ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಡ್ಯ: ಬೀಳುವ ಹಂತದಲ್ಲಿರುವ ಶಾಲಾ ಕೊಠಡಿಗಳಲ್ಲಿ ಪಾಠ, ವಿದ್ಯಾರ್ಥಿನಿಯರಿಗೆ ಆತಂಕ

By ಮಂಡ್ಯ ಪ್ರತಿನಿಧಿ
|
Google Oneindia Kannada News

ಮಂಡ್ಯ, ಆಗಸ್ಟ್‌, 16: ಮಳವಳ್ಳಿ ತಾಲೂಕಿನ ಹಲಗೂರಿನಲ್ಲಿರುವ ಸರ್ಕಾರಿ ಹಿರಿಯ ಬಾಲಕಿಯರ ಪ್ರಾಥಮಿಕ ಶಾಲೆ ಕಟ್ಟಡ ಬೀಳುವ ಹಂತದಲ್ಲಿದೆ. ಸರಿಯಾಗಿ ನಿರ್ವಹಣೆ ಇಲ್ಲದೇ ಈ ಶಾಲೆ ಶಿಥಿಲಾವಸ್ಥೆಗೆ ತಲುಪಿದ್ದು, ಇಲ್ಲಿಗೆ ಬರುವ ಮಕ್ಕಳು ಆತಂಕಕ್ಕೆ ಒಳಗಾಗಿದ್ದಾರೆ. ಶಾಲಾ ಆವರಣ ಪಾಳು ಬಿದ್ದಿದ್ದರೆ, ಕಟ್ಟಡಗಳು ಶಿಥಿಲಾವಸ್ಥೆಗೆ ತಲುಪಿದ್ದು ಕುಸಿಯುವ ಹಂತದಲ್ಲಿ ಇದೆ.

ಮೇಲ್ಚಾವಣಿ ಮುರಿದು ಬೀಳುವ ಹಂತಕ್ಕೆ ತಲುಪಿದೆ. ಇದರ ನಡುವೆಯೇ ಮಕ್ಕಳು ಜೀವ ಕೈಯಲ್ಲಿಡಿದು ಪಾಠ ಕೇಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಶಾಲೆಯ ಕಟ್ಟಡ ಯಾವಾಗ ಬೇಕಾದರೂ ಕುಸಿಯಬಹುದು. ಆದರೆ ಅಧಿಕಾರಿಗಳು ಮಾತ್ರ ಇದುವರೆಗೂ ಇತ್ತ ತಲೆ ಹಾಕಿಲ್ಲ. ನಾವು ಪ್ರತಿನಿತ್ಯ ಭಯದ ವಾತಾವರಣದಲ್ಲೇ ಪಾಠ ಕೇಳುತ್ತಿದ್ದೇವೆ ಎಂದು ವಿದ್ಯಾರ್ಥಿಗಳು ಅಳಲನ್ನು ತೋಡಿಕೊಂಡಿದ್ದಾರೆ.

ಶಿಥಿಲಾವಸ್ಥೆಯಿಂದ ಕೂಡಿರುವ ಕೊಠಡಿಗಳು ಮಳೆ ಬಂದರೆ ಸಾಕು ಬೀಳುವಂತಹ ಸ್ಥಿತಿಯಲ್ಲಿವೆ. ಶಾಲೆಯ ಹಳೇ ಕಟ್ಟಡಗಳ ನಿರ್ವಹಣೆ ಇಲ್ಲದಂತಾಗಿದೆ. ಕಟ್ಟಡದ ಗೋಡೆಗಳು ಅಲ್ಲಲ್ಲಿ ಬಿರುಕು ಬಿಟ್ಟಿವೆ. ಮೇಲ್ಚಾವಣಿಯ ಬಹುತೇಕ ತೊಲೆಗಳು ಮುರಿದಿವೆ. ಹತ್ತಕ್ಕೂ ಹೆಚ್ಚು ಕೊಠಡಿಗಳು ಹೀಗೆ ಶಿಥಿಲಾವಸ್ಥೆಯಲ್ಲಿವೆ. ಮೂರ್ನಾಲ್ಕು ಕೊಠಡಿಯಲ್ಲಿ ಮಾತ್ರ ತರಗತಿಗಳನ್ನು ನಡೆಸಲಾಗುತ್ತಿದೆ ಎಂದು ಅಲ್ಲಿನ ಶಿಕ್ಷಕರು ತಿಳಿಸಿದ್ದಾರೆ.

