ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಡ್ಯ ಜನತೆಗೆ ಖುಷಿ ಸುದ್ದಿ, ಶಾಪಮುಕ್ತವಾದ ಮೈಷುಗರ್; ಶೀಘ್ರದಲ್ಲೇ ಪುನಾರಂಭ

By ಮಂಡ್ಯ ಪ್ರತಿನಿಧಿ
|
Google Oneindia Kannada News

ಮಂಡ್ಯ,ಆಗಸ್ಟ್ 11 : ಕಳೆದ ನಾಲ್ಕು ವರ್ಷಗಳಿಂದ ಕಾರ್ಯಾಚರಣೆ ಸ್ಥಗಿತಗೊಂಡಿದ್ದ ಮಂಡ್ಯ ಜಿಲ್ಲೆಯ ಆರ್ಥಿಕ ಜೀವನಾಡಿ ಮೈಶುಗರ್‌ ಸಕ್ಕರೆ ಕಾರ್ಖಾನೆಯ ಬಾಯ್ಲರ್‌ಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ಗುರುವಾರ ಅಗ್ನಿಸ್ಪರ್ಶ ಮಾಡುವ ಮೂಲಕ ಪ್ರಾಯೋಗಿಕ ಚಾಲನೆ ನೀಡಿದರು.

ಕಾರ್ಖಾನೆಯ ಯಂತ್ರೋಪಕರಣಗಳ ದುರಸ್ಥಿ ಕಾರ್ಯ ಸಂಪೂರ್ಣಗೊಂಡಿದ್ದು , ಪ್ರಾಯೋಗಿಕವಾಗಿ ಗುರುವಾರ ಚಾಲನೆ ನೀಡಲಾಗಿದೆ. ಮುಂದಿನ ಹತ್ತು ಹನ್ನೆರಡು ದಿನಗಳಲ್ಲಿ ಕಾರ್ಖಾನೆ ವಿದ್ಯುಕ್ತವಾಗಿ ಆರಂಭಗೊಳ್ಳುವ ಮುನ್ಸೂಚನೆ ದೊರೆತಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ಕಾರ್ಖಾನೆಗೆ ಚಾಲನೆ ನೀಡಲು ಜಿಲ್ಲಾಡಳಿತ ನಿರ್ಧರಿಸಿದೆ.

ಆರ್‌ಟಿಪಿಎಸ್‌: 1ನೇ ವಿದ್ಯುತ್ ಘಟಕದ 3 ಕೋಲ್ ಫೀಡರ್ ಕುಸಿತಆರ್‌ಟಿಪಿಎಸ್‌: 1ನೇ ವಿದ್ಯುತ್ ಘಟಕದ 3 ಕೋಲ್ ಫೀಡರ್ ಕುಸಿತ

ಕಂಪನಿಯ ಬಾಯ್ಲರ್‌ಗೆ ಅಗ್ನಿಸ್ಪರ್ಶ ಮಾಡಿದ ನಂತರ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ, "ಮೈಷುಗರ್ ಕಾರ್ಖಾನೆ ಆರಂಭವಾಗಬೇಕು ಎನ್ನುವುದು ಜಿಲ್ಲೆಯ ರೈತರ ಹಲವು ವರ್ಷಗಳ ಕೂಗಾಗಿತ್ತು. ರೈತರ ಸಂಕಷ್ಟಕ್ಕೆ ಸ್ಪಂದಿಸಿರುವ ಸರಕಾರದ ಕಳೆದ ಬಜೆಟ್‌ನಲ್ಲಿ 50 ಕೋಟಿ ರೂ. ಹಣ ಘೋಷಣೆ ಮಾಡಿ, ಅದರಲ್ಲಿ ಈವರೆಗೆ 20 ಕೋಟಿ ರೂ. ಹಣವನ್ನು ಯಂತ್ರೋಪಕರಣಗಳ ದುರಸ್ಥಿಗೆ ಬಿಡುಗಡೆ ಮಾಡಿದೆ. ಕಾರ್ಖಾನೆ ಸುಗುಮವಾಗಿ ನಡೆಯಲು ಅವಶ್ಯವಿರುವ ಎಲ್ಲಾ ರೀತಿಯ ಹಣಕಾಸಿನ ನೆರವನ್ನೂ ನೀಡಲು ಸರ್ಕಾರ ಬದ್ಧವಾಗಿದೆ" ಎಂದರು.

ಶೀಘ್ರದಲ್ಲಿ ಮುಖ್ಯಮಂತ್ರಿಗಳಿಂದ ಚಾಲನೆ

ಶೀಘ್ರದಲ್ಲಿ ಮುಖ್ಯಮಂತ್ರಿಗಳಿಂದ ಚಾಲನೆ

"ಈ ದಿನ ಕಾರ್ಖಾನೆಯ ಬಾಯ್ಲರ್‌ಗೆ ಅಗ್ನಿಸ್ಪರ್ಶ ಮಾಡಲಾಗಿದ್ದು , ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಗಳಿಂದ ದಿನಾಂಕ ಗೊತ್ತುಪಡಿಸಿಕೊಂಡು ಅಧಿಕೃತವಾಗಿ ಚಾಲನೆ ನೀಡಲಾಗುವುದು. ಮೈಷುಗರ್ ಪುನಶ್ಚೇತನ ಸರಕಾರದ ಮುಖ್ಯ ಗುರಿಯಾಗಿದೆ. ಆ ನಿಟ್ಟಿನಲ್ಲಿ ಎಲ್ಲಾ ಕ್ರಮಗಳನ್ನೂ ತೆಗೆದುಕೊಳ್ಳಲಾಗುವುದು. ಕಾರ್ಖಾನೆ ಜೊತೆಗೆ ವಿದ್ಯುತ್ ಘಟಕವನ್ನೂ ಆರಂಭಿಸಿ ನಿರಂತರವಾಗಿ ಕಾರ್ಖಾನೆ ಮುನ್ನಡೆಯುವಂತೆ ಎಚ್ಚರ ವಹಿಸಲಾಗುವುದು" ಎಂದು ಸಚಿವರು ಹೇಳಿದರು.

ಜೆಡಿಎಸ್-ಕಾಂಗ್ರೆಸ್‌ನಿಂದ ಸಾಧ್ಯವಾಗಿರಲಿಲ್ಲ

ಜೆಡಿಎಸ್-ಕಾಂಗ್ರೆಸ್‌ನಿಂದ ಸಾಧ್ಯವಾಗಿರಲಿಲ್ಲ

ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಕೆ. ಸಿ. ನಾರಾಯಣಗೌಡ ಮಾತನಾಡಿ, "ಕಾಂಗ್ರೆಸ್ ಮತ್ತು ಜೆಡಿಎಸ್ ಸರಕಾರಗಳಿಂದ ಮೈಷುಗರ್ ಕಾರ್ಖಾನೆ ಆರಂಭಿಸಲಾಗಲಿಲ್ಲ. ಆ ಎರಡೂ ಸರಕಾರಗಳಿಂದ ಸಾಧ್ಯವಾಗದ ಕೆಲಸವನ್ನು ಬಿಜೆಪಿ ಸರಕಾರ ಮಾಡಿ ತೋರಿಸಿದೆ. ಈ ಕಾರ್ಖಾನೆ ಉತ್ತಮವಾಗಿ ನಡೆಯಬೇಕು. ಪುನಶ್ಚೇತನಕ್ಕೆ ಹಣಕಾಸಿನ ತೊಂದರೆ ಇಲ್ಲ. ಹಣಕಾಸಿನ ಸಂಬಂಧಿಸಿದ ಸಮಸ್ಯೆಗಳಿದ್ದರೆ ಅದರ ಜವಾಬ್ದಾರಿಯನ್ನು ನಾನು ತೆಗೆದುಕೊಳ್ಳುತ್ತೇನೆ ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ" ಎಂದರು.

"ಕಾರ್ಖಾನೆಯನ್ನು ಉತ್ತಮ ಸ್ಥಾನಕ್ಕೆ ಕೊಂಡೊಯ್ಯುವ ಕೆಲಸಕ್ಕೆ ಎಲ್ಲರೂ ಕೈಜೋಡಿಸಬೇಕಾಗಿದೆ. ಮುಖ್ಯವಾಗಿ ರೈತರ ಸಹಕಾರ ಕಾರ್ಖಾನೆ ಬೆಳವಣಿಗೆಗೆ ಬಹಳ ಮುಖ್ಯವಾಗಿದೆ. ತಾವು ಬೆಳೆದ ಕಬ್ಬನ್ನು ಕಾರ್ಖಾನೆಗೆ ನೀಡುವ ಮೂಲಕ ಗತ ವೈಭವ ಮರಳುವಂತೆ ಮಾಡಬೇಕು" ಎಂದು ಸಚಿವರು ಮನವಿ ಮಾಡಿದರು.

