ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಡ್ಯದಲ್ಲಿ ಸುಮಲತಾ ಭರ್ಜರಿ ಗೆಲುವಿನ ಹಿಂದಿದೆ ಈ '10' ಅಸ್ತ್ರಗಳು

|
Google Oneindia Kannada News

ಮಂಡ್ಯ ಲೋಕಸಭೆ ಕ್ಷೇತ್ರದಿಂದ ಸುಮಲತಾ ಅಂಬರೀಶ್ ಸ್ಪರ್ಧೆ ಮಾಡುವುದಾಗಿ ಯಾವಾಗ ನಿರ್ಧರಿಸಿದರೋ ಆಗಲೇ ಸೋಲು-ಗೆಲುವಿನ ಲೆಕ್ಕಚಾರ ಆರಂಭವಾಗಿತ್ತು. ಸುಮಲತಾ ರಾಜಕೀಯಕ್ಕೆ ಬರುವುದನ್ನ ಸಾಕಷ್ಟು ಜನ ವಿರೋಧಿಸಿದ್ದರು. ಅಂಬಿ ನಿಧನರಾಗಿ ಮೂರ್ನಾಲ್ಕು ತಿಂಗಳು ಆಗಿರಲಿಲ್ಲ ಅಷ್ಟರಲ್ಲೇ ಅಧಿಕಾರದ ಹಿಂದೆ ಬಿದ್ದರು ಎಂಬ ಟೀಕೆ ಕೇಳಿ ಬಂತು.

ಮತ್ತೊಂದೆಡೆ ಸಿಎಂ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರ್ ಮೈತ್ರಿ ಅಭ್ಯರ್ಥಿ ಎಂದು ಘೋಷಿಸಿದಾಗ ಸುಮಲತಾ ಗೆಲುವು ಕಷ್ಟಸಾಧ್ಯ ಎಂದರು. ಯಾಕಂದ್ರೆ, ಸಿಎಂ ಮಗ, 8 ಜನ ಶಾಸಕರ ಬಲ, ಕಾಂಗ್ರೆಸ್ ಪಕ್ಷದ ಬೆಂಬಲ ಇದೆಲ್ಲವೂ ನಿಖಿಲ್ ಪರ ಇದ್ದ ಕಾರಣ ಸುಮಲತಾ ಅವರನ್ನ ಗಂಭೀರವಾಗಿ ತೆಗೆದುಕೊಳ್ಳಲಿಲ್ಲ.

ಮಂಡ್ಯದಲ್ಲಿ ಸುಮಲತಾ ಗೆದ್ದರೇ ಜೋಡೆತ್ತುಗಳಿಗಾಗುವ ಅನುಕೂಲವೇನು?

ಆದ್ರೆ, ಇದೆಲ್ಲವೂ ತಲೆಕೆಳಗಾಗುವಂತಹ ಘಟನೆಗಳಿಗೆ ಮಂಡ್ಯ ಲೋಕಸಭೆ ಅಖಾಡ ಕಾರಣವಾಯಿತು. ಮಂಡ್ಯದಲ್ಲಿ ಸ್ವಾಭಿಮಾನದ 'ಕಹಳೆ ಊದಿದ' ಸುಮಲತಾ, ಸಿಎಂ ಕೋಟೆಯನ್ನ ಭೇದಿಸಿ ವಿಜಯ ಪತಾಕೆ ಹಾರಿಸಿದ್ದಾರೆ. ಹಾಗ್ನೋಡಿದ್ರೆ, ಸುಮಲತಾಗೆ ಇದು ಸ್ವಾಭಿಮಾನದ ಗೆಲುವು. ಈ ಗೆಲುವಿಗೆ ಕಾರಣವಾಗಿದ್ದು ಏನು? ಅಂಬಿ ಪತ್ನಿಯ ಗೆಲುವಿನ ಹಿಂದೆ ಯಾರೆಲ್ಲಾ ಇದ್ದರು ಎಂಬುದು ಮುಂದೆ ಓದಿ.....

