ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಡ್ಯ ಉಪಚುನಾವಣೆ: ಸೋಲಿನಲ್ಲೂ ಬಿಜೆಪಿಯ ಸಾಧನೆ ಮುಂದಿನ ಚುನಾವಣೆಗೆ ದಿಕ್ಸೂಚಿ?

ಮಂಡ್ಯ ಉಪಚುನಾವಣೆ: ಸೋಲಿನಲ್ಲೂ ಬಿಜೆಪಿಯ ಸಾಧನೆ ಮುಂದಿನ ಚುನಾವಣೆಗೆ ದಿಕ್ಸೂಚಿ?

|
Google Oneindia Kannada News

ಜೆಡಿಎಸ್ - ಕಾಂಗ್ರೆಸ್ ಸಮ್ಮಿಶ್ರ ಸರಕಾರಕ್ಕೆ ಉಪಚುನಾವಣೆಯ ಫಲಿತಾಂಶ ಒಂದು ರೀತಿಯಲ್ಲಿ ಅಳಿವು ಉಳಿವಿನ ಪ್ರಶ್ನೆಯಾಗಿತ್ತು. ಸೋತರೆ, ಸರಕಾರದ ವಿರುದ್ದ ಅಪಸ್ವರ ಇನ್ನಷ್ಟು ಹೆಚ್ಚಾಗುತ್ತಿತ್ತು. ಆದರೆ, ಮತದಾರ ಪ್ರಭುವಿನ ಆಶೀರ್ವಾದಿಂದಾಗಿ, ಸರಕಾರದ ಆಯಸ್ಸು ಇನ್ನಷ್ಟು ಬಲಗೊಂಡಿದೆ.

ಮೂರು ಕ್ಷೇತ್ರಗಳಲ್ಲಿ (ರಾಮನಗರ, ಮಂಡ್ಯ ಮತ್ತು ಶಿವಮೊಗ್ಗ) ಜೆಡಿಎಸ್ ಅಭ್ಯರ್ಥಿ ಕಣದಲ್ಲಿದ್ದರು. ಅದರಲ್ಲಿ ರಾಮನಗರ ಮತ್ತು ಮಂಡ್ಯದಲ್ಲಿ ತನ್ನ ಅಭ್ಯರ್ಥಿ ಗೆಲ್ಲುವುದಕ್ಕೆ ಜೆಡಿಎಸ್ ದೊಡ್ಡ ರಾಜಕೀಯ ಸಮೀಕರಣ ಮಾಡುವ ಅವಶ್ಯಕತೆಯಿರಲಿಲ್ಲ. ಯಾಕೆಂದರೆ, ಒಂದು ಕಡೆ ಕಾಂಗ್ರೆಸ್ ಅಭ್ಯರ್ಥಿ ಕಣದಲ್ಲಿ ಇರಲಿಲ್ಲ, ಇನ್ನೊಂದು ಬಿಜೆಪಿಗೆ ಅಲ್ಲಿ ಅಸ್ತಿತ್ವನೇ ಇರಲಿಲ್ಲ. (ದೆಹಲಿ ಬಿಜೆಪಿ ಚಾಣಕ್ಯರ ಅಹಂಕಾರಕ್ಕೆ ಕೊಡಲಿ ಏಟು)

ರಾಮನಗರ ಮತ್ತು ಮಂಡ್ಯ ಕ್ಷೇತ್ರದ ಫಲಿತಾಂಶವನ್ನು ಗಮನಿಸುವುದಾದರೆ, ರೇಷ್ಮೆ ನಗರದಲ್ಲಿ ಬಿಜೆಪಿ ಅಭ್ಯರ್ಥಿ ಅಧಿಕೃತವಾಗಿ ಕಣದಿಂದ ಹಿಂದಕ್ಕೆ ಸರಿದಿದ್ದರು. ಚುನಾವಣೆಯ ದಿನ ಬಿಜೆಪಿ ಕಾರ್ಯಕರ್ತರಿಗೆ ಕೊಡಲಾಗುವ ಬೂತ್ ಸೌಲಭ್ಯವನ್ನೂ ಹಿಂದಕ್ಕೆ ಪಡೆಯಲಾಗಿತ್ತು. ಬಿಜೆಪಿಯ ಚಿಹ್ನೆ ಮಾತ್ರ ಇವಿಎಂನಲ್ಲಿ ಇದ್ದವು. ಆದರೂ, ಬಿಜೆಪಿ 15,906 ಮತಗಳನ್ನು ಪಡೆದಿತ್ತು. 2018ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಲೀಲಾವತಿ ಕಣದಲ್ಲಿದ್ದರೂ, ಕೇವಲ 4,871 ಮತಗಳನ್ನು ಪಡೆಯಲು ಶಕ್ತರಾಗಿದ್ದರು.

