ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಡ್ಯ: ಶಾಸಕನಿಂದ ಅವಾಚ್ಯ ಪದಗಳಿಂದ ನಿಂದನೆ, ಬೆದರಿಕೆ: ರಕ್ಷಣೆಗೆ ಮೊರೆ ಅರಣ್ಯಾಧಿಕಾರಿಗಳು

By ಮಂಡ್ಯ ಪ್ರತಿನಿಧಿ
|
Google Oneindia Kannada News

ಮಂಡ್ಯ, ಆಗಸ್ಟ್‌ 5 : ನಾಗಮಂಗಲ ತಾಲೂಕಿನ ಆಲತಿ ಗ್ರಾಮದಲ್ಲಿ ಪರಿಭಾವಿತ ಅರಣ್ಯ ಪ್ರದೇಶದ ಸಂರಕ್ಷಣೆಗೆ ಮುಂದಾದ ಅರಣ್ಯಾಧಿಕಾರಿಗಳನ್ನು ಶಾಸಕ ಕೆ.ಸುರೇಶ್‌ಗೌಡ ಕೀಳುಮಟ್ಟದ ಪದಗಳನ್ನು ಬಳಸಿ ನಿಂದಿಸಿರುವುದು, ಗುಂಡು ಹೊಡೆಯುವ, ಬೆಂಕಿ ಹಚ್ಚುವುದಾಗಿ ಬೆದರಿಕೆ ಹಾಕಿರುವ ಪ್ರಕರಣ ಎಲ್ಲರಲ್ಲೂ ಆತಂಕ, ಭಯ ಉಂಟುಮಾಡಿದೆ. ಈ ಬೆಳವಣಿಗೆಯಿಂದ ಬೆದರಿರುವ ಎಲ್ಲಾ ವಿಭಾಗದ ವಲಯ ಅರಣ್ಯಾಧಿಕಾರಿಗಳು ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಬಳಿ ರಕ್ಷಣೆಗೆ ಮೊರೆ ಇಟ್ಟಿದ್ದಾರೆ.

ಆಲತಿ ಗ್ರಾಮದ ಘಟನೆ ಕುರಿತಂತೆ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಆರ್.ಕೆ.ಸಿಂಗ್ ಅವರು ಮಾಹಿತಿಯನ್ನು ಪಡೆದುಕೊಂಡಿದ್ದು, ಪರಿಭಾವಿತ ಅರಣ್ಯ ಸಂರಕ್ಷಣೆ ವಿಚಾರದಲ್ಲಿ ಯಾವುದೇ ಮುಲಾಜಿಗೆ ಒಳಗಾಗದಂತೆ ಹಾಗೂ ಅಧಿಕಾರಿಗಳಿಗೆ ಅಗತ್ಯ ರಕ್ಷಣೆ ಒದಗಿಸಲು ಸಿದ್ಧವಾಗಿರುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಶಾಸಕ ಕೆ.ಸುರೇಶ್‌ಗೌಡ ಅವರು ಅರಣ್ಯಾಧಿಕಾರಿಗಳಿಗೆ ಧಮಕಿ ಹಾಕಿರುವ ಬಗ್ಗೆ ಚರ್ಚಿಸಿ ಅವರ ವಿರುದ್ಧವೂ ಕಾನೂನಾತ್ಮಕ ಕ್ರಮ ಜರುಗಿಸುವ ಬಗ್ಗೆ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಪಿ.ರುದ್ರನ್ ಚಿಂತನೆ ನಡೆಸಿದ್ದಾರೆ. ನಾಗಮಂಗಲ ವಲಯದಲ್ಲಿ ನಡೆದಿರುವ ಬೆಳವಣಿಗೆಯಿಂದ ಅಲ್ಲಿನ ವಲಯ ಸಂರಕ್ಷಣಾಧಿಕಾರಿಗಳು ಸೇರಿದಂತೆ ಜಿಲ್ಲೆಯ ವಿವಿಧ ಭಾಗದ ವಲಯ ಸಂರಕ್ಷಣಾಧಿಕಾರಿಗಳು ಶುಕ್ರವಾರ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಗೆ ಬಂದು ಪರಿಭಾವಿತ ಅರಣ್ಯ ಸಂರಕ್ಷಣೆ ವಿಚಾರದಲ್ಲಿ ಅಗತ್ಯ ರಕ್ಷಣೆ ನೀಡುವಂತೆ ಮನವಿ ಮಾಡಿದ್ದಾರೆ.

