ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆ.ಆರ್. ಪೇಟೆಯ ದೇವಿರಮ್ಮಣ್ಣಿ ಕೆರೆಯಲ್ಲೀಗ ನೀರಧಾರೆ

|
Google Oneindia Kannada News

ಮಂಡ್ಯ, ಸೆಪ್ಟೆಂಬರ್ 11: ಬೆಳ್ಳಿ ಸುರಿದಂತೆ ‍ಝರಿ ಝರಿಯಾಗಿ ಧುಮ್ಮಿಕ್ಕುವ ಜಲಧಾರೆ. ಕಣ್ಣು ಹಾಯಿಸಿದುದ್ದಕ್ಕೂ ಅಲೆಯಾಡುವ ಜಲಸಾಗರ. ಸುತ್ತಲೂ ಕಣ್ಣು ತಂಪಾಗಿಸುವ ಹಚ್ಚಹಸಿರು. ಮರಗಿಡಗಳಲ್ಲಿ ಆಶ್ರಯ ಪಡೆದ ಹಕ್ಕಿಗಳ ಇಂಚರ. ಈ ಸುಂದರ ದೃಶ್ಯಗಳಿಗೆ ಸಾಕ್ಷಿಯಾಗಿರುವುದು ಮಂಡ್ಯ ಜಿಲ್ಲೆಯ ತಾಲೂಕು ಕೇಂದ್ರಗಳಲ್ಲೊಂದಾಗಿರುವ ಕೆ.ಆರ್. ಪೇಟೆಯ ನಾಗಮಂಗಲ ರಸ್ತೆಯಲ್ಲಿರುವ ದೇವಿರಮ್ಮಣ್ಣಿ ಕೆರೆ.

ಉತ್ತಮವಾಗಿ ಮಳೆಯಾದ ಕಾರಣ ದೇವಿರಮ್ಮಣ್ಣಿ ಕೆರೆ ಭರ್ತಿಯಾಗಿದ್ದು, ನೀರು ತುಂಬಿ ಧುಮ್ಮಿಕ್ಕಿ ಹರಿಯುವ ಸುಂದರ ದೃಶ್ಯಗಳು ನಿಸರ್ಗ ಪ್ರೇಮಿಗಳ ಕಣ್ಮನ ತಣಿಸುತ್ತಿದೆ. ಇತ್ತೀಚೆಗಿನ ವರ್ಷಗಳಲ್ಲಿ ಮುಂಗಾರು ಆಶಾದಾಯಕವಾಗಿರುವ ಕಾರಣದಿಂದ ಕೆರೆಗಳು ಭರ್ತಿಯಾಗುತ್ತಿವೆ. ಇದರಿಂದ ಅಂತರ್ಜಲ ಮಟ್ಟ ಹೆಚ್ಚಾಗುವುದರೊಂದಿಗೆ ರೈತರು ನೆಮ್ಮದಿಯುಸಿರು ಬಿಡುವಂತಾಗಿದೆ. ಮೂರ್ನಾಲ್ಕು ವರ್ಷಗಳ ಹಿಂದೆ ಈ ವ್ಯಾಪ್ತಿಯ ಕೆರೆಗಳು ಬತ್ತಿದ್ದರಿಂದ ರೈತರು ಸೇರಿದಂತೆ ಜನ ಕಂಗಾಲು ಆಗಿದ್ದರು.
ಇದೀಗ ಕೆ.ಆರ್.ಪೇಟೆ ಪಟ್ಟಣದಲ್ಲಿರುವ ದೇವಿರಮ್ಮಣ್ಣಿ ಕೆರೆ ಭರ್ತಿಯಾಗಿರುವುದು ಖುಷಿ ತಂದಿದೆ.

ಸುಮಾರು ಇನ್ನೂರ ಐವತ್ತು ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಿರುವ ಈ ಕೆರೆ ಶತಮಾನಗಳಿಂದ ರೈತರ ಜಮೀನಿಗೆ ನೀರುಣಿಸುತ್ತಾ ಬಂದಿದೆ. ಅಷ್ಟೇ ಅಲ್ಲದೆ, ಕೋಟ್ಯಂತರ ಜಲಚರಗಳಿಗೆ ಆಸರೆಯಾಗಿದೆ. ಇದು ಬರೀ ಕೆರೆಯಾಗಿರದೆ ಒಂದು ರೀತಿಯಲ್ಲಿ ಒತ್ತಡದಲ್ಲಿದ್ದವರ ಮನತಣಿಸುವ ಸುಂದರ ತಾಣವೂ ಹೌದು. ಈ ಕೆರೆಯನ್ನು ಮಹಾರಾಣಿ ದೇವಿರಮ್ಮಣ್ಣಿ ಲೋಕಕಲ್ಯಾಣಾರ್ಥವಾಗಿ ನಿರ್ಮಿಸಿದ್ದಾರೆ. ಈ ಬಾರಿ ಸುರಿದ ಮಳೆಗೆ ಕೆರೆ ಭರ್ತಿಯಾಗಿ ಕೋಡಿ ಬಿದ್ದಿದ್ದು, ಹೆಚ್ಚುವರಿ ನೀರು ಕೆರೆಯ ದಂಡೆಯಿಂದ ಧುಮ್ಮಿಕ್ಕಿ ಹರಿಯುತ್ತಿದೆ. ಈ ಸುಂದರ ದೃಶ್ಯಗಳು ಮಲೆನಾಡಿನ ಜಲಪಾತಗಳನ್ನು ನೆನಪಿಸುವಂತೆ ಮಾಡಿದೆ. ಹೀಗಾಗಿ ಜಲಧಾರೆಯಾಗಿ ಧುಮ್ಮಿಕ್ಕುವ ಸುಂದರ ದೃಶ್ಯಗಳನ್ನು ಕಣ್ತುಂಬಿಸಿಕೊಳ್ಳುವ ಸಲುವಾಗಿ ಪ್ರವಾಸಿಗರು ಇತ್ತ ಸುಳಿಯುತ್ತಿದ್ದಾರೆ.