 ಶಾಲಾ ಮಕ್ಕಳಿಗಿಲ್ಲ ಶೌಚಾಲಯ ವ್ಯವಸ್ಥೆ!

ಶಾಲಾ ಮಕ್ಕಳಿಗಿಲ್ಲ ಶೌಚಾಲಯ ವ್ಯವಸ್ಥೆ!

ಇನ್ನು ಮೂಲಭೂತ ಸೌಕರ್ಯಗಳ ವಿಷಯಕ್ಕೆ ಬಂದರೆ ಶಾಲೆಯಲ್ಲಿ ಶಿಕ್ಷಕರಿಗೆ ಮಾತ್ರ ಶೌಚಾಲಯದ ವ್ಯವಸ್ಥೆ ಇದೆ. ಆದರೆ ಶಾಲೆಯ ಮಕ್ಕಳಿಗೆ ಶೌಚಾಲಯ ಇದ್ದರೂ ಅದರ ನಿರ್ವಹಣೆ ಇಲ್ಲದಂತಾಗಿದೆ. ಶೌಚಾಲಯ ಅನಿವಾರ್ಯತೆ ಬಂದಾಗ ಮಕ್ಕಳು ಬಯಲಿಗೆ ಹೋಗಬೇಕಾಗುತ್ತದೆ. ಹೆಸರಿಗಷ್ಟೆ ಮಕ್ಕಳಿಗೆ ಶೌಚಾಲಯವಿದೆ. ನೀರಿನ ವ್ಯವಸ್ಥೆ ಕೂಡ ಸರಿಯಾಗಿ ಇಲ್ಲ. ಇರುವ ಒಂದೇ ನಲ್ಲಿಯನ್ನು ಅಕ್ಷರ ದಾಸೋಹ ಸೇರಿದಂತೆ ಎಲ್ಲ ಅವಶ್ಯಕತೆಗಳಿಗೆ ಬಳಸಲಾಗುತ್ತಿದೆ. ಶೌಚಾಲಯಕ್ಕೆ ನಲ್ಲಿಯ ಸಂಪರ್ಕವೇ ಇಲ್ಲ. ಇರುವ 4-5 ಶೌಚಾಲಯವೂ ಬಳಕೆಗೆ ಯೋಗ್ಯವಾಗಿಲ್ಲ. ಸರ್ಕಾರ ಹಣ ವ್ಯಯಿಸಿದ್ದರೂ ಪ್ರಯೋಜನಕ್ಕೆ ಬಾರದಂತಾಗಿದೆ.

 ಪ್ರಾಣಿಗಳ ವಾಸಸ್ಥಾನವಾಯ್ತ ಶಾಲಾ ಆವರಣ?

ಪ್ರಾಣಿಗಳ ವಾಸಸ್ಥಾನವಾಯ್ತ ಶಾಲಾ ಆವರಣ?

ಶಾಲಾ ಆವರಣದಲ್ಲಿ ಮಳೆಯಿಂದಾಗಿ ಕುರುಚಲು ಗಿಡಗಳು ಬೆಳೆದು ನಿಂತಿದ್ದು, ಅದು ಅನೈತಿಕ ಚಟುವಟಿಕೆಯ ತಾಣವಾಗಿದೆ. ಶಾಲಾ ಆವರಣ ರಾತ್ರಿ ವೇಳೆ ಕುಡುಕರ ತಾಣವಾಗಿ ಮಾರ್ಪಟ್ಟಿದೆ. ಹಾಗೂ ಮಲ ಮೂತ್ರ ವಿಸರ್ಜನೆಯಿಂದಾಗಿ ಗಬ್ಬೆದ್ದು ನಾರುತ್ತಿದೆ. ಶಾಲೆಯ ಪರಿಸರ ಅನೈರ್ಮಲ್ಯದಿಂದ ಕೂಡಿದ್ದು, ನಾಯಿ ಹಂದಿಗಳ ಆವಾಸ ಸ್ಥಾನವಾಗಿದೆ. ಮಳೆ ಬಂದರೆ ನೀರು ತುಂಬಿ ಕೆಸರು ಗದ್ದೆಯಂತೆ ಆಗುತ್ತದೆ. ಮಕ್ಕಳು ವಿದ್ಯಾಭ್ಯಾಸ ಮಾಡಲು ಯೋಗ್ಯವಾದ ವಾತಾವರಣವಿಲ್ಲ. ಮೂಲಭೂತ ಸೌಕರ್ಯಗಳ ಕೊರೆತೆ ಎದ್ದು ಕಾಣುತ್ತಿದೆ ಎಂದು ಅಲ್ಲಿನ ಸ್ಥಳೀಯರು ಆಕ್ರೋಶ ಹೊರಹಾಕಿದರು.

