ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಡ್ಯದ ಗಾಂಧಿ ಕೆ.ಆರ್.ಪೇಟೆ ಕೃಷ್ಣ ರಾಜಕೀಯಕ್ಕೆ ವಿದಾಯ ಹೇಳಿದ್ದೇಕೆ?

By ಬಿ.ಎಂ.ಲವಕುಮಾರ್
|
Google Oneindia Kannada News

ಮಂಡ್ಯ, ಏಪ್ರಿಲ್ 25: ರಾಜ್ಯ ರಾಜಕಾರಣದಲ್ಲಿ ಪ್ರಭಾವಿ ನಾಯಕರಾಗಿ ಬೆಳೆದವರು ಅದೆಷ್ಟೋ ಮಂದಿ ಇದ್ದಾರೆ. ಅವರ ನಡುವೆ ಸಜ್ಜನ, ಪ್ರಾಮಾಣಿಕ ರಾಜಕಾರಣಿಯಾಗಿ ಬದುಕಿ ಬಾಳಿದವರು ಕೆಲವೇ ಕೆಲವರು ಮಾತ್ರ.

ಅಂತಹವರಲ್ಲಿ ಮಾಜಿ ಸ್ಪೀಕರ್ ಕೆ.ಆರ್.ಪೇಟೆ ಕೃಷ್ಣ ಒಬ್ಬರು. ಮಂಡ್ಯದ ಗಾಂಧಿ ಎಂದೇ ಕರೆಸಿಕೊಂಡಿದ್ದ ಅವರು, ಮೊದಲಿಗೆ ಜನತಾ ಪಕ್ಷದೊಂದಿಗೆ ಗುರುತಿಸಿಕೊಂಡವರು. ನಂತರ ಕಾಂಗ್ರೆಸ್ ಸೇರಿ, ಪ್ರಸ್ತುತ ರಾಜಕಾರಣದ ಬಗ್ಗೆ ರೇಜಿಗೆ ಹುಟ್ಟಿ ರಾಜಕೀಯದಿಂದ ದೂರವಾಗಿದ್ದಾರೆ.

ಮಂಡ್ಯ ಟಿಕೆಟ್ ರಮ್ಯಾಗೆ ಕೊಟ್ಟಿದ್ದರೆ ಹೆಚ್ಚು ಸಂತೋಷ ಆಗ್ತಿತ್ತು: ಅಂಬರೀಶ್‌ಮಂಡ್ಯ ಟಿಕೆಟ್ ರಮ್ಯಾಗೆ ಕೊಟ್ಟಿದ್ದರೆ ಹೆಚ್ಚು ಸಂತೋಷ ಆಗ್ತಿತ್ತು: ಅಂಬರೀಶ್‌

ಸುಮಾರು 40ವರ್ಷಗಳ ರಾಜಕಾರಣದಲ್ಲಿ ಶುದ್ಧ ಮತ್ತು ಪ್ರಾಮಾಣಿಕ ರಾಜಕಾರಣ ಮಾಡಿದ ಅವರು ಅವರಿಗಾಗಿ ಏನನ್ನೂ ಮಾಡಿಕೊಳ್ಳಲಿಲ್ಲ. ಎಷ್ಟೊಂದು ಸರಳತೆ ಮೆರೆಯುತ್ತಿದ್ದರೆಂದರೆ ಸಾಮಾನ್ಯರಂತೆ ಬಸ್‍ನಲ್ಲೇ ಪ್ರಯಾಣಿಸುತ್ತಿದ್ದರು. ಅವರು ಆಸ್ತಿ ಮಾಡಲು ರಾಜಕೀಯಕ್ಕೆ ಬರಲಿಲ್ಲ. ಸಮಾಜಸೇವೆಗಾಗಿ ಬಂದರು. ತಮ್ಮ ಕೈಲಾದಷ್ಟು ಮಾಡಿದರು. ಇವತ್ತಿನ ಪರಿಸ್ಥಿತಿಯಲ್ಲಿ ರಾಜಕಾರಣಕ್ಕೆ ಪ್ರಾಮಾಣಿಕತೆ, ಸರಳತೆ, ಸಜ್ಜನಿಕೆ ಯಾವುದೂ ಮುಖ್ಯವಲ್ಲ. ಕೇವಲ ಹಣವೊಂದೇ ಎಂಬುದು ಗೊತ್ತಾಗುತ್ತಿದ್ದಂತೆಯೇ ಅವರು ತಮ್ಮ ನಾಲ್ಕು ದಶಕಗಳ ರಾಜಕೀಯ ಬದುಕಿಗೆ ವಿರಾಮ ಹೇಳಿದ್ದಾರೆ.

