ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಮಲ ಬಿಟ್ಟು ಕೈ ಸೇರುತ್ತಾರೆಂಬ ವದಂತಿಗೆ ಸಚಿವ ನಾರಾಯಣಗೌಡ ಹೇಳಿದ್ದೇನು?

|
Google Oneindia Kannada News

ಮಂಡ್ಯ, ಫೆಬ್ರವರಿ 11: ಜೆಡಿಎಸ್ ತೊರೆದು ಬಿಜೆಪಿ ಸೇರಿ ಕೆ.ಆರ್.ಪೇಟೆ ವಿಧಾನಸಭಾ ಉಪ ಚುನಾವಣೆಯಲ್ಲಿ ಗೆಲುವು ಕಾಣುವುದರೊಂದಿಗೆ ಮಂಡ್ಯದಲ್ಲಿ ಬಿಜೆಪಿಯ ಖಾತೆ ತೆರೆದ ಖ್ಯಾತಿಗೊಳಗಾದ ಸಚಿವ ಡಾ.ನಾರಾಯಣಗೌಡ ಅವರು ಬಿಜೆಪಿ ತೊರೆದು ಕಾಂಗ್ರೆಸ್ ನತ್ತ ಮುಖ ಮಾಡುತ್ತಾರೆ ಎಂಬ ವದಂತಿ ಹರಡಿರುವುದು ಅಚ್ಚರಿಗೆ ಕಾರಣವಾಗಿದೆ.

ಈ ಸುದ್ದಿಯನ್ನು ಯಾರು ಹರಡಿದ್ದಾರೆ ಎಂಬುದು ಗೊತ್ತಿಲ್ಲವಾದರೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿರುವ ವಿಚಾರವನ್ನೇ ಮುಂದಿಟ್ಟುಕೊಂಡು ಕೆಲವರು ವದಂತಿ ಹಬ್ಬಿಸುತ್ತಿದ್ದಾರೆ ಎನ್ನಲಾಗಿದ್ದು, ಇದು ನಾರಾಯಣಗೌಡರಿಗೆ ತೀವ್ರ ಮುಜುಗರವನ್ನುಂಟು ಮಾಡಿದೆ. ರಾಜಕೀಯದಲ್ಲಿ ಯಾವುದನ್ನು ಹಗುರವಾಗಿ ಪರಿಗಣಿಸುವಂತಿಲ್ಲ ಹೀಗಾಗಿ ನಿಜವಾದರೂ ಅಚ್ಚರಿಯಿಲ್ಲ ಎಂದು ಜನ ಮಾತನಾಡಿಕೊಳ್ಳತೊಡಗಿದ್ದರು. ಹೀಗಾಗಿ ಈ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ನಾರಾಯಣಗೌಡರೇ ಸಮಜಾಯಿಷಿ ನೀಡಿದ್ದಾರೆ. ಇಷ್ಟಕ್ಕೂ ಅವರು ಹೇಳಿದ್ದೇನು ಗೊತ್ತಾ?

ಜೆಡಿಎಸ್‍ನಲ್ಲಿ ಕುತೂಹಲ ಕೆರಳಿಸಿದ ಶಿವರಾಮೇಗೌಡರ ನಡೆ! ಜೆಡಿಎಸ್‍ನಲ್ಲಿ ಕುತೂಹಲ ಕೆರಳಿಸಿದ ಶಿವರಾಮೇಗೌಡರ ನಡೆ!

ಅವರು ಉತ್ತರ ಧ್ರುವವಾದರೆ, ನಾನು ದಕ್ಷಿಣ ಧ್ರುವ

ಅವರು ಉತ್ತರ ಧ್ರುವವಾದರೆ, ನಾನು ದಕ್ಷಿಣ ಧ್ರುವ

ನಾನು ಮತ್ತು ಡಿ.ಕೆ.ಶಿವಕುಮಾರ್ ಆತ್ಮೀಯ ಸ್ನೇಹಿತರು, ನಾನು ಭಾರತೀಯ ಜನತಾ ಪಕ್ಷದ ಸರ್ಕಾರದಲ್ಲಿ ರಾಜ್ಯದ ಯುವಜನ ಸೇವೆ ಮತ್ತು ಕ್ರೀಡಾ ಸಚಿವನಾಗಿದ್ದೇನೆ. ಅವರು ಕೆಪಿಸಿಸಿ ಅಧ್ಯಕ್ಷರು ಅವರ ದಾರಿ, ನನ್ನ ದಾರಿಯೇ ಬೇರೆ, ನನ್ನ ದಾರಿಯೇ ಬೇರೆ. ಅವರು ಉತ್ತರ ಧ್ರುವವಾದರೆ, ನಾನು ದಕ್ಷಿಣ ಧ್ರುವ. ನಾನು ಬಿಜೆಪಿ ಪಕ್ಷವನ್ನು ಬಿಟ್ಟು ಕಾಂಗ್ರೆಸ್ ಪಕ್ಷಕ್ಕೆ ಹೋಗುವ ಪ್ರಶ್ನೆಯೇ ಇಲ್ಲ. ನಾನು ಪಕ್ಷಾಂತರ ಮಾಡುವುದಿಲ್ಲ, ನನ್ನ ಅಳಿವು-ಉಳಿವು ಏನಿದ್ದರೂ ಭಾರತೀಯ ಜನತಾ ಪಕ್ಷದಲ್ಲಿ ಮಾತ್ರ. ತಾಲೂಕಿನ ಜನತೆ ಹಾಗೂ ಪ್ರಬುದ್ಧ ಮತದಾರ ಬಂಧುಗಳು ವದಂತಿಗಳಿಗೆ ಕಿವಿಗೊಡಬೇಡಿ ಎಂದಿದ್ದಾರೆ.

ಜೆಡಿಎಸ್ ಪಕ್ಷದಲ್ಲಿ ನನ್ನನ್ನು ಕೆಟ್ಟದಾಗಿ ನಡೆಸಿಕೊಂಡರು

ಜೆಡಿಎಸ್ ಪಕ್ಷದಲ್ಲಿ ನನ್ನನ್ನು ಕೆಟ್ಟದಾಗಿ ನಡೆಸಿಕೊಂಡರು

ನಾನು ಬಿಜೆಪಿ ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷವನ್ನು ಸೇರುತ್ತೇನೆ ಎಂದು ಕೆಲವು ಕಿಡಿಗೇಡಿಗಳು ತಾಲ್ಲೂಕಿನಲ್ಲಿ ವದಂತಿಯನ್ನು ಹಬ್ಬಿಸುತ್ತಿದ್ದಾರೆ. ನಾನು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಒಡನಾಟವನ್ನು ಹತ್ತಿರದಲ್ಲಿದ್ದು ಗಮನಿಸಿದ್ದೇನೆ. ಜೆಡಿಎಸ್ ಪಕ್ಷದಿಂದ ಗೆದ್ದು ಎರಡು ಬಾರಿ ಶಾಸಕನಾಗಿದ್ದೇನೆ. ಜೆಡಿಎಸ್ ಪಕ್ಷದಲ್ಲಿ ನನ್ನನ್ನು ಕೆಟ್ಟದಾಗಿ ನಡೆಸಿಕೊಂಡು ತಾಲೂಕಿನ ಅಭಿವೃದ್ಧಿ ಕೆಲಸ-ಕಾರ್ಯಗಳಿಗೆ ಪೂರಕವಾದ ಸಹಕಾರವು ಸಿಗದ ಹಿನ್ನೆಲೆಯಲ್ಲಿ ಬೇಸರದಿಂದ ಜೆಡಿಎಸ್ ಪಕ್ಷವನ್ನು ಬಿಟ್ಟು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡು ಚುನಾವಣೆಯಲ್ಲಿ ಗೆದ್ದು ಶಾಸಕನಾಗಿ ಆಯ್ಕೆಯಾಗಿ, ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಹಿರಿಯ ರಾಜಕಾರಣಿ ಕೃಷ್ಣ ಅವರ ನಂತರ 25 ವರ್ಷಗಳ ಬಳಿಕ ಕ್ಯಾಬಿನೆಟ್ ದರ್ಜೆಯ ಸಚಿವನಾಗಿ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದರು.

