ಮಂಡ್ಯ: ಊರಿಗೆ ಕೊರೊನಾ ಬಾರದಿರಲಿ ಎಂದು ಕುರಿ, ಕೋಳಿ ಬಲಿ ನೀಡಿದ ಗ್ರಾಮಸ್ಥರು
ಮಂಡ್ಯ, ಮೇ 27: ಜಿಲ್ಲೆಯ ಮಳವಳ್ಳಿ ತಾಲೂಕಿನ ರಾಮಂದೂರು ಗ್ರಾಮದಲ್ಲಿ ಗ್ರಾಮಸ್ಥರು ತಮ್ಮ ಊರಿಗೆ ಕೊರೊನಾ ಬರಬಾರದು ಎಂದು ಕೋಳಿ ಹಾಗೂ ಕುರಿಯನ್ನು ಬಲಿ ಕೊಟ್ಟು ಪೂಜೆ ಮಾಡಿರುವುದಾಗಿ ವರದಿಯಾಗಿದೆ.
ಕೊರೊನಾ ನಿಯಂತ್ರಿಸುವ ನಿಟ್ಟಿನಲ್ಲಿ ಲಾಕ್ಡೌನ್, ಕರ್ಫ್ಯೂ ಮೊದಲಾದ ಕ್ರಮಗಳನ್ನು ಸರ್ಕಾರ ಕೈಗೊಳ್ಳುತ್ತಿದೆ. ಹಾಗೆಯೇ ಜನರಲ್ಲಿ ಕೊರೊನದ ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡುತ್ತಿದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಮಾರ್ಗಸೂಚಿ ಮೂಲಕ ತಿಳಿಸಿರುವ ಸರ್ಕಾರವು ಮಾಸ್ಕ್ ಧರಿಸದೆ ಈ ಮಾರ್ಗಸೂಚಿ ಉಲ್ಲಂಘನೆ ಮಾಡಿದವರಿಗೆ ದಂಡವನ್ನೂ ವಿಧಿಸುತ್ತಿದೆ. ಲಸಿಕೆ ಅಭಿಯಾನವನ್ನು ಕೂಡಾ ದೇಶದಲ್ಲಿ ಆರಂಭಿಸಲಾಗಿದೆ. ಆದರೆ ಇವೆಲ್ಲದರ ನಡುವೆ ರಾಮಂದೂರು ಗ್ರಾಮದಲ್ಲಿ ಗ್ರಾಮಸ್ಥರು ತಮ್ಮ ಊರಿಗೆ ಕೊರೊನಾ ಬರಬಾರದು ಎಂದು ಕೋಳಿ ಹಾಗೂ ಕುರಿಯನ್ನು ಬಲಿ ಕೊಟ್ಟು ಪೂಜೆ ಮಾಡಿದ್ದಾರೆ.
ತಮಿಳುನಾಡಲ್ಲಿ ಕೊರೊನಾ ದೇವಿ ದೇವಾಲಯ; ವಿಶೇಷ ಪೂಜೆ
ಸದ್ಯ ರಾಮಂದೂರು ಗ್ರಾಮದಲ್ಲಿ ಮೂರು ಕೊರೊನಾ ಪ್ರಕರಣಗಳು ದಾಖಲಾಗಿದೆ ಎಂದು ವರದಿಯಾಗಿದ್ದು, ಮುಂದಿನ ದಿನಗಳಲ್ಲಿ ನಮ್ಮೂರಿನಲ್ಲಿ ಕೊರೊನಾ ಸೋಂಕು ಹೆಚ್ಚಬಾರದು ಎಂದು ಗ್ರಾಮಸ್ಥರು ಪೂಜೆ ಮಾಡಿ, ಬಲಿ ನೀಡಿದ್ದಾರೆ. ಊರಿನ ನಾಲ್ಕು ಭಾಗದಲ್ಲಿ ಬೇವಿನ ಸೊಪ್ಪು ಹಾಗೂ ಹೊಂಗೆ ಸೊಪ್ಪಿನಲ್ಲಿ ಚಪ್ಪರ ಹಾಕಿ ಅದರೊಳಗೆ ಕಲ್ಲೊಂದನ್ನು ಇಟ್ಟು ಕೊರೊನಾ ಮಾರಿಯಮ್ಮನ ಪೂಜೆ ಮಾಡಿದ್ದಾರೆ ರಾಮಂದೂರು ಗ್ರಾಮಸ್ಥರು.
ಇನ್ನು ಇಂತಹ ಪೂಜೆ ನಡೆಯುವುದು ಇದೇ ಮೊದಲೇನಲ್ಲ, ಇತ್ತೀಚೆಗೆ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲ್ಲೂಕು ಮಧುವನಹಳ್ಳಿ ಬಳಿಯ ಬೋಳು ಗುಡ್ಡೆಯಲ್ಲಿರುವ ಚಾಮುಂಡಿ ದೇವಾಲಯದಲ್ಲಿ ಕೊರೊನಾ ಮಾರಮ್ಮನ ಮೂರ್ತಿಯನ್ನು ಪ್ರತಿಷ್ಠಾಪಿಸಿ ಜನರು ಪೂಜೆ ಮಾಡಿದ್ದರು. ಇಲ್ಲಿ ದಿನನಿತ್ಯ ವಿಶೇಷ ಹೋಮ, ಹವನ ನಡೆಸುವುದರೊಂದಿಗೆ ಲೋಕಕಲ್ಯಾಣಕ್ಕಾಗಿ ಪ್ರಾರ್ಥಿಸಲಾಗುತ್ತಿದೆ.
ಚಾಮರಾಜನಗರ; ಕೊರೊನಾ ದೇವಿಯ ಪ್ರತಿಷ್ಠಾಪಿಸಿ ಪೂಜೆ!
ಇದಕ್ಕೂ ಮುನ್ನ ತಮಿಳುನಾಡಿನ ಕೊಯಮತ್ತೂರಿನಲ್ಲಿ ಕಾಮಾಚಿಪುರಿ ಅಧೀನ ಪೀಠದ ವತಿಯಿಂದ ಕೊರೊನಾ ದೇವಿಯನ್ನು ಪ್ರತಿಷ್ಠಾಪಿಸಿ ಅರ್ಚಕರನ್ನು ನೇಮಿಸಿ 48 ದಿನಗಳ ಕಾಲ ವಿಶೇಷ ಪೂಜೆ ಪುನಸ್ಕಾರಗಳನ್ನು ನಡೆಸಲಾಗಿದೆ.
(ಒನ್ಇಂಡಿಯಾ ಸುದ್ದಿ)