ಎಲ್ಲರ ಹೋರಾಟಕ್ಕೆ ಸಿಕ್ಕ ಫಲ

ಎಲ್ಲರ ಹೋರಾಟಕ್ಕೆ ಸಿಕ್ಕ ಫಲ

ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಮಾತನಾಡಿ, "ನನಗೆ ಇಂದು ತುಂಬಾ ಖುಷಿಯಾಗುತ್ತಿದೆ. ಮೈಷುಗರ್ ಕಾರ್ಖಾನೆ ಆರಂಭವಾಗಬೇಕೆಂದು ನಾನು ಸಂಸದೆಯಾದ ಆರಂಭದ ದಿನಗಳಿಂದಲೂ ಪ್ರಬಲವಾಗಿ ಸರಕಾರದ ಮೇಲೆ ಒತ್ತಡ ಹೇರಿದ್ದೆ. ಇದು ಯಾರೊಬ್ಬರ ಹೋರಾಟದಿಂದ ಸಿಕ್ಕ ಜಯವಲ್ಲ. ಎಲ್ಲರೂ ಒಟ್ಟಾಗಿ ದನಿ ಎತ್ತಿದ್ದರಿಂದ ಸಿಕ್ಕ ಗೆಲುವಾಗಿದೆ" ಎಂದು ಹೇಳಿದರು.

ಅಂಬರೀಶ್ ಕನಸು

ಅಂಬರೀಶ್ ಕನಸು

"ಎಷ್ಟೋ ವರ್ಷಗಳ ಹೋರಾಟದ ನಂತರ ಈ ಭಾಗದ ಹೋರಾಟಕ್ಕೆ ಜಯ ಸಿಕ್ಕಿದೆ. ಇದನ್ನು ಪುನಾರಾರಂಭಿಸಬೇಕೆಂಬುದು ಅಂಬರೀಶ್‌ ಕನಸಾಗಿತ್ತು. ಮಂಡ್ಯ ಜಿಲ್ಲೆಗೆ ಇದು ಐತಿಹಾಸಿಕ ದಿನ,ಮ ಸಂಭ್ರಮದ ದಿನ. ಕಳೆದ ಕೆಲವು ದಿನಗಳಿಂದ ಮಳೆ, ಪ್ರವಾಹದಿಂದ ನೊಂದಿದ್ದ ಜಿಲ್ಲೆಯ ಜನತೆ ಇಂದು ಕಾರ್ಖಾನೆ ಪುನಾರಂಭದಿಂದ ಸಂಭ್ರಮಿಸುವಂತಾಗಿದೆ. ಇದಕ್ಕೆ ಸಹಕರಿಸಿದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಸಿಎಂ ಬಸವಾರಾಜ ಬೊಮ್ಮಾಯಿ, ಉಸ್ತುವಾರಿ ಸಚಿವರಾದ ಗೋಪಾಲಯ್ಯ ಹಾಗೂ ಪ್ರತಿಯೊಬ್ಬರಿಗೂ ಧನ್ಯವಾದ ತಿಳಿಸುತ್ತೇನೆ" ಎಂದು ಸುಮಲತಾ ಅಂಬರೀಶ್ ಹೇಳಿದರು.

ಶಾಸಕ ಎಂ. ಶ್ರೀನಿವಾಸ್, ಜಿಲ್ಲಾಧಿಕಾರಿ ಎಸ್. ಅಶ್ವತಿ, ಜಿ.ಪಂ. ಸಿಇಓ ಶಾಂತ ಎಲ್. ಹುಲ್ಮನಿ, ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್. ಯತೀಶ್, ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕ ಪಾಟೀಲ್ ಅಪ್ಪಾಸಾಹೇಬ್, ನಗರಸಭಾಧ್ಯಕ್ಷ ಎಚ್.ಎಸ್. ಮಂಜು, ಮಾಜಿ ಶಾಸಕ ಕೆ. ಟಿ. ಶ್ರೀಕಂಠೇಗೌಡ ಸೇರಿದಂತೆ ಹಲವರು ಇದ್ದರು.

English summary
Mandya District In-charge Minister K. Gopalaiah started trail run by setting fire to the boiler of Mysugar sugar factory on Thursday. Factory to reopen soon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X