 ಒಂದೇ ವಾರದಲ್ಲಿ ಭರ್ತಿಯಾದ ಕೆರೆ

ಒಂದೇ ವಾರದಲ್ಲಿ ಭರ್ತಿಯಾದ ಕೆರೆ

ಈ ಬಾರಿ ಆರಂಭದಿಂದಲೂ ಮಳೆಯಾಗಿದ್ದರೂ ಕೂಡ ದೇವೀರಮ್ಮಣ್ಣಿ ಕೆರೆಯು ಭರ್ತಿಯಾಗಿರಲಿಲ್ಲ. ಆದರೆ ಇತ್ತೀಚೆಗೆ ಸುರಿದ ಭಾರೀ ಮಳೆಯಿಂದಾಗಿ ಕೇವಲ ಒಂದೇ ವಾರದಲ್ಲಿ ಕೆರೆಯು ಸಂಪೂರ್ಣವಾಗಿ ಭರ್ತಿಯಾಗಿ ಕೋಡಿ ಬಿದ್ದಿರುವುದು ವಿಶೇಷವಾಗಿದೆ. ಕೆ.ಆರ್. ಪೇಟೆ ಪಟ್ಟಣಕ್ಕೆ ಹೊಂದಿಕೊಂಡಂತಿರುವ ಈ ಕೆರೆಯನ್ನು ಅಭಿವೃದ್ಧಿಪಡಿಸಿದ್ದೇ ಆದರೆ, ಒಂದು ಸುಂದರ ಪ್ರವಾಸಿ ತಾಣವಾಗುವುದರಲ್ಲಿ ಎರಡು ಮಾತಿಲ್ಲ. ಏಕೆಂದರೆ ಈ ಕೆರೆಯು ತಾಲೂಕಿನಲ್ಲಿರುವ ಕೆರೆಗಳ ಪೈಕಿ ವಿಶಾಲವಾದ ಕೆರೆಯಾಗಿದೆ. ಈ ಕೆರೆಯನ್ನು ಅಭಿವೃದ್ಧಿಗೊಳಿಸಬೇಕೆಂಬ ಮತ್ತು ಒತ್ತುವರಿಯಾಗಿರುವ ಕೆರೆಯ ಪ್ರದೇಶವನ್ನು ತೆರವುಗೊಳಿಸುವ ಕುರಿತಂತೆಯೂ ಒತ್ತಾಯಗಳು ಹಿಂದಿನಿಂದಲೂ ಕೇಳಿ ಬಂದಿವೆ.

 ಐದು ಕೋಟಿಯ ಕ್ರಿಯಾಯೋಜನೆ

ಐದು ಕೋಟಿಯ ಕ್ರಿಯಾಯೋಜನೆ

ಇದೀಗ ಕೆರೆಯ ಸುತ್ತಲೂ ಜಾಗಿಂಗ್ ಟ್ರ್ಯಾಕ್ ನಿರ್ಮಾಣ ಮತ್ತು ಒತ್ತುವರಿಯನ್ನು ತೆರವುಗೊಳಿಸಿ ಕೆರೆಯನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು ಕ್ಷೇತ್ರದ ಶಾಸಕ ಹಾಗೂ ರಾಜ್ಯದ ಯುವಜನ ಸಬಲೀಕರಣ, ಕ್ರೀಡೆ, ರೇಷ್ಮೆ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ನಾರಾಯಣಗೌಡರ ನೇತೃತ್ವದಲ್ಲಿ ಕಾವೇರಿ ನೀರಾವರಿ ನಿಗಮದ ಹೇಮಾವತಿ ಜಲಾಶಯ ಯೋಜನೆಯ ಇಂಜಿನಿಯರುಗಳ ಮಾರ್ಗದರ್ಶನದಲ್ಲಿ ಐದು ಕೋಟಿ ರೂಪಾಯಿಗಳ ವೆಚ್ಚದಲ್ಲಿ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಲಾಗಿದೆ.