ಇನ್ನು, ಮಂಡ್ಯದಲ್ಲಿ ಜೆಡಿಎಸ್ ಅಭ್ಯರ್ಥಿ ಎಲ್ ಆರ್ ಶಿವರಾಮೇಗೌಡ, ಬಿಜೆಪಿ ಅಭ್ಯರ್ಥಿ ಸಿದ್ದರಾಮಯ್ಯ ವಿರುದ್ದ 324,943 ಮತಗಳ ಭಾರೀ ಅಂತರದಿಂದ ಗೆಲುವು ಸಾಧಿಸಿದ್ದರೂ, ಬಿಜೆಪಿ ಪಡೆದ ಒಟ್ಟು ಮತ ಮಾತ್ರ ಆಶ್ಚರ್ಯ ಪಡುವಂತದ್ದು. ಸರಿಯಾಗಿ ಪೂರ್ವತಯಾರಿ ಮಾಡಿಕೊಳ್ಲದೇ ಬಿಜೆಪಿ ಪಡೆದಿರುವ ಮತಗಳ ಸಂಖ್ಯೆ ಜೆಡಿಎಸ್ ಪ್ರಮುಖರನ್ನು ಹುಬ್ಬೇರಿಸುವಂತೆ ಮಾಡಿದೆ. (5 ಕ್ಷೇತ್ರಗಳ ಉಪ ಚುನಾವಣೆ ಫಲಿತಾಂಶ : ಯಾರಿಗೆ ಎಷ್ಟು ಮತ)

ಮಂಡ್ಯದಲ್ಲಿ ತನ್ನ ಅಭ್ಯರ್ಥಿಯನ್ನಾಗಿ ಯಾರನ್ನು ಆಯ್ಕೆಮಾಡಬೇಕೆನ್ನುವ ಗೊಂದಲ ಬಿಜೆಪಿಗೆ ಕೊನೆಯ ಕ್ಷಣದವರೆಗೂ ಇತ್ತು. ಚುನಾವಣಾ ಆಯೋಗ ದಿನಾಂಕ ಪ್ರಕಟಿಸಿದ ನಂತರವೂ ಅವರಿವರ ಹೆಸರು ತೇಲಿಬರುತ್ತಿದ್ದರೂ, ಕೊನೆಗೆ ಬಿಜೆಪಿ ಅಭ್ಯರ್ಥಿಯನ್ನಾಗಿ ಆಯ್ಕೆಮಾಡಿದ್ದು ಅಷ್ಟೇನೂ ಚಿರಪರಿಚಿತರಲ್ಲದ ಡಾ. ಸಿದ್ದರಾಮಯ್ಯನವರನ್ನು.

ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಜೆಡಿಎಸ್ ಕ್ಲೀನ್ ಸ್ವೀಪ್

ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಜೆಡಿಎಸ್ ಕ್ಲೀನ್ ಸ್ವೀಪ್

ಮಂಡ್ಯ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಎಂಟು ಅಸೆಂಬ್ಲಿ ಕ್ಷೇತ್ರಗಳಾದ ಮಂಡ್ಯ, ಮಳವಳ್ಳಿ, ಮೇಲುಕೋಟೆ, ನಾಗಮಂಗಲ, ಕೆ ಆರ್ ನಗರ, ಕೆ ಆರ್ ಪೇಟೆ, ಮದ್ದೂರು, ಶ್ರೀರಂಗಪಟ್ಟಣದಲ್ಲಿ, ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಗೆದ್ದು ಕ್ಲೀನ್ ಸ್ವೀಪ್ ಮಾಡಿದ್ದರು. ಮಂಡ್ಯ ಉಪಚುನಾವಣೆಯಲ್ಲಿ ಬಿಜೆಪಿ ಒಂದು ಲಕ್ಷ ಮತ ಪಡೆಯುವುದೂ ಕಷ್ಟ ಎನ್ನುವ ಮಾತಿತ್ತು.

