ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪರಿಷತ್ ಚುನಾವಣೆ: ಕೈ- ಕಮಲ ನಾಯಕರಿಗೆ ಸಂಸದೆ ಸುಮಲತಾ ರವಾನಿಸಿದ ಸಂದೇಶವೇನು?

|
Google Oneindia Kannada News

ಮಂಡ್ಯ, ನವೆಂಬರ್ 25: ಮಂಡ್ಯದಲ್ಲಿ ಯಾವುದೇ ಚುನಾವಣೆ ನಡೆದರೂ ಅದನ್ನು ಕರ್ನಾಟಕದ ಜನ ಕುತೂಹಲದಿಂದ ನೋಡುತ್ತಾರೆ. ಅದರಲ್ಲಂತೂ ಕಳೆದ ಲೋಕಸಭಾ ಚುನಾವಣೆ ಹಲವು ಅದ್ಭುತಗಳಿಂದ ಇತಿಹಾಸ ಸೃಷ್ಟಿ ಮಾಡಿದೆ.

ಹೀಗಿರುವಾಗ ಇದೀಗ ನಡೆಯುತ್ತಿರುವ ವಿಧಾನ ಪರಿಷತ್ ಚುನಾವಣೆ ಯಾವ ರೀತಿಯಲ್ಲಿ ನಡೆಯಬಹುದು ಎಂಬ ಕುತೂಹಲ ಪ್ರತಿಯೊಬ್ಬರನ್ನು ಕಾಡದಿರದು. ಇಲ್ಲಿ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳೇ ಮತದಾರರಾಗಿರುವುದರಿಂದ ಪ್ರತಿಯೊಬ್ಬ ಮತದಾರನ ಮೇಲೆಯೂ ನಿಗಾವಹಿಸಲೇ ಬೇಕಾಗಿದೆ ಮತ್ತು ಅವನು ನೀಡುವ ತೀರ್ಪಿಗೆ ತಲೆ ಬಾಗಲೇಬೇಕಾಗಿದೆ.

 ಸುಮಲತಾ ಬೆನ್ನಿಗೆ ಅಂಬರೀಶ್ ಅಭಿಮಾನಿಗಳು

ಸುಮಲತಾ ಬೆನ್ನಿಗೆ ಅಂಬರೀಶ್ ಅಭಿಮಾನಿಗಳು

ಕಳೆದ ಲೋಕಸಭಾ ಚುನಾವಣೆಯಿಂದೀಚೆಗೆ ಜೆಡಿಎಸ್ ಮತ್ತು ಕಾಂಗ್ರೆಸ್‍ ಪಕ್ಷಗಳಿಗೆ ಹೆಚ್ಚಿನ ಹಾನಿಯಾಗಿದೆ. ಈ ಪಕ್ಷಗಳಲ್ಲಿದ್ದ ಕಾರ್ಯಕರ್ತರ ಪೈಕಿ ಹೆಚ್ಚಿನವರು ಅಂಬರೀಶ್ ಅಭಿಮಾನಿಗಳು. ಹೀಗಾಗಿ ಅವರು ಸುಮಲತಾ ಅವರ ಬೆನ್ನಿಗೆ ನಿಂತಿದ್ದಾರೆ. ಆದ್ದರಿಂದ ಸಂಸದೆ ಸುಮಲತಾ ಅಂಬರೀಶ್‌ರನ್ನು ಒಲೈಸಿಕೊಂಡರೆ ತಾವು ಸುಲಭವಾಗಿ ಗೆಲುವು ಸಾಧಿಸಬಹುದು ಎಂಬ ಲೆಕ್ಕಚಾರಗಳು ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳಲ್ಲಿದೆ.

ಬಹುಶಃ ಭಾರತದ ಚುನಾವಣಾ ಇತಿಹಾಸದಲ್ಲಿ ಒಬ್ಬ ಪಕ್ಷೇತರ ಅಭ್ಯರ್ಥಿಗೆ ಮೂರು ಪಕ್ಷಗಳ ಕಾರ್ಯಕರ್ತರು ಬೆಂಬಲ ನೀಡಿದ್ದು ಮತ್ತು ಚುನಾವಣಾ ಪ್ರಚಾರ ಸಭೆಗಳಲ್ಲಿ ಮೂರು ಪಕ್ಷಗಳ ಬಾವುಟಗಳು ಹಾರಾಡಿದ್ದನ್ನು ಯಾರೂ ನೋಡಿರಲಿಲ್ಲ. ಆದರೆ ಅಂತಹದ್ದೊಂದು ಪವಾಡ ಕಳೆದ ಲೋಕಸಭಾ ಚುನಾವಣೆಯಲ್ಲಿ ನಡೆದಿತ್ತು.

