ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಳವಳ್ಳಿಯನ್ನು ಮಲೆನಾಡು ಮಾಡಿದ ಸಾಲುಮರದ ನಾಗರಾಜ್

By ಮಂಡ್ಯ ಪ್ರತಿನಿಧಿ
|
Google Oneindia Kannada News

ಮಂಡ್ಯ, ಆಗಸ್ಟ್ 13: ನಗರೀಕರಣ, ಆಧುನೀಕರಣ ಬೆಳೆದಂತೆಲ್ಲ ಪ್ರಕೃತಿ ತನ್ನ ಸೌಂದರ್ಯದ ಜೊತೆಗೆ ಶಕ್ತಿಯನ್ನು ಕಳೆದುಕೊಳ್ಳುತ್ತಿದೆ. ಮನುಷ್ಯ ತನ್ನ ಸ್ವಾರ್ಥ ಜೀವನಕ್ಕಾಗಿ ಹಾಗೂ ಅಭಿವೃದ್ಧಿಯ ಹೆಸರಿನಲ್ಲಿ ದಿನ ನಿತ್ಯ ಸಾವಿರಾರು ಮರಗಳ ಮಾರಣ ಹೋಮ ಮಾಡುತ್ತಿದ್ದಾನೆ.

ಆದರೆ ಇದೆಲ್ಲದರ ನಡುವೆ ಇಲ್ಲೊಬ್ಬ ವ್ಯಕ್ತಿ ಪ್ರಕೃತಿಯೇ ತನ್ನ ಉಸಿರು, ಮರ- ಗಿಡಗಳು ತನ್ನ ಸರ್ವಸ್ವ ಎಂಬಂತೆ ಇದುವರೆಗೂ ಬರೋಬ್ಬರಿ 15 ಸಾವಿರಕ್ಕೂ ಹೆಚ್ಚು ಮರಗಳನ್ನು ಬೆಳೆಸಿದ್ದಾರೆ. ಇವರ ನಿಸ್ವಾರ್ಥ ಸೇವೆಗೆ ಅವರನ್ನು ಸಾಲುಮರದ ನಾಗರಾಜ್ ಎಂದು ಜನರು ಬಿರುದನ್ನು ಸಹ ಕೊಟ್ಟಿದ್ದಾರೆ.

ಮಂಡ್ಯ ಜಿಲ್ಲೆಯ ಮಳವಳ್ಳಿಯ ಸಾಲುಮರದ ನಾಗರಾಜ್ ಆಗಲು ಪರಿಸರ ಸಂರಕ್ಷಣೆಗೆ ಅವರ ಪರಿಶ್ರಮ ಅಪಾರವಾಗಿದ್ದು, ನಾಗರಾಜ್ ಆರೋಗ್ಯ ಸಮಾಜಕ್ಕಾಗಿ ನೀಡಿದ ಕೊಡುಗೆ ಅದ್ವಿತೀಯವಾಗಿದೆ.

Saalumarada Nagaraj Himself Converted An Entire Village Into A Green Haven

ಸಾಲುಮರದ ನಾಗರಾಜ್ 1979ರಲ್ಲಿ ಮಂಡ್ಯ ಜಿಲ್ಲೆ ಮಳವಳ್ಳಿ ಪಟ್ಟಣದ ಶಾಂತಿ ನಗರದಲ್ಲಿ ಜನಿಸಿದರು. ಬರೀ ಹತ್ತು ಗುಂಟೆ ಜಮೀನು ಹೊಂದಿದ್ದ ಇವರ ತಂದೆ ಅಷ್ಟೇನು ಸ್ಥಿತಿವಂತರಾಗಿರಲಿಲ್ಲ. ಬಡತನದಲ್ಲೆ ಬೆಳೆದ ನಾಗರಾಜ್ ತಮ್ಮ ಪರಿಸರ ಪ್ರೇಮದಿಂದ ಈಗ ಸಾಲುಮರದ ನಾಗರಾಜ್ ಆಗಿ ಬದಲಾಗಿದ್ದಾರೆ. ಮಳವಳ್ಳಿ ತಾಲ್ಲೂಕಿನಲ್ಲಿ ಬರೋಬ್ಬರಿ 15 ಸಾವಿರ ಮರ ಬೆಳೆಸಿ ಮಲೆನಾಡಿನ ರೀತಿ ಪರಿವರ್ತನೆಗೊಳಿಸಿದ್ದಾರೆ.

