ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಡ್ಯದಲ್ಲಿ ದಳಪತಿಗಳಿಗೆ ಚಾಟಿ ಬೀಸಿದ ಸಿಎಂ ಬಸವರಾಜ ಬೊಮ್ಮಾಯಿ!

By ಮಂಡ್ಯ ಪ್ರತಿನಿಧಿ
|
Google Oneindia Kannada News

ಮಂಡ್ಯ, ಆಗಸ್ಟ್‌, 11: "ಒಬ್ಬ ಆಡಳಿತಗಾರನಿಗೆ ದೊಡ್ಡ ಹೃದಯ ಇರಬೇಕು. ಆದರೆ ಇಂದು ಭಾಷಣ ಮಾಡುವುದು ಒಂದು ಸರಕಾಗಿ ಹೋಗಿದೆ. ಅಧಿಕಾರದ ಸ್ಥಾನಮಾನ ಸಿಕ್ಕಾಗ ಒಂದು ಕೆಲಸವನ್ನೂ ಮಾಡದೇ ಅಧಿಕಾರ ಹೋದ ಬಳಿಕ ಕಣ್ಣೀರು ಹಾಕುವುದು ನಡೆದುಬಂದಿದೆ. ಯಾವಾಗಲೂ ಸುಳ್ಳು, ಮೋಸ ನಡೆಯುವುದಿಲ್ಲ" ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪರೋಕ್ಷವಾಗಿ ಜೆಡಿಎಸ್ ವಿರುದ್ಧ ಚಾಟಿ ಬೀಸಿದರು.

ಉದ್ಯಮಶೀಲತೆ ಮತ್ತು ಕೌಶಲ್ಯಾಭಿವೃದ್ಧಿ ಜೀವನೋಪಾಯ ಇಲಾಖೆ, ಮಂಡ್ಯ ಜಿಲ್ಲಾಡಳಿತದ ವತಿಯಿಂದ ನಗರದ ಮಂಡ್ಯ ವಿಶ್ವವಿದ್ಯಾಲಯದ ಆವರಣದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.

ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ, ಜೀವನೋಪಾಯ ವರ್ಷಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬಸವರಾಜ ಬೊಮ್ಮಾಯಿ, "ಜಿಲ್ಲೆಯ ಆರ್ಥಿಕ ಜೀವನಾಡಿಯಾದ ಮೈಶುಗರ್‌ಗೆ ಬಂದ ಸ್ಥಿತಿ ಗತಿಯನ್ನು ನಾನು ಕಣ್ಣಾರೆ ಕಂಡಿದ್ದೇನೆ" ಎಂದರು.

"ಬಹಳ ವರ್ಷಗಳ ಕಾಲ ಕಾರ್ಖಾನೆಯನ್ನು ಸರ್ಕಾರ ನಡೆಸುವುದೋ, ಖಾಸಗಿಗೆ ವಹಿಸುವುದೋ ಎಂಬ ಜಿಜ್ಞಾಸೆಯೇ ನಡೆದಿತ್ತು. ಕೊನೆಗೆ ಇಲ್ಲಿ ನಡೆದ ಹೋರಾಟಗಳನ್ನು ಗಮನಿಸಿದ್ದೇನೆ. ಅಂತಿಮವಾಗಿ ನಿರಂತರ ಧರಣಿ ನಡೆದ ಸ್ಥಳಕ್ಕೆ ತೆರಳಿ ರೈತರ ಅಹವಾಲು ಆಲಿಸಿದ ಬಳಿಕ ಕಾರ್ಖಾನೆಯನ್ನು ಖಾಸಗಿಗೆ ವಹಿಸುವುದು ಪಾಪದ ಕೆಲಸ ಎಂಬ ನಿರ್ಣಯಕ್ಕೆ ಬಂದಿದ್ದೇವೆ. ಅಂದೇ ಕಾರ್ಖಾನೆಯನ್ನು ಸರ್ಕಾರಿ ಸ್ವಾಮ್ಯದಲ್ಲೇ ನಡೆಸಲು ನಿರ್ಧಾರ ಪ್ರಕಟಿಸಿದ್ದೆವು. ಇಂದು ಕಾರ್ಖಾನೆಯಲ್ಲಿ ಬಾಯ್ಲರ್‌ಗೆ ಅಗ್ನಿಸ್ಪರ್ಶ ಮಾಡಲಾಗಿದೆ" ಎಂದು ಹೇಳಿದರು.