ಶಾಲಾ ಆವರಣದಲ್ಲಿ ಸ್ವಚ್ಚತೆ ಇಲ್ಲದ ಕಾರಣ ಮಕ್ಕಳಿಗೆ ಆಟವಾಡಲು ತುಂಬಾ ತೊಂದರೆ ಆಗುತ್ತಿದೆ. ಶಾಲೆಯ ಸುತ್ತಮುತ್ತಲೂ ಗಿಡಗೆಂಟೆಗಳು ಬೆಳದು ನಿಂತಿದೆ. ಶಾಲೆಗೆ ಕಾಂಪೌಂಡ್‌ ಬಳಿ ತರಕಾರಿ ಅಂಗಡಿಗಳು ಮತ್ತು ಮಾಂಸದ ಅಂಗಡಿಗಳ ತ್ಯಾಜ್ಯವನ್ನು ತಂದು ಸುರಿಯಲಾಗುತ್ತಿದೆ. ಮತ್ತೊಂದೆಡೆ ಚರಂಡಿಯಿಂದ ಕಲುಷಿತ ನೀರು ಶಾಲಾವರಣಕ್ಕೆ ನುಗ್ಗುತ್ತಿದ್ದು, ಇದು ಸೊಳ್ಳೆ, ವಿಷಜಂತುಗಳ ಆವಾಸ ಸ್ಥಾನವಾಗಿ ಪರಿಣಮಿಸಿದೆ.

 ಕ್ಯಾರೆ ಅನ್ನದ ಅಧಿಕಾರಿಗಳು

ಕ್ಯಾರೆ ಅನ್ನದ ಅಧಿಕಾರಿಗಳು

ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಿಗೆ ಯೋಗ್ಯವಾದ ಸ್ಥಳಾವಕಾಶ ಬೇಕು. ಪಠ್ಯೇತರ ಚಟುವಟಿಕೆಗಳಲ್ಲಿ ಆಟದ ಮೈದಾನ ಅತಿ ಮುಖ್ಯ. ಆದರೆ ಇಲ್ಲಿ ಸ್ಥಳವಿದ್ದರೂ ನಿರ್ವಹಣೆ ಇಲ್ಲದಂತಾಗಿದೆ. ಮಕ್ಕಳು ಆಟವಾಡಲು ಯೋಗ್ಯವಾದ ಸ್ಥಳವಿಲ್ಲ. ಸಂಬಂಧಪಟ್ಟ ಗ್ರಾಮ ಪಂಚಾಯತಿಗೆ ಹಾಗೂ ಇಲಾಖೆ ಅಧಿಕಾರಿಗಳಿಗೆ ಹಲವಾರು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂಬುದು ಸ್ಥಳೀಯರು ಆಕ್ರೋಶ ಹೊರಹಾಕಿದರು. ಹೊಸ ಕೊಠಡಿ ನಿರ್ಮಾಣಕ್ಕೆ ಶಾಸಕರ ಪ್ರದೇಶಾಭಿವೃದ್ಧಿ ನಿಧಿ, ಸರ್ವ ಶಿಕ್ಷಣ ಅಭಿಯಾನ, ರಾಷ್ಟ್ರೀಯ ಮಾಧ್ಯಮಿಕ ಯೋಜನೆ, ಜಿಲ್ಲಾ ಪಂಚಾಯತಿ, ತಾಲೂಕು ಪಂಚಾಯತ್‌ನ ವಿವಿಧ ಯೋಜನೆಯಡಿ ಅನುದಾನ ಮಂಜೂರಿಗೆ ಅವಕಾಶ ಇದೆ.