ಅಂಬರೀಶ್ ಅಭಿಮಾನಿಗಳ ಶಕ್ತಿ

ಅಂಬರೀಶ್ ಅಭಿಮಾನಿಗಳ ಶಕ್ತಿ

ಸುಮಲತಾ ಅವರನ್ನ ರಾಜಕೀಯಕ್ಕೆ ಕರೆತಂದಿದ್ದೆ ಅಂಬರೀಶ್ ಅಭಿಮಾನಿಗಳು. ಅಂಬಿ ನಿಧನದ ನಂತರ 'ಮಂಡ್ಯ ರಾಜಕೀಯಕ್ಕೆ ಬನ್ನಿ' ಎಂದು ಮಂಡ್ಯದ ಅಂಬರೀಶ್ ಅಭಿಮಾನಿಗಳು ಸುಮಲತಾ ಅವರ ಮನೆ ಬಾಗಿಲು ಬಳಿ ಬಂದು ಒತ್ತಾಯ ಮಾಡಿದರು. ಅಂಬಿ ಮೇಲೆ ಅವರ ಅಭಿಮಾನಿಗಳು ಇಟ್ಟಿದ್ದ ಅಭಿಮಾನಕ್ಕೆ ನೋವು ನೀಡಲು ಇಷ್ಟವಾಗದ ಸುಮಲತಾ ಒತ್ತಾಯಕ್ಕೆ ಮಣಿದು ಹಸ್ತು ಎಂದುಬಿಟ್ಟರು. ಯಾವಾಗ ಸುಮಲತಾ ಜೈ ಎಂದರೋ ಅಲ್ಲಿಂದ ಪ್ರತಿಕ್ಷಣದಲ್ಲೂ, ಪ್ರತಿ ಸಂದರ್ಭದಲ್ಲಿ ಅಂಬಿ ಅಭಿಮಾನಿಗಳು ಸುಮಲತಾ ಜೊತೆಯಾಗಿ ನಿಂತು ಶಕ್ತಿ ನೀಡಿದರು. ಸುಮಲತಾ ಗೆಲುವಿನಲ್ಲಿ ಅಂಬರೀಶ್ ಅಭಿಮಾನಿಗಳ ಅಭಿಮಾನ ಹೆಚ್ಚು ಕೆಲಸ ಮಾಡಿದೆ.

ಜೋಡೆತ್ತುಗಳ ಬಲ

ಜೋಡೆತ್ತುಗಳ ಬಲ

ಸುಮಲತಾ ಪರವಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ರಾಕಿಂಗ್ ಸ್ಟಾರ್ ಯಶ್ ಪ್ರಚಾರ ಮಾಡಿದ್ದು ಬಹುಶಃ ನೆರವಾಗಿರಬಹುದು. ಇವರಿಬ್ಬರಿಗೆ ದೊಡ್ಡ ಅಭಿಮಾನಿ ಬಳಗ ಮಂಡ್ಯದಲ್ಲಿದೆ. ಇವರಿಬ್ಬರು ಪ್ರಚಾರಕ್ಕೆ ಬಂದಾಗ ಜೆಡಿಎಸ್ ನಾಯಕರು ಸುಮ್ಮನಾಗಿದ್ದರೆ ಎಲ್ಲವೂ ಕೂಲ್ ಆಗಿ ಇರ್ತಿತ್ತು. ಆದ್ರೆ, ಜೋಡೆತ್ತುಗಳ ವಿರುದ್ಧ ಟೀಕೆ ಮಾಡಿದ್ರೋ ಆಗ ' ಇದು ಮಂಡ್ಯ ಸ್ವಾಭಿಮಾನ'ದ ಪ್ರತಿಷ್ಠೆ ಎಂದು ಬಿಂಬಿಸಲಾಯಿತು. ಅಲ್ಲಿಗೆ ಜೋಡೆತ್ತುಗಳ ಶಕ್ತಿಯೂ ಇಲ್ಲಿ ವರ್ಕೌಟ್ ಆಗಿದೆ.

ಮಂಡ್ಯ ಫಲಿತಾಂಶ ಉಲ್ಟಾ ಆದ್ರೆ ಜೋಡೆತ್ತುಗಳಿಗೆ ಈ ಟೀಕೆಗಳು ತಪ್ಪಿದ್ದಲ್ಲ.!

ಕಾಂಗ್ರೆಸ್ ನಾಯಕರ ಪರೋಕ್ಷ ಬೆಂಬಲ

ಕಾಂಗ್ರೆಸ್ ನಾಯಕರ ಪರೋಕ್ಷ ಬೆಂಬಲ

ಆರಂಭದಲ್ಲಿ ಸುಮಲತಾ ಕಾಂಗ್ರೆಸ್ ಪಕ್ಷದಿಂದಲೇ ಟಿಕೆಟ್ ಕೇಳಿದರು. ಮೈತ್ರಿ ಧರ್ಮ ಪಾಲಿಸಿದ ಕಾಂಗ್ರೆಸ್ ಈ ಕ್ಷೇತ್ರವನ್ನ ಜೆಡಿಎಸ್ ಗೆ ಬಿಟ್ಟು ಕೊಟ್ಟು ಸುಮಲತಾ ಅವರನ್ನ ದೂರ ಮಾಡಿಕೊಂಡರು. ಆದ್ರೆ, ಪರೋಕ್ಷವಾಗಿ ಸುಮಲತಾ ಅವರಿಗೆ ಬೆಂಬಲ ನೀಡಿದ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು ಪಕ್ಷೇತರವಾಗಿ ನಿಲ್ಲಿಸಿ, ಅವರ ಗೆಲುವಿಗಾಗಿ ಕೆಲಸ ಮಾಡಿದ್ದಾರೆ. ಜೆಡಿಎಸ್ ನಿಂದ ಹೊರಬಂದು ಕಾಂಗ್ರೆಸ್ ಸೇರಿದ್ದ ಚೆಲುವರಾಯ ಸ್ವಾಮಿ ಮತ್ತು ಇತರೆ ಕಾಂಗ್ರೆಸ್ ನಾಯಕರು ಸುಮಲತಾ ಪರ ಕೆಲಸ ಮಾಡಿದ್ದಾರೆ ಎಂದು ಸ್ವತಃ ಜೆಡಿಎಸ್ ನಾಯಕರು ದೂರಿದ್ದರು. ಬಹುಶಃ ಇದೆಲ್ಲವೂ ದೊಡ್ಡ ಮಟ್ಟದಲ್ಲಿ ಸುಮಲತಾಗೆ ವರದಾನವಾಗಿದೆ.

ಮೋದಿ ಮತ್ತು ಬಿಜೆಪಿ ಬೆಂಬಲ ಫಲ ಕೊಡ್ತು

ಮೋದಿ ಮತ್ತು ಬಿಜೆಪಿ ಬೆಂಬಲ ಫಲ ಕೊಡ್ತು

ಮಂಡ್ಯದಲ್ಲಿ ಬಿಜೆಪಿಯವರು ಅಭ್ಯರ್ಥಿ ನಿಲ್ಲಿಸದೆ ಸುಮಲತಾ ಅವರಿಗೆ ಬೆಂಬಲ ನೀಡಿದರು. ಪ್ರಧಾನಿ ಮೋದಿ ಮೈಸೂರಿಗೆ ಬಂದಿದ್ದ ವೇಳೆ ಬಹಿರಂಗವಾಗಿ ಸುಮಲತಾ ಅವರನ್ನ ಬೆಂಬಲಿಸಿ ಎಂದು ಜನರಿಗೆ ಕರೆ ನೀಡಿದ್ದರು. ಬಿಜೆಪಿ ಅಭ್ಯರ್ಥಿ ಇರಲಿಲ್ಲ, ಮೋದಿ ಮೇಲೆ ಅಭಿಮಾನ ಹೊಂದಿದ್ದವರು ಸುಮಲತಾ ಪರ ನಿಂತರು. ಅಲ್ಲಿಗೆ ಬಿಜೆಪಿಯ ಎಲ್ಲ ಮತಗಳು ಸುಮಲತಾಗೆ ಸಿಕ್ಕಿದೆ.