ವಿದಾಯಕ್ಕೆ ಕಾರಣವೇನು?

ವಿದಾಯಕ್ಕೆ ಕಾರಣವೇನು?

ಅವರೇಕೆ ರಾಜಕಾರಣದಿಂದ ದೂರ ಸರಿಯುತ್ತಿದ್ದಾರೆ ಎಂಬುದನ್ನು ಅವರ ಮಾತಿನಲ್ಲೇ ಹೇಳುವುದಾದರೆ, "ನನಗೆ ಇತ್ತೀಚೆಗೆ ಹಣ ಹಂಚಿಕೆ ಮಾಡಿ ಚುನಾವಣೆಯ ಎದುರಿಸಬೇಕಾದ ಸ್ಥಿತಿಯನ್ನು ನಿರ್ಮಾಣ ಮಾಡಿರುವ ಶ್ರೀಮಂತ ರಾಜಕಾರಣಿಗಳ ನಡೆ ಬೇಸರವನ್ನುಂಟು ಮಾಡಿದೆ. ಹಾಗಾಗಿ ಇಂತಹ ಕಲುಷಿತ ರಾಜಕಾರಣದಲ್ಲಿ ಮುಂದುವರೆಯಲು ನನಗೆ ಇಷ್ಟವಾಗುತ್ತಿಲ್ಲ. ಹಾಗಾಗಿ ಸಕ್ರಿಯ ರಾಜಕಾರಣದಿಂದ ನಿವೃತ್ತಿ ಹೊಂದುತ್ತಿದ್ದೇನೆ" ಎನ್ನುತ್ತಾರೆ.

ಚುನಾವಣೆಗೆ ಖರ್ಚು ಮಾಡಿದ್ದು 32 ಸಾವಿರ ರೂ.!

ಚುನಾವಣೆಗೆ ಖರ್ಚು ಮಾಡಿದ್ದು 32 ಸಾವಿರ ರೂ.!

1978ರಲ್ಲಿ ತಾಲೂಕು ಬೋರ್ಡ್ ಚುನಾವಣೆಯಲ್ಲಿ ಜಯಗಳಿಸುವ ಮೂಲಕ ರಾಜಕೀಯ ವೃತ್ತಿ ಬದುಕು ಆರಂಭಿಸಿದ ಅವರು 1985ರಲ್ಲಿ ಪ್ರಥಮ ಬಾರಿಗೆ ಜನತಾ ಪಕ್ಷದ ಮೂಲಕ ರಾಜ್ಯ ವಿಧಾನಸಭೆಯನ್ನು ಪ್ರವೇಶಿಸಿದ್ದರು. ಆಗ ಅವರು ಚುನಾವಣೆಗೆ ಖರ್ಚು ಮಾಡಿದ ಹಣ ಕೇವಲ 32 ಸಾವಿರ ಮಾತ್ರವಂತೆ. ಶಾಸಕನಾದ ಮೊದಲ ಅವಧಿಯಲ್ಲಿಯೇ ಸಚಿವನಾಗಿ ಕೆಲಸ ಮಾಡುವ ಅವಕಾಶ ಅವರಿಗೆ ಒದಗಿ ಬಂದಿತ್ತು. ಆ ನಂತರ ಎರಡು ಬಾರಿ ಮತ್ತೆ ವಿಧಾನಸಭೆಗೆ, ಒಮ್ಮೆ ಲೋಕಸಭೆಗೆ ಆಯ್ಕೆಯಾದ ಅವರು ಒಟ್ಟು ಏಳು ಬಾರಿ ವಿಧಾನಸಭೆಗೆ ಸ್ಪರ್ಧೆ ಮಾಡಿ ಮೂರು ಬಾರಿ ಗೆಲುವು ಸಾಧಿಸಿದ್ದಾರೆ. ಎರಡು ಭಾರಿ ಲೋಕಸಭೆಗೆ ಸ್ಪರ್ಧೆ ಮಾಡಿ ಒಮ್ಮೆ ಸಂಸದರಾಗಿ ಆಯ್ಕೆಯಾಗಿದ್ದಾರೆ. ಅಷ್ಟೇ ಅಲ್ಲ ಸ್ಪೀಕರ್ ಆಗಿಯೂ ಸದನವನ್ನು ನಡೆಸಿದ್ದಾರೆ.

ಚುನಾವಣೆ ರಾಜಕೀಯದಿಂದ ನಿವೃತ್ತಿ ಘೋಷಿಸಿದ ಅಂಬರೀಷ್ಚುನಾವಣೆ ರಾಜಕೀಯದಿಂದ ನಿವೃತ್ತಿ ಘೋಷಿಸಿದ ಅಂಬರೀಷ್

ಮತದಾರರಿಂದಲೇ ಹಣ ಸಹಾಯ!

