• search
  • Live TV
ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಒಂದು ಜಿಲ್ಲೆ ಒಂದು ಉತ್ಪನ್ನ: ಮಂಡ್ಯದ ಬೆಲ್ಲಕ್ಕೆ ಬರಲಿದೆಯಾ ಶುಕ್ರದೆಸೆ?

|

ಮಂಡ್ಯ, ಜನವರಿ 11: ಪ್ರಧಾನಮಂತ್ರಿ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮ ಬದ್ಧಗೊಳಿಸುವಿಕೆಯ ಯೋಜನೆಯಲ್ಲಿ ಒಂದು ಜಿಲ್ಲೆ ಒಂದು ಉತ್ಪನ್ನದಡಿ ಮಂಡ್ಯದ ಬೆಲ್ಲಕ್ಕೆ ಮಾನ್ಯತೆ ನೀಡಲಾಗಿದೆ. ಇದರಿಂದ ಸಕ್ಕರೆ ಕಾರ್ಖಾನೆಗಳ ಹೊಡೆತದ ನಡುವೆಯೂ ಕಬ್ಬು ಬೆಳೆದು ಆಲೆಮನೆಯಲ್ಲಿ ಬೆಲ್ಲ ತಯಾರಿಸುತ್ತಾ ಬಂದಿರುವ ರೈತರಲ್ಲಿ ಭರವಸೆಯ ಬೆಳಕೊಂದು ಮಿಂಚಿದ ಅನುಭವವಾಗುತ್ತಿದೆ.

ಮಂಡ್ಯದ ಬೆಲ್ಲ ತನ್ನದೇ ಆದ ಹೆಸರಿನಿಂದ ದೇಶ, ವಿದೇಶಗಳಲ್ಲಿ ಖ್ಯಾತಿ ಪಡೆದಿದ್ದರೂ ಅದನ್ನು ತಯಾರಿಸುವ ರೈತರ ಸಂಕಷ್ಟ ಮಾತ್ರ ದೂರವಾಗಿಲ್ಲ. ಕೂಲಿ ಕಾರ್ಮಿಕರ ಸಮಸ್ಯೆ, ಸೂಕ್ತ ಮಾರುಕಟ್ಟೆ ಕೊರತೆ, ದರ ಕುಸಿತ ಸೇರಿದಂತೆ ಹಲವು ಸಮಸ್ಯೆಗಳನ್ನೇ ಎದುರಿಸಿಕೊಂಡು ಬಂದಿದ್ದ ಕಬ್ಬು ತಯಾರಕರಲ್ಲಿ ಈಗ ಹೊಸ ನಿರೀಕ್ಷೆಯೊಂದು ಮೂಡಿದಂತಾಗಿದೆ.