ಬಿಜೆಪಿ ಪಕ್ಷವು ನನಗೆ ತಾಯಿಯ ಸಮಾನ

ಬಿಜೆಪಿ ಪಕ್ಷವು ನನಗೆ ತಾಯಿಯ ಸಮಾನ

ಪಕ್ಷದ ತತ್ವ ಹಾಗೂ ಸಿದ್ಧಾಂತವನ್ನು ಒಪ್ಪಿಕೊಂಡು ಭಾರತೀಯ ಜನತಾ ಪಕ್ಷವನ್ನು ಸೇರಿದ ಮೇಲೆ ಮತ್ತೆ ಬೇರೆ ಪಕ್ಷವನ್ನು ಸೇರುವ ಮಾತೇ ಇಲ್ಲ. ಪಕ್ಷವು ನನಗೆ ತಾಯಿಯ ಸಮಾನವಾಗಿದೆ. ತಾಯಿಗೆ ದ್ರೋಹ ಬಗೆಯುವ ಕೆಲಸವನ್ನು ನಾನು ಎಂದಿಗೂ ಮಾಡುವುದಿಲ್ಲ. ನನ್ನ ರಾಜಕೀಯ ಅಳಿವು-ಉಳಿವು ಏನಿದ್ದರೂ ಭಾರತೀಯ ಜನತಾ ಪಕ್ಷದಲ್ಲಿ ಮಾತ್ರ. ಈಗ ರಾಜ್ಯದ ಪೌರಾಡಳಿತ, ರೇಷ್ಮೆ ಹಾಗೂ ತೋಟಗಾರಿಕಾ ಸಚಿವನಾಗಿ ಕಾರ್ಯನಿರ್ವಹಿಸುತ್ತಿದ್ದು, ನನ್ನ ಗಮನಕ್ಕೆ ತಂದು ಮುಖ್ಯಮಂತ್ರಿ ಯಡಿಯೂರಪ್ಪನವರು ನನ್ನ ಖಾತೆಗಳನ್ನು ಬದಲಾವಣೆ ಮಾಡಿದ್ದಾರೆ. ಮಂಡ್ಯ ಜಿಲ್ಲೆಯು ಹೇಳಿ, ಕೇಳಿ ಸಂಪೂರ್ಣವಾಗಿ ಕೃಷಿಯನ್ನು ಅವಲಂಬಿಸಿರುವ ರೈತ ಪ್ರಧಾನವಾದ ಜಿಲ್ಲೆಯಾಗಿದೆ. ಪ್ರಸ್ತುತ ನಾನು ಹೊಂದಿರುವ ಖಾತೆಗಳಿಂದ ನಾಡಿನ ಅನ್ನದಾತರಾದ ರೈತರಿಗೆ ಸಹಾಯ ಮಾಡಲು ಸಾಧ್ಯವಾಗುವುದಿಲ್ಲ. ನನಗೆ ರೈತರೊಂದಿಗೆ ಇದ್ದುಕೊಂಡು ಕೆಲಸ ನಿರ್ವಹಿಸುವ ಖಾತೆಯನ್ನು ಕೊಡಿ ಎಂದು ಪ್ರಾರಂಭದಲ್ಲಿ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದ್ದು ನಿಜ. ಆದರೆ ಮುಖ್ಯಮಂತ್ರಿಗಳು ಪ್ರಸ್ತುತ ನೀಡಿರುವ ಖಾತೆಗಳಲ್ಲಿಯೇ ಜನಪರವಾಗಿ ಕೆಲಸ ಮಾಡಬಹುದು ಮುಂದೆ ನೋಡೋಣ ಎಂಬ ಭರವಸೆ ನೀಡಿದ್ದಾರೆ. ಆದ್ದರಿಂದ ಸಂತೋಷವಾಗಿಯೇ ನನಗೆ ನೀಡಿರುವ ಖಾತೆಗಳಲ್ಲಿ ಸಚಿವನಾಗಿ ಬದ್ಧತೆ ಹಾಗೂ ಪ್ರಾಮಾಣಿಕತೆಯಿಂದ ಕೆಲಸ ಮಾಡುತ್ತಿದ್ದೇನೆ ಎಂದರು.

