ಪುತ್ತೂರಿನ ಶ್ರಾವ್ಯ ಪತ್ರಕ್ಕೆ ಪ್ರಧಾನಿ ಸಚಿವಾಲಯ ಸ್ಪಂದನೆ

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಡಿಸೆಂಬರ್. 31 : ಈಕೆಗಿನ್ನು 13 ನೇ ವಯಸ್ಸು. ಶಾಲೆಗೆ ಹೋಗುತ್ತಾ ಆಟವಾಡಬೇಕಾದ ವಯಸ್ಸು. ಆದರೆ ಈಕೆ ಎಲ್ಲರಂತಲ್ಲ. ಶಾಲೆಗೆ ಹೋಗುತ್ತಾ ತನ್ನ ಊರಿನ ಅಭಿವೃದ್ಧಿ ಬಗ್ಗೆ ಯೋಚಿಸುವವಳು. ಈಕೆಯ ಊರಿನ ರಸ್ತೆಯೊಂದು ಅಭಿವೃದ್ಧಿ ಕಾಣದೆ ಅನೇಕ ವರ್ಷಗಳಾಗಿತ್ತು. ಇದಕ್ಕೆ ಈ ಹುಡುಗಿ ಮಾಡಿದ್ದೇನು ಗೊತ್ತಾ?

ಪುತ್ತೂರು ತಾಲೂಕಿನ ಒಳಮೊಗ್ರು ಗ್ರಾಮದ ಅಜ್ಜಿಕಲ್ಲು ನಿವಾಸಿ ಆರ್.ಬಿ. ಸುವರ್ಣರ ಪುತ್ರಿ 8ನೇ ತರಗತಿಯಲ್ಲಿ ಓದುತ್ತಿರುವ ಶ್ರಾವ್ಯ ತನ್ನ ಊರಿನ ರಸ್ತೆ ದುರಸ್ತಿಗೊಳಿಸುವಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಪತ್ರ ಬರೆದು ಭೇಷ್ ಎನ್ನಿಸಿಕೊಂಡಿದ್ದಾಳೆ.

ಈ ಪತ್ರಕ್ಕೆ ಸ್ಪಂದಿಸಿದ ಪ್ರಧಾನಿ ಸಚಿವಾಲಯ, ರಾಜ್ಯ ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆದು ದೂರನ್ನು ತುರ್ತಾಗಿ ಪರಿಶೀಲಿಸಿ ಕ್ರಮ ಕೈಗೊಂಡು ವರದಿ ನೀಡುವಂತೆ ಆದೇಶಿಸಿದೆ.

13-year-old Puttur girle writes a letter to PM Narendra Modi, gets a response

ಪತ್ರ ಬರೆಯಲು ಕಾರಣ ಏನು?: ಪುತ್ತೂರು ನಗರದಿಂದ ಪಾಣಾಜೆ ಮೂಲಕ ಕೇರಳಕ್ಕೆ ಸಂಪರ್ಕಿಸುವ ಜಿಲ್ಲಾ ಪಂಚಾಯತ್ ರಸ್ತೆಯೊಂದನ್ನು ನಿರ್ಮಿಸಿ ಅನೇಕ ವರ್ಷಗಳಾಗಿತ್ತು.

ಈ ರಸ್ತೆಯು ಪುತ್ತೂರಿನಿಂದ ಸುಮಾರು 5 ಕಿ.ಮೀ ದೂರದಲ್ಲಿದೆ. ಈ ಹಾದಿಯಲ್ಲಿ ಬರುವ ದೇವಸ್ಯದಿಂದ ಚೆಲ್ಯಡ್ಕ ತನಕ ಸುಮಾರು 4 ಕಿ.ಮೀ ರಸ್ತೆ ತೀರಾ ಹದೆಗೆಟ್ಟಿದೆ.

ಬಳ್ಳೇರಿ ರಕ್ಷಿತಾರಣ್ಯ ಪ್ರದೇಶದಲ್ಲಿ ಸಾಗುವ ಕಾರಣ ಮಳೆ ನೀರಿನ ಹರಿಯುವಿಕೆಯಿಂದ ರಸ್ತೆ ಕೆಟ್ಟು ಹೋಗಿದೆ. ಅಲ್ಲದೇ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಮಳೆ ನೀರು ರಸ್ತೆಯಲ್ಲೇ ಹರಿಯುತ್ತಿದೆ. ಹೀಗಾಗಿ ರಸ್ತೆಯಲ್ಲಿನ ಟಾರು ಕಿತ್ತು ಹೋಗಿದೆ.

ಅಲ್ಲದೇ ಈ ರಸ್ತೆ ಸಂಪೂರ್ಣ ಹೊಂಡಮಯವಾಗಿದ್ದು ವಾಹನ ಸವಾರರು ಸಂಚರಿಸಲು ಪರದಾಡುವಂತಾಗಿದೆ. ಈ ರಸ್ತೆಯಲ್ಲಿ ಖಾಸಗಿ ಬಸ್ಸುಗಳು ಮಾತ್ರ ಓಡಾಡುತ್ತವೆ.