ಬೆಲ್ಲಕ್ಕೆ ಮಾರಕವಾದ ಸಕ್ಕರೆಯ ಪೈಪೋಟಿ

ಬೆಲ್ಲಕ್ಕೆ ಮಾರಕವಾದ ಸಕ್ಕರೆಯ ಪೈಪೋಟಿ

ಹಿಂದಿನ ಕಾಲದಲ್ಲಿ ಬಹುತೇಕ ಜನರು ಬೆಲ್ಲವನ್ನೇ ಅವಲಂಬಿಸಿದ್ದರು. ಆದರೆ ಮಂಡ್ಯದಲ್ಲಿ ರಾಜ್ಯದ ಮೊದಲ ಸಕ್ಕರೆ ಕಾರ್ಖಾನೆ ಆರಂಭವಾಗಿದ್ದರೂ ಇಲ್ಲಿನ ಜನ ಬೆಲ್ಲವನ್ನೇ ಬಳಸುತ್ತಿದ್ದರು. ಕ್ರಮೇಣ ಎಲ್ಲೆಡೆ ಸಕ್ಕರೆ ಕಾರ್ಖಾನೆಗಳು ಹೆಚ್ಚಾದಂತೆ ಜತೆಗೆ ಬಗೆಬಗೆಯ ಸಿಹಿ ಉತ್ಪನ್ನಗಳು ಮಾರುಕಟ್ಟೆಗೆ ಬರಲಾರಂಭಿಸಿದವು. ಇವುಗಳೆಲ್ಲವೂ ಸಕ್ಕರೆಯನ್ನು ಅವಲಂಬಿಸಿದ್ದರಿಂದ ಸಕ್ಕರೆಗೆ ಬೇಡಿಕೆ ಹೆಚ್ಚಾಯಿತು. ಜತೆಗೆ ಜನಸಾಮಾನ್ಯರು ಕೂಡ ತಾವು ಉಪಯೋಗಿಸಿಕೊಂಡು ಬರುತ್ತಿದ್ದ ಬೆಲ್ಲವನ್ನು ಕಡಿಮೆಗೊಳಿಸಿ ಸಕ್ಕರೆಗೆ ಮಾರುಹೋಗ ತೊಡಗಿದರು. ಇದರ ಪರಿಣಾಮ ನೇರವಾಗಿ ಆಲೆಮನೆಗಳ ಮೇಲೆ ಬೀರಿತು. ಬೆಲ್ಲದ ದರ ಕುಸಿತ, ಸಮರ್ಪಕ ಮಾರುಕಟ್ಟೆಯಿಲ್ಲದೆ ಪರದಾಟಗಳು ಶುರುವಾದವು. ಇನ್ನು ಬೆಲ್ಲವನ್ನು ನಂಬಿ ಆಲೆಮನೆ ನಡೆಸುವುದು ಸಾಧ್ಯವಿಲ್ಲ ಎಂದರಿತ ರೈತರು ಆಲೆಮನೆಯನ್ನು ಮುಚ್ಚಲಾರಂಭಿದರು. ಹೀಗಾಗಿ ಮಂಡ್ಯದಲ್ಲಿ ಮೊದಲಿಗೆ ಹೋಲಿಸಿದರೆ ಆಲೆಮನೆಗಳ ಸಂಖ್ಯೆ ಕಡಿಮೆಯಾಗುತ್ತಾ ಬರುತ್ತಿದೆ.

ಒಂದು ಜಿಲ್ಲೆ, ಒಂದು ಉತ್ಪನ್ನ: ಉತ್ತರ ಕನ್ನಡದ ಸಾಂಬಾರು ಪದಾರ್ಥಕ್ಕಿದೆ ಜಗತ್ತಿನಾದ್ಯಂತ ಬೇಡಿಕೆ