 ಅಧಿಕಾರಿಗಳ ವಿರುದ್ಧ ಭುಗಿಲೆದ್ದ ಆಕ್ರೋಶ

ಅಧಿಕಾರಿಗಳ ವಿರುದ್ಧ ಭುಗಿಲೆದ್ದ ಆಕ್ರೋಶ

ಆದರೆ ಶಿಥಿಲಾವಸ್ಥೆ ತಲುಪಿದ ಶಾಲಾ ಕಟ್ಟಡಗಳಿಗೆ ದುರಸ್ತಿ ಭಾಗ್ಯವಿಲ್ಲ. ಹಾಗೂ ಕಟ್ಟಡ ತೆರವು ಕೂಡ ಆಗಿಲ್ಲ. ಇದರ ನಡುವೆಯೇ ಮಕ್ಕಳ ಕಲಿಕಾ ಚಟುವಟಿಕೆಗಳು ಹಾಗೂ ಪಠ್ಯೇತರ ಚಟುವಟಿಕೆಗಳು ನಡೆಯುತ್ತಿರುವುದು ವಿಪರ್ಯಾಸವೇ ಸರಿ. ಮೂಲ ಸೌಕರ್ಯಗಳ ಕೊರತೆ, ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಇನ್ನು ಪಾಳು ಬಿದ್ದ ಕಟ್ಟಡಗಳು ಕಲಿಕೆಗೆ ಪೂರಕವಲ್ಲದ ಕಾರಣ ಪೂಷಕರು ಖಾಸಗಿ ಶಾಲೆಗಳತ್ತ ಮುಖ ಮಾಡಿದ್ದಾರೆ. ಇದೇ ಪರಿಸ್ಥಿತಿ ಮುಂದುವರೆದರೆ ಶಾಲೆ ಮುಚ್ಚುವ ಪರಿಸ್ಥಿತಿ ಬರಬಹುದು. ಸರ್ಕಾರಿ ಹಿರಿಯ ಬಾಲಕಿಯರ ಪ್ರಾಥಮಿಕ ಪಾಠ ಶಾಲೆ ಉಳಿಯಬೇಕಾದರೆ, ಶಿಕ್ಷಣ ಇಲಾಖೆ ಶೀಘ್ರವಾಗಿ ಮೂಲ ಸೌಕರ್ಯಗಳನ್ನು ಒದಗಿಸಬೇಕು ಎಂಬುದು ಸ್ಥಳೀಯರ ಒತ್ತಾಯ ಆಗಿದೆ.

ಈ ಕುರಿತು ಶಾಲಾ ಮುಖ್ಯ ಶಿಕ್ಷಕಿ ಮಹದೇವಮ್ಮ ಮಾತನಾಡಿ, ನಮ್ಮ ಶಾಲೆಯಲ್ಲಿ 47 ಮಕ್ಕಳು ವಿದ್ಯಾರ್ಜನೆ ಮಾಡುತ್ತಿದ್ದಾರೆ. ನಮ್ಮ ಶಾಲೆಯ ಆವರಣ ಸ್ವಚ್ಚತೆಯಿಂದ ಕೂಡಿಲ್ಲ. ದಟ್ಟನೆಯ ಗಿಡಗಳು ಬೆಳೆದಿರುವುದರಿಂದ ಮಕ್ಕಳು ಆಟವಾಡುತ್ತಿಲ್ಲ. ಕುಡುಕರಿಂದಾಗಿ ಇಲ್ಲಿನ ವ್ಯವಸ್ಥೆ ತುಂಬಾ ಹದಗೆಟ್ಟಿದೆ. ಹಲವು ಬಾರಿ ಹಲಗೂರು ಗ್ರಾಮ ಪಂಚಾಯಿತಿಗೆ ಮನವಿ ನೀಡಿದರೂ ಅವರು ಇತ್ತ ಗಮನಹರಿಸಿಲ್ಲ. ಶಾಲೆಯಲ್ಲಿ ಒಟ್ಟು ಆರು ಶಿಕ್ಷಕರ ಹುದ್ದೆ ಇದ್ದು, ಮೂವರು ಶಿಕ್ಷಕರು ತಾತ್ಕಾಲಿಕವಾಗಿ ಬೇರೆ ಶಾಲೆಯಲ್ಲಿ ನಿಯೋಜನೆಗೊಂಡಿದ್ದಾರೆ. ಇದೀಗ ಮೂವರು ಶಿಕ್ಷಕರು ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದರು.

Recommended Video

Independence Day ಪ್ರಯುಕ್ತ ವಿದೇಶಿ ಕ್ರಿಕೆಟಿಗರ ವಿಶೇಷ ಉಡುಗೊರೆ | *Cricket | Oneindia Kannada

English summary
Mandya district Halaguru government girls primary school building damage- students, parents fear.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X