 ಮೈಶುಗರ್‌ ಕಾರ್ಖಾನೆ ಬಾಯ್ಲರ್‌ಗೆ ಅಗ್ನಿಸ್ಪರ್ಶ

ಮೈಶುಗರ್‌ ಕಾರ್ಖಾನೆ ಬಾಯ್ಲರ್‌ಗೆ ಅಗ್ನಿಸ್ಪರ್ಶ

"ಹಲವರು ಬಂದು ಏನೇನೋ ಮಾತನಾಡಿ ಹೋಗಿದ್ದರು. ಆದರೆ ಕಾರ್ಖಾನೆಯನ್ನು ಸುಸ್ಥಿತಿಗೆ ತರುವ ಯಾವ ಪ್ರಯತ್ನವನ್ನೂ ನಡೆಸಿರಲಿಲ್ಲ. ನಾನು ಈ ಭಾಗದ ಕಬ್ಬು ಬೆಳೆಗಾರರಿಗೆ ನ್ಯಾಯ ಒದಗಿಸುತ್ತೇನೆ ಎಂದು ಮಾತು ಕೊಟ್ಟಿದ್ದೆ. ಅದರಂತೆ ನಡೆದುಕೊಂಡಿದ್ದೇನೆ. ಅಲ್ಲದೇ ಕಾರ್ಖಾನೆಯಲ್ಲಿ ಎಥನಾಲ್ ಸೇರಿದಂತೆ ಇತರೆ ಘಟಕಗಳ ಅಭಿವೃದ್ಧಿಗೂ ಅಗತ್ಯ ಅನುದಾನ ಒದಗಿಸುವ ಮೂಲಕ ಹಿಂದಿನ ವೈಭವಕ್ಕೆ ತರಲು ನಿರ್ಧರಿಸಿರುವುದಾಗಿ ತಿಳಿಸಿದರು.
ಇದೀಗ ಕಾರ್ಖಾನೆಯ ಬಾಯ್ಲರ್‌ಗೆ ಅಗ್ನಿಸ್ಪರ್ಶ ಮಾಡಲಾಗಿದ್ದು, ಸದ್ಯದಲ್ಲೇ ಕಬ್ಬು ಅರೆಯುವ ಕಾರ್ಯಕ್ಕೆ ಚಾಲನೆ ನೀಡಲು ಆಗಮಿಸುತ್ತೇನೆ" ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

"ಮುಂದಿನ ಬಾರಿ ಮಂಡ್ಯಕ್ಕೆ ಆಗಮಿಸುವಾಗ ರಸ್ತೆ, ನೀರಾವರಿ ಮತ್ತು ಕೈಗಾರಿಕೆಗೆ ಕುರಿತಂತೆ ಸಮಗ್ರ ಅಭಿವೃದ್ಧಿಯ ರೂಪುರೇಷೆ ತಯಾರಿಸಿಕೊಂಡೇ ಬರುತ್ತೇನೆ. ನಮಗೆ ಶಕ್ತಿ ನೀಡಬೇಕಾದವರು ನೀವು, ಸಮಗ್ರ ಕರ್ನಾಟಕದ ಅಭಿವೃದ್ಧಿಗೆ ಶಕ್ತಿ ನೀಡಿದಲ್ಲಿ ನಿಮ್ಮ ಹೆಗಲಿಗೆ ಹೆಗಲು ಕೊಟ್ಟು ಶ್ರಮಿಸುತ್ತೇವೆ" ಎಂದರು.

 ಆರ್ಥಿಕ ನೆರವಿನ ಭರವಸೆ ನೀಡಿದ ಸಿಎಂ

ಆರ್ಥಿಕ ನೆರವಿನ ಭರವಸೆ ನೀಡಿದ ಸಿಎಂ

"ಮಹಿಳೆಯರ ಸ್ವಾವಲಂಬಿ ಬದುಕಿಗೆ ಉದ್ಯಮಶೀಲತೆ ಮತ್ತು ಕೌಶಲ್ಯಾಭಿವೃದ್ಧಿ ಜೀವನೋಪಾಯ ಇಲಾಖೆ ಮೂಲಕ ಕೈಗೊಂಡಿರುವ ಯೋಜನೆ ಅತ್ಯಂತ ಮಹತ್ವಪೂರ್ಣವಾಗಿದೆ. ಮಹಿಳೆಯರನ್ನು ಮನೆಗೆ ಮಾತ್ರ ಸೀಮಿತಗೊಳಿಸದೆ ಆರ್ಥಿಕ ಚಟುವಟಿಕೆಗಳಿಗೂ ಸೇರ್ಪಡೆಗೊಳಿಸಬೇಕು. ಆಗ ನಮ್ಮ ದೇಶದ ಆರ್ಥಿಕತೆ ದೊಡ್ಡ ಮಟ್ಟದಲ್ಲಿ ಅಭಿವೃದ್ಧಿಯಾಗಲು ಸಾಧ್ಯ" ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

 ಎಷ್ಟು ಹಳ್ಳಿಗಳಿಗೆ ಈ ಯೋಜನೆ ಭಾಗ್ಯ?

ಎಷ್ಟು ಹಳ್ಳಿಗಳಿಗೆ ಈ ಯೋಜನೆ ಭಾಗ್ಯ?