ಮತದಾರರಿಂದಲೇ ಹಣ ಸಹಾಯ!

ಸಾಮಾನ್ಯವಾಗಿ ಅವರು ಚುನಾವಣೆಗೆ ಸ್ಪರ್ಧೆ ಮಾಡುತ್ತಿದ್ದ ಸಮಯದಲ್ಲಿ ಮತದಾರರೇ ಅವರಿಗೆ ಚುನಾವಣೆಯ ಖರ್ಚಿಗೆ ಕೈಲಾದಷ್ಟು ಹಣ ನೀಡಿ ಸಹಾಯ ಮಾಡುತ್ತಿದ್ದದ್ದು ಅವರ ಒಳ್ಳೆಗುಣಕ್ಕೆ ಹಿಡಿದ ಕೈಕನ್ನಡಿಯಾಗಿದೆ. ಜನತಾ ಪರಿವಾರದಿಂದ ಹೊರ ಬಂದು ಕಳೆದ 4ವರ್ಷದ ಹಿಂದೆ ಕಾಂಗ್ರೆಸ್ ಗೆ ಸೇರ್ಪಡೆಯಾದರೂ ಅಲ್ಲಿ ಅವರಿಗೆ ಹೇಳಿಕೊಳ್ಳುವಂತಹ ಗೌರವವೇನು ದೊರೆಯಲಿಲ್ಲ. ಜತೆಗೆ ಅವರ ಆರೋಗ್ಯದ ಸಮಸ್ಯೆಯಿಂದಾಗಿ ಕಳೆದ ಒಂದು ವರ್ಷದಿಂದ ಪಕ್ಷದ ಚಟುವಟಿಕೆಯಿಂದ ದೂರವೇ ಉಳಿದುಬಿಟ್ಟರು. ಕಾಂಗ್ರೆಸ್ ನ ರಾಜ್ಯ ಮುಖಂಡರು ಕೂಡ ಅವರನ್ನು ಸೌಜನ್ಯಕ್ಕೂ ಭೇಟಿ ಮಾಡಲಿಲ್ಲ.

ಮಂಡ್ಯದ ಗಾಂಧಿ ಎನ್ನಿಸಿಕೊಂಡಿದ್ದ ಕೃಷ್ಣ

ಮಂಡ್ಯದ ಗಾಂಧಿ ಎನ್ನಿಸಿಕೊಂಡಿದ್ದ ಕೃಷ್ಣ

ಇವತ್ತಿನ ಪರಿಸ್ಥಿತಿಯನ್ನು ಹತ್ತಿರದಿಂದ ನೋಡಿದ ಬಳಿಕ ಅವರು ಕಳೆದ ಕೆಲವು ದಿನಗಳ ಹಿಂದೆಯೇ ರಾಜಕೀಯಕ್ಕೆ ಪೂರ್ಣ ವಿರಾಮ ಹೇಳಿದ್ದಾರೆ. ಅಷ್ಟೇ ಅಲ್ಲ, ಅವರೊಂದಿಗೆ ಉಳಿದ ಒಂದಷ್ಟು ಮುಖಂಡರಿಗೆ ತಮಗಿಷ್ಟ ಬಂದ ಸೂಕ್ತವೆನಿಸಿದ ಪಕ್ಷವನ್ನು ಸೇರಿಕೊಳ್ಳುವಂತೆಯೂ ಹೇಳಿದ್ದಾರೆ. ಲೋಕಸಭಾ ಸದಸ್ಯನಾದ ನಂತರ ಮಂಡ್ಯದ ಗಾಂಧಿ ಎಂದು ಕರೆಯಿಸಿಕೊಳ್ಳುತ್ತಾ ಸರಳತೆ ಮೆರೆದ ಮಾಜಿ ಸ್ಪೀಕರ್ ಕೃಷ್ಣರಂತರವರಿಗೆ ಈಗಿನ ರಾಜಕೀಯ ರೇಜಿಗೆ ಹುಟ್ಟಿಸಿ ನಿವೃತ್ತಿ ಪಡೆಯುವಂತೆ ಮಾಡಿದೆ ಎಂದರೆ ನಿಜಕ್ಕೂ ಇವತ್ತಿನ ರಾಜಕಾರಣ ಆತಂಕ ಸೃಷ್ಠಿಸಿರುವುದಂತು ಸತ್ಯ.

English summary
After seeing corruption and immorality in politics, former speaker and Ex MLA and Ex MP KR Pet Krishna quits active politics. He was with Janataparty and later joined Congress. He is also called as "Gandhi of Mandya"
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X