ಎಲ್ಲೆಂದರಲ್ಲಿ ಕಾಣಿಸುತ್ತಿದ್ದ ಅಲೆಮನೆಗಳು

ಎಲ್ಲೆಂದರಲ್ಲಿ ಕಾಣಿಸುತ್ತಿದ್ದ ಅಲೆಮನೆಗಳು

ಈಗಾಗಲೇ ಕಬ್ಬು ಬೆಳೆದ ಬೆಳೆಗಾರರು ಸಕ್ಕರೆ ಕಾರ್ಖಾನೆಗೆ ನೀಡಿ ಅಲ್ಲಿಂದ ಬಾಕಿ ಸಿಗದೆ ಪರದಾಡುತ್ತಿರುವಾಗ ಇದ್ದ ಕಬ್ಬನ್ನು ಬೆಲ್ಲ ತಯಾರಿಸಿ ಮಾರಿ ಅದರಿಂದ ಒಂದಷ್ಟು ಆದಾಯ ಮಾಡಿಕೊಳ್ಳುವ ರೈತ ತುಸು ನೆಮ್ಮದಿ ಪಡುತ್ತಿದ್ದಾನೆ. ಇವತ್ತು ಎಲ್ಲೆಂದರಲ್ಲಿ ಆಲೆಮನೆಗಳು ಕಾಣಿಸುತ್ತಿಲ್ಲ. ಆದರೆ ನಾಲ್ಕೈದು ದಶಕಗಳ ಹಿಂದೆ ಆಲೆಮನೆಯ ವೈಭವ ಎಲ್ಲೆಡೆ ಕಂಡುಬರುತ್ತಿತ್ತು. ಕಬ್ಬನ್ನು ಎತ್ತು ಅಥವಾ ಮೋಟಾರುಗಳ ಗಾಣದಲ್ಲಿ ಕಬ್ಬನ್ನು ಅರೆದು ಅದರ ಹಾಲನ್ನು ಕಾಲುವೆ ಮೂಲಕ ಕೊಪ್ಪರಿಗೆಗೆ ಹರಿಸಿ ಅದನ್ನು ಬೆಂಕಿಯಲ್ಲಿ ಕುದಿಸಿ(ಉರುವಲು ಕೂಡ ಕಬ್ಬಿನ ಸಿಪ್ಪೆಯನ್ನೇ ಬಳಸಿ) ಅದರ ಕಸ-ನೊರೆಯನ್ನೆಲ್ಲ ತೆಗೆದು ಪಾಕಕ್ಕೆ ಸುಣ್ಣವನ್ನು ಹಾಕಿ ಗಟ್ಟಿಯಾಗಿಸಿ ಬಳಿಕ ಅಂಟಾದ ಪಾಕವನ್ನು ತಮಗೆ ಬೇಕಾದ ಆಕಾರದ ಅಚ್ಚುಗಳಿಗೆ ಹಾಕಿ ಗಟ್ಟಿಯಾದ ಬಳಿಕ ತೆಗೆದು ಅದನ್ನು ಪೊಟ್ಟಣದಲ್ಲಿ ಕಟ್ಟಿ ಮಾರಾಟ ಮಾಡಲಾಗುತ್ತಿತ್ತು.

ಬೆಲ್ಲದಿಂದಲೇ ಸಿಹಿಪದಾರ್ಥ ತಯಾರು

ಬೆಲ್ಲದಿಂದಲೇ ಸಿಹಿಪದಾರ್ಥ ತಯಾರು

ಕೆಲವೊಮ್ಮೆ ಈ ಬೆಲ್ಲಗಳು ನೋಡಲು ಅಂದವಾಗಿ ಕಾಣದಿದ್ದರೂ ಆರೋಗ್ಯಕ್ಕೆ ಪೂರಕವಾಗಿದ್ದವು. ಈ ಬೆಲ್ಲವನ್ನು ಬಳಸಿ ಪಾಯಸ, ಸಿಹಿ ಪೊಂಗಲ್, ಕಜ್ಜಾಯ, ಹೋಳಿಗೆ, ಅಕ್ಕಿ ತಂಬಿಟ್ಟು, ಕಾಫಿ, ಟೀ ಎಲ್ಲವನ್ನು ಮಾಡಲಾಗುತ್ತಿತ್ತು. ಅದರಲ್ಲೂ ಕಪ್ಪು ಬಣ್ಣದ ಬೆಲ್ಲವನ್ನು ಮಲೆನಾಡಿಗರು ಹೆಚ್ಚು ಇಷ್ಟಪಡುತ್ತಿದ್ದರು. ಮಳೆಗಾಲ ಸೇರಿದಂತೆ ಎಲ್ಲ ಕಾಲದಲ್ಲಿಯೂ ಕಪ್ಪು ಬೆಲ್ಲದಿಂದ ತಯಾರಿಸಿದ ಕಾಫಿಯನ್ನು ಕುಡಿಯುತ್ತಿದ್ದರು. ಆದರೆ ಈಗ ಅಲ್ಲಿಯೂ ಸಕ್ಕರೆಯ ಬಳಕೆ ಹೆಚ್ಚಾಗಿ ಬೆಲ್ಲ ಕಡಿಮೆಯಾಗಿದೆ. ಆಗಿನ ಕಾಲದಲ್ಲಿ ಸಕ್ಕರೆಗೆ ಹೆಚ್ಚಿನ ಬೆಲೆಯಿತ್ತು. ಬೆಲ್ಲ ಕಡಿಮೆ ದರದಲ್ಲಿ ದೊರೆಯುತ್ತಿತ್ತು. ಸಕ್ಕರೆ ಕಾರ್ಖಾನೆಗಳು ಹೆಚ್ಚಾದಂತೆ ಪೈಪೋಟಿಗಳು ಆರಂಭವಾಯಿತು. ಜನರ ಆದಾಯದಲ್ಲಿಯೂ ಹೆಚ್ಚಳವಾಯಿತು. ಹೀಗಾಗಿ ಸಕ್ಕರೆಯ ಉಪಯೋಗವನ್ನು ಹೆಚ್ಚು ಮಾಡಲಾರಂಭಿಸಿದರು.

