ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಡ್ಯ ವಿಶೇಷ; ಈ ಬಾರಿ ಭರ್ತಿಯಾಗುತ್ತಾ ಕೆಆರ್‌ಎಸ್‍ ಜಲಾಶಯ?

By ಮಂಡ್ಯ ಪ್ರತಿನಿಧಿ
|
Google Oneindia Kannada News

ಮಂಡ್ಯ, ಸೆಪ್ಟೆಂಬರ್ 22; ಕಳೆದ ಮೂರು ವರ್ಷಗಳಿಂದ ಆಗಸ್ಟ್ ತಿಂಗಳಲ್ಲೇ ಭರ್ತಿಯಾಗುತ್ತಿದ್ದ ಕೆಆರ್‌ಎಸ್ ಜಲಾಶಯ ಈ ಬಾರಿ ಸೆಪ್ಟೆಂಬರ್ ಮಾಸಾಂತ್ಯವಾದರೂ ಭರ್ತಿಯಾಗದಿರುವುದು ರೈತಾಪಿ ವರ್ಗ ಮಾತ್ರವಲ್ಲದೆ, ಜನಸಾಮಾನ್ಯ ಜನರಲ್ಲಿಯೂ ಆತಂಕ ತಂದೊಡ್ಡಿದೆ.

ಈ ಬಾರಿ ಕೊಡಗು ಸೇರಿದಂತೆ ಕಾವೇರಿ ಕಣಿವೆಯಲ್ಲಿ ಪ್ರವಾಹ ಸೃಷ್ಟಿಸುವ ಮಳೆ ಸುರಿಯಲಿಲ್ಲ. ಹೀಗಾಗಿ ಕೆಆರ್‌ಎಸ್‍ ಜಲಾಶಯಕ್ಕೆ ಭಾರೀ ಪ್ರಮಾಣದ ನೀರು ಹರಿದು ಬರಲೇ ಇಲ್ಲ. ಜುಲೈ, ಆಗಸ್ಟ್ ತಿಂಗಳಲ್ಲಿ ಮಳೆ ಸುರಿಯಿತಾದರೂ ಜಲಾಶಯ ಭರ್ತಿಯಾಗುವಷ್ಟರ ಮಟ್ಟಿಗೆ ನೀರು ಜಲಾಶಯಕ್ಕೆ ಹರಿದು ಬರಲಿಲ್ಲ.

ಮೂರು ವರ್ಷಗಳಿಂದ ಕೊಡಗಿನಲ್ಲಿ ಮಹಾಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿತ್ತು. ಭೂಕುಸಿತದಿಂದ ಪ್ರಾಣ ಹಾನಿ ಮತ್ತು ಪ್ರವಾಹದಿಂದ ಆಸ್ತಿಪಾಸ್ತಿಗೆ ಹಾನಿವುಂಟಾಗಿತ್ತು. ಕೊಡಗಿನಲ್ಲಿ ಸುರಿದ ಮಳೆಯಿಂದಾಗಿ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿರುವ ಗರಿಷ್ಠ 124 ಅಡಿ ಎತ್ತರದ ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಹರಿದು ಬಂದಿತ್ತು.

ಬುಧವಾರದ ವರದಿಯಂತೆ ಕೆಆರ್‌ಎಸ್ ಜಲಾಶಯದ ನೀರಿನ ಮಟ್ಟ 115.05 ಅಡಿಗಳು. ಜಲಾಶಯಕ್ಕೆ 5032 ಕ್ಯುಸೆಕ್ ನೀರು ಹರಿದು ಬರುತ್ತಿದೆ. 10683 ಕ್ಯುಸೆಕ್ ಹೊರ ಹರಿವು ದಾಖಲಾಗಿದೆ. ಜಲಾಶಯ ಭರ್ತಿಯಾಗಿಲ್ಲ. ಆದರೂ ತಮಿಳುನಾಡಿಗೆ ಕಾವೇರಿ ನೀರನ್ನು ಹಂಚಿಕೆ ಮಾಡುವ ಸಂಕಷ್ಟ ಕರ್ನಾಟಕದ ಪಾಲಿಗೆ ಎದುರಾಗಿದೆ. ಕೆಆರ್‌ಎಸ್ ಭರ್ತಿಯಾಗದಿದ್ದರೆ ಬೆಂಗಳೂರು, ಮಂಡ್ಯ, ಮೈಸೂರು ನಗರಗಳಿಗೆ ಕುಡಿಯುವ ನೀರು ಪೂರೈಸಲು ಬೇಸಿಗೆಯಲ್ಲಿ ತೊಂದರೆಯಾಗಲಿದೆ.

ಕೊಡಗಿನಲ್ಲಿ ಮಹಾಮಳೆ ಸುರಿಯಲಿಲ್ಲ!

ಕೊಡಗಿನಲ್ಲಿ ಮಹಾಮಳೆ ಸುರಿಯಲಿಲ್ಲ!