 ಕೈ ನಾಯಕರು ಮಾಡಿದ ಅದೊಂದು ತಪ್ಪು

ಕೈ ನಾಯಕರು ಮಾಡಿದ ಅದೊಂದು ತಪ್ಪು

ಅಧಿಕಾರಕ್ಕಾಗಿ ಜೆಡಿಎಸ್ ಮರ್ಜಿ‍ಯಲ್ಲಿದ್ದ ಕಾಂಗ್ರೆಸ್‍ ಅವತ್ತು ಸುಮಲತಾರಿಗೆ ಟಿಕೆಟ್ ನೀಡದೆ ಮಾಡಿದ ಆ ಒಂದು ತಪ್ಪು ಬಹುಶಃ ಇವತ್ತು ಮಂಡ್ಯದಲ್ಲಿ ಕಾಂಗ್ರೆಸ್ ನಾಯಕರು ಪಶ್ಚಾತ್ತಾಪ ಪಡುವಂತೆ ಮಾಡಿದೆ. ಅವತ್ತು ಸುಮಲತಾ ವಿರುದ್ಧ ಟೀಕೆ ಮಾಡಿದ ಕಾಂಗ್ರೆಸ್‌ನ ಮಹಾ ನಾಯಕರು ಇವತ್ತು ಯಾವ ಮುಖವನ್ನಿಟ್ಟುಕೊಂಡು ಬಂದು ಸುಮಲತಾ ಬೆಂಬಲ ಕೇಳುತ್ತಾರೋ ಗೊತ್ತಿಲ್ಲ.

ಆದರೆ ಸದ್ದಿಲ್ಲದಂತೆ ಸುಮಲತಾ ಕಾಂಗ್ರೆಸ್‌ಗೆ ಅಭ್ಯರ್ಥಿಗೆ ಬೆಂಬಲ ನೀಡುತ್ತಾರೆಂಬ ಗಾಳಿ ಸುದ್ದಿಯನ್ನು ಹರಡಿ ಬಿಡಲಾಗಿದೆ. ಅದು ಕೇವಲ ಗಾಳಿ ಸುದ್ದಿಯಾಗಿಯೇ ಹರಡುತ್ತಿತ್ತು. ಆದರೆ ಅದು ಇನ್ನಷ್ಟು ಜನರ ಕಿವಿಗೆ ಬೀಳುವ ಮುನ್ನವೇ ಎಚ್ಚೆತ್ತುಕೊಂಡಿರುವ ಸಂಸದೆ ಸುಮಲತಾ ಸ್ಪಷ್ಟನೆ ನೀಡುವ ಮೂಲಕ, ನಾನು ಯಾವ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸುವುದಿಲ್ಲ ಸಂದೇಶವನ್ನು ರವಾನಿಸಿದ್ದಾರೆ.

 ಗೆಲುವಿಗೆ ಮೂರು ಪಕ್ಷಗಳ ಜಿದ್ದಾಜಿದ್ದಿ

ಗೆಲುವಿಗೆ ಮೂರು ಪಕ್ಷಗಳ ಜಿದ್ದಾಜಿದ್ದಿ

ಇದೀಗ ಇವರ ಹೇಳಿಕೆ ಜೆಡಿಎಸ್‍ಗೆ ವರದಾನದಂತೆ ಕಂಡರೂ, ಬಿಜೆಪಿ ಮತ್ತು ಕಾಂಗ್ರೆಸ್‌ನ ಅಭ್ಯರ್ಥಿಗಳಿಗೆ ಶಾಕ್ ನೀಡಿರುವುದಂತೂ ಸತ್ಯ. ವಿಧಾನ ಪರಿಷತ್‌ನ ಕಾಂಗ್ರೆಸ್ ಅಭ್ಯರ್ಥಿಯಾಗಿ ದಿನೇಶ್‌ ಗೂಳಿಗೌಡರನ್ನು ಗೆಲ್ಲಿಸಿ ತರಲೇಬೇಕು. ಆ ಮೂಲಕ ಜೆಡಿಎಸ್‌ನ ಭದ್ರಕೋಟೆಯನ್ನು ಛಿದ್ರ ಮಾಡಿ ತಮ್ಮ ಪ್ರಾಬಲ್ಯ ಸಾಧಿಸಬೇಕೆನ್ನುವುದು ಕಾಂಗ್ರೆಸ್‌ನ ಇರಾದೆಯಾಗಿದೆ.