"ಹಿಂದೆ ದುಡ್ಡೇ ದೊಡ್ಡಪ್ಪ ಎಂಬ ಮಾತಿತ್ತು. ಆದರೆ ಇಂದು ದುಡಿಮೆಯೇ ದೊಡ್ಡಪ್ಪ ಎಂಬುದನ್ನು ನಾವು ಅರಿಯಬೇಕಿದೆ. 464 ಕೋಟಿ ರೂಪಾಯಿ ಒದಗಿಸುವ ಮೂಲಕ ಉದ್ಯಮದಲ್ಲಿ ಸ್ತ್ರೀಶಕ್ತಿ ಸಾಮರ್ಥ್ಯವನ್ನು ಹೆಚ್ಚಿಸಲಾಗುವುದು. ಪ್ರತೀ ಗ್ರಾಮದ ಸ್ವಸಹಾಯ ಸಂಘಗಳಿಗೆ 1.5 ಲಕ್ಷ ರೂಪಾಯಿ ಒದಗಿಸಿ ಆ ಸಂಘವನ್ನು ಅಭಿವೃದ್ಧಿಗೊಳಿಸುವುದು, ಇದಕ್ಕಾಗಿ ಅತ್ಯುತ್ತಮ ಮಾರುಕಟ್ಟೆಯನ್ನು ಒದಗಿಸುವುದು ಈ ಯೋಜನೆ ಒಳಗೊಂಡಿದೆ. ಅದರಲ್ಲೂ ವಿಶೇಷವಾಗಿ ಸ್ವಾಮಿ ವಿವೇಕಾನಂದರ ಹೆಸರಿನಲ್ಲಿ ಸುಮಾರು 5 ಲಕ್ಷ ಯುವಕ ಸಂಘಗಳಿಗೂ ಒಂದೂವರೆ ಲಕ್ಷ ರೂಪಾಯಿ ನೀಡಲಾಗುತ್ತದೆ. ಈ ಯೋಜನೆ 33 ಸಾವಿರ ಹಳ್ಳಿಗಳಿಗೆ ತಲುಪಲಿದೆ" ಎಂದು ಮುಖ್ಯಮಂತ್ರಿಗಳು ವಿವರಿಸಿದರು.

 ಆರ್ಥಿಕ ಅಭಿವೃದ್ಧಿಗೆ ಸಿಎಂ ಪ್ಲಾನ್‌

ಆರ್ಥಿಕ ಅಭಿವೃದ್ಧಿಗೆ ಸಿಎಂ ಪ್ಲಾನ್‌

"ಒಂದೂವರೆ ಲಕ್ಷ ರೂಪಾಯಿಗಳ ಯೋಜನೆಯ ಜೊತೆಗೆ ಸ್ಟೇಟ್ ಬ್ಯಾಂಕ್ ಆಫ್‌ ಇಂಡಿಯಾದ ಜೊತೆಗೆ ಒಡಂಬಡಿಕೆ ಮಾಡಿಕೊಂಡಿದ್ದು, ಹೆಚ್ಚುವರಿಯಾಗಿ ಇನ್ನೂ 10 ಲಕ್ಷ ಸಾಲ ಸೌಲಭ್ಯ ಒದಗಿಸಲು ಕ್ರಮ ವಹಿಸಲಾಗಿದೆ. ಇದರಿಂದ ಸ್ತ್ರೀಶಕ್ತಿ ಸಂಘಗಳು ಬಲವರ್ಧನೆಯಾಗುವುದರೊಂದಿಗೆ ದೇಶ ಮತ್ತು ನಾಡಿನ ಆರ್ಥಿಕ ಅಭಿವೃದ್ಧಿಗೆ ಪೂರಕವಾಗಲಿದೆ" ಎಂದರು.

ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ, ಯುವಜನ ಮತ್ತು ಕ್ರೀಡಾ ಸಚಿವ ಕೆ. ಸಿ. ನಾರಾಯಣಗೌಡ, ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ, ಸಂಸದೆ ಸುಮಲತಾ ಅಂಬರೀಶ್, ಶಾಸಕರಾದ ಎಂ.ಶ್ರೀನಿವಾಸ್, ಕೆ.ಸುರೇಶ್‌ಗೌಡ, ನಗರಸಭೆ ಅಧ್ಯಕ್ಷ ಎಚ್.ಎಸ್. ಮಂಜು, ಜಿಲ್ಲಾಧಿಕಾರಿ ಎಸ್. ಅಶ್ವತಿ, ಜಿಲ್ಲಾ ಪಂಚಾಯತ್‌ ಸಿಇಓ ಶಾಂತ ಎಂ. ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

Recommended Video

Rain effect: ಸಾವು ಬದುಕಿನ ಹೊರಟದಲ್ಲಿ ಬದುಕಿದ ಕುರಿಗಳು | Oneindia Kannada

English summary
Karnataka chief minister Basavaraj Bommai hit back JD(S) at Mandya. We will work for district development. know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X