• search
  • Live TV
ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಲಂಚದ ವಿಚಾರಕ್ಕೆ ಅಧಿಕಾರಿ, ಫಲಾನುಭವಿಯಿಂದ ಆಣೆ-ಪ್ರಮಾಣ

|

ಮಂಡ್ಯ, ನವೆಂಬರ್ 5: ಲಂಚ ನೀಡಿದ್ದೇನೆಂದು ಫಲಾನುಭವಿ ಮತ್ತು ಲಂಚ ಪಡೆದಿಲ್ಲವೆಂದು ಸರ್ಕಾರಿ ಅಧಿಕಾರಿ. ಹೀಗೆ ಇಬ್ಬರು ಒಂದೇ ದೇವಾಲಯದಲ್ಲಿ ಪ್ರಮಾಣ ಮಾಡಿದ ಘಟನೆ ಕೆ.ಆರ್.ಪೇಟೆ ಪಟ್ಟಣದ ಲಕ್ಷ್ಮೀನಾರಾಯಣಸ್ವಾಮಿ ದೇವಾಲಯದ ಆವರಣದಲ್ಲಿ ನಡೆದಿದೆ.

ಸಾಮಾನ್ಯವಾಗಿ ರಾಜಕಾರಣಿಗಳು ಆರೋಪ-ಪ್ರತ್ಯಾರೋಪಗಳನ್ನು ಸಾಬೀತು ಮಾಡಲು ದೇವಸ್ಥಾನದಲ್ಲಿ ಆಣೆ-ಪ್ರಮಾಣ ಮಾಡುವ ಹೇಳಿಕೆಗಳನ್ನು ನೀಡುವುದು ಆಗಾಗ್ಗೆ ನಡೆಯುತ್ತದೆ.

ಮದುವೆಗೆ ನಿರಾಕರಣೆ; ಇಬ್ಬರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆಮದುವೆಗೆ ನಿರಾಕರಣೆ; ಇಬ್ಬರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ

ಆದರೆ ಸರ್ಕಾರಿ ಅಧಿಕಾರಿಯೊಬ್ಬ ಲಂಚ ಪಡೆದಿಲ್ಲ ಎಂಬುದನ್ನು ಸಾಬೀತುಪಡಿಸಲು ದೇವಾಲಯದ ಮುಂದೆ ಆಣೆ-ಪ್ರಮಾಣ ಮಾಡಿರುವುದಲ್ಲದೇ, ಲಂಚ ನೀಡಿದ್ದೇನೆ ಎನ್ನುವ ಫಲಾನುಭವಿಯೂ ಲಂಚ ನೀಡಿರುವುದಕ್ಕೆ ಸಾಕ್ಷಿ ಇಲ್ಲದ ಕಾರಣ ದೇವರ ಮುಂದೆ ಹಾರ ಹಾಕಿಕೊಂಡು ಪ್ರಮಾಣ ಮಾಡಿರುವುದು ಅಚ್ಚರಿಗೆ ಕಾರಣವಾಗಿದೆ.

ಕೆ.ಆರ್ ಪೇಟೆ ತಾಲ್ಲೂಕಿನ ಹೊಸಹೊಳಲು ಗ್ರಾಮದ ಯುವಕ ಹರೀಶ್, ನಾನು ಅಂಬೇಡ್ಕರ್ ಅಭಿವೃದ್ಧಿ ನಿಗಮದ ವತಿಯಿಂದ ಸಾಲ ಸೌಲಭ್ಯವನ್ನು ಪಡೆಯಲು ಅಂಬೇಡ್ಕರ್ ಅಭಿವೃದ್ಧಿ ನಿಗಮದ ವಿಸ್ತರಣಾಧಿಕಾರಿ ಕೃಷ್ಣಪ್ಪ ಅವರಿಗೆ ಸುಮಾರು 1 ಲಕ್ಷ ರೂ. ಲಂಚ ನೀಡಿದ್ದೇನೆ ಎಂದು ಪ್ರಮಾಣ ಮಾಡಿದರು.

ಇದಕ್ಕೆ ಪ್ರತಿಯಾಗಿ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಕೆ.ಆರ್.ಪೇಟೆ ತಾಲೂಕು ವಿಸ್ತರಣಾಧಿಕಾರಿ ಕೃಷ್ಣಪ್ಪ ಅವರು ಕೂಡ, ಇದೇ ದೇವರ ಮುಂದೆ ನಾನು ದೇವರಾಣೆಗೂ ಲಂಚ ಪಡೆದಿಲ್ಲ, ಹರೀಶ್ ಅವರು ಮಾಡುತ್ತಿರುವ ಆರೋಪದಲ್ಲಿ ಹುರುಳಿಲ್ಲ. ಅವರು ಮಾಡುತ್ತಿರುವ ಆರೋಪವು ಸುಳ್ಳಿನ ಕಂತೆಯಾಗಿದೆ. ಒಂದು ವೇಳೆ ನಾನು ಲಂಚ ಪಡೆದಿದ್ದರೆ ನನಗೆ ದೇವರು ಉಗ್ರವಾದ ಶಿಕ್ಷೆ ನೀಡಲಿ. ನನ್ನ ವಂಶ ನಿರ್ವಂಶವಾಗಲಿ ಎಂದು ಗ್ರಾಮೀಣ ಭಾಷೆಯಲ್ಲಿ ಪ್ರಮಾಣ ಮಾಡಿದ್ದಾರೆ.