ಎಲ್ಲ ಪಕ್ಷದಲ್ಲಿಯೂ ನನಗೆ ಆತ್ಮೀಯ ಸ್ನೇಹಿತರಿದ್ದಾರೆ

ಎಲ್ಲ ಪಕ್ಷದಲ್ಲಿಯೂ ನನಗೆ ಆತ್ಮೀಯ ಸ್ನೇಹಿತರಿದ್ದಾರೆ

ಜೆಡಿಎಸ್-ಕಾಂಗ್ರೆಸ್ ಸೇರಿದಂತೆ ಎರಡೂ ಪಕ್ಷಗಳಲ್ಲಿಯೂ ನನಗೆ ಆತ್ಮೀಯ ಸ್ನೇಹಿತರಿದ್ದಾರೆ. ಎಲ್ಲರೊಂದಿಗೂ ನಾನು ಆತ್ಮೀಯ ಒಡನಾಟವನ್ನು ಹೊಂದಿರುವುದು ನಿಜ. ಆದರೆ ನಾನು ಕಾಂಗ್ರೆಸ್ ಪಕ್ಷವನ್ನು ಸೇರಬೇಕೆಂದು ಕನಸು ಮನಸ್ಸಿನಲ್ಲಿಯೂ ಆಲೋಚಿಸಿಲ್ಲ. ಕೆ.ಆರ್.ಪೇಟೆ ತಾಲೂಕಿನ ಕೆಲವು ಕಾಂಗ್ರೆಸ್ ಮುಖಂಡರುಗಳೇ ನೆಲ ಕಚ್ಚಿರುವ ಕಾಂಗ್ರೆಸ್ ಪಕ್ಷಕ್ಕೆ ಪುನಶ್ಚೇತನ ನೀಡಲು ನಾರಾಯಣಗೌಡನೇ ಸರಿ ಎಂದು ಮಾತನಾಡುತ್ತಾ ವದಂತಿಗಳನ್ನು ಹಬ್ಬಿಸುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಸದ್ಯದಲ್ಲಿಯೇ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಗೆದ್ದಿರುವ ಹಾಗೂ ಈ ಸೋತಿರುವ ಮುಖಂಡರನ್ನು ಒಟ್ಟಿಗೆ ಸೇರಿಸಿ ಒಂದು ದೊಡ್ಡ ಸಮಾವೇಶವನ್ನು ನಡೆಸಿ ನನ್ನ ರಾಜಕೀಯ ವಿರೋಧಿಗಳಿಗೆ ಸ್ಪಷ್ಟ ಸಂದೇಶ ನೀಡುತ್ತೇನೆ. ನನ್ನ ಮೈಯ್ಯಲ್ಲಿ ಹರಿಯುತ್ತಿರುವುದು ರಾಷ್ಟ್ರಪ್ರೇಮವನ್ನು ಮೈಗೂಡಿಸಿಕೊಂಡಿರುವ ಬಿಜೆಪಿ ಕಾರ್ಯಕರ್ತನ ರಕ್ತ. ನಾನು ರಾಜಕೀಯಕ್ಕೆ ಹಣ, ಆಸ್ತಿ, ಅಂತಸ್ತು ಸಂಪಾದನೆ ಮಾಡಲು ಬಂದವನಲ್ಲ. ನನ್ನ ತಾಯಿಗೆ ಕೊಟ್ಟ ಮಾತಿನಂತೆ ತಾಲೂಕಿನ ಜನತೆಯ ಸೇವೆಯನ್ನು ಮಾಡಲು ಒಬ್ಬ ಸಾಮಾನ್ಯ ಸೇವಕನಾಗಿ ಜನ್ಮಭೂಮಿಯಾದ ಕೆ.ಆರ್.ಪೇಟೆಗೆ ಬಂದಿದ್ದೇನೆ. ತಾಲೂಕಿನಲ್ಲಿ ಬೇರುಮಟ್ಟದಿಂದ ಬಿಜೆಪಿ ಪಕ್ಷದ ಸಂಘಟನೆ ಮಾಡುತ್ತಿದ್ದೇನೆ. ಶೂನ್ಯದಲ್ಲಿದ್ದ ಬಿಜೆಪಿ ಪಕ್ಷಕ್ಕೆ ಗಟ್ಟಿಯಾದ ನೆಲೆಯನ್ನು ನೀಡಲು ಹಗಲಿರುಳೆನ್ನದೇ ದುಡಿಯುತ್ತಿದ್ದೇನೆ. ತಾಲೂಕಿನ 33 ಗ್ರಾಮ ಪಂಚಾಯಿತಿಗಳ ಪೈಕಿ 17ಕ್ಕೂ ಹೆಚ್ಚಿನ ಗ್ರಾಮ ಪಂಚಾಯತಿಗಳು ಬಿಜೆಪಿ ಪಕ್ಷದ ಬೆಂಬಲಿಗರ ವಶವಾಗಿರುವುದೇ ಪ್ರತ್ಯಕ್ಷ ಸಾಕ್ಷಿಯಾಗಿದೆ.