ಆಲೆಮನೆಗಳಲ್ಲಿ ಗುಣಮಟ್ಟದ ಬೆಲ್ಲ ಉತ್ಪಾದನೆ

ಆಲೆಮನೆಗಳಲ್ಲಿ ಗುಣಮಟ್ಟದ ಬೆಲ್ಲ ಉತ್ಪಾದನೆ

ಬೆಲ್ಲವನ್ನು ಉಪಯೋಗ ಮಾಡುತ್ತಿದ್ದ ಕಾಲದಲ್ಲಿ ಜನರು ಆರೋಗ್ಯವಾಗಿಯೇ ಇದ್ದರು. ಬೆಲ್ಲವನ್ನು ತಯಾರಿಸುವ ಆಲೆಮನೆಯವರು ಗುಣಮಟ್ಟಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದರು. ಆದರೆ ಇತ್ತೀಚೆಗಿನ ತಲೆಮಾರಿನ ಜನಕ್ಕೆ ಬೆಲ್ಲದ ಗುಣಮಟ್ಟಕ್ಕಿಂತ ಅದರ ಅಂದ ಹೆಚ್ಚು ಆಕರ್ಷಣೀಯವಾಗಿದ್ದರಿಂದ ಮತ್ತು ಆಕರ್ಷಕವಾದ ಬೆಲ್ಲವನ್ನು ಕಾರ್ಖಾನೆಗಳು ತಯಾರಿಸಲು ಆರಂಭಿಸಿದ ಬಳಿಕ ಬೆಲ್ಲದ ಗುಣಮಟ್ಟ ಕುಸಿಯಲಾರಂಭಿಸಿತು.