ಮಳವಳ್ಳಿಯಲ್ಲಿ ಮತ್ತೊಂದು ಜಲಪಾತ, ಗಗನ ಚುಕ್ಕಿಗಿಂತ ಕಡಿಮೆಯೇನಲ್ಲ 'ಗಾಣಾಲು ಫಾಲ್ಸ್‌'ಮಳವಳ್ಳಿಯಲ್ಲಿ ಮತ್ತೊಂದು ಜಲಪಾತ, ಗಗನ ಚುಕ್ಕಿಗಿಂತ ಕಡಿಮೆಯೇನಲ್ಲ 'ಗಾಣಾಲು ಫಾಲ್ಸ್‌'

ಪರಿಭಾವಿತ ಅರಣ್ಯ ಸಂರಕ್ಷಣೆ ವಿಚಾರದಲ್ಲಿ ಇದೇ ರೀತಿಯ ರಾಜಕೀಯ ಒತ್ತಡಗಳು, ಬೆದರಿಕೆಗಳು ಎದುರಾದಲ್ಲಿ ಅಧಿಕಾರಿಗಳಿಗೆ ರಕ್ಷಣೆ ಸಿಗುವ ಬಗೆ ಹೇಗೆ, ಇಂತಹ ಕ್ಲಿಷ್ಟ ಪರಿಸ್ಥಿತಿಯಲ್ಲಿ ಕರ್ತವ್ಯ ನಿರ್ವಹಣೆ, ಅರಣ್ಯ ಸಂರಕ್ಷಣೆ ಮಾಡುವುದು ಕಷ್ಟವಾಗಿದೆ. ಇದಕ್ಕೆ ಸಂಬಂಸಿದಂತೆ ಸೂಕ್ತ ರಕ್ಷಣೆ ಒದಗಿಸಿದರಷ್ಟೇ ಕರ್ತವ್ಯ ನಿರ್ವಹಿಸಲು ಸಾಧ್ಯ. ಇಲ್ಲದಿದ್ದರೆ ಅರಣ್ಯಪ್ರದೇಶದೊಳಗೆ ಹೋಗುವ ಧೈರ್ಯ ಮಾಡಲಾಗುವುದಿಲ್ಲ ಎಂದು ನೇರವಾಗಿ ಹೇಳಿದ್ದಾರೆ.

 ಶಾಸಕರ ವಿರುದ್ಧ ಅರಣ್ಯಾಧಿಕಾರಿಗಳ ಆಕ್ರೋಶ

ಶಾಸಕರ ವಿರುದ್ಧ ಅರಣ್ಯಾಧಿಕಾರಿಗಳ ಆಕ್ರೋಶ

ನಾಗಮಂಗಲ ತಾಲೂಕು ಹಾಲತಿ ಗ್ರಾಮದಲ್ಲಿ 374 ಎಕರೆ ಪರಿಭಾವಿತ ಅರಣ್ಯ ಪ್ರದೇಶವಿದೆ. ಈ ಪ್ರದೇಶವನ್ನು ಯಾವುದೇ ಇಲಾಖೆಗೂ ವರ್ಗಾವಣೆ ಮಾಡಿಲ್ಲ. ಅರಣ್ಯ ಪ್ರದೇಶವಾಗಿಯೇ ಉಳಿದುಕೊಂಡಿದೆ. ವಿವಾದವೇ ಇಲ್ಲದ ಅರಣ್ಯ ಜಮೀನಿಗೆ ಜಂಟಿ ಸರ್ವೆ ಮಾಡಿಸುವ ಅಗತ್ಯವೇನಿದೆ ಎನ್ನುವುದು ಅರಣ್ಯಾಧಿಕಾರಿಗಳ ಪ್ರಶ್ನೆಯಾಗಿದೆ. ಸುಪ್ರೀಂಕೋರ್ಟ್ ಆದೇಶಾನುಸಾರ ಅರಣ್ಯ ಪ್ರದೇಶ ಸಂರಕ್ಷಣೆ ನಮ್ಮ ಜವಾಬ್ದಾರಿಯಾಗಿದೆ.