ಬಿಜೆಪಿ ಈಗಷ್ಟೇ ಮಂಡ್ಯಕ್ಕೆ ಎಂಟ್ರಿ ಕೊಟ್ಟಿರುವುದರಿಂದ ಗೆಲುವಿನ ವಿಶ್ವಾಸ ಹೆಚ್ಚಾಗಿ ಕಂಡು ಬಂದಂತೆ ಕಾಣುತ್ತಿಲ್ಲ. ಆದರೂ ಬಿಜೆಪಿ ನಾಯಕರು ತಮ್ಮ ಪಕ್ಷದ ಅಭ್ಯರ್ಥಿ ಮಂಜು ಕೆ.ಆರ್‍. ಪೇಟೆ ಅವರನ್ನು ಗೆಲ್ಲಿಸಿಕೊಂಡು ಬರಬೇಕೆಂಬ ಹಠಕ್ಕೆ ಬಿದ್ದಿದ್ದಾರೆ. ಇನ್ನು ಜೆಡಿಎಸ್‍ನಿಂದ ಮರು ಆಯ್ಕೆ ಬಯಸಿರುವ ಅಪ್ಪಾಜಿ ಗೌಡರು ತಳ ಮಟ್ಟದಿಂದ ತಮ್ಮದೇ ಪಕ್ಷದ ಪ್ರತಿನಿಧಿಗಳು ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಗೆಲುವು ನಮ್ಮದಾಗುತ್ತದೆ ಎಂಬ ವಿಶ್ವಾಸದಲ್ಲಿದ್ದಾರೆ.

ಸಂಸದೆ ಸುಮಲತಾ ಅಂಬರೀಶ್ ಜೆಡಿಎಸ್‍ಗೆ ಬದ್ಧ ವಿರೋಧಿಯಾಗಿದ್ದು, ಅವರು ತಮ್ಮ ಪಕ್ಷದ ಅಭ್ಯರ್ಥಿಗೆ ಬೆಂಬಲ ನೀಡಿದರೆ ಸುಲಭವಾಗಿ ಗೆಲ್ಲಬಹುದು ಎಂಬುದು ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರಲ್ಲಿದೆ. ಆದರೆ ಇದೆರಡು ಪಕ್ಷದ ಕಾರ್ಯಕರ್ತರ ಋಣ ಸುಮಲತಾ ಮೇಲಿದೆ. ಹೀಗಾಗಿ ಅವರು ಬಹಿರಂಗವಾಗಿ ಯಾರನ್ನೂ ಬೆಂಬಲಿಸುವ ಸ್ಥಿತಿಯಲ್ಲಿರುವುದಂತು ಸತ್ಯ.

 ಕಾಂಗ್ರೆಸ್ ನಾಯಕರಿಂದ ಓಲೈಕೆಯ ಮಾತುಗಳು

ಕಾಂಗ್ರೆಸ್ ನಾಯಕರಿಂದ ಓಲೈಕೆಯ ಮಾತುಗಳು

ಈ ನಡುವೆ ಮಂಡ್ಯ ಸಂಸದೆ ಸುಮಲತಾ ಬಗ್ಗೆ ಭಾರತೀನಗರದಲ್ಲಿ ಓಲೈಕೆಯ ಮಾತುಗಳನ್ನಾಡಿರುವ ಕಾಂಗ್ರೆಸ್ ಮುಖಂಡ, ಮಾಜಿ ಸಚಿವರೂ ಆಗಿರುವ ಎನ್. ಚೆಲುವರಾಯಸ್ವಾಮಿ, ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿರುವ ಅಭ್ಯರ್ಥಿ ದಿನೇಶ್‌ ಗೂಳಿಗೌಡರಿಗೆ ಸಂಸದೆ ಸುಮಲತಾ ಅಂಬರೀಶ್‌ ಬೆಂಬಲ ನೀಡುವ ಸಾಧ್ಯತೆಯಿದೆ ಎಂದಿದ್ದಾರೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸಂಪೂರ್ಣ ಸಹಕಾರ ನೀಡಿದ್ದರಿಂದ ಸುಮಲತಾ ಆಯ್ಕೆಗೊಂಡಿದ್ದಾರೆ. ಹಾಗಾಗಿ ನಮ್ಮ ಪಕ್ಷಕ್ಕೆ ಬೆಂಬಲ ನೀಡಬಹುದು. ಪಕ್ಷಾತೀತವಾಗಿ ಸುಮಲತಾರನ್ನು ಆಯ್ಕೆಗೊಳಿಸಿದ ಹಿನ್ನೆಲೆಯಲ್ಲಿ ರೈತ ಸಂಘ, ಬಿಜೆಪಿಯೊಂದಿಗೂ ಅವರು ಬಾಂಧವ್ಯಗಳನ್ನು ಹೊಂದಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷದತ್ತ ಹೆಚ್ಚು ಒಲವು ಇರುವುದರಿಂದ ದಿನೇಶ್‌ ಗೂಳಿಗೌಡರನ್ನು ಬೆಂಬಲಿಸಬಹುದು ಎಂದು ಹೇಳಿದ್ದಾರೆ.