ಬೆಲ್ಲಕ್ಕೆ ಕುತ್ತು ತಂದ ರಾಸಾಯನಿಕ ಬಳಕೆ

ಬೆಲ್ಲಕ್ಕೆ ಕುತ್ತು ತಂದ ರಾಸಾಯನಿಕ ಬಳಕೆ

ಹೊರಗಿನಿಂದ ಬಂದವರು ಇಲ್ಲಿ ಬೆಲ್ಲ ತಯಾರಿಸಲು ಆರಂಭಿಸಿದರು. ಅವರಿಗೆ ಮಂಡ್ಯ ಬೆಲ್ಲದ ಘನತೆಯನ್ನು ಉಳಿಸುವ ಉಮೇದು ಇರಲಿಲ್ಲ. ಲಾಭವಷ್ಟೆ ಅಗತ್ಯವಿತ್ತು. ಹೀಗಾಗಿ ಸೋಡಿಯಂ ಬೈ ಕಾರ್ಬೋನೆಟ್, ಸೂಪರ್ ಫಾಸ್ಪೇಟ್, ಸಲ್ಫರ್ ನಂತಹ ಕೆಮಿಕಲ್‍ಗಳನ್ನು ಬಳಸ ತೊಡಗಿದರು. ಇದು ಬೆಲ್ಲದಲ್ಲಿದ್ದ ಆರೋಗ್ಯಕರ ಗುಣವನ್ನು ನಾಶ ಮಾಡಿತು. ಆದರೆ ನೋಡಲು ಆಕರ್ಷಕವಾಗಿತ್ತು. ಗ್ರಾಹಕರು ಇವರು ತಯಾರಿಸುತ್ತಿದ್ದ ಬಿಳಿ ಅಥವಾ ಹಳದಿ ಬಣ್ಣದ ಬೆಲ್ಲದತ್ತ ಮುಖಮಾಡಿದ್ದರಿಂದ ಬೇಡಿಕೆ ಹೆಚ್ಚಾಯಿತು. ಇದರ ನಡುವೆ ಆರೋಗ್ಯಕಾರಿಯಾಗಿದ್ದ ದೇಸಿ ಬೆಲ್ಲ ಸೊರಗಿತು. ಪ್ರತಿಸ್ಪರ್ಧಿಯಾಗಿ ಹೋರಾಡಲು ಸಾಧ್ಯವಾಗದೆ ಪರಂಪರಾನುಗತವಾಗಿ ನಡೆಸಿಕೊಂಡು ಬಂದಿದ್ದ ಆಲೆಮನೆಗಳನ್ನು ಮುಚ್ಚಲಾರಂಭಿಸಿದರು. ಇನ್ನು ಕೆಲವು ಸಣ್ಣ ರೈತರು ತಾವು ಉಳಿದುಕೊಳ್ಳಲು ಅವರ ಮಾರ್ಗವನ್ನು ಅನುಸರಿಸಿದರು. ಪರಿಣಾಮ ಮಂಡ್ಯದ ಬೆಲ್ಲದ ಗುಣಮಟ್ಟ ಕಳಪೆಯಾಯಿತು.

ಅಲೆಮನೆಗೂ ಬರಲಿದೆ ಹೈಟೆಕ್ ಸ್ಪರ್ಶ

ಅಲೆಮನೆಗೂ ಬರಲಿದೆ ಹೈಟೆಕ್ ಸ್ಪರ್ಶ

ಮಂಡ್ಯದ ಬೆಲ್ಲದ ಹೆಸರಿನಲ್ಲಿ ಕೆಲವರು ಕಳಪೆ ಬೆಲ್ಲವನ್ನು ತಯಾರಿಸಿ ಮಾರಾಟ ಮಾಡುತ್ತಿರುವುದು ಇತ್ತೀಚೆಗೆ ಸುದ್ದಿಯಾಗಿತ್ತು. ಹೀಗಾಗಿ ಜಿಲ್ಲಾಡಳಿತ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದನ್ನು ಸ್ಮರಿಸಬಹುದು. ಇತ್ತೀಚೆಗಿನ ದಿನಗಳಲ್ಲಿ ಸಕ್ಕರೆಯ ಬಳಕೆಯಿಂದ ಹಲವು ರೋಗಗಳು ಅದರಲ್ಲೂ ಮಧುಮೇಹ ರೋಗವು ಹೆಚ್ಚು ಜನರನ್ನು ಕಾಡುತ್ತಿರುವುದರಿಂದ ಜನ ಬೆಲ್ಲದತ್ತ ಒಲವು ತೋರಿ ಅದರ ಬಳಕೆಗೆ ಒತ್ತು ನೀಡುತ್ತಿದ್ದಾರೆ. ಒಂದು ಜಿಲ್ಲೆ ಒಂದು ಉತ್ಪನ್ನದಡಿ ಮಂಡ್ಯದ ಬೆಲ್ಲಕ್ಕೆ ಮಾನ್ಯತೆ ನೀಡಿರುವುದರಿಂದ ಇದರ ಪುನಶ್ಚೇತನವಾದರೆ ಒಂದಷ್ಟು ಉಪಯೋಗಗಳು ಆಗುವ ಲಕ್ಷಣಗಳು ಕಾಣಿಸುತ್ತವೆ. ಆಲೆಮನೆಗಳಿಗೆ ಮರು ಜೀವ ಬರಲಿವೆ. ಸ್ಥಳೀಯವಾಗಿ ಉದ್ಯೋಗಗಳು ದೊರೆಯಲಿವೆ. ಜತೆಗೆ ಮಂಡ್ಯದ ಬೆಲ್ಲಕ್ಕೆ ಮಾನ್ಯತೆ ಬರುವುದರಿಂದ ಮಾರುಕಟ್ಟೆಯೂ ಇನ್ನಷ್ಟು ವಿಸ್ತರಣೆಯಾಗಲಿದೆ. ಜತೆಗೆ ಅಲೆಮನೆಗೂ ಹೈಟೆಕ್ ಸ್ಪರ್ಶ ಸಿಗಲಿದೆ.