ಜಿಲ್ಲೆಯಲ್ಲಿ ಪಕ್ಷದ ಅಸ್ತಿತ್ವಕ್ಕೆ ಹೊಸ ಭಾಷ್ಯ

ಜಿಲ್ಲೆಯಲ್ಲಿ ಪಕ್ಷದ ಅಸ್ತಿತ್ವಕ್ಕೆ ಹೊಸ ಭಾಷ್ಯ

ಆದರೆ, ವ್ಯವಸ್ಥಿತ ಪ್ರಚಾರ ನಡೆಸದಿದ್ದರೂ, ಪಕ್ಷದ ಹಿರಿಯ ತಲೆಗಳು ಕ್ಯಾಂಪೇನಿಗೆ ಬರದಿದ್ದರೂ ಬಿಜೆಪಿ ಅಭ್ಯರ್ಥಿ 244,404 ಮತಗಳನ್ನು ಪಡೆದು, ಜಿಲ್ಲೆಯಲ್ಲಿ ಪಕ್ಷದ ಅಸ್ತಿತ್ವಕ್ಕೆ ಹೊಸ ಭಾಷ್ಯವನ್ನು ಬರೆದರು ಎಂದೇ ಹೇಳಲಾಗುತ್ತಿದೆ. ಕಳೆದ ಅಂದರೆ 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಪ್ರೊ. ಶಿವಲಿಂಗಯ್ಯ 86,993 (ಶೇ. 7.29) ಮತಗಳನ್ನಷ್ಟೇ ಪಡೆದಿದ್ದರು.

ಜೆಡಿಎಸ್ ಮತ್ತು ಬಿಜೆಪಿ ಅಭ್ಯರ್ಥಿಗಳು ಪಡೆದ ಮತಗಳು (ಅಸೆಂಬ್ಲಿ ಕ್ಷೇತ್ರದಲ್ಲಿ) ಹೀಗಿದೆ:

ಜೆಡಿಎಸ್ ಮತ್ತು ಬಿಜೆಪಿ ಅಭ್ಯರ್ಥಿಗಳು ಪಡೆದ ಮತಗಳು (ಅಸೆಂಬ್ಲಿ ಕ್ಷೇತ್ರದಲ್ಲಿ) ಹೀಗಿದೆ:

ಮಳವಳ್ಳಿ : ಜೆಡಿಎಸ್ (67,752), ಬಿಜೆಪಿ (30,107 )
ಮದ್ದೂರು: ಜೆಡಿಎಸ್ (81,263), ಬಿಜೆಪಿ (26,311)
ಮೇಲುಕೋಟೆ: ಜೆಡಿಎಸ್ (64,874), ಬಿಜೆಪಿ (43,309)
ಮಂಡ್ಯ : ಜೆಡಿಎಸ್ (67,981 ), ಬಿಜೆಪಿ ( 29,020)
ಶ್ರೀರಂಗಪಟ್ಟಣ: ಜೆಡಿಎಸ್ (69,934), ಬಿಜೆಪಿ (36,192)
ನಾಗಮಂಗಲ: ಜೆಡಿಎಸ್ (86,205), ಬಿಜೆಪಿ (23,330)
ಕೆ ಆರ್ ಪೇಟೆ: ಜೆಡಿಎಸ್ (75,346), ಬಿಜೆಪಿ (27,549)
ಕೆ ಆರ್ ನಗರ: ಜೆಡಿಎಸ್ (55,947 ), ಬಿಜೆಪಿ (28,559)

ನೇರ ಹಣಾಹಣಿಯಿದ್ದದ್ದು ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ

ನೇರ ಹಣಾಹಣಿಯಿದ್ದದ್ದು ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ

2014ರ ಚುನಾವಣೆಗೆ ಹೋಲಿಸಿದರೆ ಬಿಜೆಪಿ 1,57,384 ಹೆಚ್ಚು ಮತಗಳನ್ನು ಪಡೆಯಲು ಯಶಸ್ವಿಯಾಗಿದೆ. ಮಂಡ್ಯ ಕ್ಷೇತ್ರದ ಯಾವ ಅಸೆಂಬ್ಲಿ ಕ್ಷೇತ್ರದಲ್ಲೂ ಕಳೆದ ವಿಧಾನಸಭಾ ಚುನಾವಣೆಯಲ್ಲಿ ನೇರ ಹಣಾಹಣಿಯಿದ್ದದ್ದು ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆಯೇ ಹೊರತು, ಬಿಜೆಪಿ ಲೆಕ್ಕಕ್ಕೇ ಇರಲಿಲ್ಲ. ಆದರೂ, ಹೆಚ್ಚುಕಮ್ಮಿ ಎರಡೂವರೆ ಲಕ್ಷವನ್ನು ಪಡೆಯಲು ಬಿಜೆಪಿ ಶಕ್ತವಾಗಿದ್ದು, ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಎಚ್ಚರಿಕೆಯ ಗಂಟೆಯೆಂದೇ ಹೇಳಲಾಗುತ್ತಿದೆ.