ಜನಪ್ರತಿನಿಗಳಾದವರು ಇದನ್ನು ಅರ್ಥ ಮಾಡಿಕೊಳ್ಳಬೇಕೇ ವಿನಃ ಅರಣ್ಯಾಧಿಕಾರಿಗಳಿಗೆ ಧಮ್ಕಿ ಹಾಕುವಂತಹ ಕೆಳಮಟ್ಟಕ್ಕೆ ಇಳಿಯಬಾರದು. ಜನರಿಗೆ ದಿಕ್ಕು ತಪ್ಪಿಸಿ ಪ್ರಚೋದನಕಾರಿಯಾಗಿ ಮಾತನಾಡುವುದು ಸರಿಯಲ್ಲ. ಅರಣ್ಯಭೂಮಿ, ಸಾಗುವಳಿ ಭೂಮಿಗಳಿಗಿರುವ ವ್ಯತ್ಯಾಸಗಳನ್ನು ಜನರಿಗೆ ಅರ್ಥೈಸಿಕೊಡದೆ ಜನಪ್ರತಿನಿಧಿ ಎನ್ನುವುದನ್ನು ಮರೆತು ಗೂಂಡಾವರ್ತನೆ ಪ್ರದರ್ಶಿಸಿರುವುದಕ್ಕೆ ಅಧಿಕಾರಿ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.

 ಸಾವಯವ ಬೆಲ್ಲದ ಕಡೆಗೆ ಮುಖ ಮಾಡಿದ ಮಂಡ್ಯದ ಜನತೆ! ಸಾವಯವ ಬೆಲ್ಲದ ಕಡೆಗೆ ಮುಖ ಮಾಡಿದ ಮಂಡ್ಯದ ಜನತೆ!

 ರಕ್ಷಣಗೆ ನಿಲ್ಲದ ಪೊಲೀಸರು

ರಕ್ಷಣಗೆ ನಿಲ್ಲದ ಪೊಲೀಸರು

ನಾಗಮಂಗಲ ತಾಲೂಕಿನ ಹಾಲತಿ ಗ್ರಾಮದಲ್ಲಿ ಅರಣ್ಯ ಸಂರಕ್ಷಣೆಗೆ ಮುಂದಾಗಿದ್ದ ಅಧಿಕಾರಿಗಳಿಗೆ ಶಾಸಕ ಕೆ.ಸುರೇಶ್‌ಗೌಡರು ತುಚ್ಛ ಮಾತುಗಳಿಂದ ಹೀನಾಯವಾಗಿ ನಿಂದಿಸುತ್ತಾ, ಗುಂಡು ಹೊಡೆಯುವ, ಬೆಂಕಿ ಹಚ್ಚುವುದಾಗಿ ಬೆದರಿಕೆ ಹಾಕುತ್ತಿದ್ದರೂ ಪೊಲೀಸರು ಮೂಕ ಪ್ರೇಕ್ಷಕರಂತೆ ನಿಂತಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಅರಣ್ಯಾಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ ಶಾಸಕ ಕೆ.ಸುರೇಶ್‌ಗೌಡರ ವಿರುದ್ಧ ಪೊಲೀಸರೇ ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳುವುದಕ್ಕೆ ಅವಕಾಶವಿದ್ದರೂ ಆ ಯಾವುದೇ ಕ್ರಮವನ್ನೂ ಅನುಸರಿಸಲಿಲ್ಲ. ಪೊಲೀಸರ ರಕ್ಷಣೆಯನ್ನು ನಂಬಿಕೊಂಡು ಅರಣ್ಯಪ್ರದೇಶದೊಳಗೆ ಹೋಗುವುದು ಕಷ್ಟವಾಗಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಅಧಿಕಾರಿಗಳ ರಕ್ಷಣೆಗೆ ಬಾರದವರಿಂದ ಇನ್ನೆಂತಹ ರಕ್ಷಣೆಯನ್ನು ನಿರೀಕ್ಷಿಸಲು ಸಾಧ್ಯ ಎಂಬ ಮಾತುಗಳು ಅರಣ್ಯ ಇಲಾಖೆ ಅಧಿಕಾರಿಗಳಿಂದಲೇ ಕೇಳಿಬರುತ್ತಿದೆ.