 ದೇಶ- ವಿದೇಶಗಳ ಹಕ್ಕಿಗಳಿಗೆ ಆಸರೆ

ದೇಶ- ವಿದೇಶಗಳ ಹಕ್ಕಿಗಳಿಗೆ ಆಸರೆ

ಒಂದು ವೇಳೆ ಯಾವುದೇ ಅಡ್ಡಿ ಆತಂಕವಿಲ್ಲದೆ ಈ ಯೋಜನೆ ಕಾರ್ಯರೂಪಕ್ಕೆ ಬಂದಿದ್ದೇ ಆದರೆ, ದೇಶ-ವಿದೇಶಗಳಿಂದ ಆಗಮಿಸುವ ಪಕ್ಷಿಗಳ ಸಂತಾನೋತ್ಪತ್ತಿಗೆ ಅನುಕೂಲವಾಗುವಂತೆ ಕೆರೆಯ ಮಧ್ಯದಲ್ಲಿ ಅಲ್ಲಲ್ಲಿ ಗುಡ್ಡಗಳ ನಿರ್ಮಾಣ ಮಾಡಿ ಗಿಡ ಮರಗಳನ್ನು ಬೆಳೆಸುವುದು, ಪಟ್ಟಣದ ನಿವಾಸಿಗಳು ಮುಂಜಾನೆ ಹಾಗೂ ಸಂಜೆ ವಾಯುವಿಹಾರ ನಡೆಸಲು ಅನುಕೂಲವಾಗುವಂತೆ ಕೆರೆಯ ಸುತ್ತಲೂ ಜಾಗಿಂಗ್ ಟ್ರಾಕ್ ನಿರ್ಮಾಣ, ಕೆರೆಯಲ್ಲಿ ದೋಣಿವಿಹಾರ ಸೇರಿದಂತೆ ಜಲಕ್ರೀಡೆಗಳಿಗೆ ವ್ಯವಸ್ಥೆ, ಕೆರೆ ಭರ್ತಿಯಾಗಿ ನೀರು ಧುಮ್ಮಿಕ್ಕುವ ದೃಶ್ಯ ನೋಡಲು ಅನುಕೂಲವಾಗುವಂತೆ ಕುಳಿತುಕೊಳ್ಳಲು ಕಲ್ಲಿನ ಬೆಂಚುಗಳನ್ನು ಅಳವಡಿಸುವುದು, ಸುಂದರವಾದ ಹೂದೋಟವನ್ನು ನಿರ್ಮಿಸುವುದು ಮತ್ತು ಹೈಮಾಸ್ಟ್ ದೀಪವನ್ನು ಅಳವಡಿಸುವುದು ಹೀಗೆ ಹಲವು ಅಭಿವೃದ್ಧಿ ಕಾರ್ಯಗಳು ನಡೆಯಲಿವೆ.

 ಸುಂದರ ಪ್ರವಾಸಿ ತಾಣವಾಗುವುದಂತು ಖಚಿತ

ಸುಂದರ ಪ್ರವಾಸಿ ತಾಣವಾಗುವುದಂತು ಖಚಿತ

ಈಗಾಗಲೇ ದೇವಿರಮ್ಮಣ್ಣಿ ಕೆರೆಗೆ ಕಾಯಕಲ್ಪ ನೀಡುವ ಕುರಿತಂತೆ ಸಚಿವ ನಾರಾಯಣ ಗೌಡರು ಹೇಮಾವತಿ ಜಲಾಶಯ ಯೋಜನೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಕ್ರಿಯಾಯೋಜನೆ ರೂಪಿಸಿ ಮೊದಲ ಕಂತಿನ ಹಣವಾಗಿ ಐದು ಕೋಟಿ ರೂಪಾಯಿ ವಿಶೇಷ ಅನುದಾನವನ್ನು ಬಿಡುಗಡೆ ಮಾಡಿಸಿದ್ದಾರೆ ಎನ್ನಲಾಗಿದ್ದು, ಕಾಮಗಾರಿಗಳು ಆರಂಭವಾಗಬೇಕಾಗಿವೆ. ಒಂದು ವೇಳೆ ಎಲ್ಲವೂ ಅಂದುಕೊಂಡಂತೆ ಆದರೆ ದೇವಿರಮ್ಮಣ್ಣಿ ಕೆರೆಯು ಒಂದು ಸುಂದರ ಪ್ರವಾಸಿ ತಾಣವಾಗಿ ಪ್ರವಾಸಿಗರನ್ನು ಆಕರ್ಷಿಸುವುದರಲ್ಲಿ ಎರಡು ಮಾತಿಲ್ಲ.

English summary
Devirammanni lake is filled with heavy rainfall, and the beautiful views of water are appealing to nature lovers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X