ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಡ್ಯ; ಪ್ರಾಣಿ, ಪಕ್ಷಿಗಳಿಗೆ ಬೇಸಿಗೆಯಲ್ಲಿ ನೀರಿಡುವ ವಿಶಿಷ್ಟ ಕಾರ್ಯಕ್ರಮ

|
Google Oneindia Kannada News

ಮಂಡ್ಯ, ಫೆಬ್ರವರಿ 22: ಬೇಸಿಗೆಯ ದಿನಗಳಲ್ಲಿ ಪ್ರಾಣಿ, ಪಕ್ಷಿಗಳು ನೀರಿಗಾಗಿ ಪರದಾಡುವ ಪರಿಸ್ಥಿತಿ ಎದುರಾಗುವುದರಿಂದ ನಾವೆಲ್ಲರೂ ಎಚ್ಚೆತ್ತುಕೊಂಡು ನಮ್ಮ ವ್ಯಾಪ್ತಿಯಲ್ಲಿ ನೀರು ಮತ್ತು ಆಹಾರವನ್ನಿಡುವ ಮೂಲಕ ಅವುಗಳನ್ನು ರಕ್ಷಿಸುವ ಕೆಲಸವನ್ನು ಮಾಡಬೇಕಾಗಿದೆ.

ಪ್ರತಿ ವರ್ಷವೂ ಬೇಸಿಗೆ ಕಾಲ ಬರುತ್ತಿದ್ದಂತೆಯೇ ನೀರಿನ ಸಮಸ್ಯೆ ಉದ್ಭವಿಸುವುದು ಸಾಮಾನ್ಯ. ಇಂತಹ ಸಂದರ್ಭಗಳಲ್ಲಿ ಪಟ್ಟಣಗಳಲ್ಲಿ ವಾಸಿಸುವ ಸಣ್ಣಪುಟ್ಟ ಪ್ರಾಣಿ, ಪಕ್ಷಿಗಳು ನೀರಿಗಾಗಿ ಹೆಣಗಾಡಬೇಕಾಗುತ್ತದೆ. ಹೀಗಾಗಿ ಇಂತಹ ಸಂದರ್ಭದಲ್ಲಿ ನಾವು ಉದಾರ ಮನಸ್ಸು ಮಾಡಿ ಒಂದಷ್ಟು ಸಮಯವನ್ನು ಮೀಸಲಿಟ್ಟು ನಮ್ಮ ಸುತ್ತಮುತ್ತ ಇರುವ ಮರ ಮತ್ತು ಮನೆಯ ತಾರಸಿ ಮೇಲೆ ನೀರು ಹಾಗೂ ಕಾಳು ಕಡ್ಡಿಯನ್ನಿಟ್ಟು ಪಕ್ಷಿಗಳನ್ನು ರಕ್ಷಿಸುವ ಅಗತ್ಯತೆ ಇದೆ.

ಪಟ್ಟಣಗಳಲ್ಲಿ ಹಲವು ರೀತಿಯ ಪಕ್ಷಿಗಳು ಬೀಡು ಬಿಟ್ಟಿವೆ. ಇವುಗಳೆಲ್ಲವೂ ಬೇಸಿಗೆಯಲ್ಲಿ ನೀರಿಗಾಗಿ ಹುಡುಕಾಟ ನಡೆಸುತ್ತಿರುತ್ತವೆ. ಇವುಗಳ ಜತೆ ಜತೆಯಲ್ಲಿಯೇ ಅಳಿಲುಗಳು ಕೂಡ ಆಹಾರ ಮತ್ತು ನೀರಿಗಾಗಿ ಅಲೆದಾಡುತ್ತಿರುತ್ತವೆ. ಇವುಗಳಿಗೆ ಮರಗಳಲ್ಲಿ ನೀರು ಮತ್ತು ಕಾಳುಕಡ್ಡಿಗಳನ್ನಿಟ್ಟರೆ ಅವುಗಳ ಆಹಾರ ಸಮಸ್ಯೆ ನೀಗಿಸಲು ಸಾಧ್ಯವಿದೆ. ಈಗಾಗಲೇ ಹಲವು ಸಂಘ ಸಂಸ್ಥೆಗಳು ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿವೆ.

Campaign To Provide Water For Birds In Summer

ಈ ನಡುವೆ ಮಂಡ್ಯ ನಗರದಲ್ಲಿ ಯುನಿಕ್ ಕಲ್ಪನೆ ಪ್ರೈವೇಟ್ ಲಿಮಿಟೆಡ್ ಹಾಗೂ ಮೈಸೂರಿನ ಗುಬ್ಬಿಗೂಡು ಸಂಸ್ಥೆಯ ಸಹಯೋಗದಲ್ಲಿ ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಬೇಸಿಗೆಯ ದಿನಗಳಲ್ಲಿ ಪ್ರಾಣಿ, ಪಕ್ಷಿಗಳಿಗೆ ಅನುಕೂಲವಾಗುವಂತೆ ಮರಗಳಲ್ಲಿ ತೆಂಗಿನ ಕಂಟ ಕಟ್ಟುವ ಮತ್ತು ಮರಗಳಲ್ಲಿ ಫ್ಲೆಕ್ಸ್, ಇನ್ನಿತರ ಚಟುವಟಿಕೆಗೆ ಹೊಡೆಯಲಾಗಿರುವ ಮೊಳೆಗಳನ್ನು ಕೀಳುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದೆ.