 ನುಣುಚಿಕೊಳ್ಳುತ್ತಿರುವ ಜಿಲ್ಲಾಧಿಕಾರಿ

ನುಣುಚಿಕೊಳ್ಳುತ್ತಿರುವ ಜಿಲ್ಲಾಧಿಕಾರಿ

ಪರಿಭಾವಿತ ಅರಣ್ಯ ಪ್ರದೇಶಗಳನ್ನು ಕಂದಾಯ ದಾಖಲೆಗಳಲ್ಲಿ ಪರಿಭಾವಿತ ಅರಣ್ಯ ಪ್ರದೇಶಗಳೆಂದು ಅಳವಡಿಸಿ ಅರಣ್ಯ ಇಲಾಖೆ ಸುಪರ್ದಿಗೆ ನೀಡಬೇಕಿರುವುದು ಜಿಲ್ಲಾಧಿಕಾರಿಗಳ ಜವಾಬ್ದಾರಿಯಾಗಿದೆ. ಏಕೆಂದರೆ, ಜಿಲ್ಲಾ ಸಮಿತಿಗೆ ಅವರೇ ಅಧ್ಯಕ್ಷರಾಗಿದ್ದಾರೆ. ಕಂದಾಯ ದಾಖಲೆಗಳಲ್ಲಿ ದೋಷಗಳಿದ್ದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸುವುದು, ಗಡಿಯಲ್ಲಿ ಗೊಂದಲಗಳಿದ್ದರೆ ಕಂದಾಯ ಮತ್ತು ಅರಣ್ಯಾಧಿಕಾರಿಗಳಿಂದ ಜಂಟಿಸರ್ವೆ ನಡೆಸಿ ಪರಿಭಾವಿತ ಅರಣ್ಯ ಪ್ರದೇಶದ ಗಡಿ ಗುರುತಿಸುವುದು. ಆರ್‌ಟಿಸಿಗಳನ್ನು ಸರಿಪಡಿಸುವುದು, ಅರಣ್ಯಪ್ರದೇಶವನ್ನು ಅರಣ್ಯೇತರ ಉದ್ದೇಶಗಳಿಗೆ ಬಳಸದಂತೆ ತಡೆಯುವ ಕೆಲಸಗಳನ್ನು ಸಮರ್ಪಕವಾಗಿ ನಡೆಸಿಕೊಂಡು ಬಂದಿದ್ದರೆ ಈ ಗೊಂದಲ, ವಿವಾದಗಳು ಉದ್ಭವಿಸುತ್ತಿರಲಿಲ್ಲ. ಕಂದಾಯ ದಾಖಲೆಗಳಲ್ಲಿ ಉಂಟಾಗಿರುವ ಗೊಂದಲಗಳನ್ನು ನಿವಾರಿಸಿಕೊಡುವಲ್ಲಿ ಜಿಲ್ಲಾಕಾರಿಗಳು ಜವಾಬ್ದಾರಿಯುತವಾಗಿ ನಡೆದುಕೊಳ್ಳದಿರುವುದರಿಂದ ಕೆಳಹಂತದ ಅರಣ್ಯಾಕಾರಿಗಳು ರಾಜಕೀಯ ಒತ್ತಡಗಳಿಗೆ ಸಿಲುಕಿ ಸಂಕಷ್ಟ ಅನುಭವಿಸುತ್ತಿದ್ದಾರೆ ಎನ್ನುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ.

