ಆಧುನಿಕ ಭಗೀರಥ ಕಾಮೇಗೌಡರ ಚೆಕ್ ಡ್ಯಾಂಗೆ ಹರಿದುಬಂದ ನೀರು
ಮಂಡ್ಯ, ಅಕ್ಟೋಬರ್ 22: ಈ ಬಾರಿ ಜಿಲ್ಲೆಯಲ್ಲಿ ಉತ್ತಮ ಮಳೆಯಾದ ಕಾರಣ ಕುಂದನ ಪರ್ವತದಲ್ಲಿ ದಾಸನದೊಡ್ಡಿ ಗ್ರಾಮದ ಆಧುನಿಕ ಭಗೀರಥ ಕಲ್ಮನೆ ಕಾಮೇಗೌಡರು ನಿರ್ಮಿಸಿದ್ದ ಹದಿನಾರಕ್ಕೂ ಹೆಚ್ಚು ಚೆಕ್ ಡ್ಯಾಂಗಳಲ್ಲಿ ನೀರು ಕಾಣಿಸಿಕೊಂಡಿದ್ದು ಜನರ ಮೊಗದಲ್ಲಿ ಮಂದಹಾಸ ಮೂಡಿದೆ.
ಮಂಡ್ಯದ ಕಾಮೇಗೌಡರಿಗೆ 'ಪ್ರಣಾಮ್' ಎಂದ ಮಾಜಿ ಕ್ರಿಕೆಟರ್ ಲಕ್ಷ್ಮಣ್
ಮಳೆ ಸುರಿದಾಗ ಕುಂದನ ಪರ್ವತದಿಂದ ಹರಿದುಬರುತ್ತಿದ್ದ ನೀರು ಪೋಲಾಗುತ್ತಿತ್ತು. ಇದನ್ನು ತಡೆದು ಅಂತರ್ಜಲ ವೃದ್ಧಿಸುವ ಸಲುವಾಗಿ ಕಲ್ಮನೆ ಕಾಮೇಗೌಡರು ಚೆಕ್ ಡ್ಯಾಂಗಳನ್ನು ನಿರ್ಮಿಸಿದ್ದರು. ಇದೀಗ ಎಲ್ಲ ಚೆಕ್ ಡ್ಯಾಂಗಳಲ್ಲಿ ನೀರು ತುಂಬಿದ್ದು ಇವರ ಕಾರ್ಯಕ್ಕೆ ಸಾರ್ಥಕತೆ ದೊರೆತಂತಾಗಿದೆ.

ಅಂತರ್ಜಲ ವೃದ್ಧಿಗಾಗಿ ಕಾಮೇಗೌಡರ ಶ್ರಮ
ಮಳವಳ್ಳಿ ತಾಲೂಕಿನಿಂದ ಎಂಟು ಕಿ.ಮೀ. ದೂರದಲ್ಲಿರುವ ದಾಸನದೊಡ್ಡಿ ಗ್ರಾಮದ ಹೊರವಲಯದಲ್ಲಿರುವ ಕುಂದನ ಬೆಟ್ಟದ ತಪ್ಪಲಲ್ಲಿ ಅಂತರ್ಜಲ ವೃದ್ಧಿಗಾಗಿ ಕಲ್ಮನೆ ಕಾಮೇಗೌಡರು ಸ್ವಂತ ಶ್ರಮದಿಂದ ಮುಂದಿನ ಪೀಳಿಗೆಯ ಹಿತದೃಷ್ಟಿಯಿಂದ ಹಾಗೂ ಸುತ್ತಮುತ್ತಲ ರೈತರಿಗೆ ಅನುಕೂಲವಾಗುವಂತೆ ಅಂತರ್ಜಲ ವೃದ್ಧಿಗಾಗಿ ಯಾರ ಸಹಾಯವನ್ನೂ ಬಯಸದೆ ಚೆಕ್ ಡ್ಯಾಂಗಳನ್ನು ನಿರ್ಮಿಸಿದ್ದರು.
ಮಂಡ್ಯದ ಭಗೀರಥ ಕಾಮೇಗೌಡರ ಕಾರ್ಯ ಮೆಚ್ಚಿದ ಜಿಲ್ಲಾಧಿಕಾರಿ

ಪ್ರಾಣಿ ಪಕ್ಷಿಗಳಿಗೆ ನೀರಾಸರೆ
ಈ ಚೆಕ್ ಡ್ಯಾಂ ನಿರ್ಮಾಣದ ಬಳಿಕ ನೀರು ಸಂಗ್ರಹವಾದುದರಿಂದ ಪ್ರಾಣಿ, ಪಕ್ಷಿಗಳಿಗೂ ಅನುಕೂಲವಾಗಿತ್ತು. ಅದರಲ್ಲೂ ಈ ಬಾರಿ ಉತ್ತಮ ಮಳೆಯಾದ ಪರಿಣಾಮ ಚೆಕ್ ಡ್ಯಾಂಗಳಲ್ಲಿ ನೀರು ತುಂಬುತ್ತಿವೆ. ಜತೆಗೆ ಮಳೆಯಿಂದ ಸುತ್ತಮುತ್ತಲ ಪ್ರದೇಶ ಹಸಿರಿನಿಂದ ಕಂಗೊಳಿಸುತ್ತಿದ್ದು, ಈ ಸುಂದರ ದೃಶ್ಯಗಳನ್ನು ಕಣ್ಣು ತುಂಬಿಸಿಕೊಳ್ಳಲು ಜನ ಇಲ್ಲಿಗೆ ಬರುತ್ತಿದ್ದಾರೆ.