ಸರ್ಕಾರಿ ಬಸ್ಸುಗಳ ಓಡಾಟ ಇಲ್ಲವೇ ಇಲ್ಲ. ಹೀಗಾಗಿ ನಗರವನ್ನ ಸಂಪರ್ಕಿಸಲು ಈ ರಸ್ತೆಯನ್ನು ದುರಸ್ಥಿ ಮಾಡಿ ಎಂದು ಗ್ರಾಮಸ್ಥರು ಕಳೆದ ವರ್ಷ ಪ್ರತಿಭಟನೆಯನ್ನು ಸಹ ಮಾಡಿದ್ದರು.

ಆದರೆ, ಯಾವ ಅಧಿಕಾರಿಗಳು ಸ್ಪಂದಿಸಿರಲಿಲ್ಲ. ಇದನ್ನು ಕಂಡ ಬಾಲಕಿ ಶ್ರಾವ್ಯ ನೇರವಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾಳೆ.

ಪತ್ರದಲ್ಲಿ ಶ್ರಾವ್ಯ ಬರೆದಿದ್ದೇನು?: 'ನಮ್ಮ ಊರಿನ ರಸ್ತೆ ತೀರಾ ಹದಗೆಟ್ಟಿದೆ. ಕಳೆದ ಕೆಲ ವರ್ಷಗಳಿಂದ ರಸ್ತೆ ದುರಸ್ತಿ ಕಂಡಿಲ್ಲ. ರಸ್ತೆ ದುರಸ್ಥಿ ಮಾಡಿ ಎಂದು ನಾವೆಲ್ಲರೂ ಸೇರಿ ಪ್ರತಿಭಟನೆಯನ್ನು ಮಾಡಿದ್ದೇವು.

ಆದರೆ, ಅನುದಾನ ನೀಡುವುದಾಗಿ ಅಧಿಕಾರಿಗಳು ಭರವಸೆ ನೀಡುತ್ತಾರೆಯೇ ವಿನಹ ರಸ್ತೆಯನ್ನು ದುರಸ್ಥಿ ಮಾಡುತ್ತಿಲ್ಲ. ಹೊಂಡ- ಗುಂಡಿಗಳಿಂದ ತುಂಬಿದ ರಸ್ತೆಯಲ್ಲಿ ನಮಗೆ ಓಡಾಡಲು ಕಷ್ಟವಾಗುತ್ತಿದೆ.

ಬಸ್ಸು ನಿಧಾನಕ್ಕೆ ಚಲಿಸುವ ಕಾರಣ ಹಾಗೂ ರಸ್ತೆಯ ದುಸ್ಥಿತಿ ಕಂಡು ಬಸ್ಸುಗಳು ಬಾರದೇ ಇರುವುದರಿಂದ ನಮಗೆ ತೀವ್ರ ತೊಂದರೆಯಾಗಿದೆ. ದಯವಿಟ್ಟು ನಮ್ಮ ದೇವಸ್ಯ- ಚೆಲ್ಯಡ್ಕ ರಸ್ತೆಯನ್ನು ದುರಸ್ಥಿ ಮಾಡಿಸಿ ಎಂದು ಶ್ರಾವ್ಯ ಪ್ರಧಾನಿಗೆ ಪತ್ರ ಬರೆದಿದ್ದರು.

ಈ ಪತ್ರಕ್ಕೆ ಸ್ಪಂದಿಸಿದ ಪ್ರಧಾನಿ ಸಚಿವಾಲಯ, ರಾಜ್ಯ ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆದು ದೂರನ್ನು ತುರ್ತಾಗಿ ಪರಿಶೀಲಿಸಿ ಕ್ರಮ ಕೈಗೊಂಡು ವರದಿ ನೀಡುವಂತೆ ಆದೇಶಿಸಿದೆ.

ಈ ಕುರಿತು ಸಂತಸ ವ್ಯವ್ಯಕ್ತಪಡಿಸಿದ ಬಾಲಕಿ ಶ್ರಾವ್ಯ, 'ನನ್ನ ಪತ್ರಕ್ಕೆ ಪ್ರಧಾನಿಯವರು ಉತ್ತರಿಸಿದ್ದು ನನಗೆ ಮಾತ್ರವಲ್ಲ, ಊರಿನ ಜನರಿಗೆ ಸಹ ಖುಷಿ ನೀಡಿದೆ' ಎಂದು ಹರ್ಷ ವ್ಯಕ್ತಪಡಿಸಿದ್ದಾಳೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Shravya, an 13-year-old girle from puttur taluk ajicali writes a letter to the Prime Minister Narendra Modi to request his help to solve a problem.
Please Wait while comments are loading...