 ಸುಮಲತಾರಿಂದ ಸ್ಪಷ್ಟ ಸಂದೇಶ ರವಾನೆ

ಸುಮಲತಾರಿಂದ ಸ್ಪಷ್ಟ ಸಂದೇಶ ರವಾನೆ

ಈ ನಡುವೆ ಮಂಡ್ಯ ಜಿಲ್ಲೆಯ ಭಾರತೀನಗರ ಸಮೀಪದ ದೊಡ್ಡರಸಿನಕೆರೆ ಗ್ರಾಮದಲ್ಲಿ ಅಭಿಮಾನಿಗಳು ಏರ್ಪಡಿಸಿದ್ದ ದಿ. ಅಂಬರೀಶ್‌ರವರ 3ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸದೆ ಸುಮಲತಾ ಅಂಬರೀಶ್, ವಿಧಾನ ಪರಿಷತ್ ಚುನಾವಣೆಯಲ್ಲಿ ನಾನು ಯಾವುದೇ ಪಕ್ಷಕ್ಕೂ ಬೆಂಬಲ ಸೂಚಿಸುವುದಿಲ್ಲ ಎಂದಿದ್ದಾರೆ.

ಮತ ಹಾಕಿದ ಜನತೆಗೆ ನಾನು ಬೆಂಬಲವಾಗಿರುತ್ತೇನೆ. ಯಾವುದೇ ಪಕ್ಷದ ಪರವಾಗಿ ಈ ಸಂದರ್ಭದಲ್ಲಿ ಹೋಗುವುದಿಲ್ಲ. ಲೋಕಸಭಾ ಚುನಾವಣೆ ಸಂದರ್ಭ ಕಾಂಗ್ರೆಸ್, ಬಿಜೆಪಿ, ರೈತಸಂಘದ ಕಾರ್ಯಕರ್ತರು ನನ್ನನ್ನು ಬೆಂಬಲಿಸಿ ಗೆಲ್ಲಿಸಿದ್ದಾರೆ. ಹಾಗಾಗಿ ವಿಧಾನ ಪರಿಷತ್ ಚುನಾವಣೆಯಲ್ಲಿ ನಾನು ಯಾರನ್ನೂ ಬೆಂಬಲಿಸುವುದು ಸೂಕ್ತವಲ್ಲ. ಆದ್ದರಿಂದ ನಾನು ತಟಸ್ಥಳಾಗಿರುತ್ತೇನೆ. ಗ್ರಾಮ ಪಂಚಾಯತ್ ಸದಸ್ಯರು ಬೆಂಬಲ ನೀಡುವುದರಿಂದ ನನ್ನ ಬೆಂಬಲ ಅವಶ್ಯಕತೆ ಇಲ್ಲ. ಜಿಲ್ಲೆಯಲ್ಲಿ ಯಾರು ಒಳ್ಳೆಯ ಕೆಲಸ ಮಾಡುತ್ತಾರೋ ಅಂತಹವರಿಗೆ ನನ್ನ ಬೆಂಬಲ ಸದಾ ಇರುತ್ತದೆ ಎನ್ನುವ ಮೂಲಕ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರಿಗೆ ಸ್ಪಷ್ಟ ಸಂದೇಶವನ್ನು ರವಾನಿಸಿದ್ದಾರೆ.

Recommended Video

ಸ್ವೀಡನ್ ಮೊದಲ ಮಹಿಳಾ ಪ್ರಧಾನಿ ಆದ ಕೆಲವೇ ಗಂಟೆಗಳಲ್ಲಿ ಆಂಡರ್ಸನ್ ರಾಜಿನಾಮೆ | Oneindia Kannada

English summary
Mandya MP Sumalatha Ambareesh has made it clear that I will not support any party in the Legislative Council elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X