ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೇ ತಿಂಗಳಲ್ಲಿ ಕೆಆರ್‌ಎಸ್‌ನಲ್ಲಿ 100 ಅಡಿ ನೀರು ಇರುವುದು ಹೇಗೆ?

By ಮಂಡ್ಯ ಪ್ರತಿನಿಧಿ
|
Google Oneindia Kannada News

ಮಂಡ್ಯ, ಮೇ 16: ಪ್ರತಿ ವರ್ಷ ಬೇಸಿಗೆ ಕಾಲ ಆರಂಭವಾಗುತ್ತಿದ್ದಂತೆಯೇ ಕೆಆರ್‌ಎಸ್ ಜಲಾಶಯದ ನೀರನ್ನು ನಂಬಿದವರಿಗೆ ಭಯವುಂಟಾಗುತ್ತಿತ್ತು. ಆದರೆ ಕಳೆದ ಕೆಲವು ವರ್ಷಗಳಿಂದ ಆ ಭಯ ದೂರವಾಗಿದೆ. ಅದರಲ್ಲೂ ಈ ಬಾರಿ ಮುಂಗಾರು ಆರಂಭಕ್ಕೆ ಮುನ್ನವೇ ಜಲಾಶಯದಲ್ಲಿ 100 ಅಡಿಗಿಂತಲೂ ಹೆಚ್ಚು ನೀರಿನ ಸಂಗ್ರಹವಿರುವುದು ಖುಷಿ ತಂದಿದೆ.

ಕಳೆದ ಬಾರಿ ತಡವಾಗಿ ಅಂದರೆ ನವೆಂಬರ್ ವೇಳೆಗೆ ಜಲಾಶಯ ಭರ್ತಿಯಾಗಿರುವುದು ಒಂದು ಕಡೆಯಾದರೆ, ಡಿಸೆಂಬರ್ ತನಕವೂ ಹಿಂಗಾರು ಮಳೆ ಸುರಿದಿತ್ತು. ಈ ಬಾರಿ ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಸುರಿದಿದ್ದು ಡ್ಯಾಂನಲ್ಲಿ ನೀರಿನ ಸಂಗ್ರಹವಿದೆ.

ಅದಕ್ಕಿಂತ ಹೆಚ್ಚಾಗಿ 'ಅಸಾನಿ' ಚಂಡ ಮಾರುತದ ಪರಿಣಾಮ ಕಳೆದ ನಾಲ್ಕೈದು ದಿನಗಳಿಂದ ಎಡೆಬಿಡದೆ ಮಳೆ ಸುರಿಯುತ್ತಿರುವುದು ಶ್ರೀರಂಗಪಟ್ಟಣದಲ್ಲಿರುವ ಕೆಆರ್‌ಎಸ್ ಜಲಾಶಯದಲ್ಲಿ ನೀರಿನ ಪ್ರಮಾಣ ಹೆಚ್ಚಾಗಲು ಕಾರಣವಾಗಿದೆ.

ಕಳೆದ ಒಂದು ವಾರದ ಹಿಂದೆಯಷ್ಟೆ ಜಲಾಶಯದ ನೀರಿನ ಮಟ್ಟ ನೂರು ಅಡಿಗಿಂತ ಕೆಳಗೆ ಅಂದರೆ 99 ಅಡಿಗೆ ತಲುಪಿತ್ತು. ಆದರೆ ಅಸಾನಿ ಚಂಡ ಮಾರುತದ ಪರಿಣಾಮ ಕೊಡಗು ಸೇರಿದಂತೆ ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗಿದ್ದರಿಂದ ಕಾವೇರಿ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿತ್ತು.