ಲಂಚ ನೀಡಿದ್ದೇನೆ ಎಂದು ಆರೋಪ ಮಾಡುತ್ತಿರುವ ಹೊಸಹೊಳಲು ಗ್ರಾಮದ ಯುವಕ ಹರೀಶ್ ಅವರು ಮಾತನಾಡಿ, ಅಂಬೇಡ್ಕರ್ ಅಭಿವೃದ್ಧಿ ನಿಗಮದ ವತಿಯಿಂದ ಸಾಲ ಸೌಲಭ್ಯವನ್ನು ಪಡೆಯಲು ಚಿನ್ನದ ಆಭರಣಗಳನ್ನು ಗಿರವಿಯಿಟ್ಟು ಒಂದು ಲಕ್ಷ ರೂ. ಹಣವನ್ನು ಪಟ್ಟಣದ ಮಿನಿ ವಿಧಾನಸೌಧದಲ್ಲಿ ನೀಡಿದ್ದೇನೆ. ಇದಕ್ಕೆ ನನ್ನ ಬಳಿ ಸಾಕ್ಷಿ ಇಲ್ಲದ ಕಾರಣ ಅಧಿಕಾರಿ ಕೃಷ್ಣಪ್ಪ ಅವರು ಹಣ ನೀಡಿಲ್ಲ ಎಂದು ಹೇಳುತ್ತಿದ್ದಾರೆ ಎಂದರು.

ಹಾಗಾಗಿ ನಾನು ಲಂಚ ನೀಡಿರುವುದನ್ನು ಸಾಭೀತುಪಡಿಸಲು ದೇವರ ಮುಂದೆ ಪ್ರಮಾಣ ಮಾಡಿದ್ದೇನೆ. ಅಂಬೇಡ್ಕರ್ ಅಭಿವೃದ್ಧಿ ನಿಗಮದ ವಿಸ್ತರಣಾಧಿಕಾರಿ ಕೃಷ್ಣಪ್ಪ ನಾನು ನೀಡಿರುವ ಹಣವನ್ನು ಹಿಂದಿರುಗಿಸದೇ ಇದ್ದರೆ, ನನ್ನ ಸಾವಿಗೆ ಕೃಷ್ಣಪ್ಪನೇ ಕಾರಣ ಎಂದು ಪತ್ರ ಬರೆದಿಟ್ಟು ವಿಷ ಸೇವಿಸಿ ಸಾಯುತ್ತೇನೆ ಎಂದು ಇದೇ ವೇಳೆ ಬೆದರಿಕೆ ಹಾಕಿದರು.

ಈ ಕುರಿತಂತೆ ಅಧಿಕಾರಿ ಕೃಷ್ಣಪ್ಪ ಅವರು ಮಾತನಾಡಿ, ನಾನು ಕಳೆದ ಎಂಟು ವರ್ಷಗಳಿಂದ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಕೆ.ಆರ್.ಪೇಟೆ ತಾಲೂಕಿನ ವಿಸ್ತರಣಾಧಿಕಾರಿಯಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇನೆ. ಎಂಟು ವರ್ಷಗಳಿಂದ ತಾಲ್ಲೂಕಿನಲ್ಲಿ ಸಾರ್ಥಕ ಸೇವೆ ಸಲ್ಲಿಸಿ ಒಳ್ಳೆಯ ಹೆಸರು ಗಳಿಸಿದ್ದೇನೆ. ರಾಜಕೀಯ ದುರುದ್ದೇಶದಿಂದ ಹರೀಶ್ ಕಟ್ಟುಕಥೆ ಸೃಷ್ಠಿಸಿ, ಸುಳ್ಳು ಆರೋಪ ಮಾಡುತ್ತಿದ್ದಾರೆ. ಹರೀಶ್ ಅವರಿಂದ ಅರ್ಧ ಟೀ ಸಹ ಕುಡಿದಿಲ್ಲ ಎಂದು ಹೇಳಿದ್ದಾರೆ.

ಅದು ಏನೇ ಇರಲಿ ಫಲಾನುಭವಿ ಹರೀಶ್ ಸಾಲ ಸೌಲಭ್ಯ ಪಡೆಯಲು ಲಂಚ ನೀಡಿದ್ದೇನೆ ಎನ್ನುವುದಕ್ಕೆ ಸಾಕ್ಷಿ ಇರುವುದಿಲ್ಲ. ಅಧಿಕಾರಿ ಕೃಷ್ಣಪ್ಪ ಲಂಚ ಪಡೆದಿರುವುದಕ್ಕೆ ಯಾವುದೇ ಪುರಾವೆ ಇಲ್ಲ ಹಾಗಾಗಿ ಇಬ್ಬರೂ ದೇವರ ಸನ್ನಿಧಿಯಲ್ಲಿ ಪ್ರಮಾಣ ಮಾಡುವ ಮೂಲಕ ಚರ್ಚೆಗೆ ಗ್ರಾಸವಾಗಿದ್ದಾರೆ. ಒಬ್ಬ ಅಧಿಕಾರಿಯಾಗಿ ಸಂವಿಧಾನದ ಅಡಿಯಲ್ಲಿ ಕಾನೂನು ಪ್ರಕಾರ ಕರ್ತವ್ಯ ನಿರ್ವಹಿಸುವ ಬದಲು ದೇವರ ಸನ್ನಿಧಿಯಲ್ಲಿ ಆಣೆ-ಪ್ರಮಾಣಕ್ಕೆ ಮುಂದಾಗಿರುವುದು ಸಾರ್ವಜನಿಕರ ಟೀಕೆಗೆ ಕಾರಣವಾಗಿದೆ.

English summary
Officer And Beneficiary Took Bribery Swearing, This incident took place on the premises of the Lakshminarayanaswamy temple in the town of KR Pate.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X