ದೇಶ-ವಿದೇಶಗಳಲ್ಲಿ ಸದ್ದು ಮಾಡಲಿದೆ

ದೇಶ-ವಿದೇಶಗಳಲ್ಲಿ ಸದ್ದು ಮಾಡಲಿದೆ

ಇನ್ನು ಬೆಲ್ಲದ ಬಗ್ಗೆ ಹೇಳುವುದಾದರೆ ಮಂಡ್ಯದಲ್ಲಿಂದು ಹಲವು ವಿಧದ ಬೆಲ್ಲಗಳನ್ನು ಕಾಣಬಹುದಾಗಿದೆ. ಇವು ರುಚಿಯಲ್ಲಿ ಒಂದೇ ಇರುತ್ತದೆ. ಆದರೆ ಆಕಾರಗಳಲ್ಲಷ್ಟೆ ಬದಲಾವಣೆಗಳು ಕಾಣುತ್ತವೆ. ಉಂಡೆ ಬೆಲ್ಲ, ಅಚ್ಚು ಬೆಲ್ಲ, ಕುರಿಕಾಲಚ್ಚು ಬೆಲ್ಲ, ಬಕೆಟ್ ಬೆಲ್ಲ, ಪುಡಿ ಬೆಲ್ಲ ಹೀಗೆ ಹಲವು ರೀತಿಯ ಬೆಲ್ಲಗಳನ್ನು ತಯಾರಿಸಲಾಗುತ್ತದೆ. ಇವುಗಳಿಗೆ ನಿರ್ಧಿಷ್ಟ ಬೆಲೆಗಳನ್ನು ನಿಗದಿ ಮಾಡಿ ಮಾರಾಟ ಮಾಡಲಾಗುತ್ತಿದೆ. ಹಿಂದೆ ಬೆಲ್ಲವನ್ನು ತೆಂಗಿನ ಗರಿಗಳಿಂದ ಮಾಡಿ ಬೆಲ್ಲ ಪಿಂಡಿಗಳಲ್ಲಿ ಜೋಡಿಸಿ ಮಾರಾಟ ಮಾಡುತ್ತಿದ್ದ ಕಾಲವಿತ್ತು. ಈಗಾಗಲೇ ಇಲ್ಲಿನ ಬಕೆಟ್ ಬೆಲ್ಲಗಳು ಮಲೇಶಿಯಾ ಮತ್ತು ಕೊಲ್ಲಿ ರಾಷ್ಟ್ರಗಳು ಸೇರಿದಂತೆ ಹಲವು ರಾಷ್ಟ್ರಗಳಿಗೆ ರಪ್ತು ಆಗಿವೆ. ಎಲ್ಲವೂ ಸರಿ ಹೋದರೆ ದಿನಗಳಲ್ಲಿ ಮಂಡ್ಯದ ಬೆಲ್ಲಕ್ಕೆ ಶುಕ್ರದೆಸೆ ಆರಂಭವಾಗಲಿದೆ.

English summary
Recognized Mandya Jaggery under One district one product project.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X