ಈ ವಿನೂತನ ಕಾರ್ಯಕ್ರಮದ ವೇಳೆ ಮರಗಳಲ್ಲಿರುವ ಮೊಳೆಗಳನ್ನು ಕಿತ್ತು, ಮರಗಳಿಗೆ ತೆಂಗಿನ ಕಂಟವನ್ನು ಮರಕ್ಕೆ ಕಟ್ಟಲಾಗುತ್ತದೆ. ಬೇಸಿಗೆಯ ದಿನಗಳಲ್ಲಿ ಈ ಕಂಟಕ್ಕೆ ನೀರು ಹಾಕಿಡುವುದರಿಂದ ಬಾಯಾರಿದ ಪಕ್ಷಿಗಳು ಮತ್ತು ಅಳಿಲು ಸೇರಿದಂತೆ ಸಣ್ಣಪುಟ್ಟ ಪ್ರಾಣಿಗಳ ದಾಹ ತೀರಿಸಲು ಸಾಧ್ಯವಾಗಲಿದೆ.
ಕಾರ್ಯಕ್ರಮದಲ್ಲಿ ಎರಡು ಸಂಸ್ಥೆಗಳ 30ಕ್ಕೂ ಹೆಚ್ಚು ಸದಸ್ಯರು ಸುಮಾರು ಒಂದು ಮರಕ್ಕೆ ತಲಾ ಎರಡು ಕಂಟಗಳನ್ನು ಕಟ್ಟಿ ಒಂದಕ್ಕೆ ಆಹಾರ ಧಾನ್ಯ ಮತ್ತೊಂದಕ್ಕೆ ನೀರನ್ನು ಹಾಕಿದ್ದು, ಒಟ್ಟು 300 ಕಂಟಗಳನ್ನು ಮರಗಳಿಗೆ ಕಟ್ಟಿರುವುದು ವಿಶೇಷವಾಗಿದೆ.

ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಪರಶುರಾಮ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. "ನಾವೆಲ್ಲರೂ ನಮ್ಮ ವ್ಯಾಪ್ತಿಯಲ್ಲಿ ಪ್ರಾಣಿಪಕ್ಷಿಗಳಿಗೆ ಒಂದಿಷ್ಟು ನೀರು, ಆಹಾರವನ್ನು ಹಾಕುವುದರ ಜತೆಗೆ ಮರಗಳನ್ನು ಉಳಿಸಬೇಕಾಗಿದೆ. ಇದು ಬೇಸಿಗೆ ಸಮಯವಾದ್ದರಿಂದ ಪ್ರತಿಯೊಬ್ಬರು ತಮ್ಮ ಮನೆ ಅಥವಾ ಮನೆಯ ಸುತ್ತಮುತ್ತ ಪಕ್ಷಿಗಳಿಗೆ ಆಹಾರ ನೀರು ಪೂರೈಸಬೇಕು. ಜತೆಗೆ ಮರಗಳಿಗೆ ಮೊಳೆ ಹೊಡೆಯುವ ಕೆಲಸವನ್ನು ಮಾಡಬಾರದು" ಎಂದು ಕಿವಿ ಮಾತು ಹೇಳಿದರು.

ಈ ಕುರಿತಂತೆ ಆರ್.ಸಿ.ಎಫ್. ಶಿಲ್ಪ ಮಾತನಾಡಿ, "ಮರಗಳಿಗೆ ಮೊಳೆ ಹೊಡೆಯುವುದರಿಂದ ಮರಗಳ ಬೆಳವಣಿಗೆಗೆ ತೊಂದರೆಯಾಗುತ್ತದೆ. ಅಳಿಲು, ಗುಬ್ಬಿಗಳಿಂದ ನಮಗೇನು ಲಾಭವೆಂಬುದು ಹಲವರ ಪ್ರಶ್ನೆ. ಆದರೆ, ಪ್ರಾಕೃತಿಕ ಸಮತೋಲನಕ್ಕೆ ಎಲ್ಲ ರೀತಿಯ ಪಕ್ಷಿಗಳ ಪಾತ್ರ ಅತ್ಯಂತ ಪ್ರಮುಖವಾಗಿದೆ. ಆದ್ದರಿಂದ ಎಲ್ಲರೂ ಪ್ರಾಣಿ, ಪಕ್ಷಿ ಹಾಗೂ ಮರಗಳನ್ನು ರಕ್ಷಣೆ ಮಾಡುವ ಮೂಲಕ ತಮ್ಮನ್ನು, ತಮ್ಮ ಮುಂದಿನ ಪೀಳಿಗೆಯನ್ನು ರಕ್ಷಣೆ ಮಾಡಿಕೊಳ್ಳಬೇಕಾಗಿದೆ" ಎಂದಿದ್ದಾರೆ.

Recommended Video

ಒಂದು ವಾರಗಳ ಕಾಲ ಮಹಾರಾಷ್ಟ್ರದ ಅಮರಾವತಿ ಲಾಕ್‌ಡೌನ್‌! | Oneindia Kannada

ಇಂತಹ ಕಾರ್ಯಕ್ರಮಗಳು ಎಲ್ಲ ಪಟ್ಟಣಗಳಲ್ಲಿ ನಡೆದರೆ ನಮ್ಮ ಜತೆಯಲ್ಲಿ ಪ್ರಾಣಿಪಕ್ಷಿಗಳು ಸಹ ನೆಮ್ಮದಿಯಾಗಿ ಬದುಕಲು ಸಾಧ್ಯವಾಗಲಿದೆ.

English summary
Unique Kalpane Private Limited and gubbi goodu launched campaign to provide water for birds in summer.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X