 ಕಾಫಿ ತೋಟಕ್ಕೆ ನೀರಿನ ಕೊರತೆ ಇಲ್ಲ

ಕಾಫಿ ತೋಟಕ್ಕೆ ನೀರಿನ ಕೊರತೆ ಇಲ್ಲ

ಸಾಮಾನ್ಯವಾಗಿ ಈ ಹಿಂದೆ ಬೇಸಿಗೆಯಲ್ಲಿ ಕೆಲವು ಕಾಫಿ ಬೆಳೆಗಾರರು ಫೆಬ್ರವರಿ, ಮಾರ್ಚ್ ತಿಂಗಳಲ್ಲಿ ಕಾಫಿ ಹೂ ಬಿಡಲು ಅವಶ್ಯಕ ನೀರನ್ನು ನದಿ ಮೂಲಗಳಿಂದ ಬಳಸಿಕೊಳ್ಳುವ ಮೂಲಕ ತೋಟಗಳಿಗೆ ಸ್ಪಿಂಕ್ಲರ್ ಮಾಡುತ್ತಿದ್ದರು. ಹೀಗಾಗಿ ಸಣ್ಣಪುಟ್ಟ ನದಿಗಳು ಬತ್ತಿಹೋಗುತ್ತಿದ್ದವು. ಆದರೆ ಪ್ರಸಕ್ತ ವರ್ಷ ಕೊಡಗಿನಲ್ಲಿ ಸ್ವಲ್ಪ ತಡವಾದರೂ ಉತ್ತಮವಾಗಿ ಮಳೆ ಸುರಿದಿದ್ದರಿಂದ ಬಹುತೇಕ ಕಾಫಿ ತೋಟದ ಮಾಲೀಕರು ಸ್ಪಿಂಕ್ಲರ್ ಮಾಡುವುದರಿಂದ ಪಾರಾಗಿದ್ದರು. ಇದರಿಂದ ಕಾವೇರಿ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿರಲಿಲ್ಲ.

 ನೀರಿನ ಪ್ರಮಾಣ ಪಾತಾಳ ತಲುಪಿಲ್ಲ

ನೀರಿನ ಪ್ರಮಾಣ ಪಾತಾಳ ತಲುಪಿಲ್ಲ

ಕಳೆದ ನಾಲ್ಕು ವರ್ಷಗಳಿಂದ ಉತ್ತಮ ಮಳೆಯಾಗುತ್ತಿರುವುದರಿಂದ ಜಲಮೂಲಗಳು ಬೇಸಿಗೆಯಲ್ಲಿಯೂ ಬತ್ತದ ಕಾರಣದಿಂದ ಕಾವೇರಿ ನದಿಯಲ್ಲಿ ಹರಿಯುವ ನೀರಿನ ಪ್ರಮಾಣ ಈ ಹಿಂದೆಯಂತೆ ಕಡಿಮೆಯಾಗಿರಲಿಲ್ಲ. ಇದೆಲ್ಲದರ ಪರಿಣಾಮ ಕಾವೇರಿ ನದಿಯಲ್ಲಿ ಉತ್ತಮವಾಗಿ ನೀರು ಹರಿದು ಬಂದು ಕೆಆರ್‌ಎಸ್ ಜಲಾಶಯವನ್ನು ಸೇರಿದ್ದರಿಂದ ನೀರಿನ ಪ್ರಮಾಣ ಪಾತಾಳ ತಲುಪುವ ಪ್ರಮೇಯವೇ ಬರಲಿಲ್ಲ.

ಸದ್ಯದ ಪರಿಸ್ಥಿತಿಯಲ್ಲಿ ಕಳೆದ 14 ವರ್ಷಗಳ ಬಳಿಕ ಈ ಸಮಯದಲ್ಲಿ ಕೆಆರ್‌ಎಸ್‌ನಲ್ಲಿ 100 ಅಡಿ ನೀರಿರುವುದು ಇದೇ ಪ್ರಥಮವಾಗಿದೆ ಎಂದು ಹೇಳಲಾಗಿದೆ. ಪ್ರತಿ ಬೇಸಿಗೆ ಬಂದಾಗಲೂ ಜಲಾಶಯದ ನೀರಿನ ಪ್ರಮಾಣ ಇಳಿಕೆಯಾಗಿ ಕುಡಿಯುವ ನೀರಿಗೂ ಸಂಕಷ್ಟ ಪಡುವಂತಾಗುತ್ತಿತ್ತು. 2013ರಲ್ಲಿ ತೀರ ತಳಮಟ್ಟ ಅಂದರೆ ಡೆಡ್ ಸ್ಟೋರೆಜ್ (64ಅಡಿ) ತಲುಪಿತ್ತು. ಅದಾದ ನಂತರ 2017 ಮತ್ತು 2018ರಲ್ಲಿ 70 ಅಡಿಯನ್ನು ತಲುಪಿತ್ತು. ಆದರೀಗ 124.80 ಅಡಿಯ ಜಲಾಶಯದಲ್ಲಿ 100 ಅಡಿಯಷ್ಟು ನೀರು ಇರುವುದು ದಾಖಲೆಯಾಗಿದೆ. 2008ರಲ್ಲಿ ಇದೇ ಸಮಯದಲ್ಲಿ ನೂರಡಿಯಷ್ಟು ನೀರಿತ್ತು. ಆದಾದ ನಂತರದ ವರ್ಷಗಳಲ್ಲಿ ಬರಗಾಲ ಕಾಣಿಸಿಕೊಂಡಿತ್ತು.

 ಸದ್ಯ ನೀರಿನ ಮಟ್ಟ 100.02 ಅಡಿ

ಸದ್ಯ ನೀರಿನ ಮಟ್ಟ 100.02 ಅಡಿ

ಮುಂಗಾರಿನಲ್ಲಿ ಮಲೆನಾಡಿನಲ್ಲಿ ವಾಡಿಕೆಯ ಮಳೆ ಸುರಿಯಲಿಲ್ಲ. ಅದರಲ್ಲೂ 2014 ರಿಂದ 2018ರ ತನಕ ಐದು ವರ್ಷಗಳ ಕಾಲ ಬರಗಾಲ ತಾಂಡವವಾಡಿತ್ತು. ಕೆಆರ್‌ಎಸ್‌ನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹವಾಗದ ಕಾರಣದಿಂದ ರೈತರ ಜಮೀನಿಗೆ ನೀರು ಹರಿಸದೆ ರೈತರು ಸಂಕಷ್ಟ ಅನುಭವಿಸುವಂತಾಗಿತ್ತು. ಆದರೆ 2018ರ ಬಳಿಕ ಪ್ರತಿವರ್ಷವೂ ಜಲಾಶಯ ಭರ್ತಿಯಾಗುವುದರೊಂದಿಗೆ ನೀರಿನ ಸಮಸ್ಯೆಯನ್ನು ನೀಗಿದೆ. ಸದ್ಯ ಜಲಾಶಯದಲ್ಲಿ 100.02 ಅಡಿಯಷ್ಟು ನೀರಿದ್ದು ಜಲಾಶಯಕ್ಕೆ ಸುಮಾರು 1,171ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಕುಡಿಯುವ ನೀರು ಸೇರಿದಂತೆ ವಿವಿಧ ಉದ್ದೇಶಗಳಿಗಾಗಿ ಜಲಾಶಯದಿಂದ 1,061 ಕ್ಯೂಸೆಕ್ ನೀರನ್ನು ಬಿಡಲಾಗುತ್ತಿದೆ.

 ಬಹುಬೇಗ ಭರ್ತಿಯಾಗುವ ಸಾಧ್ಯತೆ

ಬಹುಬೇಗ ಭರ್ತಿಯಾಗುವ ಸಾಧ್ಯತೆ

ಸದ್ಯ ಕೊಡಗಿನಲ್ಲಿ ಮಳೆ ಉತ್ತಮವಾಗುತ್ತಿದ್ದು, ಈ ಬಾರಿ ಕೇರಳಕ್ಕೆ ಮಾನ್ಸೂನ್ ಜೂನ್ ಮೊದಲವಾರದಲ್ಲಿ ಕಾಲಿಡುವ ಸಾಧ್ಯತೆಯಿದ್ದು, ಕೊಡಗು ಸೇರಿದಂತೆ ಮಲೆನಾಡು ಪ್ರದೇಶಗಳಲ್ಲಿ ಉತ್ತಮ ಮಳೆಯಾದರೆ ಕಾವೇರಿ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿ ಜಲಾಶಯಕ್ಕೆ ಇನ್ನಷ್ಟು ಹರಿದು ಬರುವ ಸಾಧ್ಯತೆಯಿದ್ದು, ಈ ಬಾರಿ ಜಲಾಶಯ ಬಹುಬೇಗ ಭರ್ತಿಯಾದರೂ ಅಚ್ಚರಿ ಪಡಬೇಕಾಗಿಲ್ಲ.

English summary
Krishna Raja Sagara (KRS) dam in Mandya recoreded 100 feet of water in the month of May. How dam manage 100 feet water in summer.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X