'ಮಂಡ್ಯ ಅಲ್ಲ, ಕರ್ನಾಟಕ ಬಿಟ್ಟು ಹೋಗ್ತೀನಿ': ಸಿಎಂಗೆ ಯಶ್ ಸವಾಲ್

ಭಾವನಾತ್ಮಕ ಅಸ್ತ್ರ

ಭಾವನಾತ್ಮಕ ಅಸ್ತ್ರ

ಸುಮಲತಾ ಗೆಲುವಿನಲ್ಲಿ ಬಹುದೊಡ್ಡ ಅಸ್ತ್ರವಾಗಿದ್ದು ಭಾವನಾತ್ಮಕ ಸೆಳೆತ. ಅಂಬಿ ಇಲ್ಲದ ಒಂಟಿಯಾಗಿದ್ದ ಸುಮಲತಾ, 'ಮಂಡ್ಯ ಜನರ ಸೇವೆ ಮಾಡಲು ಒಂದು ಅವಕಾಶ ಕೊಡಿ' ಎಂದು ಬೇಡಿಕೊಂಡರು. ಹೆಣ್ಣು ಮಗಳು ಎಂಬ ಮೃದು ಧೋರಣೆ ಮಂಡ್ಯ ಜನರ ಮನಸ್ಸಲ್ಲಿ ಮೂಡಿತು. ಒಬ್ಬ ಹೆಣ್ಣು ಮಗಳ ವಿರುದ್ಧ ಎಷ್ಟು ಜನ ನಿಂತಿದ್ದಾರೆ, ಎಷ್ಟು ಹೀನಾಯವಾಗಿ ಮಾತನಾಡುತ್ತಿದ್ದಾರೆ ಎಂಬ ಸ್ವಾಭಿಮಾನ ಮಂಡ್ಯ ಜನರ ಮುಂದೆ ಬಂತು. ಮಂಡ್ಯದ ಬಹುತೇಕ ಹೆಂಗಸರ ಮತಗಳು ಸುಮಲತಾಗೆ ಬಂದಿದೆ ಎಂಬ ಮಾತಿದೆ.

ನಾಯ್ಡು, ಗಂಡ ಸತ್ತು ಮೂರು ತಿಂಗಳು ಆಗಿಲ್ಲ ಹೇಳಿಕೆ

ನಾಯ್ಡು, ಗಂಡ ಸತ್ತು ಮೂರು ತಿಂಗಳು ಆಗಿಲ್ಲ ಹೇಳಿಕೆ

ಸುಮಲತಾ ಅವರ ವಿರುದ್ಧ ಜೆಡಿಎಸ್ ನಾಯಕರು ಮಾಡಿದ ಟೀಕೆಗಳು ಅವರಿಗೆ ಮುಳುವಾಯಿತು. ಜೆಡಿಎಸ್ ಸಂಸದರಾಗಿದ್ದ ಶಿವರಾಮೇಗೌಡ ಅವರು ಸುಮಲತಾ ಅವರ ಜಾತಿ ಬಗ್ಗೆ ಪ್ರಶ್ನಿಸಿದ್ದರು. ಈಕೆ ಗೌಡ್ತಿ ಅಲ್ಲ, ಆಕೆ ನಾಯ್ಡು ಎಂದು ಕಿಡಿಕಾರಿದ್ದರು. ಈ ಹೇಳಿಕೆ ವಿರುದ್ಧ ಭಾರಿ ವಿರೋಧ ವ್ಯಕ್ತವಾಗಿತ್ತು. ಮತ್ತೊಂದೆಡೆ ರೇವಣ್ಣ ''ಗಂಡ ಸತ್ತು ಮೂರು ತಿಂಗಳು ಆಗಿಲ್ಲ. ಅಧಿಕಾರ ಬೇಕಾ'' ಎಂದಿದ್ದರು. ಇದೂ ಕೂಡ ಜೆಡಿಎಸ್ ಪಾಲಿಗೆ ಕಂಟಕವಾಯ್ತು.

