ದೇವೇಗೌಡರ ಬಗ್ಗೆ ಹೇಳಿಕೆ: ರಾಜಣ್ಣ ಮಾನಸಿಕ ಅಸ್ವಸ್ಥ ಎಂದ ಶ್ರೀಕಂಠೇಗೌಡ
ಮಂಡ್ಯ, ಜುಲೈ 3 : ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರ ಬಗ್ಗೆ ಲಘುವಾಗಿ ಮಾತನಾಡಿರುವ ಮಧುಗಿರಿ ಮಾಜಿ ಶಾಸಕ ಕೆ. ಎನ್. ರಾಜಣ್ಣ ಅವರ ವಿರುದ್ಧ ಕಾಂಗ್ರೆಸ್ ಪಕ್ಷ ಶಿಸ್ತು ಕ್ರಮ ಕೈಗೊಳ್ಳಬೇಕು. ಕೂಡಲೇ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿ ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರು ಶಾಸಕ ಎಂ. ಶ್ರೀನಿವಾಸ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ನಗರದ ಜೆ. ಸಿ. ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು, ದೇವೇಗೌಡರ ಸಾವಿನ ಬಗ್ಗೆ ಮಾತನಾಡಿದ ರಾಜಣ್ಣ ವಿರುದ್ಧ ಘೋಷಣೆ ಕೂಗಿದರು. ಕೆಲ ಕಾಲ ವಾಹನ ಸಂಚಾರಕ್ಕೂ ಅಡ್ಡಿಪಡಿಸಿದರು.
ದೇವೇಗೌಡರು 4 ಜನರ ಮೇಲೆ ಹೋಗೋ ದಿನ ದೂರವಿಲ್ಲ: ರಾಜಣ್ಣನಿಗೆ ಸುಧಾಕರ್ ಸಲಹೆಯೇನು?
ಶಾಸಕ ಎಂ. ಶ್ರೀನಿವಾಸ್ ಮಾತನಾಡಿ, "ರಾಜಕೀಯ ಮುತ್ಸದ್ಧಿ ಮಾಜಿ ಪ್ರಧಾನಿ ದೇವೇಗೌಡರ ಬಗ್ಗೆ ಲಘುವಾಗಿ ಮಾತನಾಡಿರುವುದನ್ನು ಜೆಡಿಎಸ್ ತೀವ್ರವಾಗಿ ಖಂಡಿಸುತ್ತದೆ. ತಮ್ಮ ಸ್ವಚ್ಚ ಆಡಳಿತದ ಮೂಲಕ ಬಡವರಿಗೆ ಬದುಕು ಕಟ್ಟಿಕೊಟ್ಟಂತಹ ದೇವೇಗೌಡರನ್ನು ನಿಂದಿಸುವ ಮೂಲಕ ರಾಜಣ್ಣ ತಮ್ಮ ಮಾನಸಿಕ ಸ್ಥಿತಿಯನ್ನು ತೋರ್ಪಡಿಸಿಕೊಂಡಿದ್ದಾರೆ. ಅವರನ್ನು ಬಂಧಿಸಬೇಕು. ತಕ್ಷಣ ದೇವೇಗೌಡರ ಕ್ಷಮೆಯಾಚಿಸಬೇಕು. ದೇವೇಗೌಡರ ಕಾಲಿಗೆ ಬಿದ್ದು ಕ್ಷಮೆ ಕೇಳಬೇಕು" ಎಂದು ಒತ್ತಾಯಿಸಿದರು.
ದೇವೇಗೌಡರು 4 ಜನರ ಹೆಗಲ ಮೇಲೆ ಹೋಗುವ ಕಾಲ ಹತ್ತಿರವಿದೆ: ರಾಜಣ್ಣ ವಿವಾದಾತ್ಮಕ ಹೇಳಿಕೆ

ರಾಜಣ್ಣನನ್ನು ನಿಮ್ಹಾನ್ಸ್ಗೆ ದಾಖಲಿಸಬೇಕು
ವಿಧಾನ ಪರಿಷತ್ ಸದಸ್ಯ ಕೆ. ಟಿ. ಶ್ರೀಕಂಠೇಗೌಡ ಮಾತನಾಡಿ, "ರಾಜಣ್ಣನಂತಹ ಮಾನಸಿಕ ಅಸ್ವಸ್ಥರನ್ನು ನಿಮ್ಹಾನ್ಸ್ಗೆ ದಾಖಲಿಸುವುದನ್ನು ಬಿಟ್ಟು ಓಡಾಡಿಕೊಂಡಿರುವುದಕ್ಕೆ ಸರ್ಕಾರ ಅವಕಾಶ ನೀಡಿದೆ. ತಕ್ಷಣ ಅವರನ್ನು ಬಂಧಿಸಿ ನಿಮ್ಹಾನ್ಸ್ಗೆ ದಾಖಲಿಸಬೇಕು. ದೇವೇಗೌಡರನ್ನು ಮಾನಸಿಕವಾಗಿ ಜರ್ಜರಿತರನ್ನಾಗಿ ಮಾಡುವ ಹುನ್ನಾರವನ್ನು ಕಾಂಗ್ರೆಸ್ಸಿಗರು ಮಾಡುತ್ತಿದ್ದಾರೆ. ಕೆಲವೇ ಕೆಲವು ಮುಖಂಡರು ಮಾತ್ರ ರಾಜಣ್ಣನ ಹೇಳಿಕೆಯನ್ನು ಖಂಡಿಸಿದ್ದಾರೆ. ಉಳಿದವರು ಕುತಂತ್ರ ರಾಜಕಾರಣ ಮಾಡುತ್ತಿದ್ದಾರೆ" ಎಂದು ದೂರಿದರು.
"ರಾಜ್ಯದ ಹಿತಕ್ಕೆ ಪಾದಯಾತ್ರೆ ಮಾಡಿ ದೇವೇಗೌಡರ ಕಾಲುಗಳಿಗೆ ತೊಂದರೆಯಾಗಿರಬಹುದು. ಆದರೆ ಅವರು ಯುವಕನಂತೆ ಕೆಲಸ ಮಾಡುತ್ತಿದ್ದಾರೆ. ಚಿಂತನೆ ನಡೆಸುತ್ತಾರೆ. ಗಾಂಧಿ ಪ್ರತಿಮೆ ಮುಂದೆ ಧರಣಿ ನಡೆಸಿದರೆ ಸ್ವತಃ ಪ್ರಧಾನಿಯೇ ಖುದ್ದು ನಿಂತು ಅವರ ಸಮಸ್ಯೆ ಬಗೆಹರಿಸುವ ಬಗ್ಗೆ ಮಾತನಾಡುತ್ತಾರೆ. ರಾಜಣ್ಣನಂತಹ ಮಾನಸಿಕ ಅಸ್ವಸ್ಥರು ಮಾತ್ರ ದೇವೇಗೌಡರ ಬಗ್ಗೆ ಲಘುವಾಗಿ ಮಾತನಾಡುತ್ತಾರೆ" ಎಂದು ಕಿಡಿಕಾರಿದರು.