ಬೇಳೂರು ಗೋಪಾಲಕೃಷ್ಣ ಅವರ ಅಪಪ್ರಚಾರ

ಬೇಳೂರು ಗೋಪಾಲಕೃಷ್ಣ ಅವರ ಅಪಪ್ರಚಾರ

ರಾಮನಗರದ ಅಭ್ಯರ್ಥಿ ಚಂದ್ರಶೇಖರ್ ಕಣದಿಂದ ಹಿಂದಕ್ಕೆ ಸರಿದಂತೆ, ಸಿದ್ದರಾಮಯ್ಯನವರೂ ಮಂಡ್ಯದಿಂದ ಹಿಂದಕ್ಕೆ ಸರಿಯಲಿದ್ದಾರೆ ಎನ್ನುವ ಕಾಂಗ್ರೆಸ್ ಮುಖಂಡ ಬೇಳೂರು ಗೋಪಾಲಕೃಷ್ಣ ಅವರ ಅಪಪ್ರಚಾರ, ಚುನಾವಣೆಯ ಹೊಸ್ತಿಲಲ್ಲಿ ಬಿಜೆಪಿ ಅಭ್ಯರ್ಥಿ ಸ್ಪಷ್ಟೀಕರಣ ನೀಡುವಂತಾಯಿತು. ಇಲ್ಲದಿದ್ದರೆ, ನಮಗೆ ಬರುತ್ತಿದ್ದ ಒಟ್ಟು ಮತಗಳು ಇನ್ನಷ್ಟು ಹೆಚ್ಚಾಗುತ್ತಿತ್ತು ಎನ್ನುವುದು ಮಂಡ್ಯ ಬಿಜೆಪಿ ಕಾರ್ಯಕರ್ತರ ಲೆಕ್ಕಾಚಾರ.

ಆಶಾದಾಯಕ ಫಲಿತಾಂಶ ಬರಬಹುದು ಎನ್ನುವ ಕಾರ್ಯಕರ್ತರ ಲೆಕ್ಕಾಚಾರ

ಆಶಾದಾಯಕ ಫಲಿತಾಂಶ ಬರಬಹುದು ಎನ್ನುವ ಕಾರ್ಯಕರ್ತರ ಲೆಕ್ಕಾಚಾರ

ಮುಂದಿನ ವರ್ಷದ ಚುನಾವಣೆಯಲ್ಲಿ ಬಿಜೆಪಿ ಈಗಿಂದೀಗಲೇ ವೇದಿಕೆಯನ್ನು ಸಿದ್ದಮಾಡಿಕೊಂಡರೆ, ಪಕ್ಷಕ್ಕೆ ಆಶಾದಾಯಕ ಫಲಿತಾಂಶ ಬರಬಹುದು ಎನ್ನುವುದು ಸ್ಥಳೀಯ ಕಾರ್ಯಕರ್ತರ ಲೆಕ್ಕಾಚಾರ. ಜೆಡಿಎಸ್ - ಕಾಂಗ್ರೆಸ್ ಮೈತ್ರಿಮಾಡಿಕೊಂಡಿರುವುದಕ್ಕೆ ಆ ಎರಡು ಪಕ್ಷದ ಕಾರ್ಯಕರ್ತರಲ್ಲಿ ಇನ್ನೂ ಸಿಟ್ಟಿದೆ. ಅದರ ಲಾಭವನ್ನು ಪಡೆದುಕೊಂಡು, ಸರಿಯಾಗಿ ಪ್ರಚಾರ ನಡೆಸಿದರೆ, ಮಂಡ್ಯದಲ್ಲಿ ಗೆಲುವು ಗಗನಕುಸುಮವಲ್ಲ ಎನ್ನುವುದು ಕಾರ್ಯಕರ್ತರ ಅಭಿಪ್ರಾಯ.

English summary
Mandya Loksabha bypoll: Though Mandya is the strong belt of JDS and all the eight assembly segment won by JDS in the last assembly election, surprisingly BJP got more than two lacs votes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X