'ಮಾಯಾಂಗನೆ ಸುಮಲತಾ' ಟೀಕೆಗೆ ರಾಕಿಂಗ್ ಸ್ಟಾರ್ ಫುಲ್ ಗರಂ

ಜೆಡಿಎಸ್ ನಾಯಕರ ಅಪ್ರಬುದ್ದ ನಡವಳಿಕೆ, ಸುಮಲತಾ ತಾಳ್ಮೆ

ಜೆಡಿಎಸ್ ನಾಯಕರ ಅಪ್ರಬುದ್ದ ನಡವಳಿಕೆ, ಸುಮಲತಾ ತಾಳ್ಮೆ

ದಿನೇ ದಿನೇ ಸುಮಲತಾ ಪರವಾಗಿ ಮಂಡ್ಯ ಜನರು ಒಲವು ಹೆಚ್ಚಾಗಲು ಜೆಡಿಎಸ್ ನಾಯಕರೇ ಒಂದು ರೀತಿ ಕಾರಣವಾದರು. ಸುಮಲತಾ, ದರ್ಶನ್ ಮತ್ತು ಯಶ್ ಅವರನ್ನ ಸುಮ್ಮನೆ ಬಿಟ್ಟಿದ್ದರೇ ಆಗಿತ್ತು. ಆದ್ರೆ, ಅವರ ಪ್ರತಿ ಪ್ರಚಾರದ ಬಗ್ಗೆಯೂ ಕೀಳಾಗಿ ಹೇಳಿಕೆ ಕೊಟ್ಟರು. ಅಂಬರೀಶ್ ಅಂತ್ಯಸಂಸ್ಕಾರದ ವಿಷ್ಯವನ್ನ ಮಂಡ್ಯ ರಾಜಕಾರಣದಲ್ಲಿ ಪ್ರಸ್ತಾಪಿಸಿದರು. ಡಿಸಿ ತಮ್ಮಣ್ಣ, ಶಿವರಾಮೇಗೌಡ, ಸಿಎಂ ಕುಮಾರಸ್ವಾಮಿ, ರೇವಣ್ಣ ಅಂತಹ ಜೆಡಿಎಸ್ ನಾಯಕ ಈ ಅಪ್ರಬುದ್ದ ನಡವಳಿಕೆ ಮತ್ತು ಹೇಳಿಕೆಗಳು ಅವರಿಗೆ ಮಾರಕವಾಗಿದೆ. ಇಂತಹ ಸನ್ನಿವೇಶದಲ್ಲೂ ತಾಳ್ಮೆಯಿಂದ ಬುದ್ದಿವಂತಿಕೆ ಮೆರೆದ ಸುಮಲತಾ ಗೆದ್ದರು.

ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರ ಭಿನ್ನಾಭಿಪ್ರಾಯ

ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರ ಭಿನ್ನಾಭಿಪ್ರಾಯ

ನಾಯಕರ ಮಟ್ಟದಲ್ಲಿ ಹೊಂದಾಣಿಕೆಯಾಗಿರಬಹುದು. ಕಾರ್ಯಕರ್ತರ ಮಟ್ಟದಲ್ಲಿ ಎಲ್ಲವೂ ಸರಿಯಿಲ್ಲ ಎಂದು ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರು ಬಹಿರಂಗವಾಗಿ ಹೇಳಿದ್ದರು. ನಿಖಿಲ್ ಅವರನ್ನ ಮೈತ್ರಿ ಅಭ್ಯರ್ಥಿ ಎಂದು ಘೋಷಿಸುವ ವೇಳೆ ಸ್ಥಳೀಯ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರ ಜೊತೆ ಚರ್ಚಿಸಿಲ್ಲ ಎಂಬ ಬೇಸರವೂ ಇತ್ತು. ಈ ಚುನಾವಣೆಯಲ್ಲಿ ನಿಖಿಲ್ ಬೆಂಬಲಿಸಿದರೆ ಕಾಂಗ್ರೆಸ್ ಗೆ ಅಸ್ತಿತ್ವ ಇರಲ್ಲ ಎಂದು ಮನಗಂಡ ಕಾಂಗ್ರೆಸಿಗ್ಗರು ಸುಮಲತಾ ಬೆನ್ನಿಗೆ ನಿಂತರು.