ಸಾಮಾಜಿಕ ಬದುಕಿಗೆ ನಿವೃತ್ತಿಗೊಳಿಸಬೇಕು
"ನಾಡಿನ ಸಮಸ್ಯೆಗಳ ಪರಿಹಾರಕ್ಕಾಗಿ ದೇವೇಗೌಡರು ಹಗಲು ರಾತ್ರಿ ದುಡಿಯುತ್ತಾರೆ. ನಾಡಿಗೆ ಅವರ ಕೊಡುಗೆ ಬಹಳ ದೊಡ್ಡದಿದೆ. ಇದನ್ನು ತಿಳಿದ ರಾಜಣ್ಣ ಲಘುವಾಗಿ ಮಾತನಾಡುವುದು ಅವರ ವ್ಯಕ್ತಿತ್ವಕ್ಕೆ ಶೋಭೆ ತರುವುದಿಲ್ಲ. ಈ ಕೂಡಲೇ ಅವರು ತಮ್ಮ ಸಾಮಾಜಿಕ ಬದುಕಿಗೆ ನಿವೃತ್ತಿ ಘೋಷಣೆ ಮಾಡಬೇಕು. ಇಲ್ಲವೇ ಕಾಂಗ್ರೆಸ್ ಪಕ್ಷ ಕೂಡಲೇ ಅವರ ಪ್ರಾಥಮಿಕ ಸದಸ್ಯತ್ವವನ್ನು ರದ್ದುಪಡಿಸಬೇಕು" ಎಂದು ಶ್ರೀಕಂಠೇಗೌಡ ಆಗ್ರಹಿಸಿದರು.

ದೇವೇಗೌಡ ಜಾತ್ಯಾತೀತ ನಿಲುವಿನ ವ್ತಕ್ತಿ
ಕಾವೇರಿ ಜಲಾನಯನ ವ್ಯಾಪ್ತಿಯ ಪ್ರದೇಶಕ್ಕೆ 15 ಟಿ. ಎಂ. ಸಿ. ಹೆಚ್ಚುವರಿ ನೀರು ಲಭಿಸಲು ದೇವೇಗೌಡರು ಕಾರಣರಾಗಿದ್ದಾರೆ. ಜಾತ್ಯತೀತ ನಿಲುವಿನ ವ್ಯಕ್ತಿಯಾಗಿರುವ ದೇವೇಗೌಡರಿಗೆ ಪ್ರಧಾನಿಯಂತಹ ವ್ಯಕ್ತಿಗಳೇ ಗೌರವ ಕೊಡುತ್ತಾರೆ. ಜಾತ್ಯತೀತ ನಿಲುವಿನ ವ್ಯಕ್ತಿಯಾಗಿರುವ ದೇವೇಗೌಡರ ಅಪ್ರತಿಮ ಸಾಧನೆ ಮಾಡಿರುವ ರಾಜಕಾರಣಿ ಬಗ್ಗೆ ಯಾರೇ ಆದರೂ ಕುಚೋದ್ಯದ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು. ಇಲ್ಲದಿದ್ದಲ್ಲಿ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ಜೆಡಿಎಸ್ ನಾಯಕರು ಎಚ್ಚರಿಕೆ ನೀಡಿದರು.

ಮಾಜಿ ಶಾಸಕ ವಿವಾದದ ಹೇಳಿಕೆ ಏನು?
ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಕಾವಣದಾಲದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ರಾಜಣ್ಣ, "ದೇವೇಗೌಡರು ಈಗ ಇಬ್ಬರ ಮೇಲೆ ಕೈ ಹಾಕಿಕೊಂಡು ಹೋಗುತ್ತಿದ್ದಾರೆ, ನಾಲ್ವರ ಮೇಲೆ ಹೋಗುವ ಕಾಲ ಹತ್ತಿರದಲ್ಲೇ ಇದೆ " ಎಂದು ಹೇಳಿಕೆ ನೀಡಿದ್ದರು. ಇದಕ್ಕೆ ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ ಸೇರಿದಂತೆ ಜೆಡಿಎಸ್ ನಾಯಕರು ಕಿಡಿ ಕಾರಿ, ಎಚ್ಚರಿಕೆ ನೀಡಿದ್ದರು.