ಮೂರು ವರ್ಷಗಳಲ್ಲಿ ಸಂಭವಿಸಿದ ಹಾನಿಯಿಂದ ಆಗಿರುವ ನಷ್ಟದಿಂದ ಚೇತರಿಸಿಕೊಳ್ಳಲು ಕೊಡಗಿನವರು ಇನ್ನೆಷ್ಟು ವರ್ಷಗಳ ಕಾಲ ಶ್ರಮಪಡಬೇಕೋ?. ಕಾಫಿ, ಕರಿಮೆಣಸು ಸೇರಿದಂತೆ ವಿವಿಧ ವಾಣಿಜ್ಯ ಬೆಳೆಗಳನ್ನು ನಂಬಿ ಜೀವನ ಮಾಡುತ್ತಿರುವ ಜನ ಮಳೆಯ ಕಾರಣದಿಂದ ಹೈರಾಣರಾಗಿದ್ದರು. ಕಾರಣ ಮಳೆ ಹೆಚ್ಚಾದಷ್ಟು ಅದರಿಂದ ಕಾಫಿ, ಕರಿಮೆಣಸು ಬೆಳೆಗಳಿಗೆ ಹಾನಿ ಜಾಸ್ತಿಯಾಗುತ್ತಿತ್ತು. ಹೀಗಾಗಿ ಮಳೆಯ ಪ್ರಮಾಣ ಕಡಿಮೆಯಾಗಲಿ ಎಂದು ಬೆಳೆಗಾರರು ಪ್ರಾರ್ಥಿಸುವಂತಾಗಿತ್ತು. ಆದರೆ ಈ ಬಾರಿಯೂ ಕೊಡಗಿನಲ್ಲಿ ಉತ್ತಮ ಮಳೆಯಾಗಿದೆ. ಇದರಿಂದ ಕಾವೇರಿ ನದಿಯಲ್ಲಿ ಹರಿಯುವ ನೀರಿನ ಪ್ರಮಾಣ ಉತ್ತಮವಾಗಿದೆ. ಹೀಗಾಗಿ ಅಕ್ಟೋಬರ್ ವೇಳೆಗೆ ಭರ್ತಿಯಾಗುವ ನಿರೀಕ್ಷೆಯನ್ನು ಮಾಡಬಹುದಾಗಿದೆ. ಈ ಹಿಂದೆಯೂ ಅಕ್ಟೋಬರ್ ವೇಳೆಗೆ ಭರ್ತಿಯಾದ ನಿದರ್ಶಗಳಿವೆ. ಆದ್ದರಿಂದ ಎಲ್ಲರೂ ಆ ನಂಬಿಕೆಯಲ್ಲಿ ಇದ್ದಾರೆ.

ಕೆಆರ್‌ಎಸ್ ಭರ್ತಿಗೆ 9 ಅಡಿ ನೀರು ಬೇಕು

ಕೆಆರ್‌ಎಸ್ ಭರ್ತಿಗೆ 9 ಅಡಿ ನೀರು ಬೇಕು

ಸದ್ಯ 124 ಅಡಿ ಸಾಮರ್ಥ್ಯದ ಜಲಾಶಯದಲ್ಲಿ 115 ಅಡಿಯಷ್ಟು ನೀರಿದೆ. ಹಾಗಾಗಿ ಈ ಬಾರಿ ಜಲಾಶಯ ಭರ್ತಿಯಾಗಬೇಕಾದರೆ ಇನ್ನು 9 ಅಡಿಯಷ್ಟು ನೀರು ಬೇಕಾಗುತ್ತದೆ. ಅಷ್ಟು ಪ್ರಮಾಣದ ನೀರು ಹರಿದು ಬಂದರೆ ಜನ ನೆಮ್ಮದಿಯುಸಿರು ಬಿಡಬಹುದಾಗಿದೆ. ಹಿಂದೊಮ್ಮೆ ಕೆಆರ್‌ಎಸ್ ಜಲಾಶಯದ ನೀರಿನ ಮಟ್ಟ ಕಡಿಮೆಯಾಗಿದ್ದಾಗ ಹಿನ್ನೀರಿನಿಂದ ನಿಂತು ನೋಡಿದಾಗ ಗೋಚರಿಸಿದ ದೃಶ್ಯಗಳು ಇಂದಿಗೂ ಜನಮಾನಸದಲ್ಲಿ ಹಸಿರಾಗಿಯೇ ಉಳಿದಿದೆ. ಅವತ್ತಿನ ಪರಿಸ್ಥಿತಿ ಯಾವತ್ತೂ ಬರಬಾರದು ಎಂದು ಜನ ಇವತ್ತಿಗೂ ಹೇಳುತ್ತಾರೆ. 2013ರಲ್ಲಿ ಕೆಆರ್‌ಎಸ್ ಜಲಾಶಯ 65 ಅಡಿ ತಲುಪಿತ್ತು. ಆಗ ಕುಡಿಯುವುದಕ್ಕೂ ನೀರಿಲ್ಲದೆ ಜನ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.