ಮಂಡ್ಯ ಸೊಸೆ, ಅಭಿಷೇಕ್ ಗೌಡ

ಮಂಡ್ಯ ಸೊಸೆ, ಅಭಿಷೇಕ್ ಗೌಡ

ಸುಮಲತಾ ಅಂಬರೀಶ್ ಗೌಡ್ತಿ ಅಲ್ಲ, ಆಕೆ ಮಂಡ್ಯ ಸೊಸೆ ಹೇಗೆ ಆಗಲು ಸಾಧ್ಯ ಎಂದು ಕೇಳಿ ಬಂದ ಟೀಕೆಗೆ ಸುಮಲತಾ ದಿಟ್ಟ ಉತ್ತರ ನೀಡಿದ್ದರು. ಜನರು ಕೂಡ ಸುಮಲತಾ ಮಂಡ್ಯ ಸೊಸೆ, ನಮ್ಮ ಊರ ಮಗಳು ಎಂದು ಸ್ವೀಕರಿಸಿದರು. ಮತ್ತೊಂದೆಡೆ 'ನಾನು ಅಭಿಷೇಕ್ ಗೌಡ' ಎಂದು ಕೂಗಿ ಹೇಳುವ ಮೂಲಕ ನಾನು ಮಂಡ್ಯದ ಮಗ ಎಂದು ಅಂಬಿ ಪುತ್ರ ಮನವರಿಕೆ ಮಾಡಿದ್ದರು. ಈ ಎಲ್ಲ ಎಮೋಷನ್ ಗಳು ಸುಮಲತಾಗೆ ಗೆಲುವಿನ ಭಾಗ್ಯ ತಂದು ಕೊಟ್ಟಿದೆ.

ಕುಟುಂಬ ರಾಜಕಾರಣಕ್ಕೆ ವಿರೋಧ

ಕುಟುಂಬ ರಾಜಕಾರಣಕ್ಕೆ ವಿರೋಧ

ನಿಖಿಲ್ ಕುಮಾರ್ ಅಭ್ಯರ್ಥಿ ಎಂದು ಘೋಷಿಸುತ್ತಿದ್ದಂತೆ ಜೆಡಿಎಸ್ ಪಾಳಯದಲ್ಲಿ ಅಸಮಾಧಾನ ವ್ಯಕ್ತವಾಗಿತ್ತು. ದೇವೇಗೌಡರು ಕುಟುಂಬ ರಾಜಕಾರಣ ಮಾಡ್ತಿದ್ದಾರೆ. ಪಕ್ಷದ ಕೆಳಮಟ್ಟದ ಕಾರ್ಯಕರ್ತರಿಗೆ ಅನ್ಯಾಯವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದರು. ಕೆಲವರು ಬಹಿರಂಗವಾಗಿ ಇದನ್ನ ವಿರೋಧಿಸಿ ನಾವು ಸುಮಲತಾ ಪರವಾಗಿ ಕೆಲಸ ಮಾಡುತ್ತೇವೆ ಎಂದು ಜೆಡಿಎಸ್ ನಿಂದ ಹೊರಬಂದರು. ಇದು ಕೂಡ ಸುಮಲತಾಗೆ ಪೂರಕವಾಯಿತು.

English summary
Mandya Lok Sabha Election Result 2019: Here are ten reason behind the victory of sumalatha ambarish in mandya lok sabha election.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X