ಬಡತನದಲ್ಲಿ ಬೆಳೆದ ನಾಗರಾಜ್ ಅರಣ್ಯ ಇಲಾಖೆಯಲ್ಲಿ ಗುತ್ತಿಗೆ ನೌಕರನಾಗಿ ಕೆಲಸ ಮಾಡುತ್ತಿದ್ದರು. ಈ ವೇಳೆ ಪರಿಸರದ ಬಗ್ಗೆ ಅವರಿಗೆ ಅರಿವು ಹಾಗೂ ಮರ ಗಿಡಗಳ ಬಗ್ಗೆ ಅಪಾರ ಪ್ರೇಮ ಮೈಗೂಡಿಸಿಕೊಂಡರು. ನಂತರ ಅರಣ್ಯ ಇಲಾಖೆಯ ಗುತ್ತಿಗೆ ಕೆಲಸ ಹೋದರೂ, ಇವರ ಮರ ಗಿಡಗಳ ಮೇಲಿನ ಪ್ರೀತಿ ಹೋಗಲಿಲ್ಲ. ಹೀಗಾಗಿ ಅಂದಿನಿಂದ ಇಂದಿನವರೆಗೂ ಮಳವಳ್ಳಿ ಪಟ್ಟಣದಲ್ಲಿ ನಾಗರಾಜ್ ಗಿಡ- ಮರಗಳಗಳನ್ನು ನೆಟ್ಟು ಬೆಳೆಸುತ್ತಾ ಬಂದಿದ್ದಾರೆ.

ಎಲ್ಲಾದರೂ ಖಾಲಿ ಜಾಗ ಕಂಡರೆ ಸಾಕು ನಾಗರಾಜ್ ಅಲ್ಲೊಂದು ಗಿಡ ನೆಡುತ್ತಾರೆ. ಮಳವಳ್ಳಿ ಪಟ್ಟಣದ ಪ್ರಮುಖ ರಸ್ತೆಗಳು, ಪಾರ್ಕ್‌ಗಳು, ಸರ್ಕಾರಿ ಕಚೇರಿಗಳು ಹೀಗೆ ಹತ್ತು ಹಲವು ಜಾಗಗಳಲ್ಲಿ ನಾಗರಾಜ್ ಗಿಡ ನೆಟ್ಟಿದ್ದಾರೆ. ಅದೆಷ್ಟೋ ಗಿಡಗಳನ್ನು ವಿದ್ಯಾರ್ಥಿಗಳು, ಪರಿಸರ ಆಸಕ್ತರಿಗೆ ಕೊಟ್ಟು ಪರಿಸರದ ಬಗ್ಗೆ ಜಾಗೃತಿ ಮೂಡಿಸಿದ್ದಾರೆ. ಮಳವಳ್ಳಿ ಪಟ್ಟಣದಲ್ಲಿ ಅವರು ನೆಟ್ಟ ಗಿಡಗಳು ಈಗ ಬೃಹದಾಕಾರದ ಮರಗಳಾಗಿ ಬಂದ ಜನರಿಗೆ ನೆರಳು ನೀಡುತ್ತಿವೆ.

ಬರಡಾಗಿದ್ದ ಸರ್ಕಾರಿ ಜಾಗಗಳು ಇಂದು ಮರ ಗಿಡಗಳಿಂದ ಕಂಗೊಳಿಸುತ್ತಿವೆ. ಅದರಲ್ಲೂ ಪಟ್ಟಣದ ಸ್ಟೇಡಿಯಂ ರಸ್ತೆಯಲ್ಲಿ ನಾಗರಾಜ್ ನೆಟ್ಟ ಸಾಲು ಮರಗಳು ಇವರಿಗೆ ಸಾಲುಮರದ ನಾಗರಾಜ್ ಎಂಬ ಬಿರುದನ್ನ ತಂದು ಕೊಡುವುದರ ಜೊತೆಗೆ ದಿನ ನಿತ್ಯ ಸಾವಿರಾರು ಜನರಿಗೆ ತಂಪು ನೀಡುತ್ತಿವೆ.

ಇಂದಿಗೂ ನಾಗರಾಜ್ ಬಳಿ ಒಂದು ಸೈಕಲ್‌ ಇದೆ. ಆ ಸೈಕಲ್ಲಿನಲ್ಲೇ ಗಿಡ- ಮರಗಳಿಗೆ ನೀರುಣಿಸುತ್ತಾರೆ. ನಾಗರಾಜ್ ಬಡತನದಲ್ಲಿ ಬೆಳೆದಿದ್ದರಿಂದ ಯಾವತ್ತೂ ಅವರ ಸ್ವಾಭಿಮಾನ ಮರೆತಿಲ್ಲ. ಅವರು ಇಷ್ಟು ದಿನ ಪರಿಸರಕ್ಕಾಗಿ ಏನೇ ಮಾಡಿದ್ದರೂ ಅದು ಗಿಡ- ಮರಗಳ ಮೇಲಿನ ಪ್ರೀತಿಯಿಂದ. ನಾಗರಾಜ್‌ರವರ ಪರಿಸರ ಪ್ರೇಮ ಮೆಚ್ಚಿ ಹಲವು ಜನರು ಹಣದ ಸಹಾಯ ಮಾಡಿದರು. ಆದರೆ ನಾಗರಾಜ್ ಆ ಹಣವನ್ನು ಮುಟ್ಟದೆ ತಮ್ಮ ಸ್ವಾಭಿಮಾನ ಮೆರೆದಿದ್ದಾರೆ. ಇಂದಿಗೂ ಸೈಕಲ್‌ನಲ್ಲೇ ಗಿಡಗಳನ್ನು ಸಾಗಿಸುತ್ತಾ ಖಾಲಿ ಜಾಗ ಕಂಡ ತಕ್ಷಣ ಅಲ್ಲೊಂದು ಗಿಡ ನೆಟ್ಟು ಸಂತೋಷ ಪಡುತ್ತಾರೆ.

ಪರಿಸರ ಪ್ರೇಮಕ್ಕೆ ಸಂದ ಪ್ರಶಸ್ತಿಗಳು

Recommended Video

ದಂಪತಿಗಳು ನಾಗ ಪೂಜೆಯನ್ನು ಹೇಗೆ ಮಾಡಿದ್ರೆ ಒಳ್ಳೇದು ಗೊತ್ತಾ? | Oneindia Kannada

ನಾಗರಾಜ್‌ರವರ ಪರಿಸರದ ಬಗ್ಗೆ ಕಾಳಜಿ ಕಂಡು ಹಲವು ಸಂಘ- ಸಂಸ್ಥೆಗಳು ಹಲವಾರು ಪ್ರಶಸ್ತಿಗಳನ್ನು ನೀಡಿ ಗೌರವಿಸಿವೆ. ಮಳವಳ್ಳಿ ಯುವಕ ಮಿತ್ರ ಮಂಡಳಿ ಇವರಿಗೆ ಸಾಲುಮರದ ನಾಗರಾಜ್ ಎಂಬ ಬಿರುದನ್ನು ಸಹ ನೀಡಿ ಗೌರವಿಸಿವೆ. ಅಲ್ಲದೆ ಮಳವಳ್ಳಿ ತಾಲೂಕು ಕನ್ನಡ ರಾಜ್ಯೋತ್ಸವ, ಜಿಲ್ಲಾ ಪ್ರಶಸ್ತಿಗಳನ್ನು ಕೂಡ ನಾಗರಾಜ್‌ಗೆ ನೀಡಲಾಗಿದೆ.‌ ಪರಿಸರದ ಮೇಲಿನ ಕಾಳಜಿ, ಅವರ ನಿಸ್ವಾರ್ಥ ಸೇವೆಗೆ ಸಾಲುಮರದ ನಾಗರಾಜ್ ಮಂಡ್ಯ್ ಜಿಲ್ಲೆಯ ಜನರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

English summary
Saalumarada Nagaraj himself converted an entire village into a green haven at Malavalli taluk in Mandya district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X