ಕೆಆರ್‌ಎಸ್‍ ಒಡಲ ರಹಸ್ಯ ಬಯಲಾಗಿತ್ತು

ಕೆಆರ್‌ಎಸ್‍ ಒಡಲ ರಹಸ್ಯ ಬಯಲಾಗಿತ್ತು

ಜಲಾಶಯದಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿದ್ದಂತೆಯೇ ಮುಳುಗಡೆಯಾಗಿದ್ದ ಗ್ರಾಮಗಳು, ವೀರಗಲ್ಲು, ಮಾಸ್ತಿಗಲ್ಲಿನಂತಹ ಶಾಸನಗಳು, ದೇವಾಲಯಗಳು ಕಾಣತೊಡಗಿದ್ದವು. ಆ ದೃಶ್ಯವನ್ನು ನೋಡಲು ಜನ ತಂಡೋಪ ತಂಡವಾಗಿ ಆಗಮಿಸಿ ಹಿನ್ನೀರಿನಲ್ಲಿ ಮುಳುಗಡೆಯಾಗಿದ್ದ ವೇಣುಗೋಪಾಲ ದೇಗುಲ, ನಾರಾಯಣಸ್ವಾಮಿ ದೇವಾಲಯ, ಸುಬ್ರಹ್ಮಣ್ಯೇಶ್ವರ ಗೋಪುರ, ಹಲವಾರು ಕಲ್ಲಿನ ಶಾಸನಗಳನ್ನು ನೋಡಿ ಅಚ್ಚರಿ ಪಟ್ಟಿದ್ದರು. 2000 ಇಸವಿಯಲ್ಲೊಮ್ಮೆ ಕೆಆರ್‌ಎಸ್‌ನಲ್ಲಿ ನೀರಿನ ಮಟ್ಟ ಇಳಿದಾಗ ಹಿನ್ನೀರಿನಲ್ಲಿ ವೇಣುಗೋಪಾಲಸ್ವಾಮಿ ದೇವಾಲಯ ಪತ್ತೆಯಾದಾಗ ದೇವಾಲಯವನ್ನು ಜಲಾಶಯದಿಂದ ಹೊರಭಾಗಕ್ಕೆ ಸ್ಥಳಾಂತರ ಮಾಡಿ ಸುಂದರವಾಗಿ ಖೋಡೆಸ್ ಕಂಪನಿ ನಿರ್ಮಿಸಿದ್ದು ಇತಿಹಾಸವಾಗಿದೆ.

Recommended Video

T Natarajanಗೆ ಕೋವಿಡ್ ಸೋಂಕು , ಆದರೂ ಆಟ ನಿಲ್ಲೋದಿಲ್ಲ | Oneindia Kannada
ಜಲಾಶಯ ಭರ್ತಿಗಾಗಿ ಜನರ ಪ್ರಾರ್ಥನೆ

ಜಲಾಶಯ ಭರ್ತಿಗಾಗಿ ಜನರ ಪ್ರಾರ್ಥನೆ

2016ರಲ್ಲಿ ಕೂಡ ಜಲಾಶಯದಲ್ಲಿ ನೀರಿನ ಪ್ರಮಾಣ ಕಡಿಮೆಯಾದಾಗ ರೈತರು ಹಿನ್ನೀರಿನಲ್ಲಿ ಉಳುಮೆ ಮಾಡಿ ಬೆಳೆ ಬೆಳೆದಿದ್ದರು. ಬೆಸ್ತರು ಗುಡಿಸಲು ಹಾಕಿಕೊಂಡು ಮೀನು ಹಿಡಿದಿದ್ದರು. ಅದಾದ ನಂತರ 2017ರ ಮುಂಗಾರು ಮಳೆ ಕ್ಷೀಣಿಸಿದರೂ ಹಿಂಗಾರು ಚೆನ್ನಾಗಿ ಸುರಿದಿದ್ದರಿಂದ ಜಲಾಶಯಕ್ಕೆ ನೀರು ಹರಿದು ಬಂದಿತ್ತಾದರೂ ಭರ್ತಿಯಾಗಿರಲಿಲ್ಲ. 2018ರ ನಂತರ ಮೂರು ವರ್ಷಗಳ ಕಾಲ ಭಾರೀ ಮಳೆ ಸುರಿದಿದ್ದರಿಂದ ಜಲಾಶಯ ಭರ್ತಿಯಾಗಿದ್ದಲ್ಲದೆ, ಅಪಾರ ಪ್ರಮಾಣದ ನೀರು ಜಲಾಶಯದಿಂದ ಹೊರಕ್ಕೆ ಹರಿದು ಹೋಗಿತ್ತು. ಈ ಬಾರಿ ತಡವಾದರೂ ತೊಂದರೆಯಿಲ್ಲ ಕಾವೇರಿ ಕಣಿವೆಯಲ್ಲಿ ಒಂದಿಷ್ಟು ಮಳೆಯಾಗಿ ಜಲಾಶಯ ಭರ್ತಿಯಾಗಲಿ ಎಂದು ಜನ ಪ್ರಾರ್ಥಿಸುತ್ತಿದ್ದಾರೆ.

English summary
Mandya district KRS dam had not filled till September 2021 end. Cauvery catchment areas did not receive good rainfall.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X