Recommended Video

'ನನ್ನ ಮಗಳ ಮದುವೆಗೆ ನೀವು ಇದ್ದಲ್ಲಿಯೇ ಆಶೀರ್ವದಿಸಿ'- ಕಾರ್ಯಕರ್ತರು ಹಾಗೂ ಅಭಿಮಾನಿಗಳಿಗೆ ಡಿಕೆಶಿ ಮನವಿ | Oneindia Kannada
ವದಂತಿಗಳಿಗೆ ತೆರೆ ಎಳೆದ ನಾರಾಯಣಗೌಡ

ವದಂತಿಗಳಿಗೆ ತೆರೆ ಎಳೆದ ನಾರಾಯಣಗೌಡ

ನಿಷ್ಠಾವಂತ ಕಾರ್ಯಕರ್ತರು ಪಕ್ಷಕ್ಕೆ ಆಸ್ತಿಯಾಗಿರುವುದರಿಂದ ಕಾರ್ಯಕರ್ತರಿಗೆ ಶಕ್ತಿಯನ್ನು ತುಂಬುವ ಕೆಲಸವನ್ನು ಮಾಡುತ್ತಿದ್ದೇನೆ. ಕೃಷ್ಣರಾಜಪೇಟೆ ತಾಲೂಕನ್ನು ಜಿಲ್ಲೆಯಲ್ಲಿಯೇ ಮಾದರಿಯಾದ ತಾಲೂಕನ್ನಾಗಿ ಮಾಡುವ ಕನಸನ್ನು ಹೊಂದಿದ್ದೇನೆ. ಟೀಕೆಗಳು ಸಾಯುತ್ತವೆ, ಆದರೆ ನಾವು ಮಾಡಿರುವ ಕೆಲಸಗಳು ಶಾಶ್ವತವಾಗಿ ಉಳಿಯುತ್ತವೆ ಎನ್ನುವುದು ನನಗೆ ಗೊತ್ತಿದೆ. ರಾಜಕಾರಣದಲ್ಲಿ ಅಧಿಕಾರ ಶಾಶ್ವತವಲ್ಲ ಆದ್ದರಿಂದ ನಾನು ಮಂತ್ರಿಯೆಂದು ಬೀಗದೇ ಯಾವುದೇ ಹಮ್ಮು-ಬಿಮ್ಮು ಇಲ್ಲದೇ ಒಬ್ಬ ಸಾಮಾನ್ಯ ಸೇವಕನಂತೆ ತಾಲೂಕಿನ ಜನತೆಯ ಸೇವೆ ಮಾಡುತ್ತಿದ್ದೇನೆ ಎನ್ನುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತಾರೆ ಎಂಬ ವದಂತಿಗಳಿಗೆ ತೆರೆ ಎಳೆದಿದ್ದಾರೆ.

English summary
Surprisingly it is rumored that Minister Dr. Narayana Gowda will leave the BJP and join the Congress.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X