 ದೂರು ನೀಡಿದರೆ ಕಾನೂನಿನ ಕ್ರಮ

ದೂರು ನೀಡಿದರೆ ಕಾನೂನಿನ ಕ್ರಮ

ಸರ್ವೋಚ್ಛ ನ್ಯಾಯಾಲಯದ ಆದೇಶದನ್ವಯ ಪರಿಭಾವಿತ ಅರಣ್ಯಗಳನ್ನು ರಕ್ಷಣೆ ಮಾಡುವುದು ನಮ್ಮ ಕರ್ತವ್ಯ. ಹಾಲತಿ ಗ್ರಾಮದಲ್ಲಿ ನಡೆದ ಪ್ರಕರಣದ ಬಗ್ಗೆ ಪ್ರಧಾನ ಅರಣ್ಯ ಸಂರಕ್ಷಣಾಕಾರಿಗಳು ಮತ್ತು ಜಿಲ್ಲಾಧಿಕಾರಿ ಜೊತೆ ಚರ್ಚಿಸಲಾಗಿದೆ. ಈ ಸಂಬಂಧ ಅಕಾರಿಗಳಿಗೆ ಎಲ್ಲ ರೀತಿಯ ರಕ್ಷಣೆ ದೊರಕಿಸಲು ಸಿದ್ಧರಿದ್ದೇವೆ. ಮೇಲಧಿಕಾರಿಗಳಿಂದಲೂ ರಕ್ಷಣೆ ಭರವಸೆ ಸಿಕ್ಕಿದೆ. ಅಧಿಕಾರಿಗಳಿಗೆ ಧಮಕಿ ಹಾಕಿರುವ ಶಾಸಕರ ವಿರುದ್ಧ ಕಾನೂನು ಕ್ರಮ ಜರುಗಿಸುವ ಬಗ್ಗೆಯೂ ಚರ್ಚಿಸಲಾಗುತ್ತಿದೆ ಎಂದು ಡಿಎಫ್‌ಒ ಪಿ.ರುದ್ರನ್ ತಿಳಿಸಿದ್ದಾರೆ.

ಆಲತಿ ಗ್ರಾಮದಲ್ಲಿ ನಡೆದಿರುವ ಪ್ರಕರಣ ಸಂಬಂಧ ಇದುವರೆಗೂ ನಮಗೆ ಅರಣ್ಯಾಕಾರಿಗಳಿಂದ ಯಾವುದೇ ದೂರು ಬಂದಿಲ್ಲ. ಅಧಿಕಾರಿಗಳು ಕರ್ತವ್ಯಕ್ಕೆ ಅಡ್ಡಿಪಡಿಸಿರುವುದು ಸೇರಿದಂತೆ ಹಲ್ಲೆ, ನಿಂದನೆ ಬಗ್ಗೆ ದೂರು ನೀಡಿದಲ್ಲಿ ಖಂಡಿತಾ ಕ್ರಮ ಕೈಗೊಳ್ಳುತ್ತೇವೆ. ಎಲ್ಲದಕ್ಕೂ ಸುಮೋಟೋ ಪ್ರಕರಣ ದಾಖಲಿಸಲು ಸಾಧ್ಯವಿಲ್ಲ. ದೂರು ನೀಡಿದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಮಂಡ್ಯ ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್. ಯತೀಶ್ ತಿಳಿಸಿದ್ದಾರೆ.

English summary
Nagamangala MLA K.suresh gowda,from JDS allegedly abused forest officers and issued threats to burn their vehicles.The incident took place at Halthi village in the Nagamangala forest range of Mandya district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X