ನಿಸರ್ಗ ಸೌಂದರ್ಯದಿಂದ ಸೆಳೆಯುವ ಕುಂದನ ಪರ್ವತ
ಇನ್ನು ಕುಂದನ ಪರ್ವತ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಎಕರೆ ಪ್ರದೇಶ ಹೊಂದಿದ್ದು, ತನ್ನ ನಿಸರ್ಗ ಸೌಂದರ್ಯದಿಂದ ಎಲ್ಲರ ಗಮನಸೆಳೆಯುತ್ತಿದೆ. ಜತೆಗೆ ಕುಂದನ ಪರ್ವತದ ಸುತ್ತಲೂ ಇತಿಹಾಸದ ಪ್ರಸಿದ್ಧ ಮಲ್ಲಪ್ಪ, ಕುಂದೂರಮ್ಮ, ಶ್ರೀ ರಷಸಿದ್ದೇಶ್ವರ ಮಠ, ಸಿದ್ದಪ್ಪಾಜಿ ದೇವಸ್ಥಾನ ಸೇರಿದಂತೆ ಹಲವು ದೇವಸ್ಥಾನಗಳಿರುವುದು, ಇದೊಂದು ರೀತಿಯ ಪ್ರವಾಸಿ ತಾಣವಾಗಿ ಎಲ್ಲರನ್ನು ಕೈಬೀಸಿ ಕರೆಯುತ್ತಿದೆ. ಕಲ್ಮನೆ ಕಾಮೇಗೌಡರು ನಿರ್ಮಿಸಿದ ಡ್ಯಾಂಗಳ ಪಕ್ಕದಲ್ಲಿಯೇ ಸುಂದರ ವಿಗ್ರಹಗಳಿದ್ದು, ಕಲ್ಲಿನ ಹೆಬ್ಬಂಡೆಗಳ ಮೇಲೆ ಸ್ವತಃ ಕಾಮೇಗೌಡರು ಬರೆಸಿರುವ ಸಂದೇಶಗಳು ಪ್ರಸ್ತುತವಾಗಿವೆ. ಈ ಚೆಕ್ ಡ್ಯಾಂ ನೋಡಲು ರಾಜ್ಯದ ಮೂಲೆ ಮೂಲೆಯಿಂದ ಜನರು ಬರುವುದಲ್ಲದೆ, ಕಾಮೆಗೌಡರ ಬೆಂಬಲಕ್ಕೂ ನಿಂತಿದ್ದಾರೆ.

ನೀರಿನೊಂದಿಗೆ ಪ್ರಕೃತಿಯ ಅಭಿವೃದ್ಧಿ
ಕಾಮೇಗೌಡರು ಕೇವಲ ಚೆಕ್ ಡ್ಯಾಂ ನಿರ್ಮಿಸಿ ಸುಮ್ಮನಾಗಿಲ್ಲ. ಅದರ ಸುತ್ತ ಮುತ್ತ ಮರ ಗಿಡ ಬೆಳೆಸುವ ಪ್ರಯತ್ನದ ಜತೆಗೆ ಡ್ಯಾಂಗಳ ಪಕ್ಕ ಕುಳಿತುಕೊಂಡು ವಿಶ್ರಾಂತಿ ಪಡೆಯಲು ಆಸನದ ವ್ಯವಸ್ಥೆ, ಸುಂದರ ಏರಿ, ಪ್ರತಿಯೊಂದು ಡ್ಯಾಂ ಬಳಿಯೂ ಅವರು ಬರೆಸಿರುವ ಸಂದೇಶಗಳು ಮನಮುಟ್ಟುವಂತಿವೆ. ಅಷ್ಟೇ ಅಲ್ಲ ಅವು ಅಂತರ್ಜಲದ ಮಹತ್ವದ ಬಗ್ಗೆಯೂ ಸಾರಿ ಹೇಳುತ್ತಿದೆ. ಕಾಮೇಗೌಡರ ಕಾರ್ಯವೈಖರಿಯನ್ನು ಮೆಚ್ಚಿ ಈಗಾಗಲೇ ಬಸವಶ್ರೀ, ರಾಜ್ಯೋತ್ಸವ ಪ್ರಶಸ್ತಿಗಳು ಸೇರಿದಂತೆ ಹಲವಾರು ರಾಷ್ಟ್ರೀಯ ಮ್ತತು ಅಂತರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳು ದೊರೆತಿವೆ. ಈ ನಡುವೆ ಬೆಸುಗೆ ಸಮಾನ ಮನಸ್ಕರ ಬಳಗವು ಸ್ಥಳಕ್ಕೆ ತೆರಳಿ ಕಾಮೇಗೌಡರ ಕಾರ್ಯವೈಖರಿಯನ್ನು ಶ್ಲಾಘಿಸಿ ಗಿಡಗಳನ್ನು ನೆಟ್ಟು ಬಂದಿದ್ದಾರೆ. ಎಲ್ಲರೂ ಕಾಮೇಗೌಡರಂತೆ ಯೋಚಿಸಿದ್ದೇ ಆದರೆ ಪೋಲಾಗಿ ಹೋಗುವ ನೀರನ್ನು ತಡೆದು ಅಂತರ್ಜಲ ವೃದ್ಧಿಯನ್ನು ಮಾಡಲು ಸಾಧ್ಯವಾಗುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ.