ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಾಸಕ ಪ್ರೀತಂ ಗೌಡಗೆ ಬುದ್ಧಿಮಾತು ಹೇಳಿದ ಸಚಿವ ವಿ. ಸೋಮಣ್ಣ

By ಮಂಡ್ಯ ಪ್ರತಿನಿಧಿ
|
Google Oneindia Kannada News

ಮಂಡ್ಯ, ಆಗಸ್ಟ್ 10: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಮಾತನಾಡಿದ್ದ ಹಾಸನ ಬಿಜೆಪಿ ಶಾಸಕ ಪ್ರೀತಂ ಗೌಡಗೆ ಸಚಿವ ವಿ. ಸೋಮಣ್ಣ ಬುದ್ಧಿಮಾತು ಹೇಳಿದ್ದಾರೆ.

Recommended Video

Preetham Gowda ಅವರಿಗೆ ಬುದ್ಧಿ ಮಾತು ಹೇಳಿದ Somanna | Oneindia Kannada

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾತನಾಡಿದ ಸಚಿವ ಸೋಮಣ್ಣ, "ಪ್ರೀತಂ ಗೌಡ ಇನ್ನೂ ಹುಡುಗ, ಹಾಸನ ಜಿಲ್ಲೆಯಲ್ಲಿ ಬೆಳೆಯಬೇಕಾದವನು. ಹೀಗಾಗಿ ಅವನು ತನ್ನ ಇತಿಮಿತಿಯಲ್ಲಿ ಇರಬೇಕು,'' ಎಂದು ತಿರುಗೇಟು ನೀಡಿದ್ದಾರೆ.

"ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಕುಟುಂಬಕ್ಕೆ 50 ವರ್ಷದ ರಾಜಕೀಯ ಇತಿಹಾಸವಿದೆ. ನಾನು ಸಚಿವ ಆಗಿದ್ದಾಗ ಪ್ರೀತಂಗೌಡ ಇನ್ನೂ ಹುಟ್ಟಿರಲಿಲ್ಲ. ಮುಖ್ಯಮಂತ್ರಿಗಳು ದೇವೇಗೌಡರ ಮನೆಗೆ ಹೋಗುವುದರಲ್ಲಿ ತಪ್ಪೇನಿದೆ. ದೇವೇಗೌಡರು ರಾಷ್ಟ್ರದ ಪ್ರಧಾನಿಗಳಾಗಿದ್ದವರು. ನಾನು ಕೂಡ ಅವರ ಮನೆಗೆ ಹೋಗಿದ್ದೇನೆ. ಪ್ರೀತಂಗೌಡ ಸುಮ್ಮನೆ ಹಾಗೆಲ್ಲಾ ಮಾತನಾಡುವುದು ಸರಿಯಲ್ಲ,'' ಎಂದರು.

minister v somanna reaction about preetham gowda statement

ಇದೇ ಸಂದರ್ಭದಲ್ಲಿ ಕೆಲವು ಸಚಿವರ ಖಾತೆ ಅಸಮಾಧಾನ ವಿಚಾರದ ಕುರಿತು ಮಾತನಾಡಿದ ಸಚಿವ ಸೋಮಣ್ಣ, "ಈ ವಿಚಾರದಲ್ಲಿ ಯಾವ ಸಚಿವರಿಗೂ ಅಸಮಾಧಾನ ಇಲ್ಲ. ಸಿಎಂ ಬಸವರಾಜ ಬೊಮ್ಮಯಿ ಬುದ್ಧಿವಂತರಿದ್ದಾರೆ. ರಾಜ್ಯ ಬಿಜೆಪಿ ಸರ್ಕಾರ ಒಳ್ಳೆಯ ಕೆಲಸ ಮಾಡುತ್ತಿದೆ. ಆಗಸ್ಟ್ 15ರಂದು ಬೊಮ್ಮಾಯಿ, ಯಾರೂ ಯೋಚನೆ ಮಾಡದ ರೀತಿಯಲ್ಲಿ ಜನಪರ ಕಾರ್ಯಕ್ರಮಗಳನ್ನು ಘೋಷಣೆ ಮಾಡುತ್ತಾರೆ. 15 ರಿಂದ 20 ದಿನಗಳಲ್ಲಿ ಸರ್ಕಾರ ಟೇಕಾಫ್ ಆಗಲಿದೆ ಎಂದ ಭಾವನೆ ಜನರಿಗಿದೆ," ಎಂದು ಹೇಳಿದರು.

ಸಿಎಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ಪ್ರೀತಂ ಗೌಡ
"ಅಡ್ಜಸ್ಟ್‌ಮೆಂಟ್ ರಾಜಕಾರಣ ಮಾಡಿಕೊಳ್ಳಲು ನಾವು ಯಾರೂ ಕೂಡ ರಾಜಕೀಯದಲ್ಲಿ ಸನ್ಯಾಸಿಗಳಲ್ಲ. ನಾನು ರಾಜಕಾರಣ ಮಾಡಬೇಕೆಂದೇ ಬಂದಿದ್ದೇನೆ," ಎಂದು ಹಾಸನ ಶಾಸಕ ಪ್ರೀತಂ ಗೌಡ ಹೇಳಿದ್ದರು.

"ಸಿಎಂ ಬಸವರಾಜ ಬೊಮ್ಮಾಯಿ ಮೊದಲು ಸಿದ್ದಗಂಗಾ ಶ್ರೀ, ಸುತ್ತೂರು ಶ್ರೀ, ಸಿರಿಗೆರೆ ಸ್ವಾಮೀಜಿಗಳಿಗೆ ಅಥವಾ ಆದಿ ಚುಂಚನಗಿರಿ ಶ್ರೀಗಳ ಆಶೀರ್ವಾದ ಪಡೆಯಬೇಕಾಗಿತ್ತು. ಆದರೆ ಅವರ ತಂದೆ ಎಸ್.ಆರ್. ಬೊಮ್ಮಾಯಿ ಸರ್ಕಾರ ಉರುಳಿಸಿದಂತಹವರ ಮನೆಗೆ ಹೋಗಿ ಆಶೀರ್ವಾದ ಪಡೆಯುವ ಅಗತ್ಯ ಇರಲಿಲ್ಲ. ಇದು ನಾನು ಹೇಳುತ್ತಿಲ್ಲ ಎಲ್ಲಾ ಕಾರ್ಯಕರ್ತರು ಮಾತನಾಡುತ್ತಿದ್ದಾರೆ,'' ಎಂದು ಟಾಂಗ್ ಕೊಟ್ಟಿದ್ದರು.

"ನಾನು ಯಾವುದೇ ಮುಲಾಜಿಗೆ ಒಳಗಾಗಿ ರಾಜಕಾರಣ ಮಾಡುವಂತನಲ್ಲ. ನಮ್ಮ ಮನೆಗೆ ಕಲ್ಲು ಒಡೆದ ಸಮಯದಲ್ಲಿ ಮಾಜಿ ಸಿಎಂ ಯಡಿಯೂರಪ್ಪನವರು ಹಾಗೂ ಆರ್. ಅಶೋಕ್ ಬಂದು ಮಾನಸಿಕವಾಗಿ, ನೈತಿಕವಾಗಿ ಧೈರ್ಯ ತುಂಬಿ ಹೆಚ್ಚು ಶಕ್ತಿ ಕೊಟ್ಟಂತಹ ನಾಯಕರ ಮಧ್ಯೆ ನಾನು ಬೆಳೆದು ಬಂದಿದ್ದೇನೆ,'' ಎಂದಿದ್ದರು.

"ನಾವು ದಿನ ಬೆಳಗಾದರೆ ಜಾತ್ಯಾತೀತ ಜನತಾದಳದ ವಿರುದ್ಧ ಗುದ್ದಾಟ ಮಾಡಿ ಪಕ್ಷ ಕಟ್ಟುವುದು, ಇನ್ನೊಬ್ಬರು ಹೋಗಿ ಅಡ್ಜೆಸ್ಟ್‌ಮೆಂಟ್ ರಾಜಕಾರಣ ಮಾಡಿಕೊಳ್ಳುವುದು. ಇಂತಹ ಅಡ್ಜಸ್ಟ್‌ಮೆಂಟ್ ರಾಜಕಾರಣ ಮಾಡಿಕೊಳ್ಳಲು ನಾವು ಯಾರು ಕೂಡ ರಾಜಕೀಯದಲ್ಲಿ ಸನ್ಯಾಸಿಗಳಲ್ಲ. ನಾನು ರಾಜಕಾರಣ ಮಾಡಬೇಕೆಂದೇ ಬಂದಿರುವುದು. ಹಳೇ ಮೈಸೂರು ಜಿಲ್ಲೆಯಲ್ಲಾಗಲಿ, ಹಾಸನ ಜಿಲ್ಲೆಯಲ್ಲಾಗಲಿ ಎಲ್ಲಿಯಾದರೂ, ಯಾವುದೇ ಕಾರಣಕ್ಕೂ ಅಡ್ಜೆಸ್ಟ್‌ಮೆಂಟ್ ರಾಜಕಾರಣ ಆಗುವುದಿಲ್ಲ ಎಂದು ನಾನು ಕಾರ್ಯಕರ್ತರಿಗೆ ಪ್ರಾಮಾಣಿಕವಾಗಿ ತಿಳಿಸಿಕೊಡುವಂತಹ ಪ್ರಯತ್ನ ಮಾಡಿದ್ದೇನೆ,'' ಎಂದು ತಿಳಿಸಿದ್ದರು.

"ಮುಂದಿನ ದಿನಗಳಲ್ಲಿ ಯಾವುದೇ ಮಂತ್ರಿಗಳಾಗಲಿ ಜನತಾ ದಳದವರ ಮನೆಗೆ ಹೋಗಿ ಊಟ ಮಾಡುವುದು, ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ, ಮುಂದೆ ಬರುವ ಚುನಾವಣೆಯಲ್ಲಿ ಅವರ ನೈತಿಕ ಸ್ಥೈರ್ಯವನ್ನು ಕುಗ್ಗಿಸುವಂತಹ ಕೆಲಸವನ್ನು ಮುಂದಿನ ದಿನಗಳಲ್ಲಿ ಮಾಡಬಾರದು. ಈ ಬಗ್ಗೆ ಹಳೇ ಮೈಸೂರಿನ ಕಡೆ ರಾಜಕಾರಣ ಮಾಡುವವರಿಗೆ ನೋವಿನ ಬಗ್ಗೆ ಗೊತ್ತಿರುತ್ತದೆ," ಎಂದು ಹೇಳಿದ್ದರು.

"ಹೈದರಾಬಾದ್ ಕರ್ನಾಟಕ, ಉತ್ತರ ಕರ್ನಾಟಕದವರಿಗೆ ಜನತಾ ದಳ ಅಂದರೆ ಫ್ರೆಂಡ್ಸ್. ಆದರೆ ಹಳೇ ಮೈಸೂರು ಭಾಗದಲ್ಲಿ ಜಂಜಾಟ ಮಾಡಿಕೊಂಡು ಗುದ್ದಾಟ ಮಾಡಿಕೊಳ್ಳುವವರು ನಮ್ಮ ಕಾರ್ಯಕರ್ತರು. ತಾಲ್ಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಚುನಾವಣೆ ಇದೆ. ಆ ಸಮಯದಲ್ಲಿ ಇದೆಲ್ಲಾ ನಡೆದಿದ್ದು, ನಮ್ಮ ಕಾರ್ಯಕರ್ತರಿಗೆ ನೋವುಂಟಾಗಿದೆ. ಆ ನೋವನ್ನು ನನ್ನ ಬಳಿ ವ್ಯಕ್ತಪಡಿಸಿದ್ದಾರೆ. ಅದರ ಬಗ್ಗೆ ನಾನು ಮುಖ್ಯಮಂತ್ರಿಗಳೊಂದಿಗೆ ನೇರವಾಗಿ ಚರ್ಚೆ ಮಾಡುತ್ತೇನೆ. ರಾಜ್ಯಾಧ್ಯಕ್ಷರಿಗೆ ಮನವಿ ಮಾಡುತ್ತೇನೆ, ನಮ್ಮ ಪರಿವಾರದ ಹಿರಿಯರ ಬಳಿ ಈ ಬಗ್ಗೆ ಚರ್ಚಿಸುತ್ತೇನೆ,'' ಎಂದು ತಮ್ಮ ಆತಂಕ ವ್ಯಕ್ತಪಡಿಸಿದ್ದರು.

English summary
Housing Minister V Somanna Reaction on Preetham Gowda outrage against CM Basavaraj Bommai.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X