳ ನಿಯಮಗಳಿಗೆ ಈಗಲಾದರೂ ಸರ್ಜರಿ ಬೀಳುತ್ತಾ ಕಾದು ನೋಡಬೇಕು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A saddened and heart melting story of a mother who died without seeing her children due to 'Expert college hostel's rules. Two youths they were studying at 'Expert college in Mangaluru' could not see their moms death due to college hostel rules.
Please Wait while comments are loading...